ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಮರಾಠಿಗರಿಗೊಂದು ಪತ್ರ

Last Updated 21 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನವೆಂಬರ್  ಒಂದರಂದು ಕರ್ನಾಟಕ ರಾಜ್ಯವೆಲ್ಲ ರಾಜ್ಯೋತ್ಸವ ಆಚರಣೆಯ ಸಂಭ್ರಮದಲ್ಲಿದ್ದಾಗ, ರಾಜ್ಯದ ಅವಿಭಾಜ್ಯ ಅಂಗವಾದ ಬೆಳಗಾವಿ ನಗರದ ಕೆಲವು ಮರಾಠಿ ಭಾಷಿಕರು ಕರಾಳ ದಿನವನ್ನು ಆಚರಿಸಿದ್ದು ಎಷ್ಟು ಸಮಂಜಸ, ಎಷ್ಟು ಭಾರತೀಯತೆ, ಎಷ್ಟು ನಾಗರಿಕತೆ ಮತ್ತು ಎಷ್ಟು ಮರಾಠ ಸಂಸ್ಕೃತಿ ಎಂಬ ಬಗ್ಗೆ ಬೆಳಗಾವಿ ಮರಾಠಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರತಿವರ್ಷದ ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಕೆಲವು ಮರಾಠಿಗರು ಕರಾಳ ದಿನವನ್ನು ಆಚರಿಸುತ್ತಲೇ ಬಂದಿದ್ದಾರೆ. ಈ ಪ್ರಕಾರದ ಆಚರಣೆಗೆ 60 ವರ್ಷಗಳೇ ಸಂದಿವೆ. ಕರಾಳ ದಿನದ ಆಚರಣೆಯ ಹಿಂದಿರುವ ಉದ್ದೇಶಗಳು ನೆರವೇರಿಲ್ಲ ಮತ್ತು ಮುಂದೆಯೂ ನೆರವೇರುವ ಸಂಭವ ಅತಿ ಕಡಿಮೆ. ಆದ್ದರಿಂದ ಮರಾಠಿಗರು ಕೇವಲ ಕಹಿಯನ್ನೇ ನೆನೆಯದೆ ಭವಿಷ್ಯದ ಸವಿಯನ್ನು ನೆನೆಯಲು ಪ್ರಯತ್ನಿಸಬೇಕು.

ಕನ್ನಡ, ಮರಾಠಿ ಭಾಷೆಗಳ ಮಧ್ಯೆ ಸಾಂಸ್ಕೃತಿಕ, ಐತಿಹಾಸಿಕ, ಭಾವನಾತ್ಮಕ ಮತ್ತು ಸಾಹಿತ್ಯಿಕ ಸಂಬಂಧವಿದೆ. ಕನ್ನಡದ ಮೇಲೆ ಮರಾಠಿಯ ಪ್ರಭಾವ ಬಿದ್ದಿರುವಂತೆಯೇ ಮರಾಠಿಯ ಮೇಲೆ ಕನ್ನಡ ಭಾಷೆಯ ಪ್ರಭಾವವಿದೆ. ಕರ್ನಾಟಕದಲ್ಲಿ ‘ಮರಾಠ ರಾಜ್ಯ’ ನಡೆದಂತೆಯೇ ಮಹಾರಾಷ್ಟ್ರದಲ್ಲಿ ‘ಕರ್ನಾಟಕ ರಾಜ್ಯ’ವೂ ನಡೆದಿದೆ. ಪಂಢರಾಪುರದ ವಿಠಲನನ್ನು ಮರಾಠಿಗರಿಗಿಂತ ಹೆಚ್ಚಾಗಿ ಕನ್ನಡಿಗರು ಆರಾಧಿಸುತ್ತಾ ಬಂದಿದ್ದಾರೆ. ಮರಾಠಿಯ ವಿಠಲನ ಕುರಿತು ಕನ್ನಡದಲ್ಲಿ ದೊಡ್ಡ ದಾಸ ಸಾಹಿತ್ಯವೇ ನಿರ್ಮಾಣವಾಗಿದೆ. ಪುರಂದರ ವಿಠಲನನ್ನು ಮರಾಠಿಗರು ‘ಕನ್ನಡದ ವಿಠೋಬಾ’ ಎಂದೇ ಕರೆಯುತ್ತಾರೆ.

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಮರಾಠಿಗರು ಮತ್ತು ಕನ್ನಡಿಗರು ಕೂಡಿಯೇ ಚಳವಳಿ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದಾರೆ. ದ.ರಾ.ಬೇಂದ್ರೆಯವರಂಥ ಸಾಹಿತಿಗಳು ಕನ್ನಡ ಮತ್ತು ಮರಾಠಿ ಭಾಷೆಗಳ ಮಧ್ಯೆ ಸೇತುಬಂಧವಾಗಿದ್ದಾರೆ. ಆರ್.ಆರ್‌.ದಿವಾಕರ್, ನಾ.ಸು.ಹರ್ಡೀಕರ್ ಮುಂತಾದ ಮಹನೀಯರು ಕೂಡ ಎರಡೂ ಭಾಷೆಗಳ ಮಧ್ಯೆ ಸೇತುಬಂಧವಾಗಿದ್ದಾರೆ. ಆಲೂರು ವೆಂಕಟರಾಯರು ತಿಲಕರ ಮರಾಠಿಯ ‘ಗೀತಾ ರಹಸ್ಯ’ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿ ತಿಲಕರನ್ನು ಕನ್ನಡಿಗರಿಗೆ ಆತ್ಮೀಯರನ್ನಾಗಿಸಿದ್ದಾರೆ.

ಮಹಾತ್ಮ ಗಾಂಧಿಯವರ ಆಪ್ತ ಶಿಷ್ಯರಾಗಿದ್ದ ಆಚಾರ್ಯ ವಿನೋಬಾ ಭಾವೆಯವರ ತಾಯಿ ಕರ್ನಾಟಕದ ಜಮಖಂಡಿಯವರು. ಆ ತಾಯಿಯ ಮನೆ ಈಗಲೂ ಜಮಖಂಡಿಯಲ್ಲಿ ಶಿಥಿಲಾವಸ್ಥೆಯಲ್ಲಿದೆ. ವಿನೋಬಾ ಭಾವೆಯವರ ಸುದೀರ್ಘ ಭೂದಾನ ಪಾದಯಾತ್ರೆ ಕಾಲದಲ್ಲಿ ಅವರ ಸೇವೆಯನ್ನು ಕೊನೆಯವರೆಗೂ ಮಾಡಿದಂಥವರು ಕನ್ನಡತಿ ಮಹಾದೇವಿಯಕ್ಕ. ಅಲ್ಲದೆ ‘ಜೈ ಜಗತ್’ ಎಂಬ ಘೋಷಣೆಯನ್ನು ವಿನೋಬಾ ಜಗತ್ತಿಗೆ ನೀಡಿದ್ದು ಕರ್ನಾಟಕದ ತುಮಕೂರು ಜಿಲ್ಲೆಯ ಪ್ರವಾಸದಲ್ಲಿದ್ದಾಗ. ಹೀಗೆ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಸಾಂಸ್ಕೃತಿಕ, ವೈಚಾರಿಕ, ಆತ್ಮೀಯ ಸಂಬಂಧವಿದೆ. ಇಂಥ ಸಂಬಂಧವನ್ನು ಇನ್ನಷ್ಟು ಆತ್ಮೀಯವಾಗಿ ಬಲಗೊಳಿಸುವುದರಲ್ಲೇ ಇಬ್ಬರ ಹಿತವಿದೆ.

ಕರ್ನಾಟಕವಂತೂ ಕುವೆಂಪು ಅವರು ಹಾಡಿರುವಂತೆ ‘ಸರ್ವ ಜನಾಂಗದ ಶಾಂತಿಯ ತೋಟ’. ಅಲ್ಲದೆ ಅನೇಕ ಭಾಷಿಕರ ಸಹಬಾಳ್ವೆಯ ಕೂಟ. ಬೆಳಗಾವಿ ನಗರ ಎರಡು ಸಂಸ್ಕೃತಿಗಳ, ಎರಡು ಭಾಷೆಗಳ ಸಂಗಮದ ಸ್ಥಳವಾಗಿದೆ. ಭಾಷಾ ಮತ್ತು ಸಾಂಸ್ಕೃತಿಕ ಸಾಂಗತ್ಯ ಉಪಯೋಗಿಸಿಕೊಂಡು ಎರಡೂ ಭಾಷೆಗಳು ಬೆಳೆದಲ್ಲಿ ಭಾರತೀಯತೆ ಇನ್ನೂ ಹೆಚ್ಚು ಪ್ರಕಾಶಿಸುತ್ತದೆ. ಮಹಾರಾಷ್ಟ್ರದ ವೈಶ್ವಿಕ ಹಿತಚಿಂತನೆಯ ಸಂತ ಪರಂಪರೆಗೆ ಮತ್ತು ಲೋಕಮಾನ್ಯ ತಿಲಕ್, ಗೋಪಾಲಕೃಷ್ಣ ಗೋಖಲೆ, ರಾನಡೆ,  ಅಂಬೇಡ್ಕರ್ ಮುಂತಾದ ಶ್ರೇಷ್ಠ ಚಿಂತನಾ ಪುರುಷರಿಗೆ ಜನ್ಮಕೊಟ್ಟ ಮಹಾರಾಷ್ಟ್ರದ ಉನ್ನತ ಸಂಸ್ಕೃತಿಗೆ ಬೆಳಗಾವಿಯ ಕೆಲವು ಮರಾಠಿಗರು ತಮ್ಮ ಸಣ್ಣತನ ಮತ್ತು ಅಸಹನೆ ತೋರ್ಪಡಿಸುತ್ತಾ ಕಳಂಕ ತರುವಂಥ ಕೆಲಸ ಮಾಡಬಾರದು. ಕರ್ನಾಟಕದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಮರಾಠಿ ಭಾಷಿಕರು ಹರಡಿದ್ದಾರೆ. ಅವರೆಲ್ಲರೂ ಸ್ಥಳೀಯ ಜನರೊಂದಿಗೆ ಬೆರೆತು ಸುಖಜೀವನ ನಡೆಸುತ್ತಿದ್ದಾರೆ.

ಬೆಳಗಾವಿಯಲ್ಲಿಯ ಮರಾಠಿಗರು ರಾಜಕೀಯ ಚದುರಂಗದಾಟದ ದಾಳಗಳಾಗಿ ತಮ್ಮ ಮೂಲ ಸುಸಂಸ್ಕೃತಿಮರೆತು, ವಿಕಾರಪೂರ್ಣ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವುದು ತರವಲ್ಲ. ಭಾರತದ ಒಕ್ಕೂಟ ವ್ಯವಸ್ಥೆಗೆ ಅನುಗುಣವಾದ ಸಂವಿಧಾನವನ್ನು ರಚಿಸಿದವರು ಮಹಾರಾಷ್ಟ್ರದ ಡಾ. ಅಂಬೇಡ್ಕರ್‌ ಅವರೇ. ಒಕ್ಕೂಟ ವ್ಯವಸ್ಥೆಗೆ ಹೊಂದಿಕೊಂಡು ಕನ್ನಡಿಗರು ಬಾಳುತ್ತಿದ್ದಾರೆ. ಕರ್ನಾಟಕಕ್ಕೆ ನ್ಯಾಯವಾಗಿ ಸೇರಬೇಕಾಗಿದ್ದ ಸೊಲ್ಲಾಪುರ, ಅಕ್ಕಲಕೋಟೆ, ಜತ್ ಮುಂತಾದ ಊರುಗಳು ಮಹಾರಾಷ್ಟ್ರಕ್ಕೆ ಸೇರಿದ್ದರೂ, ಕಾಸರಗೋಡಿನಂಥ ಅಚ್ಚ ಕನ್ನಡ ಪ್ರದೇಶ ಕೇರಳಕ್ಕೆ ಸೇರಿದ್ದರೂ, ತಾಳ್ವಾಡಿ, ನೀಲಗಿರಿಯಂಥ ಕನ್ನಡ ಪ್ರದೇಶಗಳು ತಮಿಳುನಾಡಿಗೆ ಸೇರಿದ್ದರೂ ಕನ್ನಡಿಗರು ಅವುಗಳ ಕರ್ನಾಟಕ ಸೇರ್ಪಡೆಗಾಗಿ ಬೆಳಗಾವಿಯಲ್ಲಿಯ ಮರಾಠಿಗರು ಮಾಡುತ್ತಿರುವಂಥ ಅಸಾಂವಿಧಾನಿಕ ಹೋರಾಟವನ್ನು ಮಾಡುತ್ತಿಲ್ಲ. ಮಹಾಜನ ಆಯೋಗದ ತೀರ್ಪನ್ನೇ ಒಪ್ಪಿಕೊಂಡು, ತಾವಿರುವ ಪ್ರದೇಶದಲ್ಲಿಯೇ ಕನ್ನಡಿಗರು ಅಲ್ಲಿಯ ಜನರೊಂದಿಗೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ.

ಬೆಳಗಾವಿ ಸಮಸ್ಯೆಗೆ ಇನ್ನೊಂದು ಮುಖ್ಯ ಕಾರಣ, ಮರಾಠಿಗರು ಕನ್ನಡ ಭಾಷೆ ಕಲಿಯುವುದರಲ್ಲಿ ಉತ್ಸಾಹ ತೋರದಿರುವುದು. ಇಂತಹವರು ಕನ್ನಡ ಭಾಷೆಯಲ್ಲಿನ ಉತ್ತಮ ಸಾಹಿತ್ಯ, ಪ್ರತಿಪಾದಿತವಾಗಿರುವ ವಿಶ್ವಮಾನವ ವಿಚಾರಗಳಿಂದ ವಂಚಿತರಾಗಿದ್ದಾರೆ. ಈ ವಿಷಯಗಳನ್ನು ತಿಳಿದಿದ್ದೇ ಆದರೆ ಅವರು ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ಪ್ರೀತಿಸುವುದರಲ್ಲಿ ಸಂದೇಹವಿಲ್ಲ. ಇಂಥ ಸಾಂಸ್ಕೃತಿಕ ಕಾರ್ಯವನ್ನು ಕರ್ನಾಟಕ ರಾಜ್ಯದ ಗಡಿ ರಕ್ಷಣಾ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬಿರುಸಾಗಿ ಮಾಡಬೇಕು.

ಕನ್ನಡ ಕಲಿಯುವ, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ಮರಾಠಿ ಮತ್ತು ಇತರ ಭಾಷಾ ವಿದ್ಯಾರ್ಥಿಗಳಿಗೆ ಧನಸಹಾಯದ ಜೊತೆಗೆ ಇತರ ಪ್ರೋತ್ಸಾಹಗಳನ್ನು ಕೊಡುವ ಕೆಲಸ ಮಾಡಬೇಕು. ಇದೇ ರೀತಿ ಮಹಾರಾಷ್ಟ್ರ ಸರ್ಕಾರವು ಮರಾಠಿ ಕಲಿಯುವ ಕನ್ನಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡಬೇಕು.

ಈಗಾಗಲೇ ಪುಣೆ ನಗರದಲ್ಲಿರುವ ಕನ್ನಡ- ಮರಾಠಿ ಮೈತ್ರಿಕೂಟದ ಚಟುವಟಿಕೆಗಳು ಬೆಳಗಾವಿಯಲ್ಲಿ ನಡೆಯುವಂತೆ ಮಾಡಬೇಕು. ಬೆಳಗಾವಿಯ ಸಮಸ್ಯೆಯನ್ನು ಕೇವಲ ಕಾನೂನು ಶಿಸ್ತಿನ ಸಮಸ್ಯೆಯೆಂದು ಪರಿಭಾವಿಸದೆ ಸಾಂಸ್ಕೃತಿಕ ಮತ್ತು ಅಂತರ್‌ಭಾರತೀಯ ಏಕತೆ ಉಂಟುಮಾಡಬೇಕಾದ ಸಮಸ್ಯೆಯೆಂದು ಪರಿಭಾವಿಸಬೇಕು. ಸಾನೇ ಗುರೂಜಿಯಂಥ ವಿಚಾರವಂತರು ಅಂತರ್‌ಭಾರತಿ ಎಂಬ ಆಂದೋಲನವನ್ನು ಮಹಾರಾಷ್ಟ್ರದಲ್ಲಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಮೈತ್ರಿ ಬಾಂಧವ್ಯಕ್ಕಾಗಿ ಈ ಅಂತರ್‌ಭಾರತಿ ಸಂಸ್ಥೆಯ ಸೇವೆಯನ್ನು ಸಹ ಪಡೆಯಬಹುದಾಗಿದೆ.

ಪ್ರಿಯ ಮರಾಠಿಗರೇ, ದಯಮಾಡಿ ಮೇಲ್ಕಾಣಿಸಿದ ವಿಚಾರಗಳ ಬಗ್ಗೆ ಗಂಭೀರವಾಗಿ ಆಲೋಚಿಸಿ ಸರಿಯಾದ ದಿಕ್ಕಿನಲ್ಲಿ ಪ್ರವರ್ತಿಸಬೇಕಾಗಿ ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT