ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಬಲಿಪೀಠದಲ್ಲಿ ಗಣತಂತ್ರ!

ಅಕ್ಷರ ಗಾತ್ರ

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು)  ವ್ಯಕ್ತವಾದ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಸರ್ಕಾರ ತೋರಿದ ವಿಷಮ ಪ್ರತಿಕ್ರಿಯೆ ಪ್ರಜಾಪ್ರಭುತ್ವದ ಉಲ್ಲಂಘನೆಯಷ್ಟೇ ಅಲ್ಲ; ಭಾರತೀಯ ಗಣತಂತ್ರಕ್ಕೆ ಮಾಡಿದ ಅಪಮಾನವೂ ಆಗಿದೆ. ದೇಶದ್ರೋಹದಂತಹ ಗಂಭೀರ ಆರೋಪ ಹೊರಿಸಲು ಅತ್ಯುತ್ಸಾಹ ತೋರಿದ್ದು ಇದೇ ಮೊದಲೇನಲ್ಲ. ಹೀಗಾಗಿ ಈಗಿನ ಘಟನೆ ಆಶ್ಚರ್ಯವನ್ನು ಉಂಟುಮಾಡಿಲ್ಲ. ಅಲ್ಲದೆ, ಇಂತಹ ಸಂಪ್ರದಾಯವನ್ನು ಈಗಿನ ಸರ್ಕಾರವೇನೂ ಆರಂಭಿಸಿಲ್ಲ ಮತ್ತು ಇದು ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ದೇಶದ್ರೋಹ ಆರೋಪದ ಹೊಸದೊಂದು ಅಧ್ಯಾಯ ನವದೆಹಲಿಯ ಜೆಎನ್‌ಯು ಆವರಣದಲ್ಲಿ ಈಗ ಅನಾವರಣಗೊಂಡಿದೆ ಅಷ್ಟೆ.

ಭಿನ್ನಾಭಿಪ್ರಾಯವನ್ನು ತುಳಿಯುವ ಇಂತಹ ಯತ್ನಗಳು ಸರ್ಕಾರದ ಕುರಿತು ಏನನ್ನು ಹೇಳುತ್ತವೆ ಎಂಬ ಪ್ರಶ್ನೆ ಕಾಡುತ್ತದೆ. ಸ್ವಾತಂತ್ರ್ಯ ಹತ್ತಿಕ್ಕುವ ಇಂತಹ ಯತ್ನಗಳು ಏಕೆ ಮೇಲಿಂದ ಮೇಲೆ ನಡೆಯುತ್ತಿವೆ ಎಂಬುದನ್ನು ಗುರುತಿಸಿದರೆ ಪರಿಹಾರ ಕೂಡ ತಂತಾನೇ ಹೊಳೆಯುತ್ತದೆ. ಭಿನ್ನಾಭಿಪ್ರಾಯ ಹತ್ತಿಕ್ಕಲು ಲಭ್ಯವಿರುವ ಮೊದಲ ಅವಕಾಶವು ವರ್ತಮಾನಕ್ಕೆ ಸರಿಹೊಂದದ ಓಬೀರಾಯನ ಕಾಲದ ದಂಡ ಸಂಹಿತೆ ಮತ್ತು ವಿಕಾಸ ಹೊಂದುತ್ತಾ ಸಾಗಿರುವ ಸಂವಿಧಾನ– ಇವೆರಡರ ನಡುವಿನ ಸಂಘರ್ಷದ ದ್ಯೋತಕವಾಗಿ ಕಾಣುತ್ತದೆ ಎಂದಿದ್ದರು ಅಮರ್ತ್ಯ ಸೇನ್‌.

ಕೆಲವು ದಿನಗಳ ಹಿಂದೆ ರಾಜೇಂದ್ರ ಮಾಥೂರ್‌ ಸ್ಮಾರಕ ಉಪನ್ಯಾಸ ನೀಡಿದ್ದ ಅವರು, ‘ಸಾಮ್ರಾಜ್ಯಶಾಹಿ ಆಡಳಿತ ವ್ಯವಸ್ಥೆಯಲ್ಲಿ ರಚಿಸಲಾದ ದಂಡ ಸಂಹಿತೆ ಈಗಲೂ ನಮ್ಮ ಜೀವನದ ಮೇಲೆ ದಟ್ಟ ಪರಿಣಾಮ ಬೀರುತ್ತಿದೆ. ಆದರೆ, ನಮ್ಮ ಸಂವಿಧಾನದಲ್ಲಿ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಅಂಶಗಳು ಇಲ್ಲ’ ಎಂದು ಹೇಳಿದ್ದರು. ‘ಸಾರ್ವಜನಿಕ ಕಟ್ಟಳೆ, ಸಭ್ಯತೆ ಹಾಗೂ ನೈತಿಕತೆ’ ವಿಷಯವಾಗಿ ಸಂವಿಧಾನದ ಬಯಕೆಗೂ ಸಂಘಟಿತ ರಾಜಕೀಯ ಕಾರ್ಯಕರ್ತರು ಸೂಕ್ಷ್ಮ ಭಾವನೆಗಳನ್ನು ಉದ್ದೀಪನಗೊಳಿಸುವ ಮೂಲಕ ಎಬ್ಬಿಸಿರುವ ಹುಯಿಲಿಗೂ ಅಜಗಜಾಂತರವಿದೆ.

ಗೋಮಾಂಸ ಭಕ್ಷಣೆ ಮಾಡುವ ಇಲ್ಲವೆ ಅದನ್ನು ಫ್ರಿಜ್‌ನಲ್ಲಿ ಸಂಗ್ರಹಿಸುವುದರ ವಿರುದ್ಧ ಸಂವಿಧಾನ ಏನನ್ನೂ ಹೇಳಿಲ್ಲ. ಕೆಲವು ಗೋ–ಆರಾಧಕರು ಮಾತ್ರ ಉಳಿದವರ ಆಹಾರ ಕ್ರಮದ ವಿಷಯವಾಗಿ ಮೂಗು ತೂರಿಸದೆ ಬಿಟ್ಟಿಲ್ಲ. ಪ್ರತಾಪ್‌ ಭಾನು ಮೆಹ್ತಾ ಅವರು ಹೇಳುವಂತೆ ಈ ಘಟನೆ ಬಹುಮತದ ಗ್ರಹಣ ಬೆಳೆಯುತ್ತಿರುವ ದ್ಯೋತಕವಾಗಿದೆ. ಈಗಿನ ಸರ್ಕಾರದ ಮೂಲಕ ಅದು ತನ್ನ ತೋಳ್ಬಲನ್ನು ತೋರುತ್ತಿದೆ. ‘ಯಾವುದೇ ಭಿನ್ನಾಭಿಪ್ರಾಯವನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಈ ಬಂಧನ ಎತ್ತಿತೋರುತ್ತದೆ.

ಅಲ್ಲದೆ, ರಾಷ್ಟ್ರೀಯತೆ ಮೇಲೆ ಈ ಸರ್ಕಾರ ಪ್ರತಿಪಾದಿಸುತ್ತಿರುವ ದುರಹಂಕಾರದ ಏಕಸ್ವಾಮ್ಯವೂ ಕಣ್ಣಿಗೆ ಹೊಡೆಯುತ್ತಿದೆ. ದೇಶಭಕ್ತಿಯ ಅಸ್ತ್ರದ ಮೂಲಕ ಎಲ್ಲ ವಿಚಾರಗಳನ್ನು ಅದು ತುಳಿಯಲು ಹೊರಟಿದೆ. ಮುಕ್ತ ಪ್ರಜಾಪ್ರಭುತ್ವದ ಬೆಳಕಿನಲ್ಲಿ ನೋಡಿದಾಗ ಜೆಎನ್‌ಯು ವಿದ್ಯಾರ್ಥಿಗಳು ಹೇಳಿದ ಯಾವ ಮಾತೂ ಕಾನೂನುಬಾಹಿರ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ದಬ್ಬಾಳಿಕೆಯಿಂದ ಭಿನ್ನ ಧ್ವನಿ ದಮನ ಮಾಡಲು ಹೊರಟ ಕ್ರಮವನ್ನು ಗುರುತಿಸಲಾಗದಷ್ಟು ಸಮಾಜ ಸಹ ತನ್ನ ಮೂಲ ದೃಷ್ಟಿಕೋನವನ್ನು ಕಳೆದುಕೊಂಡಿದೆ. ಭಿನ್ನಾಭಿಪ್ರಾಯ–ಪ್ರತಿಭಟನೆ–ಬಂಧನದ ಈ ವರ್ತುಲ ದೊಡ್ಡ ಸಮಸ್ಯೆಯ ಸಂಕೇತ.

ಪ್ರಜಾಪ್ರಭುತ್ವದ ಬಲಿಪೀಠದ ಮೇಲೆ ಭಾರತೀಯ ಗಣತಂತ್ರವನ್ನು ಹರಕೆಯ ಕುರಿ ಮಾಡಲಾಗಿದೆ. ಪ್ರಜಾಪ್ರಭುತ್ವದ ಶಬ್ದಶಃ ಅರ್ಥ ‘ಜನರಿಂದಲೇ ಆಡಳಿತ’. ಆದರೆ, ವಾಸ್ತವವಾಗಿ ಇರುವುದು ‘ಬಹುಮತದ ಆಡಳಿತ’. ಆ ಬಹುಮತವಾದರೂ ಎಂತಹದ್ದು? ಮೂರರಲ್ಲಿ ಎರಡು ಭಾಗ ಅಥವಾ ನಾಲ್ಕರಲ್ಲಿ ಮೂರು ಭಾಗ ಇಲ್ಲವೆ ಶೇ 50ಕ್ಕಿಂತ ತುಸುವೇ ಹೆಚ್ಚು. ಅಲ್ಪ ಬಹುಮತವಿದ್ದರೂ ಅದು ಕೈಗೊಳ್ಳುವ ತೀರ್ಮಾನವೇ ದೇಶದ ನಿರ್ಧಾರವಾಗುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ವಿದ್ಯಾರ್ಥಿಯನ್ನು ಆತ ನೀಡಿದನೆನ್ನಲಾದ ದೇಶದ ವಿರುದ್ಧದ ಹೇಳಿಕೆ ಆರೋಪದ ಮೇಲೆ ಬಂಧಿಸಿದ್ದನ್ನು ಬಹು ಸಂಖ್ಯೆಯಲ್ಲಿ ಜನ ಬೆಂಬಲಿಸಿದರೆ ಅದು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ಎಲ್ಲ ಪ್ರಕರಣಗಳಲ್ಲೂ ಬಹುಮತದ್ದೇ ಅಂತಿಮ ತೀರ್ಮಾನ. ಆ ನಿರ್ಧಾರ ಬಹುಮತದ ಪರಿಧಿಯೊಳಗೆ ಇಲ್ಲದವರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಲೆಕ್ಕಕ್ಕೇ ಇಲ್ಲ. ಉದಾಹರಣೆಗೆ, ಪುರಾತನ ಗ್ರೀಸ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಕಾನೂನಿನ ಪ್ರಕಾರವೇ ಬಹುಮತದ ತೀರ್ಮಾನದ ಮೇಲೆ ಸಾಕ್ರಟಿಸ್‌ನನ್ನು ಕೊಲ್ಲಲಾಯಿತು. ಯುವಕರ ಮನಸ್ಸಿನಲ್ಲಿ ಭ್ರಷ್ಟಾಚಾರ ಹಾಗೂ ನಿರ್ಭೀತಿ ಬಿತ್ತಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿತ್ತು.

ಜೆಎನ್‌ಯು ಪ್ರಕರಣದಲ್ಲಿ ಬಹುಮತ ಏನು ತೀರ್ಮಾನ ಮಾಡುತ್ತದೆ ಗೊತ್ತಿಲ್ಲ. ಆದರೆ, ರಾಷ್ಟ್ರವಿರೋಧಿ ನಿಲುವು ಅಪರಾಧ ಎನ್ನುವುದು ಬಹುತೇಕ ಭಾರತೀಯರ ಅಭಿಪ್ರಾಯ ಆಗಿರುವುದು ವೇದ್ಯವಾದ ಸಂಗತಿ. ಹಾಗಾದರೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳು ಹಾಗೂ ಗುಂಪುಗಳ ವಿರುದ್ಧ ಹಕ್ಕು ಚಲಾಯಿಸದಂತೆ ಈಗಿನ ಸರ್ಕಾರವನ್ನು ತಡೆಯುತ್ತಿರುವ ಶಕ್ತಿ ಯಾವುದು? ಬಹುಮತದ ಕುದುರೆ ಏರಿರುವ ಸರ್ಕಾರದ ಹುಚ್ಚು ಓಟಕ್ಕೆ ಆಸ್ಪದ ನೀಡದಿರುವ ಆ ಶಕ್ತಿಯೇ ಭಾರತೀಯ ಗಣತಂತ್ರ (Indian Republic). ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಬಹುಮತದ ದಬ್ಬಾಳಿಕೆಯಿಂದ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಿರುವುದು ಸಂವಿಧಾನ. ದೇಶದಲ್ಲಿ ಬದುಕುವ, ಕೆಲಸ ಮಾಡುವ ಹಾಗೂ ಪ್ರತಿಭಟಿಸುವ ಮೂಲಭೂತ ಹಕ್ಕನ್ನೂ ಸಂವಿಧಾನ ಕೊಟ್ಟಿದೆ.

ಆದರೆ, ಹಲವು ಪ್ರಕರಣಗಳಲ್ಲಿ ಪ್ರಜಾಪ್ರಭುತ್ವದ ಬಲಿಪೀಠದ ಮೇಲೆ ಗಣತಂತ್ರ ಆಶಯಗಳನ್ನು ಬಲಿ ಕೊಡಲಾಗುತ್ತದೆ. ಜೆಎನ್‌ಯು ಪ್ರಕರಣ ಸಹ ಅದಕ್ಕೆ ಹೊರತಲ್ಲ. ನಮ್ಮ ಆಡಳಿತ ವ್ಯವಸ್ಥೆ ಪ್ರಜಾಸತ್ತಾತ್ಮಕ ಗಣತಂತ್ರ (democratic republic) ಎಂಬುದನ್ನು ಮರೆತು ಪ್ರಜಾಪ್ರಭುತ್ವ (democratic) ಮಾತ್ರ ಎಂಬ ಯೋಚನೆಯಲ್ಲೇ ನಾವು ಮುಳುಗಿದ್ದೇವೆ. ಪ್ರಜಾಪ್ರಭುತ್ವ ಹಾಗೂ ಗಣತಂತ್ರದ ಈ ಸಂಘರ್ಷಕ್ಕೆ ಸುದೀರ್ಘ ಇತಿಹಾಸ ಇದೆ. ಭಾರತ ಹಾಗೂ ಅದರ ನಾಗರಿಕರ ರಕ್ಷಣೆ ಹೆಸರಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಕಿತ್ತುಕೊಂಡ ಉದಾಹರಣೆಗಳು ಕೂಡ ಹೇರಳವಾಗಿವೆ.

ಭಾರತದ ಸಂವಿಧಾನಕ್ಕೆ ತರಲಾದ ಮೊದಲ ತಿದ್ದುಪಡಿ ಅಂತಹ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡುವುದೇ ಆಗಿತ್ತು. ‘ಭಾರತದ ಸಾರ್ವಭೌಮತೆ, ಸಮಗ್ರತೆ, ಭದ್ರತೆಗೆ ಧಕ್ಕೆ; ವಿದೇಶಗಳ ಸಂಬಂಧಗಳಿಗೆ ಚ್ಯುತಿ; ಅಸಭ್ಯ, ಅನೈತಿಕ ವರ್ತನೆಯಿಂದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಹಾಗೂ ನ್ಯಾಯಾಂಗ ನಿಂದನೆ ಆಗುತ್ತಿರುವುದಕ್ಕೆ ‘ಸಮಂಜಸ’ ಕಾರಣಗಳು ಇದ್ದರೆ ಸರ್ಕಾರ ವಾಕ್‌ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ವಿಧಿಸಬಹುದು’ ಎಂಬುದು ಆ ತಿದ್ದುಪಡಿಯ ಸಾರಾಂಶ. ‘ಸಮಂಜಸ’ ಪದವನ್ನು ಅಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆ ನಾಲ್ಕನೇ ಅಂಗವಾದ ಮಾಧ್ಯಮವನ್ನು ನಿಯಂತ್ರಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ. ಪ್ರಜಾಪ್ರಭುತ್ವ ಹಾಗೂ ಗಣತಂತ್ರ, ಸ್ವಾತಂತ್ರ್ಯ ಹಾಗೂ ಭದ್ರತೆ ನಡುವಿನ ಸಂಘರ್ಷ ಸಾಕಷ್ಟು ಗಾಸಿ ಮಾಡಿದೆ. ಅಸ್ಪಷ್ಟ ಕಾನೂನು ಬಲದಿಂದ ವಿದ್ಯಾರ್ಥಿಯನ್ನು ಬಂಧಿಸಿದ್ದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.  ಬಂಡಾಯದ ಕಲ್ಪನೆಗಳು, ವಿಚಾರಗಳು, ಘೋಷಣೆಗಳು ಹೆಚ್ಚುತ್ತಾ ಹೋದಂತೆ ಆತಂಕವೂ ಹೆಚ್ಚುತ್ತಾ ಹೋಗುತ್ತದೆ. ಅದೇ ಇಂದಿನ ಎಲ್ಲ ಘಟನೆಗಳಿಗೆ ಕಾರಣ ಎನ್ನುವುದು ಎದ್ದು ಕಾಣುತ್ತಿರುವ ಸತ್ಯವಾಗಿದೆ. 

ಲೇಖಕರು ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT