ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಎಲ್ಲ ಹಕ್ಕುಗಳೂ ಇವೆ!

Last Updated 2 ಜೂನ್ 2016, 19:57 IST
ಅಕ್ಷರ ಗಾತ್ರ

‘ಯುದ್ಧಗಳು ಯಾವುದೇ ಕಾರಣಕ್ಕೆ ಆಗಲಿ, ಎಲ್ಲೇ ಆಗಲಿ, ಯಾರೇ ಗೆಲ್ಲಲಿ, ಸೋಲಲಿ ಅವೆಲ್ಲವೂ ಮಕ್ಕಳ ವಿರುದ್ಧ ಸಾರಿದ ಯುದ್ಧಗಳೇ’ ಎಂದವರು ಮಕ್ಕಳ ಹಕ್ಕುಗಳನ್ನು ಲೀಗ್ ಆಫ್ ನೇಷನ್ಸ್ ಎದುರು 1923ರಷ್ಟು ಹಿಂದೆಯೇ ಪ್ರತಿಪಾದಿಸಿದ ಎಗ್ಲಾಂಟೈನ್ ಜೆಬ್.

ಯುರೋಪಿನೆಲ್ಲೆಡೆ ಭುಗಿಲೆದ್ದು ವ್ಯಾಪಿಸಿ ಲಕ್ಷಾಂತರ ಜನರಿಗೆ, ಅದರಲ್ಲೂ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳಾದ ಆಹಾರ, ಆಸರೆ, ಔಷಧೋಪಚಾರ, ನೆಮ್ಮದಿವಂಚಿಸಿದ ಯುದ್ಧಗಳ ಬಗ್ಗೆ ಜೆಬ್ ಹೇಳಿದ್ದು ಹೀಗೆ. ಅಮಾಯಕ ಮಕ್ಕಳ ದುಃಸ್ಥಿತಿಗೆ ಆಕ್ರಮಣಶೀಲ ರಾಷ್ಟ್ರಗಳೇ ಕಾರಣ ಎಂಬುದು ಅವರ ಗಟ್ಟಿ ನಿಲುವಾಗಿತ್ತು.

ಯುದ್ಧಗಳನ್ನು ಬಿಡಿ, ಮನೆಯಲ್ಲಿ ಮತ್ತು ಹೊರಗೆ ಮಕ್ಕಳ ಮೇಲೆ ವಯಸ್ಕರು ಮಾಡುವ ವಿವಿಧ ರೀತಿಯ ಆಕ್ರಮಣಗಳಿಗೆ ಏನೆನ್ನಬೇಕು? ಮಕ್ಕಳ ನಡುವೆ ತಾರತಮ್ಯ, ಹೊಡೆಯುವುದು, ನಿಂದಿಸುವುದು, ಮೂಲೆಗುಂಪಾಗಿಸುವುದು... ಹೀಗೆ ಹಲವು ರೀತಿಯಲ್ಲಿ ವಯಸ್ಕರು ಮನೆಯಲ್ಲಿ, ಹೊರಗೆ (ಶಾಲೆ, ಸಾರ್ವಜನಿಕ ಪ್ರದೇಶ, ಆಸ್ಪತ್ರೆ, ಮಕ್ಕಳ ನಿಲಯ, ಆಟದ ಮೈದಾನ, ಕೆಲಸದ ಸ್ಥಳ) ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದು ಇದ್ದದ್ದೇ.

ಮಕ್ಕಳೇನಾದರೂ ಬಾಲಕಾರ್ಮಿಕರೊ, ಜೀತದಲ್ಲಿರುವವರೊ, ಲೈಂಗಿಕ ಶೋಷಣೆಗೆ ಒಳಗಾದವರೊ, ವಲಸೆ ಬಂದವರೊ, ನಿರಾಶ್ರಿತರೊ ಆಗಿದ್ದರಂತೂ ವಯಸ್ಕರ ದಾಳಿ, ದೌರ್ಜನ್ಯಕ್ಕೆ ಕಾರಣಗಳೇ ಬೇಕಿಲ್ಲ. ಇಷ್ಟರ ಮೇಲೆ ಹೆಣ್ಣು ಮಗಳೆಂದೊ, ಹಿಂದುಳಿದ ಜಾತಿ ವರ್ಗದವರೆಂದೊ, ಅಂಗವಿಕಲರೆಂದೊ ದೌರ್ಜನ್ಯ ಎಸಗುವುದು ವಯಸ್ಕರ ಹಕ್ಕು ಎಂಬಂತೆಯೇ ಆಗಿದೆ.

ಬಹಳಷ್ಟು ಮಕ್ಕಳಿಗೆ ತಮ್ಮ ಮೇಲಾಗಬಹುದಾದ ಕ್ರೌರ್ಯ, ಅಪರಾಧದಿಂದ ಏನಾಗಬಹುದು ಎನ್ನುವ ಕಲ್ಪನೆಯೂ ಇರುವುದಿಲ್ಲ. ಇನ್ನು ತಮ್ಮ ಮೇಲಿನ ದಾಳಿ ವಿರುದ್ಧ ರಕ್ಷಿಸಿಕೊಳ್ಳುವ ಮಾತಂತೂ ಬಹಳ ದೂರ. ಹೀಗಾಗಿ ಅವರು ಸಮಾಜದಲ್ಲಿ ಸುಲಭವಾಗಿ ತೊಂದರೆಗೆ ಸಿಲುಕುತ್ತಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಮಕ್ಕಳೆಂದರೆ 18  ವರ್ಷದೊಳಗಿನವರು ಎಂದು ನಿರ್ದೇಶಿಸಿದೆ. ಭಾರತ ಇದನ್ನು 1992ರಲ್ಲೇ ಒಪ್ಪಿ ಹಲವಾರು ಕಾಯ್ದೆಗಳಲ್ಲಿ ಇದನ್ನು ಅಳವಡಿಸಿಕೊಂಡಿದೆ.

2011ರ ಜನಗಣತಿ, ಭಾರತದಲ್ಲಿ 47 ಕೋಟಿ ಮಕ್ಕಳಿದ್ದಾರೆ (ಪ್ರತಿಶತ 39) ಎಂದು ಹೇಳಿದೆ. ಇದರಲ್ಲಿ ಪ್ರತಿಶತ 73 ಮಕ್ಕಳು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಬಹುತೇಕ ಮಕ್ಕಳು ಯುದ್ಧ, ಸಶಸ್ತ್ರ ಸಂಘರ್ಷಗಳ ಆಕ್ರಮಣವನ್ನು ನೇರವಾಗಿ ಅನುಭವಿಸುತ್ತಿಲ್ಲವಾದರೂ, ವಿವಿಧ ರೀತಿಯ ತಾರತಮ್ಯಗಳಿಂದಾಗಿ ಸೇವೆಗಳು, ಸೌಲಭ್ಯ ಸಿಗದ ಅಥವಾ ಕಳಪೆ ಸೇವೆಗಳಿಗೆ ಬಲಿಯಾಗುವಂತಾಗಿದೆ. ಅಮಾಯಕ ಮಕ್ಕಳ ಬಗ್ಗೆ ವಯಸ್ಕರಿಗೆ, ವ್ಯವಸ್ಥೆಗೆ, ಪಟ್ಟಭದ್ರ ಗುಂಪುಗಳಿಗೆ ಅಥವಾ ಆಸೆಬುರುಕರಿಗಿರುವ ತಿರಸ್ಕಾರವೂ ‘ಆಕ್ರಮಣ’ದ ರೂಪವೇ ಆಗಿದೆ.

ಅಂತರರಾಷ್ಟ್ರೀಯ ಶಾಂತಿ, ಸುರಕ್ಷತೆ ಮತ್ತು ಸಹಬಾಳ್ವೆಗೆ ಒತ್ತು ನೀಡಿ, ಯುದ್ಧಗಳನ್ನು ತಡೆಯಲು ಕ್ರಮ ಕೈಗೊಳ್ಳಲೆಂದೇ 1945ರಲ್ಲಿ ವಿಶ್ವಸಂಸ್ಥೆಯ ಸ್ಥಾಪನೆಯಾಯಿತು. ಆದರೆ, ಆ ನಂತರವೂ ದೇಶದೇಶಗಳ ನಡುವೆ ಮತ್ತು ದೇಶಗಳ ಒಳಗೇ ಸಾಕಷ್ಟು ಯುದ್ಧಗಳು, ಅವುಗಳಿಂದಾದ ಅನರ್ಥಗಳನ್ನು ಅನುಭವಿಸುತ್ತಲೇ ಇದ್ದೇವೆ. ಈ ನವೀನ ಯುಗದಲ್ಲಂತೂ ಪ್ರತಿ ಯುದ್ಧವೂ ಸೋತ ದೇಶವಿರಲಿ, ಗೆದ್ದ ದೇಶಗಳ ನೆಮ್ಮದಿಯನ್ನೂ ಹಾಳುಗೆಡವುತ್ತಿದೆ. ಬಡವರು, ಮೂಲೆಗುಂಪಾದವರು, ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚು ಪೆಟ್ಟು ಬೀಳುತ್ತಿದೆ.

‘ಇಸ್ರೇಲಿನ ದಾಳಿಯಿಂದ ನಮ್ಮನ್ನು, ಅದರಲ್ಲೂ ನಮ್ಮ ಮಕ್ಕಳನ್ನು ರಕ್ಷಿಸಿ’ ಎಂದು 1982ರಲ್ಲಿ ಪ್ಯಾಲೆಸ್ಟೀನ್ ವಿಮುಕ್ತಿ ಸಂಸ್ಥೆ (ಪಿ.ಎಲ್.ಒ) ಮತ್ತು ಪ್ಯಾಲೆಸ್ಟೀನ್ ನಾಗರಿಕರ ನಿಯೋಗ ವಿಶ್ವಸಂಸ್ಥೆಯೆದುರು ಮೊರೆಯಿಟ್ಟಿತ್ತು. ಬೈರೂತ್‌ನಲ್ಲಿ ಆದ ನಾಗರಿಕರ ಮಾರಣಹೋಮದಲ್ಲಿ ಮಕ್ಕಳು ಹೇಗೆ ಬಲಿಯಾದರೆಂದು ಅದರಲ್ಲಿ ವಿವರಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ 1982ರ ಆಗಸ್ಟ್‌ 19ರಂದು ವಿಶೇಷ ಸಭೆ ಕರೆದು, ‘ಪ್ಯಾಲೆಸ್ಟೀನಿನ ಮಕ್ಕಳು ಎದುರಿಸುತ್ತಿರುವಂತಹ ಪರಿಸ್ಥಿತಿಯನ್ನು ಕಂಡು ದುಗುಡಗೊಂಡಿರುವ ನಾವು, ಪ್ರತಿ ವರ್ಷ ಜೂನ್ 4ನ್ನು ಆಕ್ರಮಣಕ್ಕೊಳಗಾಗುವ ಅಮಾಯಕ ಮಕ್ಕಳ ಅಂತರ ರಾಷ್ಟ್ರೀಯ ದಿನ ಎಂದು ಗುರುತಿಸುವ ಮೂಲಕ, ದೌರ್ಜನ್ಯಕ್ಕೊಳಗಾಗುತ್ತಿರುವ ಎಲ್ಲ ಮಕ್ಕಳನ್ನು ರಕ್ಷಿಸಬೇಕೆನ್ನುವ ಸಂದೇಶ ನೀಡೋಣ’ ಎಂದು ನಿರ್ಧರಿಸಿತು.

ಮಕ್ಕಳನ್ನು ಶೋಷಿಸುವವರಲ್ಲಿ ಸಾಮಾನ್ಯ ಜನರಿಂದ ಹಿಡಿದು, ಸುಶಿಕ್ಷಿತರು, ನೀತಿ ನಿರೂಪಕರ ತನಕ ಎಲ್ಲರೂ ಇದ್ದಾರೆ. ‘ಮಕ್ಕಳು ನಾಳಿನ ಪ್ರಜೆಗಳು’ ಎಂಬುದನ್ನು ಅಕ್ಷರಶಃ ತೆಗೆದುಕೊಂಡಿರುವ ಅನೇಕ ವಯಸ್ಕರು, ಮಕ್ಕಳಿಗೆ ಯಾವುದೇ ಹಕ್ಕಿಲ್ಲ ಎಂದೇ ಬಗೆದಿದ್ದಾರೆ. ಆದರೆ, ಸಂವಿಧಾನದ ಕಲಂ 5ರಂತೆ ಮಕ್ಕಳಿಗೆ ಎಲ್ಲ ಪ್ರಜೆಗಳಂತೆ ಎಲ್ಲ ಹಕ್ಕುಗಳು ಸಂವಿಧಾನದತ್ತವಾಗಿವೆ.

ಇಂದಿನ ದಿನಗಳಲ್ಲಿ ಅನೇಕ ಕಾನೂನುಗಳು ಮಕ್ಕಳ ಹಕ್ಕುಗಳ ಪರವಾಗಿ ಜಾರಿಗೆ ಬಂದಿವೆ. ಅವರ ಮೇಲಾಗುವ ಯಾವುದೇ ಅಪರಾಧ, ತಾರತಮ್ಯ, ದೈಹಿಕ, ಮಾನಸಿಕ, ಲೈಂಗಿಕ, ಆರ್ಥಿಕ ಅಪರಾಧಗಳು, ಮಕ್ಕಳನ್ನು ದುಡಿಮೆಗೆ, ಜೀತಕ್ಕೆ ಇರಿಸಿಕೊಳ್ಳುವುದು, ಮಾರುವುದು, ಬಾಲ್ಯವಿವಾಹ ಮೊದಲಾದವುಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತೀವ್ರವಾದ ಶಿಕ್ಷೆಯನ್ನು ನ್ಯಾಯಾಲಯಗಳು ವಿಧಿಸುತ್ತಿವೆ. 2015ರಲ್ಲಿ ಬಂದಿರುವ ಮಕ್ಕಳ ನ್ಯಾಯ ಕಾಯ್ದೆಯಂತೂ ಮಕ್ಕಳ ಮೇಲಾಗುವ ಅಪರಾಧಗಳ ದೊಡ್ಡ ಪಟ್ಟಿಯನ್ನೇ ಕೊಟ್ಟು, ಅವನ್ನು ಜಾಮೀನು ರಹಿತ ಎಂದು ಘೋಷಿಸಿ, ಅಪರಾಧಿಗಳನ್ನು ಮಕ್ಕಳ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲು ನಿರ್ದೇಶಿಸಿದೆ.

ಮಕ್ಕಳ ಹಕ್ಕುಗಳನ್ನು ರಕ್ಷಿಸಲೋಸುಗ, ಕೇಂದ್ರ ಸರ್ಕಾರ ಗ್ರಾಮ ಪಂಚಾಯ್ತಿ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು ಹೊರಡಿಸಿ ಹಲವು ಸ್ತರಗಳಲ್ಲಿ ವ್ಯವಸ್ಥೆಗಳನ್ನು ರೂಪಿಸಿದೆ. ಪ್ರತಿ ಜಿಲ್ಲೆಯಲ್ಲಿ ‘ಮಕ್ಕಳ ವಿಶೇಷ ನ್ಯಾಯಾಲಯ’ಗಳನ್ನು ಸ್ಥಾಪಿಸಲಾಗಿದೆ.

ಅಂತೆಯೆ ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕ್ಷೇಮಾಭಿವೃದ್ಧಿಯ ಜವಾಬ್ದಾರಿಯನ್ನು ‘ಮಕ್ಕಳ ಕಲ್ಯಾಣ ಸಮಿತಿ’ಗಳಿಗೆ ವಹಿಸಲಾಗಿದೆ. ಇಂತಹ ಎಲ್ಲ ವ್ಯವಸ್ಥೆಗಳು, ಕಾರ್ಯಕ್ರಮಗಳು, ಯೋಜನೆಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ನಿರ್ವಹಣೆಯ ಉಸ್ತುವಾರಿಯನ್ನು ಪ್ರತಿ ರಾಜ್ಯದಲ್ಲಿರುವ ‘ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ಗಳಿಗೆ ವಹಿಸಲಾಗಿದೆ.

ನಮ್ಮ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ’ಯು ಮಕ್ಕಳ ಪರವಾದ ಚಿಂತನೆಗಳನ್ನು ವಿಧಾನಸೌಧಕ್ಕೆ ಒಯ್ಯುವ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು  ವಿಶೇಷ. ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಎಲ್ಲ ರೀತಿಯ ಸಂಸ್ಥೆಗಳು ‘ಮಕ್ಕಳ ರಕ್ಷಣಾ ನೀತಿ ಮತ್ತು ಸೂತ್ರ’ಗಳನ್ನು ಅಳವಡಿಸಿಕೊಳ್ಳುವುದು ಈಗಿನ ತುರ್ತು. ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಪ್ರಕಟಿಸಿರುವ ‘ಶಾಲಾ ಮಕ್ಕಳ ರಕ್ಷಣಾ ನೀತಿ’ಯಲ್ಲಿ ಒಂದು ಉತ್ತಮ ಆರಂಭವನ್ನು ಕಾಣಬಹುದು.

ಆಕ್ರಮಣಕ್ಕೊಳಗಾಗುವ ಅಮಾಯಕ ಮಕ್ಕಳ ಅಂತರರಾಷ್ಟ್ರೀಯ ದಿನಾಚರಣೆಯ ಮೂಲಕ ನಾವು ಮಕ್ಕಳ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತೊಮ್ಮೆ ಬದ್ಧರಾಗಬೇಕಿದೆ. ‘ಮಕ್ಕಳ ಸ್ನೇಹಿ ಸಮಾಜ’ ರೂಪಿಸುವತ್ತ ಸಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT