ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಮನದಲ್ಲಿ ಮೂಡುವ ಅವ್ಯಕ್ತ ಭೀತಿ

ನಾವು ಬದುಕಿದ್ದೇವೆ ಎನ್ನುವುದನ್ನು ಸರ್ಕಾರಕ್ಕೆ ತಿಳಿಸಲು ಗ್ರಾಮೀಣ ಪ್ರದೇಶದ ಜನ ವೋಟ್ ಹಾಕುತ್ತಾರೆ
Last Updated 16 ಮೇ 2013, 19:59 IST
ಅಕ್ಷರ ಗಾತ್ರ

ಚುನಾವಣಾ ಪರ್ವ ಮುಗಿದು, ಹೊಸ ಸರ್ಕಾರ ರಚನೆಯಾಗಿದೆ. ಈ ಸಲ ಹೊಸದಾಗಿ ಮತದಾರರಾಗಿ ಸೇರ್ಪಡೆಯಾದ ಯುವ ಮತದಾರರ ಸಂಖ್ಯೆಯೂ ಹೆಚ್ಚಾಗಿತ್ತು. ಚುನಾವಣಾ ಆಯೋಗ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ವಿಶೇಷ ಕಾಳಜಿ ವಹಿಸಿತ್ತು. ಮತದಾನದ ಅವಧಿಯನ್ನೂ ಹೆಚ್ಚಿಸಲಾಗಿತ್ತು.

ಚುನಾವಣಾ ಆಯೋಗ ಬಿಗಿಕ್ರಮಗಳ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಸಿತ್ತು. ಮಾಧ್ಯಮಗಳಂತೂ ಒಂದು ತಿಂಗಳಿಂದ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಬಗ್ಗೆ, ಕ್ಷೇತ್ರದ ಬಗ್ಗೆ ವಿವರಣೆಗಳನ್ನು ನೀಡಿದವು. ನಗರ ಪ್ರದೇಶಗಳಲ್ಲಿ ವಿಶೇಷವಾದ ಮತದಾನ ಜಾಗೃತಿ ಅಭಿಯಾನಗಳು ನಡೆದವು.

ಸಾರ್ವತ್ರಿಕ ಚುನಾವಣೆಗಳು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ, ಹಾಗಾಗಿ ಪ್ರಜೆಗಳ ಪಾಲ್ಗೊಳ್ಳುವಿಕೆಯ ಮಹತ್ವ ತಿಳಿಸಲು, ಮತದಾರನಿಗೆ ತನ್ನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಮೂಹ ಮಾಧ್ಯಮಗಳು ಅತ್ಯುತ್ತಮ ಪಾತ್ರ ವಹಿಸಿದವು. ಆದ್ದರಿಂದ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ.

  ಆದರೆ ಈ ಎಲ್ಲ ಪ್ರಕ್ರಿಯೆಗಳು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದವು. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಗ್ರಾಮಾಂತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಭರಾಟೆ ಅಷ್ಟಾಗಿ ಕಂಡು ಬರಲಿಲ್ಲ. ಖ್ಯಾತ ಗಾಯಕಿಯೊಬ್ಬರು `ವೋಟ್ ಹಾಕಿ' ಎಂದು ಕರೆಕೊಡುತ್ತಾ `ವಿದ್ಯಾವಂತರು ಬುದ್ದಿಇದ್ದರೂ ಅನಕ್ಷರರಂತೆ ವರ್ತಿಸದೆ ಮತ ಚಲಾಯಿಸಿ' ಎಂದು ಸಾಮಾಜಿಕ ಜವಾಬ್ದಾರಿಯ ಕರೆ ಕೊಟ್ಟರು!

ಈ ಬಾರಿ ದಾಖಲೆ ಮತದಾನ ಆಗಿದೆ. ಆದರೂ ಬೆಂಗಳೂರು ನಗರದಲ್ಲಿ ಅತಿ ಕಡಿಮೆ, ಬೆಂಗಳೂರು ಗ್ರಾಮಾಂತರದಲ್ಲಿ ಅತಿಹೆಚ್ಚು ಮತದಾನವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಮತದಾರರು ಹೆಚ್ಚು ಸಕ್ರಿಯವಾಗಿ ಮತದಾನ ಮಾಡಿರುವುದು ಅಂಕಿ-ಸಂಖ್ಯೆಗಳಲ್ಲಿ ತಿಳಿಯುತ್ತಿದೆ.

ಗ್ರಾಮೀಣ ಭಾಗದ ಕೆಲವು ಮತಗಟ್ಟೆಗಳಲ್ಲಿ ಶೇ 90 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂದರೆ ಇದೆಲ್ಲಾ ಜಾಗೃತಿ ಇಲ್ಲದಿದ್ದರೂ ಗ್ರಾಮೀಣರು ಅತ್ಯುತ್ಸಾಹದಿಂದ, ನಿರೀಕ್ಷೆಯಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ. ಕೆಲಸ ಕಾರ್ಯಗಳಿಗಾಗಿ ಬೇರೆ ಊರುಗಳಲ್ಲಿರುವ ಗ್ರಾಮೀಣ ಮತದಾರರೂ ಮತದಾನದ ದಿನ ಸ್ವಗ್ರಾಮಗಳಿಗೆ ಬಂದು ಕಡ್ಡಾಯವಾಗಿ ಮತ ಚಲಾಯಿಸುತ್ತಾರೆ. ಖಂಡಿತಾ ಅವರು ಪುಡಿಗಾಸಿನ ಪ್ರಲೋಭನೆಗೆ ಒಳಗಾಗಿ ಊರೂರಿನಿಂದ ಬಂದು ಮತ ಹಾಕುವುದಿಲ್ಲ. ವೃದ್ದರೂ, ಅಂಗವಿಕಲರೂ, ಅನಾರೋಗ್ಯಪೀಡಿತರೂ, ಒಟ್ಟಿನಲ್ಲಿ ಉಸಿರಾಡುತ್ತಿರುವ ಪ್ರತಿ ವ್ಯಕ್ತಿಯೂ ಮಹಿಳೆ. ಪುರುಷ ಎಂಬ ಭೇದವಿಲ್ಲದೆ ಎಲ್ಲರೂ ಮತಗಟ್ಟೆಗೆ ತೆರಳುತ್ತಾರೆ.

ಹಾಗಾದರೆ ಶೌಚಾಲಯಗಳ ಬಗ್ಗೆ, ಬಾಲ್ಯವಿವಾಹದ ಬಗ್ಗೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಇವರಿಗೆ ಇದೇ ರೀತಿ ಜಾಗೃತಿ ಯಾಕಿಲ್ಲ? ಇವರ ಒಂದೊಂದು ಮತವೂ ಅತ್ಯಂತ ಅಮೂಲ್ಯ ಎಂದು ಇವರಿಗೆ ಹೇಗೆ ಮನವರಿಕೆಯಾಗಿದೆಯೆಂದು, ಇದೊಂದು ಪ್ರಮುಖ ವಿಚಾರವಾಗಿದ್ದರೂ ಯಾವ ಮಾಧ್ಯಮಗಳಲ್ಲೂ ಈ ವಿಚಾರ ಚರ್ಚೆಗೆ ಒಳಗಾಗಲಿಲ್ಲ.

ಹಾಗಾದರೆ ಗ್ರಾಮವಾಸಿಗಳು ಯಾಕಾಗಿ ಮತಹಾಕುತ್ತಾರೆಂದು ಕೆದಕುತ್ತಾ ಹೋದರೆ ಅವರು ಕೊಟ್ಟ ಉತ್ತರ ಊಹೆಗೆ ನಿಲುಕದ್ದಾಗಿತ್ತು. ಅವರೆಲ್ಲಾ ಅವರು ಬದುಕಿದ್ದಾರೆಂದು ಸರ್ಕಾರಕ್ಕೆ ತಿಳಿಸುವ ಮಾರ್ಗ  ಎಂದರೆ ಮತ ಹಾಕುವುದೆಂದು ತಿಳಿದುಕೊಂಡಿದ್ದಾರೆ. ಹಾಗೆ ಸರ್ಕಾರಕ್ಕೆ ತಿಳಿಸಿದರೆ ಮಾತ್ರ ಅವರಿಗೆ ಬಿ.ಪಿ.ಎಲ್ ಕಾರ್ಡ್, ಪಿಂಚಣಿ ಯೋಜನೆಗಳು, ಭಾಗ್ಯಜ್ಯೋತಿ, ಆಶ್ರಯ ಯೋಜನೆ, ಮಡಿಲು, ಭಾಗ್ಯಲಕ್ಷಿ, ಜನನಿ ಸುರಕ್ಷಾ,  ಕಟ್ಟಕಡೆಯದಾಗಿ ಆಕಸ್ಮಿಕವಾಗಿ ಮರಣ ಹೊಂದಿದ ಬಿ.ಪಿ.ಎಲ್ ಕಾರ್ಡುದಾರರ ಪರವಾಗಿ ಮನೆಯವರಿಗೆ ಸಿಗಬಹುದಾದ ಅಂತ್ಯಕ್ರಿಯಾ ಯೋಜನೆಯವರೆಗೂ ಇರುವ ಎಲ್ಲಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳಾಗುತ್ತಾರೆ.

ಮತದಾನದಲ್ಲಿ ಭಾಗಿಗಳಾಗದಿದ್ದರೆ ಅವರು ಮರಣ ಹೊಂದಿದ್ದಾರೆಂದು ಪರಿಗಣಿಸಲಾಗುವುದೆಂದು, ಹಾಗಾದಾಗ ಅವರಿಗೆ ಸರ್ಕಾರದಿಂದ ಯಾವ ಸವಲತ್ತುಗಳೂ ಸಿಗುವುದಿಲ್ಲವೆಂದೂ ಗುಪ್ತ ಪ್ರಚಾರ ಮಾಡಿರುತ್ತಾರೆ. ಗ್ರಾಮಗಳಲ್ಲಿ ಮಂಡಲ ಪಂಚಾಯಿತಿ ಸದಸ್ಯರು, ವಿವಿಧ ಸಮುದಾಯದ ಯಜಮಾನರೂ, ಸರ್ಕಾರಿಯೋಜನೆಗಳನ್ನು ಜನರಿಗೆ ತಲುಪಿಸುವ ಏಜಂಟರಂತೆ ವರ್ತಿಸುವ ಬುದ್ದಿವಂತರೂ ಇರುತ್ತಾರೆ. ಇವರೆಲ್ಲರೂ ಮತದಾರರ ಪಟ್ಟಿ ಹಿಡಿದುಕೊಂಡು ಯಾರು ಮತಗಟ್ಟೆಗೆ ಬಂದರು, ಯಾರು ಬಂದಿಲ್ಲ ಎಂದು ಗಮನಿಸುತ್ತಿರುತ್ತಾರೆಂಬ ಭಯ ಸಹ ಇಲ್ಲಿ ಕೆಲಸ ಮಾಡುತ್ತದೆ.

  ಸರ್ಕಾರ ಗ್ರಾಮೀಣ ಜನರಿಗಾಗಿ ಯೋಜಿಸಿದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ, ಫಲಾನುಭವಿಗಳಿಗೆ ಅದನ್ನು ತಲುಪಿಸುವಲ್ಲಿ ಅಧಿಕಾರಿಗಳ ಪ್ರಾಮಾಣಿಕ ಯತ್ನ ಮತ್ತು ರಾಜಕೀಯ ನಾಯಕರ ಬದ್ಧತೆಯನ್ನು ಹೊಸ ಸರ್ಕಾರ ತನ್ನ ಜವಾಬ್ದಾರಿ ಎಂದು ಪರಿಗಣಿಸ ಬೇಕು.

ವರ್ಷದಿಂದ ವರ್ಷಕ್ಕೆ ಬಿ.ಪಿ.ಎಲ್ ಕಾರ್ಡುದಾರರ ಸಂಖ್ಯೆ ಇಳಿಮುಖವಾಗಿ ಗ್ರಾಮೀಣ ಜನ ಸ್ವಾಭಿಮಾನದಿಂದ ಬದುಕಲು ಸೂಕ್ತ ವಾತಾವರಣ ನಿರ್ಮಾಣವಾದರೆ, ಮಾತ್ರ ದೇಶ ನಿಜವಾದ ಅಭಿವೃದ್ಧಿ ಕಡೆಗೆ ಸಾಗಲು ಸಾಧ್ಯ. ಮುಂದಿನ ಚುನಾವಣೆಗಳಲ್ಲಿ ಗ್ರಾಮೀಣರು ತಾವು ಬದುಕಿರುವುದರ ದಾಖಲೆಗಳಿಗಾಗಿ ಮತದಾನ ಮಾಡುವ ಬದಲು, ಹೆಮ್ಮೆಯಿಂದ ಬದುಕಲು ಸೂಕ್ತ ವಾತಾವರಣ ನಿರ್ಮಾಣ ಮಾಡಿದ್ದಕ್ಕಾಗಿ, ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾಲೂ ಇದೆ ಎನ್ನುವ ಉತ್ಸಾಹದಿಂದ ಮತದಾನ ಮಾಡುವಂತಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT