ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲುಗುತ್ತಿದೆ ‘ನಾಲ್ಕನೆಯ ಸಿಂಹ’

ಸಂಗತ
Last Updated 20 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಇಂದಿನ ಅಪರಾಧಿಗಳು ಅತ್ಯಾಧುನಿಕ ಶಸ್ತ್ರಸಜ್ಜಿತರಾಗಿದ್ದರೆ, ನಮ್ಮ ಪೊಲೀಸ್‌ ಇಲಾಖೆ ಮಾತ್ರ ಇನ್ನೂ ಓಬೀರಾಯನ ಕಾಲದ ವ್ಯವಸ್ಥೆಯಲ್ಲೇ ಇದೆ.

ಸಮಾಜದ ಅವಿಭಾಜ್ಯ ಅಂಗವಾಗಿರುವ ಪೊಲೀಸ್‌  ವ್ಯವಸ್ಥೆ ಇತ್ತೀಚಿನ ಕೆಲ ಬೆಳವಣಿಗೆಗಳಿಂದ ಸಾರ್ವಜನಿಕವಾಗಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಪೊಲೀಸ್‌ ಅಧಿಕಾರಿಗಳಾದ ಮಲ್ಲಿಕಾರ್ಜುನ ಬಂಡೆ ಹಾಗೂ ಜಗದೀಶ್‌ ಅವರ ಹತ್ಯೆ ಘಟನೆಗಳು ಇಂತಹ ಚರ್ಚೆಯನ್ನು ಮುನ್ನೆಲೆಗೆ ತಂದಿವೆ. ಇಂಥ ಪ್ರತಿ ಘಟನೆಯನ್ನೂ ಬಿಡಿಯಾಗಿ ನೋಡುವುದಕ್ಕಿಂತ ಇಡೀ ಪೊಲೀಸ್‌ ವ್ಯವಸ್ಥೆಯ ಬಗ್ಗೆಯೇ ಪುನರ್‌ಮನನ ಮಾಡಿಕೊಳ್ಳಬೇಕಾದ ಅಗತ್ಯ ಬಂದಿದೆ.

ಬ್ರಿಟಿಷ್ ಆಡಳಿತದ ಬಳುವಳಿಯಾದ ಪೊಲೀಸ್‌  ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಈವರೆಗೆ ಸುಮಾರು 6 ಸುಧಾರಣಾ ಆಯೋಗಗಳನ್ನು ರಚಿಸಿ ವರದಿ ಪಡೆಯಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಗೋರೆ ಕಮಿಟಿ, ನ್ಯಾಷನಲ್ ಪೊಲೀಸ್‌ ಕಮಿಷನ್, ರಿಬೆರೊ ಸಮಿತಿ, ಪದ್ಮನಾಭಯ್ಯ ಸಮಿತಿ, ಮಳಿಮಠ ಸಮಿತಿ ಮುಖ್ಯವಾದವು.

ಇತರ ವಿಭಾಗಗಳಲ್ಲಿರುವ ನ್ಯೂನತೆಗಳಿಂದ ಪೊಲೀಸ್‌ ಇಲಾಖೆಯೂ ಹೊರತಾಗಿಲ್ಲ.  ಇಲಾಖೆಯ ಉನ್ನತ ಹುದ್ದೆಯಲ್ಲಿರುವ ನಾನು ವೈಯಕ್ತಿಕವಾಗಿ ಈ  ನ್ಯೂನತೆಗಳನ್ನು ಐದು ಮುಖ್ಯ ವಿಧಗಳಲ್ಲಿ ಗುರುತಿಸುತ್ತೇನೆ. ಅವೆಂದರೆ: ಮಿತಿಮೀರಿದ ದುಡಿಮೆಯಿಂದ ಮಾನಸಿಕ ಒತ್ತಡ, ಸಮಕಾಲೀನ ಅಪರಾಧ ಮತ್ತು ಅಪರಾಧಿಗಳ ಕುರಿತು ಜ್ಞಾನ, ಜಾಗರೂಕತೆ ಇಲ್ಲದಿರುವುದು, ಬ್ರಿಟಿಷ್ ಕಾಲದ ವಸಾಹತುಶಾಹಿ ಗುಣಗಳು, ಪೊಲೀಸ್‌ ಮತ್ತು ಅಪರಾಧ ನ್ಯಾಯ ವ್ಯವಸ್ಥೆಗೆ ಒಳಪಡುವ ಇತರ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ, ದಿನನಿತ್ಯದ ಚಟುವಟಿಕೆಗಳಲ್ಲಿ ಅಧಿಕಾರಿಗಳು ಮತ್ತು ಅಧಿಕಾರೇತರರ ಹಸ್ತಕ್ಷೇಪ.

ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 760 ಜನರಿಗೆ ಒಬ್ಬ ಪೊಲೀಸ್‌ ಇದ್ದಾರೆ. ಅದೇ ಬೇರೆ ರಾಷ್ಟ್ರಗಳಿಗೆ ಹೋಲಿಸುವುದಾದರೆ ಇಂಗ್ಲೆಂಡಿನಲ್ಲಿ 268 ಜನರಿಗೆ ಒಬ್ಬ ಪೊಲೀಸ್‌, ದಕ್ಷಿಣ ಆಫ್ರಿಕಾದಲ್ಲಿ 382 ಜನರಿಗೆ ಒಬ್ಬ ಪೊಲೀಸ್‌ ಇದ್ದಾರೆ.

ಪ್ರತಿದಿನ ನಮ್ಮ ಪೊಲೀಸರು 16– 20 ಗಂಟೆ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ. ವಾರದ ರಜೆ ಇರುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲು ರಜೆ ಸಿಗದು. ಈ ರೀತಿಯ ವಿಶ್ರಾಂತಿರಹಿತ ದುಡಿಮೆಯಿಂದ ಮಾನಸಿಕ ಒತ್ತಡ, ಖಿನ್ನತೆಯಂತಹ ಸಮಸ್ಯೆ ಸಹಜ. ವಾಹನಗಳಿಂದ ಗಿಜಿಗಿಡುವ ರಸ್ತೆಗಳಲ್ಲಿ ಸಂಚಾರ ನಿಯಂತ್ರಿಸುವವರಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಸರ್ವೇ ಸಾಮಾನ್ಯ. ಇದನ್ನೆಲ್ಲ ಪ್ರತಿಭಟಿಸುವ ಅಧಿಕಾರ ಪೊಲೀಸರಿಗಿಲ್ಲ. ಏಕೆಂದರೆ ಪೊಲೀಸರಿಗೆ ಪ್ರತಿಭಟನಾ ಹಕ್ಕನ್ನು ಮೊಟಕುಗೊಳಿಸಲಾಗಿದೆ.

ಸಮಕಾಲೀನ ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಸರಿಯಾದ ಜ್ಞಾನ ಹಾಗೂ ಜಾಗರೂಕತೆ ಇಲ್ಲದಿರುವುದು ಇಲಾಖೆಯ ಬಹುದೊಡ್ಡ ನ್ಯೂನತೆ. ಸಮಕಾಲೀನ ಅಪರಾಧಗಳಾದ ಸೈಬರ್ ಕ್ರೈಮ್, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಆರ್ಥಿಕ ಅಪರಾಧ, ವೈಟ್ ಕಾಲರ್ ಅಪರಾಧ, ಗುಂಪು ದರೋಡೆ, ಸುಪಾರಿ ಹತ್ಯೆಯಂತಹ ಪ್ರಕರಣಗಳು, ವಿದೇಶದಿಂದಲೇ ಬೆದರಿಕೆ, ಸುಲಿಗೆ, ಹವಾಲಾ ಮಾದರಿಯಲ್ಲಿ ನಡೆಯುವ ಹಣದ ವಹಿವಾಟಿನಂತಹ ಅಪರಾಧಗಳನ್ನು ಭೇದಿಸುವಲ್ಲಿ ಪೊಲೀಸರಲ್ಲಿ ನೈಪುಣ್ಯದ ಕೊರತೆ ಕಂಡುಬರುತ್ತಿದೆ.

ಇಂದಿನ ಅಪರಾಧಿಗಳು ಶಸ್ತ್ರಸಜ್ಜಿತರಾಗಿ, ಗ್ಯಾಂಗ್ ಮಾದರಿಯಲ್ಲಿ ಕೃತ್ಯಗಳನ್ನು ಕೈಗೊಳ್ಳುತ್ತಿದ್ದರೆ, ನಮ್ಮ ಪೊಲೀಸ್‌ ವ್ಯವಸ್ಥೆ ಕೇವಲ ಒಂದು ಲಾಠಿಯಿಂದ ಹಳೆಯ ಸಿನಿಮಾ ಮಾದರಿಯಲ್ಲಿ ಅವರನ್ನು ಅಟ್ಟಾಡಿಸಿಕೊಂಡು ಹಿಡಿಯುವುದು ಎಷ್ಟು ಸಮಂಜಸ? ಈ ರೀತಿ ಸರಿಯಾದ ಜಾಗರೂಕತೆ ತೆಗೆದುಕೊಳ್ಳದೆ ಅಪರಾಧಿಗಳಿಂದ ಹಲ್ಲೆ, ಇರಿತದಿಂದ ಸಾವನ್ನಪ್ಪಿದ ಎಷ್ಟೋ ಪೊಲೀಸರನ್ನು ನಾವು ಕಾಣುತ್ತೇವೆ. ಇಂಥ ಸಂದರ್ಭಗಳಿಗೆ ಅಗತ್ಯವಾದ ತರಬೇತಿ ಮತ್ತು ಪರಿಕರಗಳ ಅವಶ್ಯಕತೆ ಬಹಳವಾಗಿದೆ.

ನಮ್ಮ ಪೊಲೀಸ್‌ ವ್ಯವಸ್ಥೆಯಲ್ಲಿ ಬ್ರಿಟಿಷ್ ಕಾಲದ ವಸಾಹತುಶಾಹಿ ಗುಣಗಳು ಗಾಢವಾಗಿ ಬೇರೂರಿವೆ. ಅಧಿಕಾರಿಗಳು ಮತ್ತು ಕೆಳಗಿನ ಸ್ತರದ ಉದ್ಯೋಗಿಗಳನ್ನು ನಡೆಸಿಕೊಳ್ಳುವ ರೀತಿ, ಅವರಿಂದ ಅಂತರ ಕಾಯ್ದುಕೊಳ್ಳುವುದು, ಅವರ ಆಗುಹೋಗುಗಳಿಗೆ ಸರಿಯಾಗಿ ಸ್ಪಂದಿಸದಿರುವುದು, ಅಧಿಕಾರಿ ಮತ್ತು ಜವಾನನ ನಡುವಿನ ಅಂತರ ಹೆಚ್ಚುತ್ತಾ ಹೋಗುವುದು ಕಂಡುಬರುತ್ತದೆ. ಆರ್ಡರ್ಲಿ ಅಂತಹ ವ್ಯವಸ್ಥೆ ಬಹು ಚರ್ಚಿತ ವಿಷಯವಾಗಿದೆ. ಒಂದೆಡೆ ಅಧಿಕಾರಿಗಳು ಬಂಗಲೆಗಳಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರೆ, ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದ ವಸತಿ ಗೃಹಗಳಲ್ಲಿ ಜೀವನ ಸಾಗಿಸುವುದು ಕೆಳಸ್ತರದ ಉದ್ಯೋಗಿಗಳ ಪಾಡಾಗಿದೆ.

ಪೊಲೀಸ್‌ ಇಲಾಖೆ, ಜೈಲು ಶಾಖೆ, ನ್ಯಾಯಾಂಗ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಅಪರಾಧಿಗಳ ಪಾಲಿಗೆ ಸ್ವರ್ಗ ಎನಿಸಿದೆ. ಲಕ್ಷಾನುಗಟ್ಟಲೆ ಕೇಸುಗಳು ಕೋರ್ಟುಗಳಲ್ಲಿ ಬಾಕಿ ಇರುವುದು, ಸೂಕ್ತ ಸಾಕ್ಷ್ಯಾಧಾರ ಇಲ್ಲದೆ ಹೀನ ಅಪರಾಧಿಗಳೂ ಖುಲಾಸೆಯಾಗುವುದು, ನ್ಯಾಯಾಲಯದ ಮುಂದೆ ಶರಣಾಗುವಂತಹ ಪ್ರಕ್ರಿಯೆಗಳಿಂದ ಅಪರಾಧಿಗಳು ಸ್ವಚ್ಛಂದವಾಗಿ ತಿರುಗುತ್ತಿದ್ದಾರೆ.

ತ್ವರಿತ ನ್ಯಾಯಾಲಯಗಳ ಅವಶ್ಯಕತೆ ಇಂದಿನ ಬಹುಮುಖ್ಯ ಬೇಡಿಕೆಯಾಗಿದೆ. ಅಪರಾಧ ಎಸಗಿದ ಗಳಿಗೆಯಿಂದ ಅಪರಾಧಿಯನ್ನು ಶಿಕ್ಷೆಗೆ ಒಳಪಡಿಸುವವರೆಗೂ ಪೊಲೀಸ್‌ ಇಲಾಖೆಯಿಂದ ಹಿಡಿದು ವಿಧಿವಿಜ್ಞಾನ ಪ್ರಯೋಗಾಲಯ, ನ್ಯಾಯಾಂಗ ಇಲಾಖೆ, ಜೈಲು ಶಾಖೆ ಅಂತಹವುಗಳ ಪಾತ್ರ ಬಹುಮುಖ್ಯವಾದುದು.

ಇಲಾಖೆಯಲ್ಲಿ ನಿರ್ಭಯವಾಗಿ ಕೆಲಸ ಮಾಡಲು ಅಡ್ಡಿಯಾಗಿರುವ ವಿಷಯಗಳಲ್ಲಿ ಅಧಿಕಾರ ಮತ್ತು ಅಧಿಕಾರೇತರ ವ್ಯಕ್ತಿಗಳ ಹಸ್ತಕ್ಷೇಪವೂ ಸೇರಿದೆ. ನೇಮಕಾತಿಯಿಂದ ಹಿಡಿದು ವರ್ಗಾವಣೆ, ಪದೋನ್ನತಿ ಹಾಗೂ ಪ್ರಮುಖ ಹುದ್ದೆ ದೊರಕಿಸಿಕೊಳ್ಳುವುದರಲ್ಲೂ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಈ ವ್ಯವಸ್ಥೆಗೆ ಮಾರಕವಾಗಿದೆ.

ಯುವ ಅಧಿಕಾರಿಗಳು ವೀರ ಮರಣ ಹೊಂದಿದಾಗ ಅವರಲ್ಲಿದ್ದ ಧೈರ್ಯ, ಸಾಹಸವನ್ನು ಹೊಗಳುವುದಕ್ಕಿಂತ ಅವರು ಜಾಗರೂಕತೆ ತೆಗೆದುಕೊಳ್ಳಲಿಲ್ಲ, ಗುಂಡು ನಿರೋಧಕ ಕವಚ ಧರಿಸಿರಲಿಲ್ಲ, ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಲಿಲ್ಲ ಎಂಬಂತಹ ಚರ್ಚೆಗಳು ನಡೆಯುತ್ತವೆ. ಆಗಿನ ಪರಿಸ್ಥಿತಿಯ ವಾಸ್ತವ ಚಿತ್ರಣ  ಬಿಂಬಿಸುವಲ್ಲಿ ವಿಫಲರಾಗುತ್ತಿದ್ದೇವೆ. ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಗಂಡೆದೆಯಿರಬೇಕೇ ವಿನಾ ಗುಂಡು ನಿರೋಧಕ ಕವಚವಲ್ಲ.

‘ನಮ್ಮ ಹೆಮ್ಮೆಯ ರಾಷ್ಟ್ರೀಯ ಲಾಂಛನದಲ್ಲಿ ಕಣ್ಣಿಗೆ ಕಾಣಿಸುವ ಮೂರು ಸಿಂಹಗಳು, ನ್ಯಾಯ, ನೀತಿ ಧರ್ಮದ ಪ್ರತೀಕವಾದರೆ ಮರೆಯಲ್ಲಿರುವ ನಾಲ್ಕನೆಯ ಸಿಂಹವೇ ಪೊಲೀಸ್‌’ ಎಂಬ ಡೈಲಾಗ್‌ ಕನ್ನಡ ಚಲನಚಿತ್ರವೊಂದರಲ್ಲಿ ಬರುತ್ತದೆ. ಆದರೆ ಇಂದು ಈ ನಾಲ್ಕನೇ ಸಿಂಹ ನಲುಗಿ ಹೋಗುತ್ತಿದೆ. ಪೊಲೀಸ್‌ ಇಲಾಖೆಯಲ್ಲಿ ಆಂತರಿಕ ಪರಿವರ್ತನೆ ತರಬಯಸಿದರೆ ಮಾತ್ರವೇ ವ್ಯವಸ್ಥೆಯಲ್ಲಿ ಸ್ವಲ್ಪ ಸುಧಾರಣೆಯಾಗಬಹುದು. ಇದಕ್ಕೆ ಪೂರಕವಾಗಿ, ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಪೊಲೀಸ್‌ ಸುಧಾರಣೆಗಳನ್ನು ಜಾರಿಗೆ ತರಬೇಕಾಗಿದೆ.

ಲೇಖಕ ಐಪಿಎಸ್ ಅಧಿಕಾರಿ ಪೂರ್ವ ಗೋದಾವರಿ ಜಿಲ್ಲೆ, ಆಂಧ್ರಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT