ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವೊವಾದಿಗಳು, ಸಲ್ವಾಜುಡುಂ ಮತ್ತು ಇರೊಮ್ ಶರ್ಮಿಳಾ....

Last Updated 10 ಜೂನ್ 2013, 19:59 IST
ಅಕ್ಷರ ಗಾತ್ರ

ಇತ್ತೀಚೆಗೆ ಛತ್ತೀಸಗಡದಲ್ಲಿ ನಕ್ಸಲೀಯರು ನಡೆಸಿದ ರಕ್ತಪಾತಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಎಡಬಲಗಳೆಂಬ ಭೇದಗಳಿಲ್ಲದೆ ಸರ್ವಪಕ್ಷಗಳು ಈ ಅಮಾನವೀಯ ಕೃತ್ಯವನ್ನು ಖಂಡಿಸಿವೆ. ಸಹಜವಾಗಿಯೇ ದೆಹಲಿಯ ನಾಯಕರೆಲ್ಲ ರಾಯಪುರಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ನಕ್ಸಲೀಯರಿಂದ ಇಂತಹದ್ದೇ ಪೈಶಾಚಿಕ ಕೃತ್ಯಗಳಾದಾಗಲೂ ನಮ್ಮ ನಾಯಕರಿಂದ ಇಂತಹದ್ದೇ ಕ್ರಿಯೆಗಳು ನಡೆದಿದ್ದವು. ಇಂತಹದ್ದೇ ಹೇಳಿಕೆಗಳು ಉದುರಿದ್ದವು.

ನಕ್ಸಲೀಯರ ಈ ಪೈಶಾಚಿಕ ಕೃತ್ಯವನ್ನು ಕನಿಷ್ಠ ಮನುಷ್ಯತ್ವ ಇರುವವರು ಯಾರೂ ಬೆಂಬಲಿಸಲಾರರು. ಅಮಾಯಕರ ಮೇಲೆ ನಡೆದ ಅಟ್ಟಹಾಸದಿಂದಾಗಿ ನಕ್ಸಲೀಯರ ಬಗ್ಗೆ ಬೇರೆ ಯಾವುದೋ ಕಾರಣಗಳಿಗಾಗಿ ಅನುಕಂಪ ಹೊಂದಿರುವವರೂ ವಿಮುಖರಾಗಿರುವುದು ಸತ್ಯ. ಮಾವೊವಾದಿ ಪಕ್ಷದ  ವಕ್ತಾರರು ಮಾಧ್ಯಮಕ್ಕೆ ಹೇಳಿಕೆ ನೀಡುತ್ತಾ, ಕಾಂಗ್ರೆಸ್ ನಾಯಕರು ಹಾಗೂ ಸಲ್ವಾಜುಡುಂ ಸಂಸ್ಥಾಪಕರನ್ನಷ್ಟೆ ಕೊಲ್ಲುವುದು ಉದ್ದೇಶವಾಗಿತ್ತೆಂದು, ಅಕಸ್ಮಾತಾಗಿ ಅಮಾಯಕರು ಸತ್ತಿದ್ದಾರೆ ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಸಾಮೂಹಿಕ ಹತ್ಯೆಯಲ್ಲ, ಪ್ರಜ್ಞಾಪೂರ್ವಕವಾಗಿಯೇ ನಡೆದ ಸಾಮೂಹಿಕ ಹತ್ಯೆಯಾಗಿರುವುದರಿಂದ ನಕ್ಸಲ್ ವಕ್ತಾರರ ಮಾತನ್ನು ಯಾರೂ ನಂಬುತ್ತಿಲ್ಲ, ನಂಬಬೇಕಾಗಿಯೂ ಇಲ್ಲ.

ಈ ಕೃತ್ಯ ನಡೆದ ದಿನದಿಂದಲೇ ಸಹಜವಾಗಿ ರಾಷ್ಟ್ರೀಯ ಹಾಗೂ ಛತ್ತೀಸಗಡದ ಪೊಲೀಸ್, ಅರೆಸೇನಾ ಪಡೆಗಳು ನಕ್ಸಲೀಯರನ್ನು ಹುಡುಕಿಕೊಂಡು ಅರಣ್ಯಕ್ಕೆ ಧಾವಿಸಿವೆ. ದೆಹಲಿಯಲ್ಲಿ ಕುಳಿತ ರಾಷ್ಟ್ರ ನಾಯಕರು ನಕ್ಸಲೀಯರನ್ನು ಬಗ್ಗುಬಡಿಯುವ ನಾನಾ ರೀತಿಯ ಪರ್ಯಾಯಗಳ ಬಗ್ಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಕಾನೂನು, ಸುವ್ಯವಸ್ಥೆಯ ಸಮಸ್ಯೆ ಎಂದು ಪರಿಗಣಿಸಿದೆಯೇ ಹೊರತು ಇದನ್ನೊಂದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಯಾಗಿ ನೋಡುತ್ತಲೇ ಇಲ್ಲ.

ಮಧ್ಯ ಭಾರತದಲ್ಲಿರುವ ಆದಿವಾಸಿಗಳ ನೆಲೆವೀಡಾದ ಛತ್ತೀಸಗಡ, ಅದರಲ್ಲೂ ಬಸ್ತಾರ್ ಎಂಬ ಸಣ್ಣ ಜಿಲ್ಲೆಯ ಮೇಲೆ ಯಾಕೆ ಇಡೀ ದೇಶದ ಕಣ್ಣು? ಈ ಜಿಲ್ಲೆಯಲ್ಲಿ ಹೇರಳವಾದ ಖನಿಜ ಸಂಪತ್ತಿದೆ, ಇಲ್ಲಿ ಅತ್ಯುತ್ತಮವಾದ ಕಬ್ಬಿಣದ ಅದಿರು, ಡೊಲೋಮೈಟ್, ಬಾಕ್ಸೈಟ್‌ನೊಂದಿಗೆ ವಜ್ರದ ನಿಕ್ಷೇಪಗಳಿವೆ. ಈ ಸಂಪತ್ತಿನ ಮೇಲೆ ಛತ್ತೀಸಗಡ ರಾಜ್ಯಕ್ಕಷ್ಟೇ ಅಲ್ಲ, ಕೇಂದ್ರ ಸರ್ಕಾರದಲ್ಲಿ ಇರುವವರಿಗೂ ಕಣ್ಣಿದೆ. ಈ ಕಾರಣಕ್ಕೆ ಈ ಸರ್ಕಾರಗಳು ಖಾಸಗಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ, ವಿದೇಶಿ ಕಂಪೆನಿಗಳನ್ನು ಕೈಬೀಸಿ ಕರೆಯುತ್ತಿವೆ. ಇಲ್ಲಿನ ಖನಿಜ ಸಂಪತ್ತೇ ಒಂದು ಲೆಕ್ಕಾಚಾರದ ಪ್ರಕಾರ ರೂ 60 ಸಾವಿರ ಕೋಟಿಗಿಂತಲೂ ಅಧಿಕ ಮೌಲ್ಯವನ್ನು ಹೊಂದಿದೆ. ಆದರೆ ಈ ಭೂಮಿ ಆದಿವಾಸಿಗಳದು, ತಲೆತಲಾಂತರಗಳಿಂದಲೂ, ಶತಶತಮಾನಗಳಿಂದಲೂ ಆದಿವಾಸಿಗಳು ಇಲ್ಲಿ ಬದುಕುಳಿದಿದ್ದಾರೆ ಮತ್ತು ಅರಣ್ಯವನ್ನು ಉಳಿಸಿದ್ದಾರೆ.

ಆದಿವಾಸಿಗಳನ್ನು ಇಲ್ಲಿಂದ ಖಾಲಿ ಮಾಡದ ಹೊರತು ಸರ್ಕಾರಗಳು ಇಲ್ಲಿನ ನಿಕ್ಷೇಪವನ್ನು ಮುಟ್ಟುವಂತಿಲ್ಲ. ಈ ನಿಕ್ಷೇಪಗಳಿಗಿಂತಲೂ ಆದಿವಾಸಿಗಳ ಬದುಕು ಮತ್ತು ಸಂಸ್ಕೃತಿಗಳು ಹೆಚ್ಚು ಮೌಲ್ಯವುಳ್ಳದ್ದು ಎಂಬುದು ಹೃದಯಹೀನ ಸರ್ಕಾರಗಳಿಗೆ ಮನವರಿಕೆಯಾಗುವುದು ಕಷ್ಟ.
ಈ ಆದಿವಾಸಿಗಳನ್ನು ರಕ್ಷಿಸಲು ಇಲ್ಲಿ ಮಾವೊವಾದಿಗಳು ನೆಲೆಯೂರಿದ್ದಾರೆ. ಈಗ ಆದಿವಾಸಿಗಳೇ ನಕ್ಸಲೀಯರಾಗಿದ್ದಾರೆ. ಇದು ಕಳೆದ ಮೂವತ್ತು ವರ್ಷಗಳಿಂದ ನಡೆದು ಬಂದ ಪ್ರಕ್ರಿಯೆ. ಮಾವೊವಾದಿಗಳನ್ನು ಬಗ್ಗುಬಡಿಯಲು ಸರ್ಕಾರ, ಸರ್ಕಾರವನ್ನು ಬಗ್ಗುಬಡಿಯಲು ಮಾವೊವಾದಿಗಳು ನಡೆಸುತ್ತಿರುವ ಈ ಮಾರಣಹೋಮದಲ್ಲಿ ಇಲ್ಲಿನ ಆದಿವಾಸಿಗಳು ಜರ್ಜರಿತರಾಗಿದ್ದಾರೆ.

ಮಾವೊವಾದಿಗಳನ್ನು ಹತ್ತಿಕ್ಕಲು ಸರ್ಕಾರವೇ `ಸಲ್ವಾಜುಡುಂ' ಎಂಬ ಪಡೆಯನ್ನು ಹುಟ್ಟುಹಾಕಿದೆ, ಆದಿವಾಸಿಗಳ ಗೊಂಡಿ ಭಾಷೆಯಲ್ಲಿ `ಸಲ್ವಾಜುಡುಂ' ಎಂದರೆ `ತಣ್ಣನೆ ಸಾಮೂಹಿಕ ಬೇಟೆ', ಈ `ಸಲ್ವಾಜುಡುಂ'ನ ಜನಕ ಈಚೆಗೆ ನಕ್ಸಲೀಯರಿಂದ ಹತನಾದ ಮಹೇಂದ್ರ ಕರ್ಮ. ಈತ ಕಾಂಗ್ರೆಸ್ ಮುಖಂಡ, ವಿರೋಧ ಪಕ್ಷದ ನಾಯಕ, ಮಂತ್ರಿ ಏನೇನೋ ಆಗಿದ್ದವರು. ಅವರೊಂದಿಗೆ ಸಲ್ವಾಜುಡುಂಗೆ ಸಹಕರಿಸಿದ್ದವರು ನಂದಕುಮಾರ ಪಾಟೀಲ್ ಎಂಬ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ. ಇವರೊಂದಿಗಿದ್ದವರು ಕೇಂದ್ರ ಮಂತ್ರಿಯಾಗಿದ್ದ ವಿ.ಸಿ.ಶುಕ್ಲ. ಈ ಮೂವರನ್ನು ಕೊಲ್ಲಲು ತೀರ್ಮಾನಿಸಿದ ಮಾವೊವಾದಿಗಳು ಒಟ್ಟಾರೆ ಕೊಂದಿದ್ದು 28 ಮಂದಿಯನ್ನು. ಇವರಲ್ಲಿ ಕನಿಷ್ಠ 20 ಮಂದಿಯಾದರೂ ಅಮಾಯಕರು.

ನಕ್ಸಲೀಯ ಚಟುವಟಿಕೆಯನ್ನು, ಹಿಂಸಾಚಾರವನ್ನು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಎನ್ನುವುದೇನೋ ಸರಿ. ಆದರೆ ಒಂದು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವೇ ನಕ್ಸಲೀಯ ಚಟುವಟಿಕೆಯಂತೆಯೇ `ಸಲ್ವಾಜುಡುಂ' ಎಂಬ ಖಾಸಗಿ ಸೈನ್ಯವನ್ನು ಕಟ್ಟಿ ಮುಗ್ಧ ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸುವುದನ್ನು ಏನೆಂದು ಕರೆಯಬೇಕು? ಈ ರೀತಿಯ ಸೈನ್ಯ ಕಟ್ಟುವಿಕೆ ಪ್ರಜಾಪ್ರಭುತ್ವದ, ಸಂವಿಧಾನದ ಚೌಕಟ್ಟಿನಡಿ ಬರುತ್ತದೆಯೆ? ಸಂವಿಧಾನದ ಯಾವ ಪರಿಚ್ಛೇದಗಳಲ್ಲಿ ಈ ರೀತಿಯ ಖಾಸಗಿ ಸೇನೆ ಕಟ್ಟಲು ಅವಕಾಶವಿದೆ? ನಕ್ಸಲೀಯರ ವಿರುದ್ಧ ಬಡ, ಅಸಹಾಯಕ ಆದಿವಾಸಿಗಳನ್ನೇ ಕಲೆಹಾಕಿ ಅವರ ಕೈಗೆ ಬಂದೂಕು, ಮದ್ದುಗುಂಡುಗಳನ್ನು ನೀಡಿ ಅವರಿಗೆ ಸಂಬಳ ನೀಡಿ, ತರಬೇತಿ ನೀಡಿದ ಪರಿಣಾಮ ಇಂದು ಈ `ಸಲ್ವಾಜುಡುಂ'ನ ಸೇನಾನಿಗಳು ಆದಿವಾಸಿಗಳ ತಲೆ ಕತ್ತರಿಸುತ್ತಿದ್ದಾರೆ, ಮಾನಭಂಗ ಮಾಡುತ್ತಿದ್ದಾರೆ, ಆದಿವಾಸಿಗಳ ಗುಡಿಸಲುಗಳಿಗೆ ಬೆಂಕಿ ಇಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ ಸಲ್ವಾಜುಡುಂ ಮತ್ತು ನಕ್ಸಲೀಯರ ನಡುವೆ ಜರ್ಜರಿತವಾದ ಸುಮಾರು 1.50 ಲಕ್ಷ ಆದಿವಾಸಿಗಳು ದಾಂತೆವಾಡ ಜಿಲ್ಲೆಯಲ್ಲಿ ರಸ್ತೆ ಬದಿ ಬಂದು ನೆಲೆಸಿದ್ದಾರೆ, ಅವರು ದನಕರುಗಳನ್ನು, ಮನೆಮಠಗಳನ್ನು, ಸೋದರ ಸಂಬಂಧಗಳನ್ನು ತಾವು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅರಣ್ಯವನ್ನು ಬಿಟ್ಟು ನಗರಗಳ ಕಡೆ ವಲಸೆ ಹೋಗಿ ಭಿಕ್ಷುಕರಾಗುತ್ತಿದ್ದಾರೆ. ಹೆಣ್ಣುಮಕ್ಕಳು ಮೈಮಾರಿಕೊಂಡು ಜೀವನ ನಡೆಸುತ್ತಿದ್ದಾರೆ.

ಇದು ಬಡವರ ಮತ್ತು ಶ್ರಿಮಂತರ ನಡುವಿನ ಹೋರಾಟ, ಇಲ್ಲಿ ಬಡವರನ್ನು ಎತ್ತಿಕಟ್ಟುವ ಶ್ರಿಮಂತರು ಬಡವರ ಕೈಗೆ ಕೋವಿ ಕೊಟ್ಟು ಬಡವರ ವಿರುದ್ಧವೇ ಬಡವರನ್ನು ಹೋರಾಟ ಮಾಡಲು ಸಜ್ಜುಗೊಳಿಸುತ್ತಾರೆ. ಇದಕ್ಕೆ ಸರ್ಕಾರದ ಸಮ್ಮತಿ ಇರುತ್ತದೆ. ಇದನ್ನೇ ಸಲ್ವಾಜುಡುಂ ಎನ್ನಲಾಗುತ್ತದೆ.

ಖ್ಯಾತ ಲೇಖಕ ಮತ್ತು ಚಿಂತಕ ರಾಮಚಂದ್ರ ಗುಹಾ ಮತ್ತವರ ಮಿತ್ರರು ಈ `ಸರ್ಕಾರಿ ನಕ್ಸಲಿಸಂ' ಎಂಬ ಸಲ್ವಾಜುಡುಂ ವಿರುದ್ಧ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಕೂಡ ಈ ರೀತಿಯ `ಸರ್ಕಾರಿ ನಕ್ಸಲಿಸಂ' ನಿಷೇಧಿಸುವ ಬಗ್ಗೆ ಸ್ಪಷ್ಟ ತೀರ್ಪು ನೀಡಿದೆ. ಆದರೆ ಛತ್ತೀಸಗಡ ಸರ್ಕಾರ `ಸಲ್ವಾಜುಡುಂ'ಗೆ ಬೇರೆ ಹೆಸರು ನೀಡಿ ಮುಂದುವರೆಸುತ್ತಿರುವ ಬಗ್ಗೆ ವರದಿಗಳಿವೆ. `ಸಲ್ವಾಜುಡುಂ'ನಿಂದಾಗಿ ಅಮಾಯಕ ಆದಿವಾಸಿಗಳು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಗುಹಾ ಅವರು ಮಹೇಂದ್ರ ಕರ್ಮ ಅವರನ್ನು ಭೇಟಿಯಾಗಿದ್ದಾಗ,  ಕರ್ಮ ಹೇಳಿದ್ದ ಮಾತುಗಳನ್ನೇ  ಈಗಿನ ನಕ್ಸಲೀಯ ವಕ್ತಾರರೂ ಹೇಳುತ್ತಿರುವುದು ಕಾಕತಾಳೀಯ. ಅಮಾಯಕರ ಪ್ರಾಣ ಹಾನಿಯಂತಹ ಘೋರಕೃತ್ಯವನ್ನು ನಕ್ಸಲೀಯರು ಸಮರ್ಥಿಸಿಕೊಳ್ಳುವುದು ಹೀಗೆ:  `ಒಂದು ದೊಡ್ಡ ಹೋರಾಟದಲ್ಲಿ ಇಂತಹ ಸಣ್ಣಪುಟ್ಟದ್ದೆಲ್ಲ ನಡೆಯುವುದು ಸಹಜ'. 

ನಕ್ಸಲೀಯ ಚಟುವಟಿಕೆಯನ್ನು ಹತ್ತಿಕ್ಕಲು ಸರ್ಕಾರ ಇನ್ನೊಂದು ಸರ್ಕಾರಿ ನಕ್ಸಲೀಯರ ಪಡೆಯನ್ನು ಸೃಷ್ಟಿಸುವುದು ಎಷ್ಟು ಸರಿ? ವಾಸ್ತವವಾಗಿ ನಕ್ಸಲೀಯರ ಅಡಗು ತಾಣಗಳನ್ನು ಗುರುತಿಸಿ ನಕ್ಸಲೀಯ ನಾಯಕರನ್ನು ಆದಿವಾಸಿಗಳಿಂದ ಬೇರ್ಪಡಿಸುವುದು ಮುಖ್ಯ. ಅಂತೆಯೇ ಸಂವಿಧಾನದತ್ತವಾದ ಮೂಲಭೂತ ಸೌಕರ್ಯಗಳನ್ನು ಆದಿವಾಸಿಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಆದ್ಯತೆಯಾಗಬೇಕು. ಅವರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಸಿಗುವಂತೆ ಮಾಡಬೇಕು. ಇದರೊಂದಿಗೆ ಆದಿವಾಸಿಗಳ ಭೂಮಿಯನ್ನು ಗಣಿಮಾಫಿಯಾದಿಂದ ಉಳಿಸಿಕೊಡುವ ನಂಬಲರ್ಹ ಭರವಸೆಗಳನ್ನು ಮೂಡಿಸಬೇಕು.

ಮಾತೆತ್ತಿದರೆ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮಾನವಹಕ್ಕುಗಳ ಬಗ್ಗೆ ಮಾತನಾಡುವ ಸರ್ಕಾರಗಳು, ಪ್ರಜಾಪ್ರಭುತ್ವದ ಚೌಕಟ್ಟಿನಡಿಯಲ್ಲಿ ಮಾನವ ಹಕ್ಕುಗಳ ದಮನದ ವಿರುದ್ಧ ಹೋರಾಟ ಮಾಡಿದಾಗ ಅದೆಷ್ಟು ಸ್ಪಂದಿಸಿವೆ? ನಕಾರಾತ್ಮಕ ಉತ್ತರಕ್ಕೆ ಲಕ್ಷಾಂತರ ಉದಾಹರಣೆಗಳನ್ನು ನೀಡಬಹುದು. ಸದ್ಯಕ್ಕೆ  ನಮ್ಮ ಮುಂದಿರುವ ಜೀವಂತ ಉದಾಹರಣೆ ಇರೊಮ್ ಶರ್ಮಿಳಾ ಎಂಬ ಮಣಿಪುರದ ಹೆಣ್ಣುಮಗಳ ಉಪವಾಸ ಸತ್ಯಾಗ್ರಹ.

ಇರೊಮ್ ಶರ್ಮಿಳಾ ಚಾನು ನಮ್ಮ ನಿಮ್ಮ ಮನೆಗಳಲ್ಲಿ ಇರಬಹುದಾದ ಮಣಿಪುರದ ಒಬ್ಬ ಸಾಧಾರಣ ಹೆಣ್ಣು ಮಗಳು. ಕೇಂದ್ರ ಸರ್ಕಾರವು ಅಂತಹ ಅಗತ್ಯ ಇಲ್ಲದಾಗಲೂ ಮಣಿಪುರವನ್ನು ಗಲಭೆಗ್ರಸ್ತ ಪ್ರದೇಶವೆಂದು ತೀರ್ಮಾನಿಸಿ ಅಲ್ಲಿ  ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು 1985ರಲ್ಲಿ ಜಾರಿಗೊಳಿಸಿತು. ಈ ಕಾಯ್ದೆಯ ಪ್ರಕಾರ ಯಾರನ್ನು ಬೇಕಾದರೂ ನಡುರಾತ್ರಿಯಲ್ಲಾದರೂ ಬಂಧಿಸಬಹುದು. ಈ ಅಮಾನವೀಯ ಕಾಯ್ದೆಯನ್ನು ರದ್ದುಪಡಿಸಬೇಕೆಂದು 2000ರ ನವೆಂಬರ್ ತಿಂಗಳಿಂದ ಉಪವಾಸದ ದೀಕ್ಷೆ ತೊಟ್ಟಳು ಶರ್ಮಿಳಾ. ಇಂದಿಗೂ ಈಕೆ ಆಹಾರವನ್ನು ಸ್ವೀಕರಿಸಿಲ್ಲ. ಕಳೆದ ಹನ್ನೆರಡು ವರ್ಷಗಳಿಂದಲೂ ಈ ಉಪವಾಸ ಮುಂದುವರೆದಿದೆ. ಈಕೆಗೆ ಮೂಗಿನ ಮೂಲಕ ಬಲವಂತವಾಗಿ ಆಹಾರ ನೀಡಲಾಗುತ್ತಿದೆ.

ಇರೊಮ್ ಶರ್ಮಿಳಾ ಪ್ರಜಾಪ್ರಭುತ್ವದ, ಸಂವಿಧಾನದ ಚೌಕಟ್ಟಿನಲ್ಲಿ ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಳೆ. ಆದರೂ ಈಕೆಯ ಪರ ಯಾವ ಸರ್ಕಾರವೂ ಮಾತನಾಡುತ್ತಿಲ್ಲ.

ಒಬ್ಬ ಬಂದೂಕು ಹಿಡಿದು ಕಾಡಿಗೆ ಹೋದರೆ ಆತನ ಹಿಂದೆ ಇಡೀ ಸರ್ಕಾರದ ಪೊಲೀಸ್, ಸೈನ್ಯವೇ ನುಗ್ಗುತ್ತದೆ. `ಈ ಹೋರಾಟ ಪ್ರಜಾಪ್ರಭುತ್ವ ವಿರೋಧಿ' ಎಂದು ಅಬ್ಬರಿಸುತ್ತದೆ. ಆದರೆ ಒಬ್ಬ ಹೆಣ್ಣುಮಗಳು 12 ವರ್ಷಗಳಿಂದಲೂ ಮಾನವ ಹಕ್ಕುಗಳಿಗಾಗಿ ನಿರಾಹಾರ ದೀಕ್ಷೆ ಕೈಗೊಂಡು ಶಾಂತ ರೀತಿಯಿಂದ ಪ್ರತಿಭಟಿಸಿದರೆ ಯಾವ ಸರ್ಕಾರವೂ ಅತ್ತ ತಿರುಗಿಯೂ ನೋಡಲ್ಲ! ಪ್ರಜಾಪ್ರಭುತ್ವ, ಸಂವಿಧಾನ, ಮಾನವ ಹಕ್ಕುಗಳಿಗೆ ಸಂದ ಗೌರವವಿದು!
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT