ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಕಾರವೂ ಸಮಾನತೆಯೂ...

Last Updated 22 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಅನಾದಿ ಕಾಲದಿಂದಲೂ, ನಮ್ಮ ಸಮಾಜದಲ್ಲಿ (ಸಂಸ್ಕೃತಿ, ಸಾಹಿತ್ಯ ಇತ್ಯಾದಿ­ಗಳನ್ನು ಒಳಗೊಂಡು) ತ್ಯಾಗ, ಬಲಿದಾನ ಮತ್ತು ಲೋಕೋಪಕಾರ ಶ್ಲಾಘನೆಗೆ ಒಳ­ಗಾಗಿವೆ. ಇಂತಹ ಕಾರ್ಯಗಳನ್ನು ಮಾಡುವ ವ್ಯಕ್ತಿ, ಸಂಸ್ಥೆ, ಸಂಘಗಳನ್ನು ಆದರದಿಂದಕಾಣ­ಲಾ­ಗುತ್ತದೆ. ಇಂತಹ ವ್ಯಕ್ತಿಗಳಿಗೆ/ಸಂಸ್ಥೆ­ಗಳಿಗೆ ಜನಪ್ರಿಯತೆ ಲಭ್ಯವಾಗುತ್ತದೆ.

ಆದರೆ ದಾನ­ಧರ್ಮದ ವಿಷಯದಲ್ಲೂ ಏರುಪೇರು­ಗಳಿರು­ತ್ತವೆ; ವಿಭಜನೆಗಳಿರುತ್ತವೆ. ಪೂಜಾ ಮಂದಿರಗಳು, ಮಠಗಳು ಮತ್ತು ದೇವ­ಮಾನವರು(?) ನಡೆಸುವ ಆಶ್ರಮಗಳಿಗೆ ಶ್ರೀಮಂತ­ರಿಂದ ಹಣದ ಹೊಳೆಯೇ ಹರಿ­­­ಯುತ್ತದೆ. ಈ ವಿಷಯದಲ್ಲಿ ಅನೇಕ ಸಂಸ್ಥೆಗಳೂ ಹಿಂದೆ ಬಿದ್ದಿಲ್ಲ.

ಒಂದು ಅಂದಾಜಿನ ಪ್ರಕಾರ, ತಿರುಮಲದ ವೆಂಕಟೇಶ್ವರನ ದೇಗುಲಕ್ಕೆ ನಿತ್ಯ ಸುಮಾರು 50,000ರಿಂದ 1 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಅದರ ವಾರ್ಷಿಕ ಆದಾಯ ಸುಮಾರು 2,100 ಕೋಟಿ ರೂಪಾಯಿಗಳು, 2011 ರ, ಫೆಬ್ರವರಿ ತಿಂಗಳೊಂದರಲ್ಲಿಯೇ  ಅದಕ್ಕೆ ಭಕ್ತರಿಂದ ಸುಮಾರು 1,175 ಕೆ.ಜಿ. ಚಿನ್ನ  ಕಾಣಿಕೆಯ ರೂಪದಲ್ಲಿ
ಸಂದಾಯ­ವಾಯಿತು. ಇದರಲ್ಲಿ, ವಾಣಿಜ್ಯೋದ್ಯಮಿ ವಿಜಯ್ ಮಲ್ಯ ತಮ್ಮ 57ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನೀಡಿದ 3 ಕೆ.ಜಿ. ಚಿನ್ನ ಸೇರ್ಪಡೆಯಾಗಿಲ್ಲ! ಇದು ಒಂದು ದೇಗುಲದ ವಿಷಯ. ರಾಷ್ಟ್ರದಲ್ಲಿರುವ ಎಲ್ಲ ಪೂಜಾಮಂದಿರಗಳ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿದರೆ, ಎಷ್ಟು ಮೊತ್ತ ಆಗಬಹುದು?!

ಆದರೆ ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸುವ, ಅವರ ಸಂಕಷ್ಟಗಳನ್ನು ಶಮನಗೊಳಿಸುವ, ಒಟ್ಟಿನಲ್ಲಿ ಸಾಮಾಜಿಕ ಒಳಿತನ್ನು ವೃದ್ಧಿಪಡಿಸುವ ವಿಷಯದಲ್ಲಿ ನಮ್ಮ ರಾಷ್ಟ್ರ ಹಿಂದೆ ಬಿದ್ದಿದೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಅಂದರೆ ಪೂಜಾಮಂದಿರಗಳು, ಮಠ ಮಾನ್ಯಗಳಿಗೆ ಧಾರಾಳವಾಗಿ ನೀಡುವ ಕೈ, ಸಾರ್ವಜನಿಕರ ಹಿತಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸ್ವಲ್ಪ ಹಿಂದೇಟು ಹಾಕುತ್ತದೆ.

ಮಾನವ ಅಭಿವೃದ್ಧಿ, ಸ್ಪರ್ಧಾ ಮನೋಭಾವ, ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಇತ್ಯಾದಿ ವಿಷಯಗಳ ಕುರಿತು ಜಾಗತಿಕ ಮಟ್ಟದಲ್ಲಿ ಸೂಚ್ಯಂಕಗಳಿವೆ. ಹಾಗೆಯೇ, ವಿಶ್ವ ದಾನ ನೀಡಿಕೆ (ಸಾರ್ವಜನಿಕರ ಹಿತದಲ್ಲಿ)ಯ ಸೂಚ್ಯಂಕವೂ ಇದೆ! 150 ದೇಶಗಳ ಪೈಕಿ ನಮ್ಮ ರಾಷ್ಟ್ರ 133ನೇ ಸ್ಥಾನದಲ್ಲಿದೆ. ನಮ್ಮ ನೆರೆಯ ದೇಶಗಳಾದ ನೇಪಾಳ ಮತ್ತು ಬಾಂಗ್ಲಾದೇಶ ಕ್ರಮವಾಗಿ 115 ಮತ್ತು 109ನೇ ಸ್ಥಾನದಲ್ಲಿವೆ!

ನಮ್ಮಲ್ಲಿ ಬೈನ್‌ (Bain) ಎಂಬ ಒಂದು ಸಂಸ್ಥೆ ಇದೆ. ಅದು ಪ್ರತಿ ವರ್ಷ ನಮ್ಮದೇಶದಲ್ಲಿ ಪರೋಪಕಾರ (Philanthropy)ದ ಸ್ಥಿತಿಗತಿ ಕುರಿತು ಒಂದು ವರದಿಯನ್ನು ತಯಾರಿಸುತ್ತದೆ. ಇದಕ್ಕಾಗಿ ಅದು ನಾಲ್ಕು ಪ್ರಮುಖ ನಗರಗಳ 180 ಅತ್ಯಂತ ಹೆಚ್ಚು ನಿವ್ವಳ ಸಂಪತ್ತು ಹೊಂದಿರುವ ವ್ಯಕ್ತಿಗಳ ಮತ್ತು 40 ಕ್ಕಿಂತಲೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರ ಒಂದು ಸಮೀಕ್ಷೆ ಮಾಡುತ್ತದೆ.

ಅಲ್ಲದೆ ಅದು ಸಾಮಾಜಿಕ ಕಾರ್ಯಕರ್ತರು, ಟ್ರಸ್ಟ್‌ಗಳು, ಹಾಗೂ ಪ್ರತಿಷ್ಠಾನಗಳು ಮತ್ತು ಧನ ಸಹಾಯ ನೀಡುವ ಏಜೆನ್ಸಿಗಳ ಜೊತೆ ಒಂದು ವಿಸ್ತೃತ ಸಂದರ್ಶನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳು­ತ್ತದೆ. ಇದು ಬಹಿರಂಗಗೊಳಿಸಿರುವ ಕೆಲವು ಮಾಹಿತಿಗಳು ಅಷ್ಟೇನೂ ಬೆಚ್ಚನೆಯ ಅನುಭವವನ್ನು ನೀಡುವುದಿಲ್ಲ. ಭಾರತದಲ್ಲಿ ಖಾಸಗಿ ದಾನ ನೀಡಿಕೆ ಜಿಡಿಪಿ ಯ ಶೇ 0.4 ರಷ್ಟು ಮಾತ್ರ ಇದೆ. ಆದರೆ ಬ್ರಿಟನ್‌ ಮತ್ತು ಅಮೆರಿಕದಲ್ಲಿ ಕ್ರಮವಾಗಿ ಇದರ ಪ್ರಮಾಣ ಶೇ 1.3 ಮತ್ತು ಶೇ 2.2 ರಷ್ಟಿದೆ!

ಇತ್ತೀಚೆಗೆ ಕಂಪೆನಿ ಕಾನೂನಿನ ತಿದ್ದುಪಡಿ ವಿಧೇಯಕ ಸುದ್ದಿಯಲ್ಲಿದ್ದಾಗ, ಸರ್ಕಾರ ಅದರಲ್ಲಿ, ಕಂಪೆನಿಗಳು ತಮ್ಮ ಲಾಭದಲ್ಲಿ ಶೇ 2 ರಷ್ಟನ್ನು ಸಾಮಾಜಿಕ ಯಾ ಸಾರ್ವಜನಿಕ ಒಳಿತಿನ ಚಟುವಟಿಕೆಗಳಲ್ಲಿ ತೊಡಗಿಸಬೇಕೆಂಬ ಅಂಶವನ್ನು ಸೇರಿಸಿತ್ತು. ಇದಕ್ಕೆ ಹಲವು ಕಾರ್ಪೊರೇಟ್‌ ಕಂಪೆನಿಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿದವು. ಸರ್ಕಾರ ತನ್ನ ಸಾಮಾಜಿಕ ಹೊಣೆಯನ್ನು ಕಂಪೆನಿಗಳ ಮೇಲೆ ಹೇರುತ್ತಿದೆ ಹಾಗೂ ಅವುಗಳ ವೆಚ್ಚಗಳನ್ನು ತಪಾಸಣೆ ಮಾಡುವ ನೂತನ ಬಗೆಯ ‘ಇನ್‌ಸ್ಪೆಕ್ಟರ್‌ ರಾಜ್‌’ (Inspector Raj)ಗೆ ನಾಂದಿ ಹಾಡುತ್ತಿದೆ ಎಂದು ಬೊಬ್ಬೆ ಹಾಕಿದವು.

ಕೆಲವು ತಿಂಗಳ ಹಿಂದೆ ವಾರೆನ್‌ ಬಫೆಟ್ ಮತ್ತು ಬಿಲ್‌ಗೇಟ್‌್ಸ  ಭಾರತಕ್ಕೆ ಭೇಟಿ ನೀಡಿದ್ದರು. ಅವರು ಆ ಸಂದರ್ಭದಲ್ಲಿ, ಭಾರತದ ಧನಿಕರು, ತಾವು ಶುರುಮಾಡಿದ ವಿಶ್ವ ಪರೋಪಕಾರ ಚಳವಳಿ– ‘ನೀಡುವ ವಾಗ್ದಾನ’  ಇದಕ್ಕೆ ಸೇರಬೇಕೆಂದು ಅಥವಾ ತಮ್ಮ ನಾಡಿನಲ್ಲೇ ಇಂತಹ ಒಂದು ಚಳವಳಿಯನ್ನು ಪ್ರಾರಂಭಿಸಿ, ತಮ್ಮ ವರಮಾನ ಮತ್ತು ಶೇಖರಿಸಿರುವ ಸಂಪತ್ತಿನಿಂದ ಗಣನೀಯ ಭಾಗವನ್ನು ಸಮಾಜಕ್ಕೆ ಹಿಂದಿರುಗಿಸಬೇಕೆಂಬ ಮನವಿಯನ್ನು ಮುಂದಿಟ್ಟರು. ಇದಕ್ಕೆ ಲಭಿಸಿದ್ದು ಮಂದಹಾಸ ಸ್ಪಂದನವೇ ಜಾಸ್ತಿ!

ಈ ವಿಷಯಕ್ಕೆ ಸಂಬಂಧಿಸಿದಂತೆ, ಅವರು ಏರ್ಪಡಿಸಿದ್ದ ಸಭೆಯಲ್ಲಿ ಸುಮಾರು  70 ಕಾರ್ಪೊರೇಟ್‌ ಕುಳಗಳು ಭಾಗವಹಿಸಿದ್ದರು. ಅದರಲ್ಲಿ, ಭಾರತದ ಕೈಗಾರಿಕೋದ್ಯಮದಲ್ಲಿ ದೊಡ್ಡ ಹೆಸರಾಗಿರುವ ಅಜೀಮ್‌ ಪ್ರೇಮ್‌ಜಿ ಮಾತ್ರ ಜಾಗತಿಕ ಚಳವಳಿಯ ಸದಸ್ಯರಾಗಲು ಮುಂದಾದರು! ನಂತರ, ವಿಪ್ರೊ ಕಂಪೆನಿಯಲ್ಲಿದ್ದ ತಮ್ಮ ಶೇ 12.5 ರಷ್ಟು ಷೇರುಗಳ (ಸುಮಾರು 2.2 ಶತಕೋಟಿ ಡಾಲರ್‌ ಮೌಲ್ಯ) ಮೊತ್ತವನ್ನು ತಮ್ಮ ಹೆಸರಿನ ಒಂದು ಸಾರ್ವಜನಿಕ ದಾನದ ಟ್ರಸ್ಟ್ ಗೆ   ವರ್ಗಾಯಿಸಿದರು. ಹೀಗೆ, ನುಡಿದಂತೆ ನಡೆದರು. ದುಬೈಯಲ್ಲಿ ಉದ್ಯಮ ಹೊಂದಿರುವ  ಶೋಭಾ ಸಮೂಹದ ಸಂಸ್ಥಾಪಕ ಪಿ.ಎನ್‌.ಸಿ. ಮೆನನ್‌ ತಮ್ಮ ಒಟ್ಟು ಸಂಪತ್ತಿನ (6000  ಕೋಟಿ ಡಾಲರ್‌) ಅರ್ಧದಷ್ಟು ಭಾಗವನ್ನು ದಾನವಾಗಿ ನೀಡುತ್ತೇನೆ ಎಂದು ವಾಗ್ದಾನ ನೀಡಿದರು. ಪ್ರತಿಷ್ಠಿತ ಫೋಬ್ಸ್ ಪಟ್ಟಿಯಲ್ಲಿರುವ ಇತರ ಭಾರಿ ಶ್ರೀಮಂತ ರಾಗಲಿ ಅಥವಾ ಇನ್ನಿತರ ಭಾರಿ ಶ್ರೀಮಂತರಾಗಲಿ ಈ ವಿಷಯದಲ್ಲಿ  ಸುತರಾಂ ಸ್ಪಂದಿಸಿಲ್ಲ.

ಸಾಮಾಜಿಕ ಕಲ್ಯಾಣಕ್ಕಾಗಿ ಹೆಚ್ಚಿನ ಆರ್ಥಿಕ ಸಹಾಯ ನೀಡಲು ಏಕೆ ದೊಡ್ಡ ಶ್ರೀಮಂತರು ಮುಂದಾಗುತ್ತಿಲ್ಲ? ಅವರು ದೇವರು ಹಾಗೂ ಧಾರ್ಮಿಕ ಕಾರ್ಯಗಳಿಗೆ ಸ್ಪಂದಿಸುವಷ್ಟು, ಸಾಮಾಜಿಕ ಒಳಿತಿಗೆ ಸ್ಪಂದಿಸುತ್ತಿಲ್ಲ ಏಕೆ? ಎಂಬಿತ್ಯಾದಿ ಪ್ರಶ್ನೆಗಳು ವಿಚಾರಯೋಗ್ಯ. ಈ ನಿಟ್ಟಿನಲ್ಲಿ ಇನ್ನೊಂದು ಗಹನ ವಿಚಾರವನ್ನೂ ಗಮನಿಸಬೇಕು. ಕೊಡುವಾತನ ಕೈ ಮೇಲಿರುತ್ತದೆ. ಸ್ವೀಕರಿಸುವಾತನ ಕೈ ಕೆಳಗಿರುತ್ತದೆ. ಸ್ವೀಕರಿಸುವ ಕೈಗಳು ದೈನೇಸಿ ಸ್ಥಿತಿಯಲ್ಲೇ ಇರಬೇಕೇ?

ಅಸಮಾನತೆಯ ಹಲವು ಋಣಾತ್ಮಕ ಕೊಡುಗೆಗಳಲ್ಲಿ ಇದೂ ಒಂದಲ್ಲವೇ? ಕೆಲವೇ ಕೆಲವರ ಕೈಗಳಲ್ಲಿ ಅತ್ಯಧಿಕ ಸಂಪತ್ತು, ಸಂಪನ್ಮೂಲಗಳು ಕೇಂದ್ರೀಕೃತವಾಗುತ್ತಾ ಬಂದಿರುವುದಕ್ಕೆ ಕಾರಣಗಳೇನು? ಇದರಲ್ಲಿ ಪ್ರಭುತ್ವದ ಪಾತ್ರವೆಷ್ಟು? ಅಸಮಾನತೆಯ ಮುಖ್ಯ ಲಕ್ಷಣವಾಗಿರುವ ವಿತರಣಾ ಅನ್ಯಾಯ  ಕುರಿತು ಜನಪರ ಸಂಘ, ಸಂಸ್ಥೆ, ಚಳವಳಿಗಳಿಗೆ ಯಾವ ಮುನ್ನೋಟವಿರಬೇಕು? ಈ ಅನ್ಯಾಯ ಶಮನಗೊಳಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ಹೇಗೆ ಕೈಜೋಡಿಸಬೇಕು? ಎಂಬಿತ್ಯಾದಿ ಪ್ರಶ್ನೆಗಳೂ ಮನನಯೋಗ್ಯ.

ನಿಜವಾದ ಅರ್ಥದಲ್ಲಿ, ಸಮಾನತಾ ವ್ಯವಸ್ಥೆ ನೆಲೆಗೊಂಡಾಗ, ಕೊಡುವಾತನ ಹಾಗೂ ಸ್ವೀಕರಿಸುವಾತನ ಕೈಗಳ ನಡುವಣ ಅಂತರ ಕಡಿಮೆಯಾಗುತ್ತ ಹೋಗುತ್ತದೆ. ನಮಗೆ ಅಂತಹ ದೂರದೃಷ್ಟಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT