ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಗೆ ವರವಾದ, ಮಲೆನಾಡಿಗರಿಗೆ ಶಾಪವಾದ ಸುನಾಮಿಮಳೆ

Last Updated 12 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮಳೆ...! ಜಡಿಮಳೆ...! ಗಾಳಿ...! ಭೋರ್ಗರೆವ ಗಾಳಿ! ಕಳೆದ ಕೆಲವು ತಿಂಗಳಿಂದ ಮಲೆನಾಡಿಗರ ಪಾಲಿಗೆ, ಹಗಲಿರಳು ಒಂದೇ ಸಮನೆ ದಕ್ಕಿದ ಅನುಭವ. ಹಾಗೆ ನೋಡಿದರೆ ಗಾಳಿ-ಮಳೆ, ಮಲೆನಾಡಿಗರ ಪಾಲಿಗೆ ಹೊಸ ಅನುಭವವೇನೂ ಅಲ್ಲ. ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶದ ಆಸುಪಾಸಿನವರ ಪಾಲಿಗಂತೂ ಗಾಳಿಮಳೆ, ವರ್ಷವಿಡೀ ಬದುಕಿಗೆ ಹಾಸುಹೊಕ್ಕಿನ ಸಂಗಾತಿ. ಆದರೆ ಪ್ರತಿವರ್ಷದಂತಲ್ಲ ಈ ವರ್ಷದ ಮಳೆ. ಅದರ ತರವೇ ಬೇರೆ!

ಜೂನ್ ಮೊದಲ ವಾರದಲ್ಲಿ ಹಿಡಿದಿದ್ದ ಮಳೆ, ಆಗಸ್ಟ್ ಮಧ್ಯಭಾಗವಾದರೂ ಬಿಟ್ಟಿದ್ದರೆ ಕೇಳಿ! ಕಳೆದ ಇಡೀ ವರ್ಷ ಎಷ್ಟು ಮಳೆ ಸುರಿದಿತ್ತೋ ಅದಕ್ಕೂ ಅಧಿಕ ಮಳೆ ಈ ಜೂನ್, ಜುಲೈನಲ್ಲೇ ಸುರಿದಿದೆಯೆಂದರೆ ಲೆಕ್ಕ ಹಾಕಿ. ಕಳೆದ ಅರವತ್ತಾರು ವರ್ಷಗಳ ದಾಖಲೆಯನ್ನು ಮುರಿದಿದೆಯೆಂದರೆ, ಮಲೆನಾಡಿನಲ್ಲಿ ಸುರಿದ ಈ ವರ್ಷಧಾರೆಯನ್ನು, `ಮಳೆಯ ಸುನಾಮಿ' ಎಂದರೆ ಹೆಚ್ಚು ಅರ್ಥಪೂರ್ಣವಾದೀತು.

ಮಲೆನಾಡಿನಲ್ಲಿ ಸುರಿದ ಮಳೆಯ ಅಬ್ಬರ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಕಂಡು ಇಡೀ ಕರ್ನಾಟಕದ ಜನತೆ ಖುಷಿಯಿಂದ ಸಂಭ್ರಮಿಸಿದರು. ಎಷ್ಟೋ ವರ್ಷಗಳ ಮೇಲೆ ವಾರಾಹಿ, ಲಿಂಗನಮಕ್ಕಿ, ತುಂಗಾ- ಭದ್ರಾ, ಹೆಚ್ಚೂ ಕಡಿಮೆ ಕರ್ನಾಟಕದ ಎಲ್ಲಾ ಅಣೆಕಟ್ಟುಗಳು ತುಂಬಿತುಳುಕಿವೆ. ಮೊರೆವ ಹೆಚ್ಚುವರಿ ನೀರನ್ನು ಕ್ರೆಸ್ಟ್‌ಗೇಟ್ ತೆರೆದು ಹೊರ ಬಿಡಲಾಯಿತು. ಇನ್ನೊಂದೆರಡು ವರ್ಷ ಕರ್ನಾಟಕಕ್ಕೆ ಕೃಷಿಗಾಗಲೀ, ವಿದ್ಯುತ್ತಿಗಾಗಲೀ ಬರ ಬರಲಾರದು. ಅಂದಮೇಲೆ ನಾಡಿನ ಜನತೆಯ ಪಾಲಿಗೆ ಇದಕ್ಕಿಂತ ಹೆಚ್ಚಿನ ಸಂಭ್ರಮ ಇನ್ನಾವುದು ಇದ್ದೀತು?

ಆದರೆ ಅಧಿಕ ಮಳೆಯಿಂದ ತೊಯ್ದು ಹೋದ ಮಲೆನಾಡಿಗರ ಗತಿಸ್ಥಿತಿಯ ಚಿತ್ರಣ ಮಾತ್ರ ಬಹಳ ದಾರುಣ. ಮಲೆನಾಡಿಗರ ಪಾಲಿಗೆ ಕೃಷಿಯೇ ಪ್ರಮುಖ ಬದುಕು. ಆದರೆ ಈ ವರ್ಷದ ಮಳೆ ಅವರ ಜೀವನಾಧಾರವನ್ನೇ ನಾಶ ಮಾಡಿದೆ. ಕೃಷಿಕರು ಕಂಗೆಟ್ಟು ತಲೆಯ ಮೇಲೆ ಕೈಹೊತ್ತಿದ್ದಾರೆ. ದಿಕ್ಕು ತೋಚದವರಾಗಿದ್ದಾರೆ. ಅಡಿಕೆ ಮಲೆನಾಡಿಗರ ಪ್ರಮುಖ ಆರ್ಥಿಕ ಬೆಳೆ. ಗುಟ್ಕಾ ನಿಷೇಧದ ಗುಮ್ಮನ ಕಾಟದಲ್ಲಿ ನಲುಗಿಹೋಗಿದ್ದ ಅಡಿಕೆ ಬೆಳೆಗಾರರ ಮೇಲೆ ಈ ವರ್ಷದ ಸುನಾಮಿಮಳೆ ದೆಸೆಯಿಂದ `ಕೊಳೆರೋಗ' ತಾಂಡವವಾಡುತ್ತಿದೆ.

ಪಶ್ಚಿಮಘಟ್ಟದ ಆಸುಪಾಸಿನ ಯಾವ ಪ್ರದೇಶದ ಅಡಿಕೆ ತೋಟಕ್ಕೆ ಹೋದರೂ ಕೊಳೆರೋಗಕ್ಕೆ ತುತ್ತಾದ ಅಡಿಕೆಗೊನೆಯ `ಘಂ'ನೆ ನಾತ ಹೊಡೆಯುತ್ತದೆ. ಗೊನೆಯಲ್ಲಿ ಬೆರಳೆಣಿಕೆಯ ಕಾಯಿಗಳು ಜೋಲಾಡುತ್ತಿವೆ. ಒಂದು ಸಾರಿ ಬೋರ್ಡೋಮಿಕ್ಚರ್ ಅಥವಾ ಬಯೋಫೈಟ್ ಮಿಶ್ರಣ (ಇವೂ ಕೆಲವೊಮ್ಮೆ ಕಲಬೆರಕೆ) ಸಿಂಪಡಿಸಿದವರೂ, ಕೊಳೆರೋಗಕ್ಕೆ ಬಲಿಯಾಗಿದ್ದಾರೆ. ಕೆಲವು ಪ್ರದೇಶದಲ್ಲಿ ಮಳೆಗಾಲ ಕಳೆಯುವುದರೊಳಗೆ ಎರಡು- ಮೂರು ಬಾರಿ ಔಷಧ ಸಿಂಪಡಿಸಬೇಕು. ಆದರೆ ಈ ವರ್ಷದ ಸುನಾಮಿಮಳೆ- ಗಾಳಿ ಇದಕ್ಕೆ ಅವಕಾಶ ನೀಡುತ್ತಿಲ್ಲ. ಆದರೆ ಔಷಧ ಹೊಡೆಯದೇ ಇರುವಂತಿಲ್ಲ, ಕೊಳೆರೋಗದಿಂದ ಅಡಿಕೆಗೊನೆ ಉಳಿಸಿಕೊಳ್ಳಲು ಅಸಾಧ್ಯವಾದರೂ, ಮರವನ್ನಾದರೂ ಉಳಿಸಿಕೊಳ್ಳಲು ಔಷಧ ಸಿಂಪಡಿಸದೇ ವಿಧಿಯಿಲ್ಲ. ಪ್ರಧಾನ ಬೆಳೆಗೆ ಸಂಚಕಾರ ಬಂದಿದ್ದರೂ, ಸಾಲ ಮಾಡಿಯಾದರೂ ಖರ್ಚು ಮಾಡಲೇಬೇಕು. ಅಡಿಕೆಯದು ಮಾತ್ರವಲ್ಲ; ಅಡಿಕೆ ತೋಟದ ಉಪಬೆಳೆಗಳಾದ ಶುಂಠಿ, ಏಲಕ್ಕಿ, ಮೆಣಸುಗಳದ್ದೂ ಇದೇ ಪಾಡು!

ಇನ್ನು ಮಲೆನಾಡಿನ ಪ್ರಮುಖ ಬೆಳೆಯಾದ ಭತ್ತದ ಬೇಸಾಯದ್ದಂತೂ ಮತ್ತೊಂದು ವ್ಯಥೆಯ ಕಥೆ. ಗದ್ದೆಗೆ ಹಾಕಿದ ಗೊಬ್ಬರವೆಲ್ಲ ಮಳೆಯ ಆರ್ಭಟಕ್ಕೆ ಕೊಚ್ಚಿಕೊಂಡು ಹೋಗಿದೆ. ಸಸಿ ಮಾಡಲು ಅಗಾಡಿಯಲ್ಲಿ ಬಿತ್ತಿದ ಬೀಜದ ಮಾತಂತೂ ಕೇಳುವುದೇ ಬೇಡ (ನಕಲಿ ಬೀಜದ ಭತ್ತ ಮಾರುವ ದೊಡ್ಡ ಜಾಲವೇ ಇದೆ). ಮೂರು- ನಾಲ್ಕು ಸಾರಿ ಹಾಕಿದ ಅಗಾಡಿ ಬೀಜ ಮಳೆಗೆ ಆಹುತಿಯಾಗಿದೆ. ಅಂದಮೇಲೆ ಕೃಷಿಕರ ಹಾಗೂ ಅವರ ಸಂಸಾರದ ಮುಂದಿನ ಬದುಕಿಗೆ ದೇವರೇ ಗತಿ!

ಪ್ರಕೃತಿಯ ಮುನಿಸು ಮಲೆನಾಡಿನ ಕೃಷಿಕರ ಮೇಲೊಂದು ಪರಿಯಾದರೆ, ಆಡಳಿತ ನಡೆಸುವ ಮಹಾಪ್ರಭುಗಳದು ಹಾಗೂ ಅಧಿಕಾರಿಗಳ ಔದಾರ್ಯ ಇನ್ನೊಂದು ಬಗೆಯದು. ಇಡೀ ನಾಡಿಗೆ ವಿದ್ಯುತ್ ನೀಡುವ ಮಲೆನಾಡಿಗೆ ಬೇಸಿಗೆಯ ದಿನಗಳಲ್ಲೇ ಕರೆಂಟ್ ಇರುವುದು ಅಪರೂಪ! ಇನ್ನು ಮಳೆಗಾಲವೆಂದ ಮೇಲೆ ಕೇಳಬೇಕೇ!? ಹತ್ತು-ಹದಿನೈದು ದಿನಗಳಿಗೆ ಒಮ್ಮೆ ಕರೆಂಟ್ ದರ್ಶನವಾಗಿ ಮಿಂಚಿ ಮಾಯವಾಗುವ ಸನ್ನಿವೇಶಗಳೇ ಹೆಚ್ಚು. ಪಾಪ, ವಿದ್ಯುತ್ ಇಲಾಖೆಯವರು ತಾನೇ ಏನು ಮಾಡಿಯಾರು? ಪೇಟೆ- ಪಟ್ಟಣಗಳಿಗೆ ಕರೆಂಟ್ ಸರಬರಾಜು ಮಾಡಿದರೆ ಸಾಕು. ಹಳ್ಳಿ ಪ್ರದೇಶಗಳು ಕತ್ತಲೆಯಲ್ಲಿದ್ದರೂ ಅವರು ಮುಳುಗಿಹೋಗುವುದಿಲ್ಲ. ಯಾಕೆಂದರೆ ಅಲ್ಲಿ ವೋಟುದಾರರ ಸಂಖ್ಯೆ ಬಹಳ ಕಮ್ಮಿ. ಯಾರಾದರೂ ಸಾಹಸ ಮಾಡಿ, ತಾಲ್ಲೂಕು ಕೇಂದ್ರಕ್ಕೆ ಹೋಗಿ ದೂರು ನೀಡಿದರೆ ರೆಡಿಮೇಡ್ ಉತ್ತರ ಸಿದ್ಧವಾಗಿರುತ್ತದೆ: `ಇಪ್ಪತ್ತೈದು-ಮೂವತ್ತು ಜನ ಇರಬೇಕಾದಲ್ಲಿ ನಾವು ಐದಾರು ಜನ ಇದ್ದೇವೆ. ದೆವ್ವದಂತಹ ಈ ಗಾಳಿ-ಮಳೆಯಲ್ಲಿ ನಾವ್ ಏನ್ ಮಾಡಕ್ಕಾಗುತ್ತೆ ಹೇಳಿ? ಲೈನ್ ಮೇಲೆ ಹೋದಾಗ ತಲೆ ಮೇಲೆ ಮರಬಿದ್ದು ಸತ್ತರೆ, ನಮ್ಮ ಹೆಂಡತಿ ಮಕ್ಕಳಿಗೆ ಯಾರು ಜವಾಬ್ದಾರರು!?'

ಇನ್ನು ಈಗಿನ ರಾಜ್ಯ ಸರ್ಕಾರ ಮಾಡಿದ ಉಪಕಾರಗಳನ್ನಂತೂ ಮಲೆನಾಡಿಗರು ಕತ್ತಲಲ್ಲಿ ಮಾತ್ರವಲ್ಲ; ಹಗಲಲ್ಲೂ ಮತ್ತೆಮತ್ತೆ ನೆನಪಿಸಿಕೊಳ್ಳುತ್ತಾ ಹಿಡಿಶಾಪ ಹಾಕುತ್ತಿದ್ದಾರೆ. ಹಿಂದೆ ಅಕ್ಕಿ ಜೊತೆಯಲ್ಲಿ ದೊರೆಯುತ್ತಿದ್ದ ಸೀಮೆ ಎಣ್ಣೆ ಈಗ  ಬಿಪಿಎಲ್ ಕಾರ್ಡಿನವರಿಗೆ ಮಾತ್ರ ಸೀಮಿತ! ಎಪಿಎಲ್ ಕಾರ್ಡಿನವರಿಗೆ ಅಕ್ಕಿಯೂ ಇಲ್ಲ, ಸೀಮೆಎಣ್ಣೆಯೂ ಇಲ್ಲ!(ಎಪಿಎಲ್ ಕಾರ್ಡು ನೀಡುವುದಾದರೂ ಯಾವ ಪುರುಷಾರ್ಥಕ್ಕೆ?) ಕರೆಂಟ್ ಇಲ್ಲದೇ ರಾತ್ರಿ ಅವರು ಕತ್ತಲಲ್ಲೇ ಕಳೆಯಬೇಕು. ಯಾಕೆಂದರೆ ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ದೊರೆಯುವುದಿಲ್ಲ!

ಇದರ ಜೊತೆಗೆ ಇಷ್ಟು ವರ್ಷ ದೊರೆಯುತ್ತಿದ್ದ ಬೆಳೆಯ ಅಲ್ಪಾವಧಿ ಸಾಲ ಸಹ ಸೊಸೈಟಿಗಳಲ್ಲಿ ದೊರೆಯುತ್ತಿಲ್ಲ. ಯಾಕೆಂದರೆ ಸಹಕಾರ ಸಂಘಗಳಿಗೆ ಸರ್ಕಾರದಿಂದ ಹಣ ಬಂದಿಲ್ಲ. ಇನ್ನು ರಾಷ್ಟ್ರೀಕೃತ ಬ್ಯಾಂಕ್‌ನವರು, ಇಂತಹ ಬೆಳೆಯ ಸ್ಥಿತಿಗತಿ ನೋಡಿದ ಮೇಲೆ ಹೇಗೆ ತಾನೇ ಸಾಲ ಕೊಟ್ಟಾರು?

ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಅಡಿಕೆ ತೋಟ ಹಳದಿರೋಗಕ್ಕೆ ಬಲಿಯಾಗಿ ಎರಡು- ಮೂರು ದಶಕಗಳೇ ಕಳೆದಿದ್ದರೂ ಆ ಕೃಷಿಕರ ಬಗ್ಗೆ ಸರ್ಕಾರ ಕಣ್ಣೆತ್ತಿ `ಕ್ಯಾರೆ' ಅನ್ನಲಿಲ್ಲ. ಗೋರಖ್ ಸಿಂಗ್ ಕಮಿಟಿ ವರದಿ ನೀಡಿ, ಬೆಳೆಗಾರರಿಗೆ ಪರಿಹಾರ ನೀಡಬೇಕೆಂದೂ ಶಿಫಾರಸು ಮಾಡಿದ್ದರೂ, ಆ ವರದಿಯ ಅನ್ವಯ ಬೆಳೆಗಾರರಿಗೆ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಆದೇಶವಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿವೆ. ಅಡಿಕೆ ಬೆಳೆಯುವ ಪ್ರದೇಶದಿಂದ ಲೋಕಸಭೆ, ವಿಧಾನಸಭೆಗಳಿಗೆ ಆಯ್ಕೆಯಾದ ಸದಸ್ಯರು, ದನಿ ಎತ್ತಿ ಪ್ರಶ್ನಿಸುತ್ತಿಲ್ಲ. ಯಾಕೆಂದರೆ ಅಡಿಕೆ ಬೆಳೆಗಾರರ ಹಿತಕ್ಕಿಂತ ಅವರಿಗೆ ಅಧಿಕಾರ ಮುಖ್ಯ! ಎಂತಹ ದುರಾದೃಷ್ಟಶಾಲಿಗಳು ಮಲೆನಾಡಿನ ಅಡಿಕೆ ಬೆಳೆಗಾರರು!

ಘಟ್ಟ ಪ್ರದೇಶದ ಅಡಿಕೆ ಬೆಳೆಗಾರರು ಎದುರಿಸುವ ಸಮಸ್ಯೆಗಳೂ ದೂರ ಪ್ರದೇಶದ ಅಡಿಕೆ ಬೆಳೆಗಾರರು ಎದುರಿಸುವ ಸಮಸ್ಯೆಗಳೂ ತೀರಾ ಭಿನ್ನ. ಘಟ್ಟ ಪ್ರದೇಶದ ಅಡಿಕೆ ಬೆಳೆಗಾರರು ಎರಡು-ಮೂರು ಬಾರಿ ಔಷಧಿ ಸಿಂಪಡಿಸಬೇಕು. ಘಟ್ಟ ಪ್ರದೇಶದಿಂದ ದೂರ ಸರಿದಂತೆಲ್ಲಾ ಒಂದು- ಎರಡು ಸಾರಿ ಔಷಧ ಸಿಂಪಡಿಸಿದರೆ ಸಾಕು. ಕೆಲವೆಡೆ ಔಷಧ ಸಿಂಪಡಿಸದಿದ್ದರೂ ನಡೆಯುತ್ತದೆ. ಘಟ್ಟ ಪ್ರದೇಶದ ಬೆಳೆಗಾರರು ಮಾಡಿದ ಬೇಸಾಯ ಮಳೆ ಪಾಲಾಗುವುದೇ ಹೆಚ್ಚು. ಹಾಗಾಗಿ ಅವರಿಗೆ ದೊರೆಯುವ ಇಳುವರಿಯೂ ಕಡಿಮೆ! ಅಂದರೆ ಖರ್ಚು ಜಾಸ್ತಿ, ಉತ್ಪತ್ತಿ ಕಡಿಮೆ!

ಇಷ್ಟು ಸಾಲದೆಂಬಂತೆ ಘಟ್ಟ ಪ್ರದೇಶದ ಬೆಳೆಗಾರರನ್ನು ಕಾಡುತ್ತಿರುವ ನಕ್ಸಲರ ಸಮಸ್ಯೆ. ಪೊಲೀಸರಿಗೆ ಮಾಹಿತಿ ನೀಡುವರೆಂದು ನಕ್ಸಲರಿಗೆ ಗುಮಾನಿ, ನಕ್ಸಲರಿಗೆ ಆಶ್ರಯ ನೀಡುತ್ತಿರುವರೆಂದು ಪೊಲೀಸರ ಶಂಕೆ. ಒಟ್ಟಿನಲ್ಲಿ ಸ್ಥಳೀಯರಿಗೆ ಪ್ರಾಣ ಸಂಕಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT