ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳಿಗೆ ಮಾರಕ ಹೆದ್ದಾರಿ

ವನ್ಯಜೀವಿ ಮೊಗಸಾಲೆಗಳನ್ನು ಬೃಹತ್‌ ಯೋಜನೆಗಳಿಂದ ತಪ್ಪಿಸಿ ರಕ್ಷಿತಾರಣ್ಯಗಳ ಸಮಗ್ರತೆಯನ್ನು ಕಾಪಾಡಬೇಕಿದೆ
Last Updated 8 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ಅದೊಂದು ಮುಂಜಾನೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಿಂದ ಜೋಯಿಡಾ ಕಡೆಗೆ ರಾಜ್ಯ ಹೆದ್ದಾರಿ 34ರ ಮೂಲಕ ಸಾಗುತ್ತಿದ್ದ ನಾನು ಎದುರಿಗೆ ಕಂಡ ದೃಶ್ಯ ಭೀಕರವಾಗಿತ್ತು. ಕೇವಲ ಕೆಲವು ನಿಮಿಷಗಳ ಮುಂಚೆ ಯಾವುದೋ ಅಪರಿಚಿತ ವಾಹನದ ಚಕ್ರಕ್ಕೆ ಸಿಲುಕಿ ಲಂಗೂರ್ ಕೋತಿಯೊಂದು ಪ್ರಾಣ ಬಿಟ್ಟಿತ್ತು. ಅದರ ಸಾವಿಗೆ ಮರುಕಪಡುವುದನ್ನು ಬಿಟ್ಟು ಬೇರೆ ಯಾವ ಸಹಾಯವನ್ನು ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇಂತಹ ಹಲವಾರು ಘಟನೆಗಳಲ್ಲಿ ವನ್ಯಜೀವಿಗಳು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವುದನ್ನು ಕಣ್ಣಾರೆ ಕಂಡಿದ್ದೇನೆ, ಪತ್ರಿಕೆಗಳಲ್ಲಿ ಓದಿದ್ದೇನೆ.

ಅಭಿವೃದ್ಧಿ ಹೆಸರಿನಲ್ಲಿ ದೇಶದಾದ್ಯಂತ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ದೇಶದ ಒಟ್ಟೂ ಭೂಭಾಗದ ಕೇವಲ ಶೇ 5ಕ್ಕಿಂತಲೂ ಕಡಿಮೆ ಪ್ರದೇಶವನ್ನು ಆವರಿಸಿರುವ ಸಂರಕ್ಷಿತ ಪ್ರದೇಶಗಳೂ ಈ ಯೋಜನೆಗಳಿಂದ ಹೊರತಾಗಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆ ರಾಜ್ಯದ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶ. ಈ ಹುಲಿ ಕಾಡಿನ ಮೂಲಕ 14 ಮುಖ್ಯ ರಸ್ತೆಗಳು ಹಾದು ಹೋಗುತ್ತಿದ್ದು, ಇವುಗಳಲ್ಲಿ ರಾಜ್ಯ ಹೆದ್ದಾರಿ 34 ಮಾತ್ರ ವನ್ಯಜೀವಿಗಳ ಪಾಲಿಗೆ ನರಕದ ಹೆಬ್ಬಾಗಿಲಂತಿದೆ.

ಕರ್ನಾಟಕದ ಅತಿ ದೊಡ್ಡ ರಾಜ್ಯ ಹೆದ್ದಾರಿಯಾಗಿರುವ ಔರಾದ್- ಸದಾಶಿವಗಡ (ರಾಜ್ಯ ಹೆದ್ದಾರಿ 34) ಬೀದರ್ ಜಿಲ್ಲೆಯ ಔರಾದ್‌ನಿಂದ ಪ್ರಾರಂಭವಾಗಿ ಉತ್ತರ ಕನ್ನಡ ಜಿಲ್ಲೆಯ ಸದಾಶಿವಗಡದಲ್ಲಿ ಅಂತ್ಯವಾಗುತ್ತದೆ. ಅಂದಾಜು 670 ಕಿ.ಮೀ. ವಿಸ್ತಾರ ಇರುವ ಈ ಹೆದ್ದಾರಿ ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಈ ರಸ್ತೆಯ ಅಂದಾಜು 150 ಕಿ.ಮೀ. ಬೆಳಗಾವಿ, ಹಳಿಯಾಳ, ಕಾರವಾರ ಪ್ರಾದೇಶಿಕ ಅರಣ್ಯ ವಿಭಾಗಗಳು ಹಾಗೂ ಅತಿ ಮುಖ್ಯವಾಗಿ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಸುಮಾರು 40 ಕಿ.ಮೀ. ವ್ಯಾಪ್ತಿಯ ಅತಿ ಸೂಕ್ಷ್ಮ ವನ್ಯಜೀವಿ ಆವಾಸಸ್ಥಾನಗಳ ಮೂಲಕ ಹಾದು ಹೋಗುತ್ತದೆ.

ಈ ಹೆದ್ದಾರಿಯನ್ನು ಇತ್ತೀಚೆಗೆ ಕರ್ನಾಟಕ ಹೆದ್ದಾರಿ ಅಭಿವೃದ್ಧಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಹೆದ್ದಾರಿ ಅಭಿವೃದ್ಧಿ ಸಮಯದಲ್ಲಿ ವನ್ಯಜೀವಿ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಯು ಷರತ್ತುಗಳನ್ನು ವಿಧಿಸಿದ್ದರೂ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಳ್ಳದಿರುವ ನಿಗಮ ಹಾಗೂ  ಇಲಾಖೆಯ ನಡೆ ತೀರಾ ದುರದೃಷ್ಟಕರ.

ಏಳು ವರ್ಷಗಳಲ್ಲಿ ಈ ಹೆದ್ದಾರಿ ಸೇರಿದಂತೆ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಇತರ ರಸ್ತೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರಾದೇಶಿಕ ಅರಣ್ಯ ವಿಭಾಗಗಳ ಮೂಲಕ ಹಾದು ಹೋಗುವ ರಸ್ತೆಗಳಲ್ಲಿ ಜಿಂಕೆ, ಕಡವೆ, ಕಾಡುಹಂದಿ, ಕರಡಿ, ಲಂಗೂರ್, ಕೆಂಪು ಮೂತಿಯ ಕೋತಿ, ನರಿ, ಪುನುಗು ಬೆಕ್ಕು, ಹೂಬಾಲ (ಬ್ರೌನ್ ಪಾಮ್ ಸಿವೆಟ್) ಹಾಗೂ ಎಂಟು ಚಿರತೆಗಳು ಸೇರಿದಂತೆ 40ಕ್ಕೂ ಹೆಚ್ಚು ಸಸ್ತನಿಗಳು ವಾಹನ ಅಪಘಾತಕ್ಕೆ ಬಲಿಯಾಗಿವೆ.

ಅಲ್ಲದೆ ಕಾಳಿಂಗ ಸರ್ಪ, ನಾಗರ ಹಾವು, ಉಡ ಸೇರಿದಂತೆ ಇನ್ನೂ ಅನೇಕ ಜಾತಿಯ ಸರೀಸೃಪಗಳು, ಪಕ್ಷಿಗಳು, ಉಭಯವಾಸಿಗಳು ಈ ಹೆದ್ದಾರಿಯಲ್ಲಿ ವಾಹನಗಳ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿವೆ. ವಿಶೇಷವಾಗಿ ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ, ಕಡವೆ ಮತ್ತಿತರ ಪ್ರಾಣಿಗಳು ಅಪಘಾತಕ್ಕೆ ಬಲಿಯಾಗುತ್ತಿವೆ. ಇದರಿಂದ ಇವುಗಳನ್ನೇ ಅವಲಂಬಿಸಿದ ಹುಲಿ, ಚಿರತೆ, ಕಾಡುನಾಯಿ ಮತ್ತಿತರ ಮಾಂಸಾಹಾರಿ ಪ್ರಾಣಿಗಳಿಗೆ ಆಹಾರದ ಕೊರತೆಯುಂಟಾಗಲಿದ್ದು ಇವುಗಳ ಸಂತಾನೋತ್ಪತ್ತಿಗೆ ಮಾರಕವಾಗಲಿದೆ.  

ಅಲ್ಲದೆ ಆಹಾರದ ಕೊರತೆಯಿಂದ ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಎಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ಮರಗಳ್ಳತನ, ಮರಳುಗಾರಿಕೆ ಮತ್ತಿತರ ಅಕ್ರಮಗಳಿಂದ ಅರಣ್ಯ ಸಂಪತ್ತನ್ನು ರಕ್ಷಿಸುವುದು ಸಹ ಅತಿ ಮುಖ್ಯವಾಗಿರುತ್ತದೆ. 

ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಉಪ ಸಮಿತಿಯ ಶಿಫಾರಸಿನ ಪ್ರಕಾರ ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಜೀವಿಧಾಮಗಳ ಮೂಲಕ ಹಾದುಹೋಗುವ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸುವುದು ಅತ್ಯಗತ್ಯವಾಗಿರುತ್ತದೆ. ಅಲ್ಲದೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆಯ (2002-2016) ಪ್ರಕಾರ ಕೇಂದ್ರ ಭೂ ಸಾರಿಗೆ ಹಾಗೂ ರೈಲ್ವೆ ಸಚಿವಾಲಯದವರು, ರಸ್ತೆ ಹಾಗೂ ರೈಲು ಮಾರ್ಗಗಳು ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಧಾಮಗಳ ಹೊರಗೆ ಹಾದು ಹೋಗುವಂತೆ ತಮ್ಮ ಯೋಜನೆಗಳನ್ನು ರೂಪಿಸಬೇಕು.

ಈ ಮೂಲಕ ರಕ್ಷಿತಾರಣ್ಯಗಳ ಸಮಗ್ರತೆಯನ್ನು ಕಾಪಾಡಬೇಕು. ವನ್ಯಜೀವಿ ಮೊಗಸಾಲೆಗಳಲ್ಲಿ ಇಂತಹ ಯೋಜನೆಗಳು ತಲೆ ಎತ್ತದಂತೆ ತಪ್ಪಿಸಬೇಕು ಅಥವಾ ರಾತ್ರಿ ಸಂಚಾರ ನಿಷೇಧದಂತಹ ಉಪಶಮನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಂರಕ್ಷಿತ ಅರಣ್ಯಗಳ ಮಧ್ಯೆ ಹಾದು ಹೋಗಿರುವ ಹೆದ್ದಾರಿಗಳನ್ನು ಮರು ವಿನ್ಯಾಸಗೊಳಿಸಬೇಕು ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸುವಾಗ ಕೆಳ ಸೇತುವೆ ನಿರ್ಮಿಸಬೇಕು.

ರಾಜ್ಯ ಹೆದ್ದಾರಿ- 34ರ ಮೂಲಕ ರಾತ್ರಿ ಸಮಯದಲ್ಲಿ ಗೋವಾ ಹಾಗೂ ಕಾರವಾರಕ್ಕೆ ಪ್ರಯಾಣ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸ್ಥಳೀಯರ ಓಡಾಟ ಕಡಿಮೆ ಇರುತ್ತದೆ. ಅಲ್ಲದೆ ಉಪ ಸಮಿತಿಯ ಶಿಫಾರಸಿನ ಪ್ರಕಾರ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿನ ಸ್ಥಳೀಯರಿಗೆ ಪಾಸ್ ಕೊಡಲು ಅವಕಾಶವಿರುವುದರಿಂದ ಸ್ಥಳೀಯರಿಗೆ ರಾತ್ರಿ ಸಂಚಾರ ನಿಷೇಧದಿಂದ ಯಾವುದೇ ತೊಂದರೆಯಾಗುವುದಿಲ್ಲ. ಈ ಹೆದ್ದಾರಿಗೆ ಪರ್ಯಾಯವಾಗಿ ದಾಂಡೇಲಿ- ಹಳಿಯಾಳ- ಯಲ್ಲಾಪುರ- ಅಂಕೋಲಾ- ಕಾರವಾರ ಮಾರ್ಗವಿದ್ದು ವಾಹನ ಸವಾರರು ಈ ಮಾರ್ಗವನ್ನು ಉಪಯೋಗಿಸಬಹುದಾಗಿದೆ.

ರಾಜ್ಯದ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ರಾತ್ರಿ ಸಂಚಾರ ನಿಷೇಧವಿದ್ದು, ರಸ್ತೆ ಅಪಘಾತಗಳಲ್ಲಿ ವನ್ಯಜೀವಿಗಳ ಸಾವಿನ ಸಂಖ್ಯೆ ಗಣನೀಯವಾಗಿ ತಗ್ಗಿದೆ. ನೆರೆಯ ಭೀಮಗಡ ವನ್ಯಧಾಮದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ 30ರಲ್ಲೂ ರಾತ್ರಿ ಸಂಚಾರ ನಿಷೇಧಿಸಿರುವ ತಾಜಾ ಉದಾಹರಣೆ ನಮ್ಮ ಮುಂದಿದೆ.

ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕವು ವನ್ಯಜೀವಿ ಸಂರಕ್ಷಣಾ ಕ್ರಮಗಳ ಅನುಷ್ಠಾನದಲ್ಲಿ ದೇಶಕ್ಕೇ ಮಾದರಿ ಆಗಿದೆ. ಹೀಗಿರುವಾಗ ಹುಲಿಗಳ ಸಂರಕ್ಷಣೆಗೆ ಭವಿಷ್ಯದಲ್ಲಿ ಅತ್ಯುತ್ತಮ ಆವಾಸಸ್ಥಾನವಾಗುವ ಎಲ್ಲ ಲಕ್ಷಣಗಳಿರುವ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿರುವ ರಾಜ್ಯ ಹೆದ್ದಾರಿ 34ರಲ್ಲಿ ರಾತ್ರಿ ಸಂಚಾರ ನಿಷೇಧಿಸುವುದು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT