ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ಮತ್ತು ಗೀತೆಯ ಪ್ರಸ್ತುತತೆ

Last Updated 31 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ಆಶಯಗಳು ಇಂದಿನ ದುರ್ದಿನಗಳಲ್ಲಿ ದಿಕ್ಕಾಪಾಲಾಗುತ್ತಿವೆ. ಜಾತಿ ಹೊಸ ಹೊಸ ರೂಪ ಪಡೆದು ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಸಾಗಿದೆ. ಸಂವಿಧಾನದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಇನ್ನಷ್ಟು ಮೂಲೆಗುಂಪಾಗುತ್ತಿವೆ. ಇದರ ಜಾಡು ಹಿಡಿದು ಅವಲೋಕಿಸುವ ಅನಿವಾರ್ಯದ ತುರ್ತಿನಲ್ಲಿ ಮತ್ತೊಮ್ಮೆ ಭಗವದ್ಗೀತೆ ಧುತ್ತೆಂದು ಎದ್ದು ಕುಳಿತಿದೆ. ಇದಕ್ಕೆ ಕಾರಣ ಯಾರು ಎನ್ನುವುದಕ್ಕಿಂತ ಇದರ ಅಗತ್ಯದ ಹಿನ್ನೆಲೆ ಕುರಿತು ಚರ್ಚಿಸುವುದು ಬಹುಮುಖ್ಯ ಎನಿಸುತ್ತದೆ. ಏಕೆಂದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಇದು ಅತಿ ಹೆಚ್ಚು ಎನ್ನುವ ಮಟ್ಟಿಗೆ ಚರ್ಚಿತವಾಗುತ್ತಿದೆ.

ಈ ದೇಶದ ಏಕತೆಗೆ ಬಹುಮುಖ್ಯ ತೊಡಕು ಜಾತಿ. ಇದು ಒಬ್ಬರನ್ನೊಬ್ಬರು ಬೆರೆಯದ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇಂದು ಪ್ರಭುತ್ವ, ಬಂಡವಾಳಶಾಹಿ ಮತ್ತು ರಾಜಕಾರಣಿಗಳ ಕೃಪೆಯಿಂದ ಇದು ಯಾವ ಎಗ್ಗಿಲ್ಲದೆ ಪುನರುತ್ಪಾದನೆಯತ್ತ ನಡೆದಿದೆ. ಅಂಬೇಡ್ಕರ್ ಹೇಳುವಂತೆ ‘ಭಾರತದಲ್ಲಿನ ಜಾತಿಯೆಂದರೆ ದೇಶದ ಒಟ್ಟು ಜನಪದರನ್ನು ಕೃತ್ರಿಮವಾಗಿ ತುಂಡೋಪತುಂಡುಗಳನ್ನಾಗಿ ಕತ್ತರಿಸಿ ನಿರ್ದಿಷ್ಟ ಮತ್ತು ಅಪರಿವರ್ತನೀಯ ಘಟಕಗಳನ್ನಾಗಿ ಮಾಡಲಾಗಿದೆ ಎಂದೇ ಅರ್ಥ’. ಇಂತಹ ಜಾತಿ ನಾಶವಾಗದಿರುವುದಕ್ಕೆ ಬಹು ಹಿಂದಿನಿಂದಲೂ ಇಲ್ಲಿನ ಧರ್ಮಗ್ರಂಥಗಳು ಬೆನ್ನೆಲುಬಾಗಿ ನಿಂತಿವೆ. ಈ ಜಾತಿಗೆ ಕೇವಲ ಎರಡರಿಂದ ಮೂರು ಸಾವಿರ ವರ್ಷಗಳ ಇತಿಹಾಸವಿದ್ದರೂ, ಮುಂದೆ ಈ ಭೂಮಿ ಇರುವವರೆಗೂ ನೆಲೆ ನಿಲ್ಲುವ ಅಪಾಯದ ಸನ್ನಿವೇಶವನ್ನು ಸೃಷ್ಟಿಸಿದೆ.

ಇಡೀ ಸಂವಿಧಾನದ ಮೂಲಭೂತ ಆಶಯಗಳಿಗೆ ಈ ಜಾತಿ ಕೊಡಲಿಯ ಕಾವಾಗಿ ಪರಿಣಮಿಸಿದೆ. ಜಾತಿ ವಿನಾಶದೆಡೆಗೆ ನಡೆಯಬೇಕಾದರೆ ಒಂದು ಪ್ರಜಾತಾಂತ್ರಿಕ ಚಳವಳಿಯೇ ಇಂದು ಹುಟ್ಟಬೇಕು. ಅಂತಹ ತುರ್ತಿದೆ. ಇಂತಹ ಸಂದರ್ಭದಲ್ಲಿ ಇದನ್ನು ಸಾಧಿಸಬೇಕಾದರೆ ಜಾತಿಗೆ ಪೂರಕವಾಗಿ ನಿಂತಿರುವ ಎಲ್ಲ ಅಂಶಗಳಿಂದ ದೂರ ನಿಂತು ನಿರಂತರ ಸಂಘರ್ಷ ನಡೆಸಬೇಕು. ಯಾವುದು ತಾರತಮ್ಯವನ್ನು ಬೋಧಿಸುತ್ತದೋ, ಮೇಲು ಕೀಳಿನ ಪಾಠ ಹೇಳಿಕೊಡುತ್ತದೋ, ಯಾವುದು ಹುಟ್ಟಿನ ಆಧಾರದಲ್ಲಿ ಶ್ರೇಷ್ಠ, ಕನಿಷ್ಠದ ಮಾರ್ಗಗಳನ್ನು ಮನುಷ್ಯರ ಮೇಲೆ ಹೇರುತ್ತದೋ ಅದೆಲ್ಲದರ ವಿರುದ್ಧ ನಿಂತು ಬುಡಸಮೇತ ಕಿತ್ತು ನಿರ್ನಾಮ ಮಾಡಬೇಕಿದೆ. ಹೀಗಿರುವಲ್ಲಿ ಇಂತಹುದೇ ಅಂಶವುಳ್ಳ ಗ್ರಂಥವೊಂದನ್ನು ಒಳಕ್ಕೆ ತಳ್ಳಿಕೊಳ್ಳುವುದಾದರೂ ಹೇಗೆ?

ಇದನ್ನು ಅಂಬೇಡ್ಕರ್ ಅವರ ಮಾತುಗಳಲ್ಲೇ ಹೇಳುವುದಾದರೆ ‘ತರ್ಕ ಬುದ್ಧಿ  ವಿವೇಚನೆಗೆ ಹಾಗೂ ನೀತಿಗಳಿಗೆ ಲವಲೇಶವೂ ಸ್ಥಾನ ಕೊಡದಿರುವ ವೇದಶಾಸ್ತ್ರಗಳನ್ನು ನೀವು ಮದ್ದಿಟ್ಟು ಉಡಾಯಿಸಬೇಕು. ಶ್ರುತಿ- ಸ್ಮೃತಿಗಳ ಧರ್ಮವನ್ನು ಆಸ್ಫೋಟಿಸಬೇಕು. ಇದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ’ ಎಂದು ಜಾತಿ ವಿನಾಶದ ಕುರಿತು ಹೇಳುತ್ತಾರೆ. ಇದು ಇಂತಹ ಜಾತಿ ವ್ಯವಸ್ಥೆಯನ್ನು ಮತ್ತು ಚಾತುರ್ವರ್ಣ ವ್ಯವಸ್ಥೆಯನ್ನು ಕಾಪಾಡಲು ನೆರವಾಗುವ ಗೀತೆಗೂ ಅನ್ವಯವಾಗುತ್ತದೆ.

ಆದರೆ ಇಂದು ಗೀತೆಯಲ್ಲಿನ ತಾರತಮ್ಯದ ಗೆಡ್ಡೆಯನ್ನು ತೆಗೆದು ಉಳಿಸಿಕೊಳ್ಳಬೇಕು ಎನ್ನುವುದರಿಂದ ಈ ಜಾತಿ ವ್ಯವಸ್ಥೆಯು ಹಾಗೇ ಉಳಿದುಹೋಗಬಹುದಾದ ಅಪಾಯವೂ ಇದೆ ಎನಿಸುವುದಿಲ್ಲವೇ? ಚಾತುರ್ವರ್ಣವನ್ನು ಸಾರಾಸಗಟಾಗಿ ಒಪ್ಪಿಕೊಳ್ಳುವ ಗೀತೆ, ಸ್ತ್ರೀಯರು, ವೈಶ್ಯರು, ಮತ್ತು ಶೂದ್ರರನ್ನು ಪಾಪಯೋನಿಗಳೆಂದು ಕರೆಯುವ ಮೂಲಕ, ದೇಶದ ಶೇ 90ರಷ್ಟು ಜನರ ಹುಟ್ಟನ್ನೇ ಅವಹೇಳನ ಮಾಡುತ್ತದೆ.

ಹೀಗಿರುವಾಗ ಇದನ್ನು ಉಳಿಸಿಕೊಳ್ಳುವ ಬಗೆ ಎಂತು? ಉಳಿಸಿಕೊಂಡರೆ ಇದರಿಂದಾಗುವ ಪ್ರಯೋಜನವಾದರೂ ಏನು? ಇದು ಮತ್ತೊಂದು ಬ್ರಾಹ್ಮಣೀಯ ಪರಂಪರೆಯನ್ನು ಹುಟ್ಟು ಹಾಕುತ್ತದೆಯೇ ಹೊರತು ಮತ್ತೇನನ್ನೂ ಅಲ್ಲ ಎಂಬುದು ಸತ್ಯವಲ್ಲವೇ? ಇದಕ್ಕೆ ಒಂದು ದೊಡ್ಡ ದಂಗೆಯೇ ಚರಿತ್ರೆಯ ಪುಟಗಳಲ್ಲಿ ನಡೆದುಹೋಗಬೇಕಿತ್ತು. ಆದರೆ ಇಂತಹ ಚಾತುರ್ವರ್ಣ ವ್ಯವಸ್ಥೆಯು ಅಂಬೇಡ್ಕರ್ ಹೇಳುವಂತೆ ‘ಹಿಂದೂ ಸಮಾಜದ ಕೆಳವರ್ಗ, ಕೆಳಜಾತಿಗಳು ತಮ್ಮ ದುಃಸ್ಥಿತಿಯ ವಿರುದ್ಧ ದಂಗೆ ಏಳಲಾರದಷ್ಟು ದುರ್ಬಲವಾಗುವಂತೆ ಸದಾ ಎಚ್ಚರಿಕೆ ವಹಿಸುತ್ತಲೇ ಬಂದಿದೆ’.

ಇಂದು ದೇಶದೊಳಗೆ ಭಗವದ್ಗೀತೆ ಬಗ್ಗೆ ಚರ್ಚೆಯಾಗುವ ಬದಲು ಸಂವಿಧಾನ ಕುರಿತು ಚರ್ಚೆ ನಡೆಯಬೇಕಿದೆ. ಇದು ದೇಶದ ಅಸಹಾಯಕ ಜನರ ಬದುಕಿಗೆ ಬೇಕಾಗಿರುವ ಆಧಾರ. ಭಾರತದಲ್ಲಿ ಈ ಅಸಮಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹುಟ್ಟಿದ ಯಾವ ಧರ್ಮವೂ ಹಿಂದೂ ಧರ್ಮದ ಪುನರುಜ್ಜೀವನ ಕೈಗೊಳ್ಳಲಿಲ್ಲ. ಅದರಿಂದ ಬೇರೆಯದೇ ಆದ ತತ್ವಗಳನ್ನು ಪ್ರತಿಪಾದಿಸಿದವು. ಜೈನ, ಬೌದ್ಧ, ಚಾರ್ವಾಕ, ಸಾಂಖ್ಯ, ಲೋಕಾಯತ ಮುಂತಾದ ಅವೈದಿಕ ಪಂಥಗಳು ಇದರಿಂದ ಹೊರತಾದ ನೆಲೆಯಲ್ಲಿಯೇ ತಮ್ಮ ತತ್ವವನ್ನು ಬೋಧಿಸಿದವು.

‘ಮನುಷ್ಯನು ಹಳೆ ಬಟ್ಟೆಯನ್ನು ಬಿಸಾಕಿ ಹೊಸ ಬಟ್ಟೆಯನ್ನು ತೊಡುವಂತೆ, ಆತ್ಮವು ಜೀರ್ಣವಾದ ದೇಹವನ್ನು ಬಿಟ್ಟು ಹೊಸ ಶರೀರವನ್ನು ಸೇರುತ್ತದೆ. ಬೆಂಕಿಯಾಗಲಿ, ಬಿರುಗಾಳಿಯಾಗಲಿ ಅಥವಾ ನೀರಾಗಲಿ ಆತ್ಮವನ್ನು ಬಾಧಿಸುವುದಿಲ್ಲ. ಅದನ್ನು ಯಾವುದೇ ಆಯುಧಗಳಿಂದಲೂ ತುಂಡರಿಸಲಾಗುವುದಿಲ್ಲ’. ಇದು ಕೃಷ್ಣನು ಭಗವದ್ಗೀತೆ ಮೂಲಕ ಬೋಧಿಸಿದ ತತ್ವ. ದಾಯಾದಿಗಳನ್ನು ಕೊಲ್ಲಲು ಅರ್ಜುನನನ್ನು ಪ್ರೇರೇಪಿಸುವ ಸಂದರ್ಭದಲ್ಲಿ ಬಂದ ಮಾತಿದು.

ಇದು ಏನನ್ನು ಪ್ರತಿಪಾದಿಸುತ್ತದೆ? ಕೊಲ್ಲುವ ಸಂಸ್ಕೃತಿಯೂ ಶ್ರೇಷ್ಠ ಎನ್ನುವುದನ್ನು ಮನಗಾಣಿಸುತ್ತಿಲ್ಲವೇ? ಬಹುಶಃ ಈ ಹಿನ್ನೆಲೆಯಲ್ಲಿಯೇ ಇರಬೇಕು ಡಿ.ಡಿ.ಕೊಸಾಂಬಿಯವರು ಭಗವದ್ಗೀತೆ ಕುರಿತು ಬರೆದ ಲೇಖನದಲ್ಲಿ ‘ಮಹಾಭಾರತದ ಕೃಷ್ಣನು ಬಹುಶಃ ಯಾವ ನೈತಿಕ ಸಿದ್ಧಾಂತವನ್ನು ಪ್ರತಿಪಾದಿಸಲೂ ಸೂಕ್ತ ವ್ಯಕ್ತಿಯಲ್ಲ’ ಎಂದು ಹೇಳಿರಬಹುದು. ಈ ಹಿನ್ನೆಲೆಯಲ್ಲಿ ನೋಡುವಾಗ ಗೀತೆಯ ಯಾವ ಅಂಶ ಇಂದು ಜನರಿಗೆ ಅನಿವಾರ್ಯವಾಗಿದೆ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸುತ್ತದೆ.

ಅಷ್ಟಕ್ಕೂ ಗೀತೆಯಲ್ಲಿನ ಕೆಲವು ಅಂಶಗಳನ್ನು ತೆಗೆದು ಉಳಿಸಿಕೊಳ್ಳಬೇಕಾದ ಅನಿವಾರ್ಯ ಯಾರಿಗಿದೆ? ಈ ದೇಶದ ಪುರೋಹಿತಶಾಹಿಗಳಿಗೆ ಅದರ ತುರ್ತಿರಬಹುದೇನೋ! ಅಥವಾ ಈ ವ್ಯವಸ್ಥೆಯನ್ನು ಹಾಗೇ ಉಳಿಸಿಕೊಳ್ಳುವತ್ತ ನಡೆದಿರುವ ಕೋಮುವಾದಿಗಳಿಗೆ ಇದರ ತುರ್ತಿರಬಹುದೇನೋ! ಆದರೆ ಈ ದೇಶದ ದುಡಿಯುವ ವರ್ಗ ಮತ್ತು ಶೋಷಿತ ವರ್ಗಕ್ಕೆ ಇದರ ಅನಿವಾರ್ಯ ಇಲ್ಲ. ದೇಶದ ಸಂವಿಧಾನವೇ ಇವರ ಪ್ರಧಾನ ಕೇಂದ್ರ ನೆಲೆಯೇ ಹೊರತು ಗೀತೆಯಂತಹ ವರ್ಣ ವ್ಯವಸ್ಥೆ ಕಾಪಾಡುವ ಧರ್ಮಗ್ರಂಥವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಇದು ಇವತ್ತಿನ ತುರ್ತಾಗಿ ಪರಿಣಮಿಸಬೇಕು.

ಇವತ್ತಿಗೂ (ಕರ್ನಾಟಕದ ಮಟ್ಟಿಗೆ ಹೇಳುವುದಾದರೆ) ಇಲ್ಲಿನ ಬಹುಪಾಲು ಜನ ಆಶ್ರಯಿಸಿರುವುದು ಗೀತೆಯಂತಹ ಮೇಲ್ವರ್ಗದ ಆಶಯಕ್ಕನುಗುಣವಾದ ಮಹಾಕಾವ್ಯವನ್ನಲ್ಲ. ಬದಲಾಗಿ ಇಂದಿಗೂ ಮಂಟೇಸ್ವಾಮಿ, ಮಲೆ ಮಹದೇಶ್ವರ, ಜುಂಜಪ್ಪ, ಮೈಲಾರಲಿಂಗ ಮುಂತಾದ ಬುಡಕಟ್ಟು ದೇವರ ಮಹಾಕಾವ್ಯಗಳ ಕಡೆಗೇ ಹೆಚ್ಚು ತುಡಿತ ಹೊಂದಿದ್ದಾರೆ. ಇದು ಭಾರತದ ಇನ್ನಿತರ ಪ್ರಾದೇಶಿಕ ನೆಲೆ, ಬುಡಕಟ್ಟುಗಳಿಗೂ ಅನ್ವಯಿಸುತ್ತದೆ.

ಈ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು ಹೇಳಿರುವ ಮಾತುಗಳನ್ನು ಈ ರೀತಿ ಅರ್ಥೈಸಿಕೊಳ್ಳಬಹುದೇನೋ! ಅದೇನೆಂದರೆ, ಗೀತೆಯಲ್ಲಿರುವ ತಾರತಮ್ಯದ ಗೆಡ್ಡೆ ತೆಗೆಯಬೇಕಿರುವವರು ಶೋಷಿತರಲ್ಲ, ಬದಲಾಗಿ ಅದರ ವಾರಸುದಾರರಾದ ಮೇಲ್ವರ್ಗಗಳು. ಇವರು ಆ ಗೆಡ್ಡೆ ತೆಗೆದು ಒಂದು ಹೆಜ್ಜೆ ಹಿಂದೆ ಬಂದು ಬೌದ್ಧ ಧರ್ಮದ ಅಂಶಗಳನ್ನು ಎತ್ತಿ ಹಿಡಿದರೆ ಆಗ ಗೀತೆಗೊಂದು ಅರ್ಥ ಬರಬಹುದೇನೋ! ಈ ರೀತಿ ಅರ್ಥೈಸಿಕೊಂಡರೆ ವ್ಯಕ್ತಿನಿಂದನೆಯಿಂದಾಚೆ ವಸ್ತುನಿಷ್ಠ ಚರ್ಚೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT