ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಒತ್ತುವರಿ: ಆಡಳಿತ ಯಂತ್ರದ ನಿಷ್ಕ್ರಿಯತೆ

Last Updated 7 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಪುರಭವನದ ಎರಡೂ ಬದಿಗಳಲ್ಲಿ ಒಂದೊಂದು ಪ್ರತಿಭಟನೆಗಳು ನಡೆಯುತ್ತಿದ್ದವು. ಅದರಲ್ಲಿ ಒಂದು ಪ್ರತಿಭಟನೆ, 3-–4 ಲಕ್ಷ ಎಕರೆ ಸರ್ಕಾರಿ ಭೂಮಿ­ಯನ್ನು (ಬೆಂಗಳೂರು ಒಂದರಲ್ಲೇ 20 ಸಾವಿರ ಎಕರೆ­ಯಷ್ಟು) ಒತ್ತುವರಿ ಮಾಡಿಕೊಂಡಿರುವ ಪ್ರಬಲ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮವನ್ನೂ ಜರುಗಿಸದ ಸರ್ಕಾರದ ನಿಲು­ವನ್ನು ಖಂಡಿಸುತ್ತಿತ್ತು.

ಇವೆಲ್ಲ ಸಿರಿವಂತರು ಮತ್ತು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ, ಕಂಡೂ ಕಾಣದಂತಿರುವ ಅಧಿಕಾರಿಗಳ ಮೌನ ಸಮ್ಮತಿಯೊಂದಿಗೆ ಅಕ್ರಮವಾಗಿ ಭೂಮಿ­ಯನ್ನು ವಶಪಡಿಸಿಕೊಂಡಿದ್ದುದು ಸಾಬೀತಾಗಿರುವ ಪ್ರಕರಣ­ಗಳು. ಭೂ ಒತ್ತುವರಿಗೆ ಸಂಬಂಧಿಸಿದ ಶಾಸಕಾಂಗ ಸಮಿತಿಯ ನೇತೃತ್ವ ವಹಿಸಿದ್ದ ಎ.ಟಿ. ರಾಮಸ್ವಾಮಿ ಅವರ ಪ್ರಕಾರ, ಈ ಒತ್ತು­ವರಿ ಭೂಮಿಯ ಒಟ್ಟು ಮೌಲ್ಯ ₨ 2 ಲಕ್ಷ ಕೋಟಿ. ಇದು 2ಜಿ ತರಂಗಾಂತರ ಮತ್ತು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಗಳಿಗಿಂತಲೂ ಅಧಿಕವಾದುದು.

ಅದೇ ಪುರಭವನದ ಮತ್ತೊಂದು ಬದಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ರೈತರು. ಜೀವನೋ­ಪಾ­ಯ­ಕ್ಕಾಗಿ ಅಲ್ಪ ಪ್ರಮಾಣದ ಭೂಮಿಯನ್ನು ಒತ್ತುವರಿ ಮಾಡಿ­ಕೊಂಡಿರುವ 11 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಳ­ಗೊಂಡ ಬಗರ್‌ಹುಕುಂ ಸಾಗುವಳಿದಾರರನ್ನು ಅವರು ಪ್ರತಿನಿಧಿ­ಸು­ತ್ತಿದ್ದರು. ತಮ್ಮನ್ನೆಲ್ಲ ಒತ್ತುವರಿದಾರರೆಂದು ಪರಿಗಣಿಸಿ ಒಕ್ಕ­ಲೆಬ್ಬಿಸಲು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಸರ್ಕಾರದ ಕ್ರಮ ಮತ್ತು ತಹಶೀಲ್ದಾರರಿಂದ ತಮಗೆಲ್ಲ ನೋಟಿಸ್‌ ಬಂದಿರು­ವುದನ್ನು ಅವರೆಲ್ಲ ವಿರೋಧಿಸುತ್ತಿದ್ದರು. ಆದರೆ ಆಡಳಿತಾರೂಢ ಪಕ್ಷದ ಚುನಾವಣಾ ಪ್ರಣಾಳಿಕೆಯು ಇಂತಹ ಎಲ್ಲ ಬಗೆಯ ರೈತರ ಬಗರ್‌ಹುಕುಂ ಭೂಮಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸುವುದಾಗಿ ಭರವಸೆ ನೀಡಿತ್ತು.

‘ಸಿರಿವಂತರು ಮತ್ತು ಪ್ರಭಾವಿಗಳು’ ಹಾಗೂ ‘ಬಡವರು ಮತ್ತು ದುರ್ಬಲ’ರ ನಡುವೆ ಸರ್ಕಾರ ಹೇಗೆ ತಾರತಮ್ಯ ಎಣಿಸು­ತ್ತದೆ ಎಂಬುದಕ್ಕೆ ಇದಕ್ಕಿಂತ ಸ್ಫುಟವಾದ ನಿದರ್ಶನ ಮತ್ತೊಂದಿ­ರ­ಲಾರದು.  ಅದೇ ಸರ್ಕಾರಗಳು ತಮಗೆ ಭೂಮಿ ವಿತರಿಸಲು ವಿಫಲವಾದ ಕಾರಣಕ್ಕೆ, ಜೀವನೋಪಾಯಕ್ಕಾಗಿ ಕೆಲವು ಎಕರೆ­ಗಳನ್ನು ಒತ್ತುವರಿ ಮಾಡಿಕೊಂಡಿರುವವರು ಈ ದುರ್ಬಲರು. ಅವರನ್ನು ಒಕ್ಕಲೆಬ್ಬಿಸಲು ಸರ್ಕಾರ ಎಲ್ಲಿಲ್ಲದ ಕಾನೂನು ಬದ್ಧತೆ­ಯನ್ನು ತೋರುತ್ತದೆ. ಆದರೆ ಪ್ರಭಾವಿ ವ್ಯಕ್ತಿಗಳು ದುರಾಸೆ­ಯಿಂದ ಅತಿಕ್ರಮಿಸಿಕೊಂಡಿರುವ ನೂರಾರು ಎಕರೆ ಭೂಮಿ­ವಶಪಡಿಸಿಕೊಳ್ಳಲು ಮಾತ್ರ ಪುಕ್ಕಲುತನದಿಂದ ವರ್ತಿಸು­ತ್ತದೆ.

ಹೀಗೆ ಸರ್ಕಾರ ಲಕ್ಷಾಂತರ ಎಕರೆ ಭೂಮಿಯನ್ನು ಸುಪರ್ದಿಗೆ ಪಡೆಯಲು ನಿಷ್ಕ್ರಿಯವಾಗಿರುವುದರಿಂದ, ಅತ್ಯಂತ ಅಗತ್ಯವಾದ ಮೂಲ ಸೌಲಭ್ಯ ಕಲ್ಪಿಸಲು ಭೂಮಿಯೇ ಇಲ್ಲದಂತಾಗಿದೆ. ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ವಿವಾದ ತಾರಕಕ್ಕೆ ಏರಿದಾಗಿನಿಂದಲೂ, ಸ್ಥಳೀಯವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಆಯಾ ವಾರ್ಡ್‌ನಲ್ಲಿ ಕೇವಲ ಅರ್ಧ ಎಕರೆ ಜಾಗವೂ ಸಿಗುತ್ತಿಲ್ಲ ಎಂಬ ಮಾತು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಆದರೆ ಎಲ್ಲ ಬಡಾವಣೆಗಳಲ್ಲೂ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟಿರುವ ಜಾಗ ಒತ್ತುವರಿಯಾಗಿದೆ.

ಇದನ್ನೆಲ್ಲ  ಸ್ವಾಧೀನಕ್ಕೆ ಪಡೆದುಕೊಂಡು, ಇಂತಹ ಕಾರ್ಯಕ್ಕೆ ಬಳಸಿಕೊಳ್ಳಲು ಸರ್ಕಾರಕ್ಕೆ ಮನಸ್ಸಿಲ್ಲ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಶಿಶುಪಾಲನಾ ಕೇಂದ್ರಗಳಿಲ್ಲದೆ ಪುಟ್ಟ ಮಕ್ಕಳು ಅಪೌಷ್ಟಿಕತೆಯಿಂದ ಸೊರಗುತ್ತಿದ್ದಾರೆ. ರಾಜ್ಯದ ಶೇ 43ರಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಮೆಟ್ಟಿ­ಲುಗಳ ಕೆಳಗೆ, ಮರದ ಕೆಳಗೆ, ನೀರಿನ ಪಂಪ್‌ ಇರಿಸುವ ಶೆಡ್‌­ಗಳಲ್ಲಿ ಅಥವಾ ಕೇವಲ 10/10 ಚದರಡಿಯ
ಕೋಣೆ­ಗಳಲ್ಲಿ ಅಂಗನವಾಡಿಗಳು ನಡೆಯುತ್ತಿವೆ. ಅಲ್ಲೂ ಸುಮಾರು 30 ಮಕ್ಕಳು ಅಲುಗಾಡಲೂ ಜಾಗವಿಲ್ಲದಂತೆ ಕಿಕ್ಕಿರಿದಿರುತ್ತಾರೆ.


ನ್ಯಾಯ­ಮೂರ್ತಿ ಎನ್‌.ಕೆ.ಪಾಟೀಲ್‌ ಅವರು 2012ರಲ್ಲಿ ನೀಡಿರುವ ವರದಿಯ ಪ್ರಕಾರ, ಶೇ 58ರಷ್ಟು ಅಂಗನವಾಡಿ­ಗಳಲ್ಲಿ ಶೌಚಾಲಯ ಇಲ್ಲ ಮತ್ತು ಶೇ 78ರಷ್ಟು ಅಂಗನವಾಡಿ­ಗಳಲ್ಲಿ ಆಟದ ಮೈದಾನ ಇಲ್ಲ. ‘ಅಂಗನವಾಡಿಗಳಿಗೆ ಜಾಗ ಕಲ್ಪಿಸಿ’ ಎಂದು ಸರ್ಕಾರವನ್ನೇ­ನಾ­ದರೂ ಕೇಳಿದರೆ ತಕ್ಷಣ ‘ಕೊಡಲು ಎಲ್ಲಿದೆ ಭೂಮಿ?’ ಎಂಬ ಸಿದ್ಧ ಉತ್ತರ ಕೇಳಿಬರುತ್ತದೆ. ಒತ್ತುವರಿ ಭೂಮಿಯನ್ನು ವಶ­ಪಡಿ­ಸಿಕೊಂಡು ಅದನ್ನು ಅಂಗನವಾಡಿಗಳಿಗೆ ಅಥವಾ ಶಾಲೆಗಳಿಗೆ ಆಟದ ಮೈದಾನ ಕಲ್ಪಿಸಿದರೆ, ಆಡಲು ಜಾಗವಿಲ್ಲದೇ ಪರದಾಡುವ ನಮ್ಮ ಮಕ್ಕಳ ಬವಣೆ ನೀಗಿಸಬಹುದು. ಆದರೆ ಅಂತಹ ಉದಾಹರಣೆಗಳು ನಮಗೆ ಎಲ್ಲೂ ಕಾಣಸಿಗುವುದಿಲ್ಲ.

ನಮ್ಮ ನಗರಗಳ ಕನಿಷ್ಠ ಶೇ 20ರಷ್ಟು ಜನರು ಕೇವಲ ಶೇ 1-2­ರಷ್ಟು ಪ್ರದೇಶವನ್ನು ಆವರಿಸಿಕೊಂಡಿರುವ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ವಾಸ್ತವದಲ್ಲಿ ಕೊಳೆಗೇರಿ ನಿವಾಸಿಗಳ ಈ ಭೂಮಿಯಲ್ಲೂ ಅರ್ಧದಷ್ಟನ್ನು ಕಿತ್ತುಕೊಂಡು ಅದನ್ನು ಮಾಲ್‌­ಗಳನ್ನು ಕಟ್ಟುವ ಸಲುವಾಗಿ ದೊಡ್ಡ ದೊಡ್ಡ ಬಿಲ್ಡರ್‌-­ಗಳಿಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಈ ಕೊಳೆಗೇರಿ ವಾಸಿಗಳು ಮೊದಲು ತಾವಿದ್ದ ಪ್ರದೇಶದ ಅರ್ಧದಷ್ಟು ಭಾಗದಲ್ಲೇ ದಿನ ದೂಡುವಂತಾಗಿದೆ.

ಇದಕ್ಕಿಂತ ಇನ್ನಷ್ಟು ಹದಗೆಟ್ಟ ಪರಿಸ್ಥಿತಿ ಎಂದರೆ, ಕೆಲವೆಡೆ ಯಾವುದೇ ಪರ್ಯಾಯವನ್ನೇ ಕಲ್ಪಿಸದೆ ಒಂದಲ್ಲ ಒಂದು ಕಾರಣಕ್ಕೆ ನಿಷ್ಕರುಣೆಯಿಂದ ಅವರನ್ನು ಎತ್ತಂಗಡಿ ಮಾಡಲಾಗಿದೆ. ಆದರೆ ಸಿರಿವಂತರ ಭೂ ಉಲ್ಲಂಘನೆ ಪ್ರಕರಣಗಳನ್ನು ಅಕ್ರಮ ಸಕ್ರಮದ ಹೆಸರಿನಲ್ಲಿ ಮನ್ನಿಸಿಬಿಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಧರೆಯ ಮೇಲೆ ಸ್ವರ್ಗವನ್ನೇ ತಂದು ಇಳಿಸಿಬಿಡುವ ವಾಗ್ದಾನ ಮಾಡಿದ್ದರೂ ಎಷ್ಟೋ ಬಾರಿ ಖಾಲಿಯೇ ಬಿದ್ದಿರುವ ಖಾಸಗಿ ಗೃಹ ನಿರ್ಮಾಣ ಯೋಜನೆಗಳು ಮಾತ್ರ ಯಾವತ್ತಿಗೂ ಜಾಗದ ಕೊರತೆ ಎದುರಿಸುವ ಪ್ರಶ್ನೆಯೇ ಬರುವುದಿಲ್ಲ.

ಬಿ.ಡಿ.ಎ. ಅಂತಹ ಸರ್ಕಾರಿ ಗೃಹ ನಿರ್ಮಾಣ ಸಂಸ್ಥೆಗಳು ತಲಾ 4 ಸಾವಿರ ಚದರಡಿಯ ಬಂಗಲೆಗಳನ್ನು ಹಣವಂತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲು ಮುಂದಾಗುತ್ತವೆ. ಆದರೆ ಅದೇ ಬಡವರು 265 ಚದರಡಿಯ ಇಕ್ಕಟ್ಟಿನ ಫ್ಲಾಟುಗಳಲ್ಲಿ ಬವಣೆಯಿಂದ ದಿನ ದೂಡುತ್ತಿರುತ್ತಾರೆ.
ಕೆಲ ವರ್ಷಗಳ ಹಿಂದೆ ಮರು ಸ್ವಾಧೀನಪಡಿಸಿಕೊಂಡ ನೂರಾರು ಎಕರೆ ಭೂಮಿಯನ್ನು ಹರಾಜು ಹಾಕಲಾಯಿತು. ಇದರಿಂದ ಬಂದ ಹಣವನ್ನು ದುರ್ಬಲ ವರ್ಗಗಳ ಅಗತ್ಯ ಪೂರೈ­ಸಲು ಬಳಸದೆ, ರಾಜ್ಯದ ಬೊಕ್ಕಸ ತುಂಬಿಸಿಕೊಳ್ಳ­ಲಾಯಿತು. ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಭೂಮಿಯನ್ನು ವಶ­ಪಡಿಸಿಕೊಳ್ಳುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಿಮಿನಲ್‌ ಅಪರಾಧ ಆಗುತ್ತದೆ.

ಅಂತಹ ಸಂದರ್ಭಗಳಲ್ಲಿ ಅಧಿ­ಕಾರಿಗಳು ತಪ್ಪಿತಸ್ಥರ ವಿರುದ್ಧ ಸ್ವಯಂಪ್ರೇರಿತರಾಗಿ ಕ್ರಮ ಜರು­ಗಿಸಬಹುದು. ಆದರೆ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳಲು   ಹೆದರುವ ಅವರು, ಅಂತಹ ಕ್ರಮಕ್ಕೆ ‘ಅನುಮತಿ’ ಕೋರುವ ಮೂಲಕ ಹೊಣೆಗಾರಿಕೆಯನ್ನು ಸಚಿವರ ಹೆಗಲಿಗೆ ವರ್ಗಾಯಿಸಿ ನಿರುಮ್ಮಳವಾಗುತ್ತಾರೆ. ಆದರೆ ಅದಾಗಲೇ ಅಸ್ತಿತ್ವದಲ್ಲಿ ಇರುವ ಕಾನೂನನ್ನು ಉಪೇಕ್ಷಿಸುವ ಸಚಿವರು, ಭೂಗಳ್ಳರ ವಿರುದ್ಧ ಕ್ರಮ ಜರುಗಿಸಲು ಹೊಸ ಕಾನೂನನ್ನೇ ಜಾರಿಗೆ ತರ­ಬೇಕಾಗುತ್ತದೆ ಎಂದು ಹೇಳುತ್ತಾ ಜನರನ್ನು ನಂಬಿಸುತ್ತಾರೆ.

ಈ ಮೂಲಕ ---ವಿಷಯವನ್ನು ವರ್ಷಾನುಗಟ್ಟಲೆ ಎಳೆಯುತ್ತಾ ಹೋಗುತ್ತಾರೆ. ಅಲ್ಲಿಂದ ಮುಂದೆ ವಿಷಯ ರಾಷ್ಟ್ರಪತಿ ಎದುರು ಹೋಗುತ್ತದೆ. ತ್ವರಿತ ಇತ್ಯರ್ಥಕ್ಕೆ ಸರ್ಕಾರ ಇಚ್ಛಾಶಕ್ತಿಯನ್ನೇ ಪ್ರದರ್ಶಿಸದಿರುವುದರಿಂದ 7 ವರ್ಷಗಳಷ್ಟು ಸುದೀರ್ಘ ಅವಧಿ­ಯವರೆಗೆ ಅದು ಇತ್ಯರ್ಥವೇ ಆಗದೆ ಬಾಕಿ ಉಳಿಯುತ್ತದೆ. 

ಈ ಮೂಲಕ, ತಾನು ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆ­ಯಾಗಿದ್ದು, ತನಗಿಂತ ಹೆಚ್ಚು ಪ್ರಭಾವಶಾಲಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂಬುದನ್ನು ಸರ್ಕಾರ ಮೌನವಾಗಿ ಒಪ್ಪಿಕೊಂಡಂತೆ ಆಗುತ್ತದೆ. ಇದು ಆಡಳಿತ ಯಂತ್ರ ಸಂಪೂರ್ಣ­ವಾಗಿ ಕುಸಿದುಬಿದ್ದಂತೆ ಅಲ್ಲದೆ ಬೇರೇನು? ಇದನ್ನೆಲ್ಲ ನೋಡಿ­ದಾಗ, ಸರ್ಕಾರ ಕೇವಲ ‘ಕಾಗದದ ಹುಲಿ’ಯೇನೋ ಎಂಬಂತೆ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT