ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಸ್ವಾತಂತ್ರ್ಯದ ಕನಸು ಕಾಣಲು ಬಿಡಿ...

Last Updated 18 ಜೂನ್ 2014, 19:30 IST
ಅಕ್ಷರ ಗಾತ್ರ

ಉಪನ್ಯಾಸಕರೊಬ್ಬರು ಗೈರುಹಾಜ­ರಾದ್ದ­ರಿಂದ ತರಗತಿಯೊಂದು ಬಿಡುವಾ­ಗಿತ್ತು. ಅದಿನ್ನೂ ಎರಡನೆಯ ಅವಧಿಯಷ್ಟೇ ಆಗಿದ್ದ­ರಿಂದ ಭಾಷಾ ಉಪನ್ಯಾಸಕಿಯಾದ ನನಗೆ ಸಹಜ­ವಾಗಿಯೇ ಕರೆಬಂತು. ದ್ವಿತೀಯ ಪಿಯುಸಿ ಪಠ್ಯ­ಪುಸ್ತಕ ಇನ್ನೂ ಬಂದಿರಲಿಲ್ಲವಾದ್ದರಿಂದ ಪಾಠ ಮಾಡುವ ಪ್ರಮೇಯವಿರಲಿಲ್ಲ. ಆರಂಭದ ಹತ್ತು ನಿಮಿಷಗಳಲ್ಲಿ ವಿದ್ಯಾರ್ಥಿಗಳ ಕಷ್ಟ ಸುಖ ವಿಚಾರಿಸಿ ಆ ತರಗತಿಗಾಗಿ ಚಟುವಟಿಕೆ­ಯೊಂ­ದನ್ನು ಮನದಲ್ಲೇ ರೂಪಿಸಿಕೊಂಡೆ.

ಅಪ್ಪ ಚಾವಡಿಯಲ್ಲಿ ಕುಳಿ­ತು­ಕೊಂಡು ಪತ್ರಿಕೆಯನ್ನೋದುತ್ತಿದ್ದಾರೆ. ಅಮ್ಮ ಎಂದಿನಂತೆ ಅಡುಗೆ ಮನೆಯಲ್ಲಿ ಕೆಲಸದ ಭರಾಟೆ­ಯಲ್ಲಿದ್ದಾರೆ. ನಾನು ರೂಮಿನಲ್ಲಿ ಒಬ್ಬಂಟಿ. ನನಗೋ ಸ್ವಾತಂತ್ರ್ಯದ ಕನಸು. ಈ ಎಲ್ಲ­ವು­ಗಳಿಂದ ನಾನು ಮುಕ್ತವಾಗಬೇಕು, ನನಗೆ ಬಿಡು­ಗಡೆ ಬೇಕು... ಎಂಬರ್ಥ ಬರುವ ನಾಲ್ಕು ವಾಕ್ಯಗಳನ್ನು ಬೋರ್ಡಿನ ಮೇಲೆ ಇಂಗ್ಲಿಷಿನಲ್ಲಿ ಬರೆದು ಹೀಗೆ ಆರಂಭ­ವಾಗುವಂತೆ ಕಥೆಯೊಂದನ್ನು ಬರೆಯಿರಿ ಎಂದೆ.

ಮೊದಲಿಗೆ ಅವರ ಮುಖದಲ್ಲಿ ಗೊಂದಲ. ಕೆಲ­ವರಿಗೆ ನಾವು ಕಥೆ ಬರೆಯುವುದಾ ಎಂಬ ಅನು­ಮಾನ. ಇನ್ನೂ ಹಲವರಿಗೆ ಭಾಷಾ ಪ್ರಯೋಗ ಸರಿಯಾಗಿ ಬಾರದೇ ಏನು ಬರೆ­ಯು­ವು­ದಪ್ಪಾ, ತಪ್ಪಾದರೆ ಯಾರು ನಕ್ಕು ಬಿಡು­ತ್ತಾರೋ ಎಂಬ ಕಸಿವಿಸಿ. ಅಂತೂ ಒಂದೆರಡು ನಿಮಿಷಗಳಾದ ಮೇಲೆ ನಿಧಾನವಾಗಿ ಬರೆಯಲು ಆರಂಭಿಸಿದರು. ಇನ್ನೂ ಹಲವರ ಮುಖಗಳನ್ನು ನೋಡಿದರೆ ಅವರೊಳಗಿನ ಸಿಟ್ಟೆಲ್ಲವನ್ನೂ ಅದೇ ತರಗತಿಯಲ್ಲಿ ಹೊರಹಾಕಿಬಿಡುವಂತೆ ಕುಳಿತಿದ್ದರು. ಒಂದಿಬ್ಬರು ಹೆಣ್ಣುಮಕ್ಕಳ ಕಂಗಳು ಯಾಕೋ ಸುಮ್ಮನೇ ಒದ್ದೆಯಾದಂತಿತ್ತು.

ಅರ್ಧ ಗಂಟೆಯ ಬಳಿಕ ಅವರ ಕಥೆಗಳು ನನ್ನೆದು­ರಿನ ಟೇಬಲ್ ಮೇಲೆ ಕೂತಿದ್ದವು. ಒಂದೊಂ­ದಾಗಿ ಓದುತ್ತಾ ಹೋದರೆ ವಿಷಾದ­ವೆನ್ನಿಸಿತು. ಇನ್ನೂ ಹದಿನೆಂಟು ತುಂಬದ ಮಕ್ಕಳಿಗೆ ಈ ಬಗೆಯ ಒತ್ತಡವೇ ಎಂಬ ಪ್ರಶ್ನೆ ಹುಟ್ಟಿ­ಕೊಂಡಿತು. ಎಪ್ಪತ್ತು ಮಂದಿ ವಿದ್ಯಾರ್ಥಿಗಳಿದ್ದ ಆ ತರಗತಿ­ಯಲ್ಲಿ ಅರವತ್ತೆಂಟು ಜನರ ಕಥೆಗಳೂ ಹೆಚ್ಚುಕಮ್ಮಿ ಒಂದೇ ಆಗಿದ್ದವು! ಅವರೆಲ್ಲರ ಕಥೆಗಳ ಒಟ್ಟೂ ಸಾರಾಂಶವಿಷ್ಟೇ:

ದಿನಬೆಳಗಾದರೆ ಟ್ಯೂಷನ್. ಐದೂವರೆ­ಯಿಂದ ರಾತ್ರಿ ಎಂಟೂವರೆಯವರೆಗೆ. ನಡುವೆ ಕಾಲೇಜು, ತರಗತಿಗಳು, ಲೈಬ್ರರಿ ಇಷ್ಟೇ. ಇದೆಂಥಾ ಬದುಕು ಅನ್ನಿಸಿಬಿಟ್ಟಿದೆ. ನನಗೆ ಸಂಜೆಯ ವೇಳೆ ಬಿಡುವು ಬೇಕು. ಸ್ನೇಹಿತರ ಜೊತೆಗೆ ಮೈದಾನಕ್ಕೆ ಹೋಗಬೇಕು. ಬೆವರು ಕಿತ್ತು­ಬರುವಂತೆ ಆಟವಾಡಿ ದಣಿಯಬೇಕು. ಕೈಗಾಡಿಯವನ ಹತ್ತಿರ ಕೋನ್ ಐಸ್ ಕ್ರೀಮ್ ತಗೊಂಡು ತಿನ್ನಬೇಕು. ಮನೆಯಲ್ಲಿ ಅಪ್ಪ ಅಮ್ಮನ ಹತ್ತಿರ, ತಂಗಿಯ ಹತ್ತಿರ ಮನಸ್ಸು ಬಿಚ್ಚಿ ಮಾತಾ­ಡಬೇಕು. ಹೊಟ್ಟೆ ಹುಣ್ಣಾಗುವಂತೆ ನಗಬೇಕು.

ಯಾವಾಗ ನೋಡಿದರೂ ಓದು ಓದು ಎಂಬ ಮಂತ್ರ ಕೇಳಿ ಸಾಕಾಗಿದೆ ನನಗೆ. ಯಾಕಾದರೂ ದ್ವಿತೀಯ ಪಿಯುಸಿಗೆ ಬಂದುಬಿಟ್ಟೆನೋ ಅನ್ನಿಸು­ತ್ತಿದೆ. ಒಂದರ್ಧ ಗಂಟೆ ನಾನು ಟಿ.ವಿ. ನೋಡು­ತ್ತೇನೆ ಅಂದರೂ ಬಿಡುವಿಲ್ಲ. ಅದೆಲ್ಲ ಸಮಯ ಹಾಳು ಎಂಬ ಭಾವ ಹೆತ್ತವರಿಗೆ. ಅದಕ್ಕಾಗಿ ಕೇಬಲ್ಲೇ ತೆಗೆಸಿಬಿಟ್ಟಿದ್ದಾರೆ. ನನಗಿಷ್ಟವಾದ ಸಂಗೀತ ಕ್ಲಾಸಿಗೂ ಈ ವರ್ಷ ಬ್ರೇಕ್ ಹಾಕಿಸಿ­ದ್ದಾರೆ. ನನಗೆ ಬದುಕಿನ ಎಲ್ಲ ಸ್ವಾರಸ್ಯ­ಗಳನ್ನೂ ಕಳೆ­ದು­ಕೊಂಡಂತೆ ಅನ್ನಿಸುತ್ತಿದೆ. ಯಾಕಾದರೂ ಸೆಕೆಂಡ್ ಪಿಯುಸಿಗೆ ಬಂದೆನೋ ಎಂಬಂತಾಗಿದೆ.

ನಾನು ಓದಲು ಸೋಮಾರಿಯಲ್ಲ.  ಓದು, ಬರಹ­ಗಳೆರಡೂ ನನಗಿಷ್ಟದ ಕೆಲಸಗಳು. ಆದರೆ ನಾನು ನನ್ನ ಓದಿನ ಬಹಳ ಮುಖ್ಯ ಕಾಲಘಟ್ಟದಲ್ಲಿದ್ದೇನೆ ಎಂಬ ಕಾರಣಕ್ಕೆ ಪಠ್ಯ, ಅದರಲ್ಲೂ ನನ್ನ ಐಚ್ಛಿಕ ವಿಷಯಗಳನ್ನು ಮಾತ್ರ ಓದುವುದಕ್ಕೆ ಅನುಮತಿ. ಅಪ್ಪಿತಪ್ಪಿ ಕನ್ನಡ ಪದ್ಯ, ಇಂಗ್ಲಿಷ್ ಕಥೆ ಓದುತ್ತಿದ್ದರೆ ಮುಗೀತು. ನಾನು ಅವರ ಕಾಳಜಿಗೆ ಬೆಲೆಕೊಡದೇ ಮಹಾಪರಾಧ ಮಾಡುತ್ತಿದ್ದೇನೆ ಎಂಬಂತಾಡುತ್ತಾರೆ. ಕಾಡಿನಲ್ಲಿ ಪ್ರಾಣಿಗಳಿಗಿರುವ ಸ್ವಾತಂತ್ರ್ಯವೂ ನನಗಿಲ್ಲ...

ಆತಂಕ ಪಡಬೇಕು: ದುಗುಡದ ಜೊತೆಗೆ ಆತಂ­ಕವೂ ನಮ್ಮನ್ನು ಕಾಡಬೇಕಾದ ಸಂದಿಗ್ಧ ಇದು. ಈಗಿನ್ನೂ ಜೂನ್ ಮಧ್ಯಭಾಗವಷ್ಟೇ. ಅವರ ಪಿಯುಸಿ ಪರೀಕ್ಷೆಗಳು ಮುಗಿದು ಸಿಇಟಿ ಮುಗಿ­ಯುವಲ್ಲಿ ಇನ್ನೂ ಸರಿಯಾಗಿ ಒಂದು ವರ್ಷವೇ ಬೇಕು. ಈಗಲೇ ಅವರಿಗೆ ಉಸಿರುಕಟ್ಟಿಸುವಂತಹ ವಾತಾ­ವರಣ ಇದೆ ಎಂದರೆ ಇನ್ನು ಹತ್ತು ತಿಂಗಳು ಕಳೆಯುವಷ್ಟರಲ್ಲಿ ಅವರ ಮನಸ್ಸು ಯಾವ ಹಂತಕ್ಕೆ ತಲುಪಬಹುದು?

ದ್ವಿತೀಯ ಪಿಯುಸಿ ಬಹಳ ಪ್ರಮುಖ ಘಟ್ಟ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಅಲ್ಲಿ ಗಿಟ್ಟಿಸಿ­ಕೊ­ಳ್ಳುವ ಅಂಕಗಳ ಮೇಲೆ ವಿದ್ಯಾರ್ಥಿಗಳಿಗೆ ದೊರೆಯಬಹುದಾದ ವೃತ್ತಿಶಿಕ್ಷಣ ಬದಲಾಗ­ಬ­ಹುದು. ಕಾಲೇಜು ಬದಲಾಗಬಹುದು. ಆದರೆ ಬದು­ಕಿನ ಪರೀಕ್ಷೆಗಿಂತ ದೊಡ್ಡ ಪರೀಕ್ಷೆಯೇನು? ಸಮಾ­ಧಾನ, ಆತ್ಮವಿಶ್ವಾಸ, ಬಂದದ್ದನ್ನು ಒಳಿ­ತೆಂದು ಸ್ವೀಕರಿಸಬಲ್ಲ ದೃಢವಾದ ಮನಸ್ಸು, ಬದುಕು ಅನಿರೀಕ್ಷಿತವಾಗಿ ಒಡ್ಡುವ ಸವಾಲು­ಗ­ಳನ್ನು ಎದುರಿಸಬಲ್ಲ ಛಾತಿ ಮುಖ್ಯವೇ ಹೊರತು ಕೇವಲ ಅಂಕಗಳ ಹಿಂದಿನ ಓಟವಲ್ಲವಷ್ಟೇ?

ದೊಡ್ಡ ಕನಸು ಕಾಣಬೇಕು ನಿಜ. ಗುರಿಯನ್ನು ರೂಪಿಸಿಕೊಳ್ಳುವಾಗಲೂ ನಮ್ಮ ಎಟುಕಿಗಿಂತ ಒಂದಡಿ ಎತ್ತರವಿರುವಂತೆ ರೂಪಿಸಿಕೊಳ್ಳುವುದು ಅಗತ್ಯ. ವ್ಯಕ್ತಿಗತವಾಗಿರುವ ಸಾಮರ್ಥ್ಯ ಅರಿವಿಗೆ ಬರುವುದೇ ಆವಾಗ. ಆದರೆ ಅದೇ ನೆಪ ಮಾಡಿ­ಕೊಂಡು ಉಳಿದೆಲ್ಲವುಗಳಿಂದ ವಿದ್ಯಾರ್ಥಿ­ಗ­ಳನ್ನು ವಂಚಿತರನ್ನಾಗಿ ಮಾಡುವುದು ಅವರ ಸಾಧನೆಗೆ ಸ್ಫೂರ್ತಿಯಾಗುವುದಾದರೂ ಹೇಗೆ?

ಪ್ರತಿವರ್ಷವೂ ಫಲಿತಾಂಶದ ನಂತರದಲ್ಲಿ ಆತ್ಮಹತ್ಯೆ ವರದಿಗಳು ಪ್ರಜ್ಞಾವಂತ ನಾಗರಿಕರನ್ನು ತಲ್ಲಣಿಸುವಂತೆ ಮಾಡುತ್ತವೆ. ಎಲ್ಲಾ ಸಂದರ್ಭಗಳಲ್ಲೂ ಅದು ಕೇವಲ ವಿದ್ಯಾರ್ಥಿಗಳ ದುಡುಕಿನ ನಿರ್ಧಾರವಾಗಿರಲಾರದು. ಅಂತ­ರಂಗದ ಅಭಿಲಾಷೆಗಿಂತ ಹೆಚ್ಚಾಗಿ ಉತ್ತಮ ಅಂಕಗಳನ್ನು ಪಡೆಯುವಂತೆ ಹೊರಜಗತ್ತಿನ ಒತ್ತಡ ಎಳೆಯ ಮನಸ್ಸುಗಳನ್ನು ಕುಗ್ಗಿಸುವಂತೆ ಮಾಡ­ಬಲ್ಲದು. ಮೆದುಳು ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ಅಲ್ಲಿ ಬದಲಾವಣೆ ಎಂಬುದು ಇರಬೇಕು. ಸದಾ ಓದು ಓದು ಎಂಬ ಕಿರಿಕಿರಿಯೆನಿಸುವ ಸೂಚನೆಗಳಿಗೆ ಬದಲಾಗಿ ಮನಸ್ಸು ಹಗುರಾಗುವಂತಹ ಚಟು­ವಟಿಕೆಗಳೂ ಇರಬೇಕು. ಹಾಗಾದಾಗ ಮಾತ್ರ ಓದಿದ್ದು ಮನಸ್ಸಲ್ಲಿ ಉಳಿದುಕೊಳ್ಳುತ್ತದೆ.

ಹೆತ್ತವರು ಅರ್ಥ ಮಾಡಿಕೊಳ್ಳಬೇಕಾದ ಪುಟ್ಟ­ಸತ್ಯ ಒಂದೇ. ವಿದ್ಯಾರ್ಥಿಗಳಿಗೆ ಓದಿಗೆ ಪೂರ­ಕ­­­ವಾದ ವಾತಾವರಣ ಕಲ್ಪಿಸಿಕೊಡುವುದು, ಉತ್ತೇಜ­ನ ನೀಡುವುದು ಅವರ ಓದಿಗೆ ಸಹಕಾರಿ. ಅದೇ ಉತ್ತೇಜನ ಒಂದು ಹಂತ ಮೀರಿದರೆ ಒತ್ತಡ­ವಾಗಿ ಮಾರ್ಪಡುತ್ತದೆ. ಇತ್ತ ಓದಿದ್ದೂ ತಲೆಗಡರದೆ, ಹೆತ್ತವರ ನಿರೀಕ್ಷೆಗಳನ್ನು ತಾನು ಈಡೇರಿಸುವುದು ಸಾಧ್ಯವಿಲ್ಲ ಎಂಬ ಭಾವ ಅವರಲ್ಲಿ ಮೂಡಿದರೆ ಅವರು ತೆಗೆದುಕೊಳ್ಳುವ ನಿರ್ಧಾರ ವಿಪರೀತದ್ದಾಗಿರುವ ಸಾಧ್ಯತೆಗಳಿವೆ.

ಕೊಂಚ ಎಚ್ಚರ ತಪ್ಪಿದರೂ ಬದುಕಿನುದ್ದಕ್ಕೂ  ಕೊರಗುವ ಸನ್ನಿವೇಶ ಸೃಷ್ಟಿಯಾಗಬಲ್ಲದು. ಆಮೇಲೆ ಎಷ್ಟು ಕೊರಗಿದರೂ, ಪಶ್ಚಾತ್ತಾಪ­ಪಟ್ಟರೂ ಕಮರಿಹೋದ ಕರುಳಬಳ್ಳಿ ಮತ್ತೆ ಚಿಗುರಲಾರದು. ವರ್ಷಪೂರ್ತಿ ನಮ್ಮ ಮಕ್ಕಳು ಖುಷಿಯಾಗಿ ಓದಲಿ. ಅವರ ಸಾಧನೆ ನಮ್ಮ ಬದುಕಿನ ಸಾರ್ಥಕ್ಯವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT