ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕ ಕಾಯ್ದೆ: ಬಲ ತುಂಬದ ತಿದ್ದುಪಡಿ

ಮೂರು ದಶಕಗಳು ಕಳೆದರೂ ಬಾಲಕಾರ್ಮಿಕ ಕಾನೂನು ಪರಿಣಾಮಕಾರಿ ಆಗಿಲ್ಲವೆಂದರೆ, ಒಂದಿಡೀ ತಲೆಮಾರು ಶೋಷಣೆಗೆ ಬಲಿಯಾಗಿದೆ ಎಂದರ್ಥ
Last Updated 8 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ ರಾಷ್ಟ್ರಪತಿಯಿಂದ ಅಂಗೀಕಾರಗೊಂಡು ಕಾಯ್ದೆಯಾಗಿ ಜಾರಿಯಾಗುವ ಹಂತದಲ್ಲಿದೆ.

ಈ ತಿದ್ದುಪಡಿ ಕಾಯ್ದೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಿದೆ. 14ರಿಂದ 18 ವರ್ಷದ ನಡುವಿನವರನ್ನು ಇದು ‘ಹದಿಹರೆಯದವರು’ ಎಂದು ಪರಿಗಣಿಸುತ್ತದೆ. 14 ವರ್ಷದೊಳಗಿನ ಮಕ್ಕಳು ತಮ್ಮ ಕುಟುಂಬ ನಡೆಸುವ ಅಪಾಯಕಾರಿಯಲ್ಲದ ಕೆಲಸಗಳಲ್ಲಿ ಪಾಲ್ಗೊಳ್ಳಲು (ಶಾಲಾ ಸಮಯದ ನಂತರ) ಅವಕಾಶ ಕಲ್ಪಿಸಿದೆ.

ಈ ಕಾಯ್ದೆಯನ್ನು ಅವಲೋಕಿಸಿದರೆ ಮೇಲ್ನೋಟಕ್ಕೆ ಇದರಲ್ಲಿ ಹಲವು ಬದಲಾವಣೆಗಳಾದಂತೆ ತೋರುತ್ತದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಂದಿನ ಕಾಯ್ದೆ ಜಾರಿಯಾದಾಗಿನಿಂದ ಈವರೆಗಿನ 30 ವರ್ಷಗಳ ಅನುಭವ, ಬಾಲ ಕಾರ್ಮಿಕತನ ನಿವಾರಣೆಗೆ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನೆಲ್ಲ ಗಮನಿಸಿದರೆ ಈಗಿನ ತಿದ್ದುಪಡಿ ಕ್ರಾಂತಿಕಾರಕ ಎನಿಸುವುದಿಲ್ಲ ಅಥವಾ ಮಹತ್ವದ ಹೆಜ್ಜೆ ಎಂದು ಸಹ ಅನಿಸುವುದಿಲ್ಲ.

ಅದಕ್ಕಿಂತ ಮಿಗಿಲಾಗಿ ಇದು ಮಕ್ಕಳ ಮೇಲೆ ಇನ್ನೂ ಹೆಚ್ಚಿನ ಕೆಟ್ಟ ಪರಿಣಾಮ ಬೀರಬಹುದೇ ಎನ್ನುವ ಸಂಶಯ ಹುಟ್ಟಿಸುತ್ತಿದೆ. ಅತಿ ಮುಖ್ಯವಾಗಿ,  ಮಕ್ಕಳ ಶೋಷಣೆಗೆ ಕಾರಣವಾಗುವ ಮೂಲ ಅಂಶಗಳ ಬಗ್ಗೆ ಇದು ಸ್ವಲ್ಪವೂ ಯೋಚಿಸಿದಂತಿಲ್ಲ. ತಿದ್ದುಪಡಿ ಬಗೆಗಿನ ಚರ್ಚೆ ಕೂಡ ಈ ಸಣ್ಣ ಪರಿಧಿಯ ಒಳಗೇ ಆಗುತ್ತಿದೆ ವಿನಾ ನಿಜವಾದ ಕಾರಣ, ಮಾಡಬೇಕಾದ ಮುಖ್ಯ ಬದಲಾವಣೆಗಳತ್ತ ಚಿಂತಿಸುತ್ತಿಲ್ಲ.

ಕುಟುಂಬದ ಕೆಲಸಗಳಲ್ಲಿ ತೊಡಗುವುದನ್ನು ಕೆಲವರು ಪರಂಪರೆಯ ಕಸುಬಿಗೆ ಪ್ರೋತ್ಸಾಹ ಎಂದರೆ, ಇನ್ನು ಕೆಲವರು ಜಾತಿ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು ಮಕ್ಕಳು ಅದರಲ್ಲೇ ಮುಂದುವರಿಯುವ ಅಪಾಯವನ್ನು ಕಾಣುತ್ತಿದ್ದಾರೆ.

ತಿದ್ದುಪಡಿ ಕುರಿತ ಈ ಬಗೆಯ ಚರ್ಚೆಗಳು ಕಾಯ್ದೆಯ ಸಮಗ್ರ ಬದಲಾವಣೆಗಾಗಲಿ, ಮಕ್ಕಳ ಮೇಲಿನ ಶೋಷಣೆ ತಡೆಯಲಾಗಲಿ, ತಮ್ಮ ಬಗೆಗಿನ ತೀರ್ಮಾನಗಳಲ್ಲಿ ಮಕ್ಕಳು ಮಾಹಿತಿ ಸಮೇತ ಭಾಗವಹಿಸಲಾಗಲಿ ಏನೇನೂ ಅವಕಾಶ ಕೊಡುವುದಿಲ್ಲ. ಅಲ್ಲದೆ ಮಕ್ಕಳನ್ನು ಶೋಷಣೆಗೆ, ದುಡಿಮೆಗೆ ದೂಡಲಾಗುವ ಮೂಲ ಕಾರಣಗಳ ಬಗ್ಗೆ ಚಕಾರ ಎತ್ತುವುದಿಲ್ಲ.

ಯಾಕೆ ಮಕ್ಕಳು ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೃಷಿಕರು, ನೇಕಾರರು, ಕುಂಬಾರರು ದಿನಿವಿಡೀ ದುಡಿದರೂ ಯಾಕೆ ಕುಟುಂಬ ಪಾಲನೆಗೆ ಸಾಕಾಗುವಷ್ಟು ಸಂಪನ್ಮೂಲ ಗಳಿಸಲಾಗುತ್ತಿಲ್ಲ, ನರೇಗಾದಂತಹ ಕಾರ್ಯಕ್ರಮದಲ್ಲಿ, ಐವರು ಸದಸ್ಯರ ಕುಟುಂಬದಲ್ಲಿ ದುಡಿಯುವ ವ್ಯಕ್ತಿಗೆ ದಿನಕ್ಕೆ ₹ 300 ಕೂಲಿ ಎಂದುಕೊಂಡರೂ ಕುಟುಂಬ ಸದಸ್ಯರಿಗೆ ತಲಾ ₹ 60 ಮಾತ್ರ ಆಗುತ್ತದೆ. ಅದೂ ಈ ಕೆಲಸವೂ ಇಡೀ ವರ್ಷ ದೊರೆಯುವುದಿಲ್ಲ, ಅದು ಸೀಮಿತ ಅವಧಿಗೆ ಮಾತ್ರ.

ಇತ್ತೀಚಿನ ಎನ್.ಎಸ್.ಇ.ಸಿ. ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಬಡತನ ಇನ್ನೂ ಪ್ರಖರವಾಗಿ ಬೆಳೆಯುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಶೇ 75ರಷ್ಟು ಜನ ಕೃಷಿ, ಅರೆ ಕೌಶಲ ಅಥವಾ ಕನಿಷ್ಠ ಕೌಶಲದ ದುಡಿಮೆಯಲ್ಲಿ ತೊಡಗಿದ್ದಾರೆ. ದೇಶದ ಜಿಡಿಪಿ ದರ ಎಷ್ಟೆಲ್ಲಾ ಬೆಳೆದಿದೆ ಎಂದು ಹೇಳುವಾಗಲೂ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಹೆಚ್ಚುತ್ತಿದೆ.

ನಮ್ಮ ಜನಸಂಖ್ಯೆಯ ಅತಿ ಹೆಚ್ಚು ಕುಟುಂಬಗಳ ಮಾಸಿಕ ಗಳಿಕೆ ₹ 10 ಸಾವಿರದಷ್ಟು. ಅಂದರೆ ಐವರು ಸದಸ್ಯರ ಕುಟುಂಬದ ದಿನದ ಸರಾಸರಿ ಆದಾಯ ₹ 66 ಮಾತ್ರ. ಇದು ದಶಕಗಳ ಅಭಿವೃದ್ಧಿಯ ಫಲಿತಾಂಶ.

ಬಾಲಕಾರ್ಮಿಕ ಕಾಯ್ದೆ ಬಂದು ಮೂರು ದಶಕಗಳು ಕಳೆದರೂ ನಮ್ಮಲ್ಲಿ ಬಾಲಕಾರ್ಮಿಕ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಕಾಯ್ದೆ ಈಗಿನ ತಿದ್ದುಪಡಿ ಸೇರಿದರೂ ಮಹತ್ತರ ಬದಲಾವಣೆಯ ಶಕ್ತಿಯನ್ನೇನೂ ಪಡೆದಿಲ್ಲ. ಇದರಲ್ಲಿ ಹಳೆಯದಾದ ದಾಳಿ-ರಕ್ಷಣೆಯ ಕಾರ್ಯತಂತ್ರ ಬಿಟ್ಟರೆ ಬೇರೆ ತಂತ್ರಗಳೇ ಇಲ್ಲ.

ಈ ಬಗೆಯ ದಾಳಿ ಮತ್ತು ರಕ್ಷಣೆಯು ಮಕ್ಕಳಿಗೆ ನಿಜವಾಗಿಯೂ ಘನತೆ, ಗೌರವದಿಂದ ಬದುಕಲು ಅವಕಾಶ ಕಲ್ಪಿಸುವುದು ಬಿಟ್ಟು ಅಪಮಾನ, ಹಿಂಸೆ, ಶೋಷಣೆ ಮಾಡಿದ ಉದಾಹರಣೆಗಳೇ ಅಧಿಕವಾಗಿವೆ. 1986ರ ಕಾಯ್ದೆ ಬರುವ ಮೊದಲು ದೇಶದಲ್ಲಿ ಬಾಲಕಾರ್ಮಿಕರು ‘ನಾವು ದುಡಿಯುವ ಮಕ್ಕಳು. ನಮ್ಮ ಮೇಲೆ ಶೋಷಣೆ ನಡೆಯುತ್ತಿದೆ. ನಮಗೆ ರಕ್ಷಣೆ ಬೇಕು’ ಎಂದು ಬಹಿರಂಗವಾಗಿ ಹೇಳುವ ವಾತಾವರಣ ಇತ್ತು.

ಆದರೆ ಇಂದು ಆ ವಾತಾವರಣ ಇಲ್ಲ. ‘ನಾನು ದುಡಿಯುವ ಮಗು’ ಎಂದು ಬಾಯಿ ಬಿಟ್ಟವರು ಬಾಲಮಂದಿರಕ್ಕೋ, ಯಾವುದೋ ಸಂಸ್ಥೆಯ ಒಳಗೋ ತಳ್ಳಿಸಿಕೊಳ್ಳುವ ಪರಿಸ್ಥಿತಿಗೆ ಸಿಲುಕುತ್ತಾರೆ. ಅಂದರೆ ಬಾಲಕಾರ್ಮಿಕರು ಶೋಷಣೆ ಮುಕ್ತರಾಗುವುದಕ್ಕಿಂತ ಹೆಚ್ಚಾಗಿ ಬಾಯಿ ಮುಚ್ಚಿ, ಕಣ್ಣುತಪ್ಪಿಸಿ, ಅಂಕಿ-ಅಂಶಗಳಿಗೆ ಸಿಲುಕದೆ, ಭೂಗತರಾಗಿ ಬದುಕನ್ನು ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ಇಂತಹ ಪರಿಸ್ಥಿತಿ 18 ವರ್ಷದ ಮಕ್ಕಳವರೆಗೂ ವಿಸ್ತರಣೆಯಾಗುವ ಅಪಾಯ ಕಾಣುತ್ತಿದೆ.

ಇನ್ನೊಂದೆಡೆ, 14 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಉದ್ಯೋಗದಲ್ಲಿ ಒಳಗೊಳ್ಳಬಹುದು ಎಂದಾಗ ಬೀಡಿ ಸುತ್ತುವಿಕೆ, ಗೇರು ಬೀಜ ಸಂಸ್ಕರಣೆ, ಎಲೆಕ್ಟ್ರಾನಿಕ್ ವಸ್ತುಗಳ ಜೋಡಣೆ, ಸ್ಮಾರ್ಟ್ ಫೋನ್, ಐಫೋನ್‌ಗಳ ಜೋಡಣೆಯ ಕೆಲಸ ಒತ್ತರಿಸಿಕೊಂಡು ಬಂದು ಮಕ್ಕಳು ಹಗಲಲ್ಲಿ ಶಾಲೆಯಲ್ಲಿ ಕಲಿಕೆ, ಮನೆಯಲ್ಲಿ ಗಳಿಕೆಯ ಹೆಸರಿನಲ್ಲಿ ದುಡಿಮೆಯಿಂದ ಒತ್ತಡಕ್ಕೆ ಒಳಗಾಗಬಹುದು. ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಇದಕ್ಕೆ ಉತ್ತೇಜನ ನೀಡಬಹುದು ಎನ್ನುವ ಆತಂಕವೂ ಹಲವರಲ್ಲಿದೆ.

ಇಷ್ಟು ವರ್ಷಗಳ ಕಾಲ ಈ ಕಾನೂನು ಯಾಕೆ ನಿರೀಕ್ಷಿತ ಪರಿಣಾಮ ಬೀರಲಿಲ್ಲ ಎಂಬುದನ್ನು ನಾವೆಲ್ಲೂ ಚರ್ಚಿಸಿಲ್ಲ. ಆದ ದೊಡ್ಡ ಪರಿಣಾಮವೆಂದರೆ, ದುಡಿಮೆ ಎಂದರೆ ಮಕ್ಕಳಲ್ಲಿ ಹೆದರಿಕೆ ಹುಟ್ಟಿದೆ. ತಮ್ಮನ್ನು ದುಡಿಸಿಕೊಳ್ಳುವುದರ ವಿರುದ್ಧ ನಡೆಯುವ ದಾಳಿ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಂದ ಮಕ್ಕಳು ಬಾಲಮಂದಿರದಂತಹ ಪ್ರದೇಶಕ್ಕೆ ತಳ್ಳಿಸಿಕೊಳ್ಳುತ್ತಾರೆ ಅಥವಾ ಇನ್ನೂ ಕೆಟ್ಟ ದುಡಿಯುವ ಕ್ಷೇತ್ರಗಳಲ್ಲಿ ಹೇಳಹೆಸರಿಲ್ಲದಂತೆ ಸೇರಿಹೋಗುತ್ತಾರೆ.

ಶಾಲೆಗೆ ತಳ್ಳಿಸಿಕೊಳ್ಳುವ ಮಕ್ಕಳಲ್ಲೂ ಶಿಕ್ಷಣ ಚಮತ್ಕಾರಿಕ ಬದಲಾವಣೆ ಮಾಡಿದ್ದು  ಅನುಭವಕ್ಕೆ ಬರುತ್ತಿಲ್ಲ. ಶಾಲೆಗಳಿಗೆ ದಾಖಲಾಗಿ ಒಂದೆರಡು ವರ್ಷ ಅಲ್ಲಿದ್ದು ಪುನಃ ಅದೇ ಶೋಷಣೆ ಕೆಲಸಕ್ಕೆ ದೂಡಿಸಿಕೊಂಡಿದ್ದಾರೆ ವಿನಃ ಅವರ ಬದುಕಲ್ಲಿ ಹೊಸ ಭರವಸೆಯ ಬೆಳಕನ್ನು ಇಂತಹ ಕ್ರಮಗಳು ಸೃಷ್ಟಿಸಿಲ್ಲ.

ಬಾಲಕಾರ್ಮಿಕ ಪದ್ಧತಿ ನಿವಾರಿಸಲು, ಮಕ್ಕಳ ಮೇಲಿನ ಕೆಲಸದ ಶೋಷಣೆ ತಡೆಯಲು ಒಂದು ಅರ್ಥಪೂರ್ಣವಾದ ಸಮಗ್ರ ಕಾರ್ಯಕ್ರಮ ರೂಪುಗೊಳ್ಳಬೇಕಿದೆ. ಅದು ದೀರ್ಘಕಾಲೀನ ಪರಿಣಾಮ ಬೀರುವ ಸಾಮಾಜಿಕ, ಆರ್ಥಿಕವಾಗಿ ಮಹತ್ತರ ಬದಲಾವಣೆ ತರಬಲ್ಲ ಆಲೋಚನೆಯನ್ನು ಒಳಗೊಳ್ಳಬೇಕಾಗಿದೆ. ಮಕ್ಕಳು ತಮ್ಮ ಈಗಿನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾ, ನಾಳಿನ ವಯಸ್ಕ ಬದುಕಿಗೆ ಬೇಕಾದ ಕೌಶಲ, ಜ್ಞಾನ, ಶಿಕ್ಷಣ, ಮಾಹಿತಿಯನ್ನು ಸರ್ವಾಂಗೀಣ ಅಭಿವೃದ್ಧಿಯ ನೆಲೆಯಲ್ಲಿ ಪಡೆಯುವುದು ಹೇಗೆ ಎಂದು ಯೋಚಿಸಬೇಕಾಗಿದೆ.

ಅದೇ ಸಮಯದಲ್ಲಿ ಅವರ ಕುಟುಂಬಕ್ಕೂ ಅಗತ್ಯವಿರುವ ಸಹಾಯ ನೀಡುವ ವ್ಯವಸ್ಥೆಯನ್ನೂ ರೂಪಿಸಬೇಕಾಗಿದೆ. ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು ಎನ್ನುವುದಕ್ಕಿಂತ ನಮ್ಮ ಅಭಿವೃದ್ಧಿ ಮಾದರಿಯಲ್ಲಿನ ತಪ್ಪಿನಿಂದಾಗಿ ಸೃಷ್ಟಿಯಾದದ್ದು ಎಂದು ನಾವು ಗ್ರಹಿಸಿ ಯೋಜಿಸಿದರೆ ಪರಿಹಾರಗಳು ಸತ್ಯಕ್ಕೆ ಹತ್ತಿರವಾದಾವು.

ಮೂರು ದಶಕ ಕಳೆದರೂ ಒಂದು ಕಾನೂನು ಪರಿಣಾಮಕಾರಿ ಆಗಿಲ್ಲವೆಂದರೆ ನಾವು ಭರವಸೆ ನೀಡಿದ ಒಂದು ತಲೆಮಾರು ಆ ದುಃಖ, ಶೋಷಣೆ, ಕ್ರೌಯಕ್ಕೆ ಬಲಿಯಾಗಿ ಹೋಗಿದೆ ಎನ್ನುವುದನ್ನು ಅರಿಯಬೇಕಾಗಿದೆ. ಈಗಿನ ತಿದ್ದುಪಡಿ ಮಸೂದೆಯೂ ಇನ್ನೊಂದು ತಲೆಮಾರನ್ನು ಅದೇ ಭರವಸೆಹೀನ ಕತ್ತಲೆಗೆ ನೂಕುವ ಲಕ್ಷಣಗಳೆಲ್ಲ ಗೋಚರಿಸುತ್ತಿವೆ.

ಮಕ್ಕಳನ್ನು ಘನತೆ, ಗೌರವಗಳಿಂದ ಗೆಲ್ಲಬಹುದಾದ ಇನ್ನೊಂದು ಅವಕಾಶವನ್ನೂ ನಾವು ಕಸಿದುಕೊಂಡಿದ್ದೇವೆ. ಶ್ರೀಮಂತ, ಬಲಾಢ್ಯ ಭಾರತ ನಿರ್ಮಾಣಗೊಂಡು, ಅದನ್ನು ಉಳಿಸಲು ನಮಗೊಂದು ಬಡ, ನಿರ್ಬಲ ಭಾರತ ಅದರೊಳಗೆ ನಿರಂತರವಾಗಿ ಇರಬೇಕಾದ ಅಗತ್ಯವಿದೆ ಎಂದು ನಾವು ನಿರ್ಧರಿಸಿದ್ದೇವೆಯೇ?

ನಮ್ಮ ಕಾಳಜಿ ಯಾವ ಕಡೆಗೆಂಬುದನ್ನು ನಾವಿಂದು ನಿರ್ಧರಿಸಬೇಕು. ಎಲ್ಲರೊಡಗೂಡಿ ಅಭಿವೃದ್ಧಿ ಎನ್ನುವಾಗ ಈ ಬಡ ಮಕ್ಕಳು ಆ ಎಲ್ಲರಲ್ಲಿ ಎಲ್ಲಿ ಎನ್ನುವ ಪ್ರಶ್ನೆ ಉಳಿದು ಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT