ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿಳಿಯುವ ಅನಾಥ ಮಕ್ಕಳ ಜವಾಬ್ದಾರಿ ರೈಲ್ವೆ ಇಲಾಖೆಯದ್ದು

Last Updated 5 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದೆ ಗುಲ್ಬರ್ಗಾದ ವಾಡಿ ರೈಲು ನಿಲ್ದಾಣದಲ್ಲಿ ಸಂಗಡಿಗರೊಬ್ಬರೊಡನೆ ರಾತ್ರಿ ರೈಲಿಗೆ ಕಾಯುತ್ತಿದ್ದೆ. ಸುತ್ತಮುತ್ತ ಇದ್ದ ಪ್ರಯಾಣಿಕರ ನಡುವೆ ಒಂಟಿ ಬಾಲಕಿಯೊಬ್ಬಳನ್ನು ಗಮನಿಸಿದೆ. ಅವಳ ಚಡಪಡಿಕೆಯಿಂದ ಸ್ಪಷ್ಟವಾದದ್ದು ಆಕೆಗೆ ಸಹಾಯ ಬೇಕಿದೆ. ರೈಲು ನಿಲ್ದಾಣದ ಪೊಲೀಸರಿಗೆ ಹೇಳಿದೆ.

ರೈಲ್ವೆ ಅಧಿಕಾರಿಗಳಿಗೆ ತಿಳಿಸಿದೆ. ಒಂದೇ ಉತ್ತರ,  `ನಮಗ್ಯಾಕೆ ಸರ್? ಮೊದಲೇ ಹುಡುಗಿ. ನಮ್ಮಲ್ಲಿ ಲೇಡಿ ಪೊಲೀಸರಿಲ್ಲ.' ಅಂತೂ ಇಂತೂ ಹತ್ತಿರದ ಚರ್ಚ್ ಒಂದರಲ್ಲಿ ಆ ಹುಡುಗಿಯನ್ನು ಇರಿಸುವಷ್ಟರಲ್ಲಿ ಸಾಕುಬೇಕಾಯಿತು. ಇನ್ನೊಮ್ಮೆ ಮುಂಬೈನಿಂದ ರೈಲಿನಲ್ಲಿ ಬರುತ್ತಿದ್ದಾಗ ಭಿಕ್ಷುಕನೊಬ್ಬನೊಡನಿದ್ದ ಮಗುವೊಂದನ್ನು ಮಾತನಾಡಿಸಿದೆ.

ಆಗ ಅರಿವಾದದ್ದು ಮಗು ಭಿಕ್ಷುಕನ ಬಂಧನದಲ್ಲಿದೆಯೆಂದು. ದೂರು ನೀಡಿ ರಾಯಚೂರಿನ ರೈಲ್ವೆ ಪೊಲೀಸರನ್ನು ಕರೆಸಿ, ಭಿಕ್ಷುಕ ಮತ್ತು ಮಗುವನ್ನು ಅವರ ವಶಕ್ಕೆ ಬಹಳ ಕಷ್ಟಪಟ್ಟು ನೀಡಲಾಯಿತು.  

ರೈಲ್ವೆ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಬರುವ ಒಂಟಿ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎನ್ನುವುದು ಸರ್ವವಿದಿತ. ರೈಲುಗಳಲ್ಲಿ ಅಥವಾ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುವ, ಸಣ್ಣಪುಟ್ಟ ಕೆಲಸಗಳನ್ನು ಮಾಡುವ, ಕಸ ಆರಿಸುವ ಮಕ್ಕಳನ್ನು ಭಾರತದ ಉದ್ದಗಲಕ್ಕೂ ಕಾಣಬಹುದು. ಇಂತಹ ಮಕ್ಕಳಲ್ಲಿ ಬಹುತೇಕರು ಅನಾಥರಲ್ಲ.

ಅವರ ಕುಟುಂಬಗಳು ತಮ್ಮ ಮಕ್ಕಳು ಹಿಂದಿರುಗಲಿ ಎಂದು ಆಶಿಸುತ್ತಿರುತ್ತಾರೆ. ಮಕ್ಕಳು ಕಾಣೆಯಾದ ಬಗ್ಗೆ ಪೊಲೀಸರಲ್ಲಿ ದೂರನ್ನೂ ನೀಡಿರಬಹುದು. ಭಾರತದ ಉದ್ದಗಲಕ್ಕೂ ಹರಡಿರುವ ರೈಲುನಿಲ್ದಾಣಗಳಲ್ಲಿ ಆಯ್ದ ಕೆಲವೆಡೆ ಕೆಲಸ ಮಾಡುತ್ತಿರುವ `ಸಾಥಿ'ಯಂತಹ ಸ್ವಯಂಸೇವಾ ಸಂಘಟನೆಗಳು ಒಂಟಿ ಮಕ್ಕಳ ಯೋಗಕ್ಷೇಮ ಕೇಳಿ, ಅವರನ್ನು ನೇರವಾಗಿ ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳ ಮೂಲಕ ಅವರವರ ಮನೆಗಳಿಗೆ ಮರಳಿ ಸೇರಿಸುವ ಕೆಲಸ ಮಾಡುತ್ತಿದ್ದಾರೆ.

ಒಂದು ಅಂದಾಜಿನಂತೆ ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಪ್ರತಿ ದಿನ ಸುಮಾರು ಎಂಟರಿಂದ ಇಪ್ಪತ್ತನಾಲ್ಕು ಒಂಟಿ ಮಕ್ಕಳು ಬಂದಿಳಿದು ಎತ್ತ ಹೋಗುವುದು ಎಂದು ತಿಳಿಯದೆ ನಿಲ್ಲುತ್ತಾರೆ. ಇಂತಹ ಮಕ್ಕಳನ್ನು ಆದಷ್ಟು ಬೇಗ ಗುರುತಿಸಿ ಸಹಾಯ ಮಾಡದಿದ್ದರೆ ಅವರು ವಿವಿಧ ರೀತಿಯ ಶೋಷಣೆಗಳಿಗೆ ಬಲಿಯಾಗುತ್ತಾರೆ.

ರೈಲು ನಿಲ್ದಾಣಗಳಲ್ಲೇ ಇದ್ದು ಬಲಿತುಕೊಂಡಿರುವ ಇತರ ಹುಡುಗರ ಗುಂಪಿಗೆ ಸೇರಿ ಕಸ ಆರಿಸುವ, ಭಿಕ್ಷೆ ಬೇಡುವ, ಮಾದಕ ವಸ್ತುಗಳ ದಾಸರಾಗುವ, ಚಿಕ್ಕಪುಟ್ಟ ಕಳ್ಳತನಗಳಿಗೆ ಸೇರುವ ಸಾಧ್ಯತೆ ಒಂದು. ಇನ್ನೊಂದು, ಇಂತಹ ಮಕ್ಕಳ ಮೇಲೆ ಕಣ್ಣಿಟ್ಟು ಹೇಗೋ ಪುಸಲಾಯಿಸಿ ಹೊರಗೆ ತಂದು ಕೆಲಸಕ್ಕೆ ಹಾಕುವ, ಮಾರಿಬಿಡುವ ದಂಧೆಗಾರರ ಕೈಗೆ ಬೀಳುತ್ತಾರೆ.

ಮತ್ತೆ ತಮ್ಮ ಮನೆಗೆ, ಕುಟುಂಬಕ್ಕೆ ಹೋಗುವ, ಶಿಕ್ಷಣ ಮುಂದುವರೆಸುವ ಸಾಧ್ಯತೆಗಳು ಈ ಮಕ್ಕಳಿಗೆ ಮುಗಿದಂತೆಯೇ. ಇವುಗಳಿಗೆಲ್ಲಾ ರೈಲ್ವೆ ಇಲಾಖೆ ಕಣ್ಣುಮುಚ್ಚಿರುವುದರಿಂದ ದಾರಿ ತಪ್ಪುವ ನೂರಾರು ಸಾವಿರಾರು ಮಕ್ಕಳ ಭವಿಷ್ಯ ಮುರುಟಿ ಹೋಗುತ್ತಿದೆ.  
ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2000/2006 ಇಂತಹ ಮಕ್ಕಳನ್ನೇ,  ಪೋಷಣೆ ಮತ್ತು ರಕ್ಷಣೆಯ ಆವಶ್ಯಕತೆ ಇರುವ ಮಕ್ಕಳು  ಎಂದು ಗುರುತಿಸಿ ವಿವಿಧ ರೀತಿಯ ರಕ್ಷಣಾತ್ಮಕ ಕ್ರಮಗಳನ್ನು ಸೂಚಿಸಿದೆ.

ಇಂತಹ ಮಕ್ಕಳನ್ನು ಪೊಲೀಸರೂ ಒಳಗೊಂಡು ಯಾರು ಬೇಕಾದರೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕೆಂದೂ, ಮಕ್ಕಳನ್ನು ಅವರವರ ಕುಟುಂಬಕ್ಕೆ ಸೇರಿಸುವುದೇ ಕಾಯಿದೆಯ ಮುಖ್ಯ ಧ್ಯೇಯವೆಂದೂ ಘೋಷಿಸಲಾಗಿದೆ.

ಆದರೆ, ರೈಲುಗಳಲ್ಲಿ ಅಡ್ಡಾಡುವ ಮತ್ತು ನಿಲ್ದಾಣಗಳಲ್ಲಿ ಕಾಣುವ  ಒಂಟಿ ಮಕ್ಕಳನ್ನು ರೈಲ್ವೆ ಪೊಲೀಸರು ಮತ್ತು ಅಧಿಕಾರಿಗಳು ಯಾಕೆ ಗಮನಿಸುವುದಿಲ್ಲ? ಇಂತಹ ಮಕ್ಕಳು ಕಂಡರೆ, ಟಿಕೆಟ್ ಇಲ್ಲವೆಂದು ಇಳಿಸಿ ಓಡಿಸುತ್ತಾರೆ. ಕೆಲವೊಮ್ಮೆ ಇಂತಹ ಮಕ್ಕಳು ಕಳ್ಳತನದಲ್ಲೋ, ಹೊಡೆದಾಟದಲ್ಲೋ ತೊಡಗಿದರೆ, ಇಲ್ಲವೇ ಅವರ ಮೇಲೆ ಅನುಮಾನ ಬಂದರೆ ಮಾತ್ರ ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಾರೆ.

ನಿಲ್ದಾಣದಲ್ಲಿದ್ದಾಗ ಅಥವಾ ರೈಲಿನಲ್ಲಿ ಓಡಾಡುತ್ತಿದ್ದಾಗ ಮಕ್ಕಳಿಗೇನಾದರೂ ತೊಂದರೆ, ಅಪಾಯ ಆದಲ್ಲಿ ಇಲಾಖೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಖುಶ್ಬೂ ಜೈನ್ ಎಂಬ ಸಾಮಾಜಿಕ ಕಾರ್ಯಕರ್ತೆ  ದೆಹಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ, ರೈಲ್ವೆ ಪೊಲೀಸರು ಮತ್ತು ರೈಲ್ವೆ ಇಲಾಖೆಗೆ ನ್ಯಾಯಾಲಯ ಸೂಕ್ತ ನಿರ್ದೇಶನಗಳನ್ನು ನೀಡಲು ಆಗ್ರಹಿಸಿದ್ದರು.

ಕಳೆದ ತಿಂಗಳು ಫೆಬ್ರವರಿ 13ರಂದು ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ.ಕೆ. ಜೈನ್ ತೀರ್ಪು ಹೊರಡಿಸಿ, ಬಹಳ ಪ್ರಮುಖವಾಗಿ ರೈಲ್ವೆ ಪೊಲಿಸರು ಮತ್ತು ರೈಲ್ವೆ ಇಲಾಖೆಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದಾರೆ.

1.ಯಾವುದೇ ರೈಲ್ವೆ ನಿಲ್ದಾಣದಲ್ಲಿ ಒಂಟಿ/ ಅನಾಥ ಮಕ್ಕಳು ಕಂಡಲ್ಲಿ, ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮಕ್ಕಳ ಪೂರ್ವಾಪರ ವಿಚಾರಿಸಿ ತಕ್ಷಣವೇ ನಿಲ್ದಾಣದಲ್ಲಿನ ಧ್ವನಿವರ್ಧಕದಲ್ಲಿ ಘೋಷಿಸಬೇಕು; ಸ್ಥಳೀಯ ಮತ್ತು ಮಕ್ಕಳ ಮೂಲಸ್ಥಳದ ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು ಮತ್ತು ಮಕ್ಕಳ ಪೋಷಕರ ಪತ್ತೆಗೆ ನೆರವಾಗಬೇಕು (ಇದು ಕೇವಲ ಮನೆ ಬಿಟ್ಟು ಬರುವ ಮಕ್ಕಳಿಗಷ್ಟೇ ಸೀಮಿತವಾಗದೆ, ಬಲವಂತದಿಂದ ಹೊರಡಿಸಿಕೊಂಡು, ಕದ್ದುಕೊಂಡು ಬಂದ ಅಥವಾ ಮಾರಾಟ, ಸಾಗಣೆಗೆ ಈಡಾಗಿರಬಹುದಾದ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಅನ್ವಯಿಸುತ್ತದೆ);

2.ರೈಲು ನಿಲ್ದಾಣದಲ್ಲಿ ಪತ್ತೆಯಾದ ಮಕ್ಕಳ ಛಾಯಾಚಿತ್ರ ತೆಗೆದುಕೊಂಡು ಹೆಸರು, ವಯಸ್ಸು, ವಿಳಾಸ, ಮಗುವಿನ ಬಳಿ ಇದ್ದ ಹಣ/ವಸ್ತುಗಳ ಕುರಿತು ನಿರ್ದಿಷ್ಟವಾದ ರೀತಿಯಲ್ಲಿ ದಾಖಲೆಯಾಗಬೇಕು ಮತ್ತು ಹೆಣ್ಣುಮಗುವಾಗಿದ್ದಲ್ಲಿ ಮಹಿಳಾ ಪೊಲೀಸ್ ವಶದಲ್ಲಿ ಪ್ರತ್ಯೇಕವಾಗಿರಿಸಬೇಕು, ಇದಕ್ಕೆ ನಿಲ್ದಾಣದ ಅಧಿಕಾರಿ ವ್ಯವಸ್ಥೆ ಮಾಡಬೇಕು;

3.ಮಕ್ಕಳ ನ್ಯಾಯ ಕಾಯಿದೆಯಂತೆ ಮಕ್ಕಳು ಪತ್ತೆಯಾದ 24 ಗಂಟೆಯೊಳಗೆ ರೈಲ್ವೆ ರಕ್ಷಣಾ ಘಟಕ ಅಥವಾ ರೈಲ್ವೆ ಇಲಾಖೆಯ ಸಿಬ್ಬಂದಿ ಅವರನ್ನು ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರುಪಡಿಸಬೇಕು, ಅಲ್ಲಿಯವರೆಗೆ ಮಗುವಿಗೆ ರೈಲ್ವೆ ಪೊಲೀಸರು ಅಥವಾ ರೈಲ್ವೆ ಇಲಾಖೆಯ ಅಧಿಕಾರಿಗಳ ಸುಪರ್ದಿಯಲ್ಲಿ ಆಹಾರ ನೀಡಿ ಸುರಕ್ಷಿತವಾಗಿರಿಸಬೇಕು;

4.ಮಾಹಿತಿ ಪಡೆದು ರೈಲು ನಿಲ್ದಾಣಕ್ಕೆ ಬರುವ ಮಕ್ಕಳ ಪೋಷಕರಿಗೆ ನೆರವಾಗಲು ಪ್ರತಿ ರೈಲು ನಿಲ್ದಾಣದಲ್ಲಿ ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಮಕ್ಕಳ ಮಾಹಿತಿ ಇರುವ ದಾಖಲೆಯನ್ನು ತೋರಿಸಬೇಕು;

5.ಈ ಎಲ್ಲ ಮಾಹಿತಿ ಮತ್ತು ಮಕ್ಕಳ ಛಾಯಾಚಿತ್ರವನ್ನು ರೈಲ್ವೆ ಇಲಾಖೆಯ ಅಂತರ್ಜಾಲದಲ್ಲಿ ಹುಡುಕಲು ಅನುಕೂಲಕರವಾದ ರೀತಿಯಲ್ಲಿ ಪ್ರದರ್ಶಿಸಬೇಕು ಮತ್ತು ಈ ಮಾಹಿತಿಯನ್ನು ಪ್ರಮುಖ ಪತ್ರಿಕೆಗಳಲ್ಲಿ ನೀಡಬೇಕು.

ಈ ತೀರ್ಪು ದೆಹಲಿಯ ನ್ಯಾಯಾಲಯದ್ದಾಗಿದ್ದರೂ, ಅದರ ಪರಿಣಾಮ ದೇಶದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿರುವ ಪೊಲೀಸರು ಮತ್ತು ಇಡೀ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿದೆ. ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಡನೆ ಈಗ ಚಾಲ್ತಿಯಲ್ಲಿರುವ ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐ.ಸಿ.ಪಿ.ಎಸ್)ಯ ಜಿಲ್ಲಾ ಘಟಕಗಳು, ಚೈಲ್ಡ್‌ಲೈನ್-1098 ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ದೆಹಲಿಯ ತೀರ್ಪನ್ನು ಗಮನಕ್ಕೆ ತೆಗೆದುಕೊಂಡು ಮಕ್ಕಳ ರಕ್ಷಣಾ ಕಾರ್ಯಕ್ಕೆ ಈ ಪ್ರಬಲ ಆಯಾಮವನ್ನು ಸೇರಿಸಬೇಕು.

ಎಲ್ಲ ರೈಲ್ವೆ ನಿಲ್ದಾಣಗಳ ಸಿಬ್ಬಂದಿ, ರೈಲ್ವೆ ಪೊಲೀಸರು, ನಿಲ್ದಾಣಗಳಲ್ಲಿರುವ ಕೂಲಿಕಾರ್ಮಿಕರು, ಅಂಗಡಿಗಳನ್ನಿಟ್ಟುಕೊಂಡಿರುವವರು, ಕಾಫಿ/ಟೀ ತಿಂಡಿ ಮಾರುವವರು ಎಲ್ಲರಿಗೂ ಮಕ್ಕಳ ರಕ್ಷಣಾ ನೀತಿ, ಮಕ್ಕಳ ಹಕ್ಕುಗಳ ಕುರಿತು ಕಾಳಜಿ ವಹಿಸುವ ಕುರಿತು ತರಬೇತಿಗಳನ್ನು ಮಾಡಬೇಕಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಮುಂದಾಗಿ ಈ ಕುರಿತು ಯೋಜಿಸಬೇಕಿದೆ.

ಇವುಗಳಿಗೆ ಬೇಕಿರುವ ಹಣಕಾಸಿನ ವ್ಯವಸ್ಥೆಯನ್ನು ಐ.ಸಿ.ಪಿ.ಎಸ್ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಮಾಡಬೇಕು (ದೆಹಲಿ ನ್ಯಾಯಾಲಯದ ತೀರ್ಪು ನೋಡಿ ರೈಲ್ವೆ ಇಲಾಖೆಯ ಆಯವ್ಯಯದಲ್ಲಿ ಇದಕ್ಕಾಗಿ ಹಣ ಮೀಸಲಿರುತ್ತದೇನೋ ಎಂದು ಭಾವಿಸಿದ್ದೆ. ಇಲ್ಲ!).

ಒಟ್ಟಿನಲ್ಲಿ, ದೆಹಲಿ ನ್ಯಾಯಾಲಯದ ಈ ತೀರ್ಪಿನಿಂದ ಕಾಣೆಯಾದ, ತಪ್ಪಿಸಿಕೊಂಡ ಓಡಿ ಹೋದ ಅಥವಾ ಸಾಗಣೆ ಮಾರಾಟಕ್ಕೀಡಾದ ಮಕ್ಕಳನ್ನು ಆದಷ್ಟೂ ಬೇಗನೆ ಪತ್ತೆ ಮಾಡಿ ಆಪ್ತ ಸಮಾಲೋಚನೆ ಸಹಾಯ ನೀಡಿ ಪೋಷಕರ ಬಳಿ ಸೇರಿಸುವ ಕೆಲಸಕ್ಕೆ ಬೆಂಬಲ ಮತ್ತು ಮಕ್ಕಳ ಹಕ್ಕುಗಳಿಗೆ ಮನ್ನಣೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT