ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕು ಕುಲಾಂತರಿ ತಂತ್ರಜ್ಞಾನ

ಆಗ ‘ಹಸಿರು ಕ್ರಾಂತಿ’ಗೆ ವಿರೋಧ. ಈಗ ಜೈವಿಕ ತಂತ್ರಜ್ಞಾನದ ಕ್ರಾಂತಿಗೂ ವಿರೋಧ...
Last Updated 18 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

‘ಬದಲಾವಣೆ ತನ್ನ ಜೊತೆಗೆ ವಿರೋಧವನ್ನೂ ತರುತ್ತದೆ ಹಾಗೂ ವಿರೋಧದ ಪರ ವಹಿಸುವುದು ಬದಲಾವಣೆಯ ಪರ ವಹಿಸುವುದಕ್ಕಿಂತ ಸುಲಭವಾದುದು’ ಎನ್ನುತ್ತಾರೆ ಸಮಾಜವಾದಿ ಚಿಂತಕ ಹಾಗೂ ಇಂಗ್ಲೆಂಡಿನ ಮಾಜಿ ಪ್ರಧಾನಮಂತ್ರಿ ಟೋನಿ ಬ್ಲೇರ್. ವಿಶ್ವದಲ್ಲಿ ವ್ಯವಸಾಯ ಕ್ಷೇತ್ರದಲ್ಲಿ ನಡೆದ ಮೊದಲನೆಯ ಹಸಿರು ಕ್ರಾಂತಿ ಅಭೂತಪೂರ್ವ ಬದಲಾವಣೆ ತಂದಿತ್ತು.

ಅದನ್ನು ವಿರೋಧಿಸಿದವರೂ ಇದ್ದರು. ಹಾಗೆಯೇ ಅದರ ನಂತರ ನಡೆಯುತ್ತಿರುವ ಜೈವಿಕ ತಂತ್ರಜ್ಞಾನದ  ಕ್ರಾಂತಿಯೂ ತನ್ನ ಜೊತೆಗೆ ವಿರೋಧವನ್ನು ತಂದಿದೆ. ಅನಿಲ್ ಹೆಗ್ಡೆಯವರ ‘ಎಂಡಿಎನ್ ಕನಸು ಮತ್ತು ನಿತೀಶ್ ಕಾಳಜಿ’ (ಪ್ರ.ವಾ., ಏ. 16) ಅದೇ ಜಾಡಿನಲ್ಲಿ ಬಂದಿರುವ ವಿರೋಧ. 

ಒಂದು ಕಡೆ ಕುಲಾಂತರಿ ತಳಿಗಳ ಪರಿಣಾಮ ಕುರಿತು ಅಧ್ಯಯನ ನಡೆದಿಲ್ಲ ಎಂದು ಹೇಳುತ್ತಲೇ, ಇನ್ನೊಂದು ಕಡೆ ಬಿಹಾರದ ಸಮಷ್ಟಿಪುರದಲ್ಲಿ ಬಿ.ಟಿ. ಜೋಳದ ಕ್ಷೇತ್ರ ಪ್ರಯೋಗವನ್ನು ಹೇಗೆ ಯಶಸ್ವಿಯಾಗಿ ನಿಲ್ಲಿಸಲಾಯಿತು ಎನ್ನುವುದನ್ನೂ ಅವರು ಹೇಳುತ್ತಾರೆ. ಜಗತ್ತಿನ ನೂರಾರು ಖ್ಯಾತ ವಿಜ್ಞಾನಿಗಳು ಕುಲಾಂತರಿ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಹೇಳಿರುವುದು ನಿಜ.

ಆದರೆ ವಿಶ್ವಸಂಸ್ಥೆಯ ಘಟಕಗಳಾದ ವಿಶ್ವ ಆರೋಗ್ಯ ಸಂಸ್ಥೆ, ಆಹಾರ ಮತ್ತು ವ್ಯವಸಾಯ ಸಂಸ್ಥೆ ಹಾಗೂ ಬ್ರಿಟಿಷ್‌ ರಾಯಲ್ ಸೊಸೈಟಿ, ಫ್ರೆಂಚ್‌ ಅಕಾಡೆಮಿ ಆಫ್ ಸೈನ್ಸಸ್, ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಮೊದಲಾದ ಸಂಘಟನೆಗಳು ಹಾಗೂ ನೂರಾರು ‘ಖ್ಯಾತ’ ವಿಜ್ಞಾನಿಗಳು, ಕುಲಾಂತರಿ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದೂ ಹೇಳಿದ್ದಾರೆ.

ಸುಮಾರು 25 ವರ್ಷಗಳಿಂದ ಕೋಟ್ಯಂತರ ಜನರು ಜೈವಿಕ-ತಂತ್ರಜ್ಞಾನ ಬಳಸಿ ಬೆಳೆಯಲಾದ ಆಹಾರವನ್ನು ಸೇವಿಸುತ್ತಿರುವುದಾಗಿಯೂ ಅದರಿಂದ ಯಾವ ದುಷ್ಪರಿಣಾಮದ ವರದಿಗಳೂ ಇಲ್ಲವೆಂದೂ, ಕುಲಾಂತರಿ ತಳಿಗಳಿಂದ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗದು ಎಂದೂ ಅವರು ಹೇಳಿದ್ದಾರೆ. ಆದರೆ ಹಲವರು ಎಲ್ಲವನ್ನೂ ಗುಮಾನಿಯಿಂದ ನೋಡುತ್ತಾರೆ, ಎಲ್ಲೆಡೆ ಪಿತೂರಿಗಳನ್ನೇ ಕಾಣುತ್ತಾರೆ. 

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 40 ಕೋಟಿ ಜನರಿಗೆ ಆಹಾರ ಒದಗಿಸುವುದು ಸಾಧ್ಯವಾಗದೆ, ಆಹಾರ ಧಾನ್ಯಗಳನ್ನು ವಿದೇಶಗಳಿಂದ ಆಯಾತ ಮಾಡುತ್ತಿದ್ದ ನಾವು ನಂತರ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯಿಂದಾಗಿ ಇಂದು 120 ಕೋಟಿ ಜನರಿಗೆ ಆಹಾರ ಒದಗಿಸುತ್ತಿದ್ದೇವೆ.  ಹಸಿರು ಕ್ರಾಂತಿಯನ್ನು ವಿರೋಧಿಸಿದವರ ಮಾತು ಕೇಳಿದ್ದರೆ ನಮ್ಮ ದೇಶದಲ್ಲಿ ಇಂದಿಗೂ ಕೋಟ್ಯಂತರ ಜನ ಉಪವಾಸವಿರಬೇಕಾದ ಪರಿಸ್ಥಿತಿ ಇರುತ್ತಿತ್ತು.

ಜಗತ್ತಿನಲ್ಲಿ ಇಂದಿಗೂ ಸುಮಾರು 90 ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದಾರೆ. ರೈತರು ಬೆಳೆಯುವ ಬೆಳೆಗಳನ್ನು ಅತಿವೃಷ್ಟಿ ಅನಾವೃಷ್ಟಿಗಳ ಜೊತೆಗೆ ಕೀಟಗಳೂ ನಷ್ಟಪಡಿಸುತ್ತವೆ. ಇಡೀ ವಿಶ್ವದಲ್ಲಿ ಅನಾವೃಷ್ಟಿಯಿಂದ ಸುಮಾರು ಪ್ರತಿಶತ 15 ರಷ್ಟು ಬೆಳೆ ನಷ್ಟವಾದರೆ ಕೀಟಗಳಿಂದ ಕೂಡ ಅಷ್ಟೇ ಪ್ರಮಾಣದ ಬೆಳೆ ನಷ್ಟವಾಗುತ್ತದೆ.

ಜೈವಿಕ ತಂತ್ರಜ್ಞಾನ ಈ ನಷ್ಟ ತಡೆಯುವ ಮೂಲಕ ವಿಶ್ವದ ವ್ಯವಸಾಯೋತ್ಪನ್ನಗಳನ್ನು ಹೆಚ್ಚಿಸಲು, ಕೋಟ್ಯಂತರ ಜನರು ಹಸಿವಿನಿಂದ ಬಳಲುವುದನ್ನು ತಪ್ಪಿಸಲು ಪ್ರಯತ್ನಿಸುತ್ತದೆ. ಅದು ಬೆಳೆ ಇಳುವರಿಯನ್ನು ಹೆಚ್ಚಿಸುತ್ತದಷ್ಟೇ ಅಲ್ಲ, ಕೀಟನಾಶಕಗಳ ಬಳಕೆಯನ್ನೂ ಮಿತಗೊಳಿಸುತ್ತದೆ. ಬಹುಶಃ ಅದೇ ಕಾರಣಕ್ಕೆ ಉಳ್ಳವರ ವರ್ಗ ಇದನ್ನು ಅಪ್ರಜ್ಞಾಪೂರ್ವಕವಾಗಿಯೇ ವಿರೋಧಿಸುತ್ತದೆ.

ಕರ್ನಾಟಕದಲ್ಲಿ ಬಿ.ಟಿ. ಹತ್ತಿಯ ಪ್ರಯೋಜನವನ್ನು ರೈತರು ಕಂಡುಕೊಂಡಿದ್ದಾರೆ. ಆದುದರಿಂದ ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಬಿ.ಟಿ. ಹತ್ತಿಯನ್ನು ಬೆಳೆಯುತ್ತಿರುವ ಕ್ಷೇತ್ರ ಪ್ರತಿಶತ 112ರಷ್ಟು ಹೆಚ್ಚಾಗಿದೆ. ಜೈವಿಕ ತಂತ್ರಜ್ಞಾನ ವಿರೋಧಿ ಲಾಬಿಯಿಂದಾಗಿ ಬಿ.ಟಿ. ಹತ್ತಿ ಬೆಳೆಯುವುದನ್ನು 2012ರಲ್ಲಿ ನಿಷೇಧಿಸಿದ್ದ ಮಹಾರಾಷ್ಟ್ರ ಸರ್ಕಾರ 2013ರಲ್ಲಿ ಆ ನಿಷೇಧವನ್ನು ರದ್ದುಗೊಳಿಸಿತು.

ಆದರೆ ಬೇರೆಲ್ಲ ದೇಶಗಳಲ್ಲಿ ಇರುವಂತೆ ನಮ್ಮ ದೇಶದಲ್ಲಿಯೂ ಎಲ್ಲಾ ಬದಲಾವಣೆಗಳನ್ನು ವಿರೋಧಿಸುವವರು ಇದ್ದಾರೆ. ಇವರು, ವಿಶ್ವ ವ್ಯಾಪಾರ ಸಂಘಟನೆಯಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುತ್ತದೆ ಎಂದು ವಾದಿಸುತ್ತಾರೆ. ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯನಾಗಲು ಭಾರತದ ಮೇಲೆ ಯಾವ ಒತ್ತಡವೂ ಇಲ್ಲ. ಭಾರತ ಯಾವಾಗ ಬೇಕಾದರೂ ಅದರಿಂದ ಹೊರಬರಬಹುದು. ಅಂದಮೇಲೆ  ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಒದಗುವ ಪ್ರಮೇಯ ಎಲ್ಲಿ ಬಂತು?

ವಿಶ್ವ ವ್ಯಾಪಾರ ಸಂಘಟನೆ ಹುಟ್ಟಿದ್ದು, ತನ್ನ ಉಳಿವಿಗೆ ನಿರುದ್ಯೋಗಿಗಳ ಸೈನ್ಯದ ಆವಶ್ಯಕತೆ ಇದೆ ಎಂದು ಬಂಡವಾಳವಾದ ಹೇಳುತ್ತಿದ್ದ ಕಾಲದಲ್ಲಿ ಅದನ್ನು ವಿರೋಧಿಸಿ ಎಲ್ಲರಿಗೂ ಉದ್ಯೋಗ ಒದಗಿಸುವುದು ಸಾಧ್ಯ ಎಂಬ ಅರ್ಥಶಾಸ್ತ್ರಜ್ಞ ಕೀನ್ಸ್‌ನ ಚಿಂತನಾಕ್ರಮದ ಪರಿಣಾಮವಾಗಿ. ಇನ್ನೊಂದು ದೇಶದ ಜೊತೆಗೆ ವ್ಯಾಪಾರ ಮಾಡಬೇಕಾದರೆ ಒಂದು ದೇಶ ಮತ್ತೊಂದು ದೇಶದ ಜೊತೆ  ಒಪ್ಪಂದವನ್ನು ಮಾಡಿಕೊಳ್ಳಲೇಬೇಕಲ್ಲವೇ? ಅದನ್ನು ಕೂಡ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಭಾವಿಸಬಹುದಲ್ಲವೇ? ಹೌದು ಎನ್ನುವುದಾದರೆ, ಅಂತರರಾಷ್ಟ್ರೀಯ ವಾಣಿಜ್ಯ ವಹಿವಾಟೇ ಸಾಧ್ಯವಾಗದು.

ಇಲ್ಲ ಎನ್ನುವುದಾದರೆ, ನೂರಾರು ದೇಶಗಳೊಂದಿಗೆ ಪ್ರತ್ಯೇಕವಾಗಿ ನೂರಾರು ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕಿಂತ ಎಲ್ಲ ದೇಶಗಳೂ ಒಟ್ಟು ಸೇರಿ ಒಪ್ಪಂದ ಮಾಡಿಕೊಳ್ಳುವುದು ಜಾಣತನವಲ್ಲವೇ? ಬಿ.ಟಿ. ಆಹಾರ ಪದಾರ್ಥಗಳನ್ನು ಪ್ರೋತ್ಸಾಹಿಸುತ್ತಿರುವುದರ ಹಿಂದೆ ಪ್ರಬಲ ಲಾಬಿ ಇದೆ ಎಂದು ಹೇಳಲಾಗುತ್ತಿದೆ.  ಹಾಗೆಯೇ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವುದರ ಹಿಂದೆಯೂ ಶ್ರೀಮಂತರ ಒಂದು ಲಾಬಿ ಇದೆ.

ಸಾಯವಯ ಆಹಾರ ಪದಾರ್ಥಗಳು ಸಾಮಾನ್ಯ ಆಹಾರ ಪದಾರ್ಥಗಳಿಗಿಂತ ಹೆಚ್ಚು ಬೆಲೆ ಬಾಳುವುದರಿಂದ ಸಾಮಾನ್ಯ ಜನರು ಇವುಗಳನ್ನು ಕೊಳ್ಳಲಾರರು. ಮೊದಲು ಬರಿ ರಾಗಿ, ಜೋಳ ಬಳಸುತ್ತಿದ್ದ ಸಾಮಾನ್ಯರು ಇಂದು ಗೋಧಿ, ಅಕ್ಕಿ ಬಳಸಲು ಪ್ರಾರಂಭಿಸಿದ್ದಾರೆ. ಆದಕಾರಣ ಶ್ರೀಮಂತರು ಸಾಮಾನ್ಯರಿಂದ  ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಸಾವಯವ ಆಹಾರ ಪದಾರ್ಥಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಇಂದು ಅತ್ಯಂತ ಸಾಮಾನ್ಯರೂ ಟಿ.ವಿ. ಕೊಂಡುಕೊಳ್ಳುತ್ತಿರುವುದರಿಂದ ಶ್ರೀಮಂತರು ಈಗ ಸಾಮಾನ್ಯರು ಕೊಳ್ಳಲು ಸಾಧ್ಯವಾಗದಂತಹ  ಎಲ್.ಇ.ಡಿ.ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇವೆಲ್ಲ ಆರ್ಥಿಕ-ಸಾಂಸ್ಕೃತಿಕ ಅಸಮಾನತೆಉಳಿಸಿಕೊಳ್ಳಲು ಶ್ರೀಮಂತರು ಮಾಡುತ್ತಿರುವ ಪಿತೂರಿ.   

ಹಸಿರು ಕ್ರಾಂತಿ ಹರಿಕಾರ ನಾರ್ಮನ್ ಬೊರ್ಲಾಗ್ 2000ದಲ್ಲಿ ಒಂದು ಪುಸ್ತಕ ಪ್ರಕಟಿಸಿ ಅದನ್ನು ‘ಜಾಗತಿಕ ಹಸಿವಿನ ನಿವಾರಣೆ: ಜೈವಿಕ ತಂತ್ರಜ್ಞಾನದ ಭರವಸೆ ಹಾಗೂ ವಿಜ್ಞಾನ-ವಿರೋಧಿ ಹಟಮಾರಿಗಳ ಬೆದರಿಕೆ’ ಎಂದು ಹೆಸರಿಸಿದ್ದರು. ಅದರಲ್ಲಿ ಅವರು, ಕುಲಾಂತರ ತಳಿಗಳು ನಾವು ದಿನನಿತ್ಯ ಬಳಸುವ ರೊಟ್ಟಿಯಷ್ಟೇ ನೈಸರ್ಗಿಕವೂ, ಸುರಕ್ಷಿತವೂ ಆಗಿವೆ.

ವಿಜ್ಞಾನ ವಿರೋಧಿ ಗುಂಪುಗಳ ವಿರುದ್ಧ ಕೃಷಿ ವಿಜ್ಞಾನಿಗಳು ಎದ್ದು ನಿಲ್ಲಬೇಕು. ಈ ಹೊಸ ತಂತ್ರಜ್ಞಾನದ ಹೊರತು ವಿಶ್ವದ ಆಹಾರದ ಅಭದ್ರತೆ ತೊಲಗುವುದಿಲ್ಲ ಎನ್ನುವುದನ್ನು ನೀತಿ ನಿರ್ಧಾರಕರು ಅರ್ಥಮಾಡಿಕೊಳ್ಳಬೇಕು. ಈ ವಾಸ್ತವಿಕತೆಯನ್ನು ಕಡೆಗಣಿಸುವುದು ಭವಿಷ್ಯದಲ್ಲಿ ಪರಿಹಾರಗಳನ್ನು ಇನ್ನೂ ಕಷ್ಟಸಾಧ್ಯವನ್ನಾಗಿ ಮಾಡುತ್ತವೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT