ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನ, ಭವಿಷ್ಯದ ನಡುವಿನ ವಾಸ್ತವ

ಇಂದಿನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ಮಕ್ಕಳನ್ನು ಬೆಳೆಸಬೇಕಾಗಿದೆ
Last Updated 5 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ನೀವು ಇಲ್ಲಿತನಕ ಬರೋ ಅವಶ್ಯಕತೆ ಇಲ್ರಿ. ನೀವು ಅಲ್ಲೇ ನಿಮ್ಮ ಶಾಲ್ಯಾಗ ತಿಳಿಹೇಳಿಕೊಳ್ಳಬೇಕ್ರಿ. ಆ ಬುಡಬುಡಕೆಯವನು, ನಿನ್ನ ಮಗ ಹನ್ನೆರಡು ವರ್ಷ ಹೀಗೇ ಮಬ್ಬ ಇರತಾನ, ಸಾಲ್ಯಾಗೂ ಜಾಣ ಆಗಂಗಿಲ್ಲ ಅಂತ ಹೇಳಿಬಿಟ್ಟಾನ್ರಿ.

ಪದೇ ಪದೇ ಸಾಲಿ ತಪ್ಪಿಸ್ತಾನ, ಹೋಗ ಅಂದ್ರ ಯಪ್ಪಾ ಬ್ಯಾಸರ ಆಗೇತಿ ಅಂತಾನ. ನಾವರ ಏನ ಮಾಡೋಣ್ರಿ. ಹಡದೀವಿ ಅಂತ ಹಣೇಬರಹ ಬರಿಯಾಕ ಆಗತ್ತೇನ್ರಿ’ ಎಂದು ಆ ಮಹಿಳೆ ವಿಷಾದದಿಂದ ನಮ್ಮನ್ನು ಪ್ರಶ್ನಿಸಿದಾಗ ನಮಗೆಲ್ಲ ಒಂದು ಕ್ಷಣ ಆಘಾತ.

‘ನನ್ನ ಮಗನಿಗೆ ಹನಮಂತ ದೇವರಿಗೆ ನಡೆದುಕೊಂಡ್ರೆ ಅಂವ ಸರಿ ಆಗ್ತಾನ, ಉಡಾಳನ ಹಾಗೆ ತಿರುಗುವದು ಬಿಟ್ಟು ತಂದೆ ತಾಯಿಗಳ ಮಾತು ಕೇಳ್ತಾನ ಅಂತ ಹೇಳ್ಯಾರ. ಗುಡಿಗೆ ಹೋಗಿ ಬಾ ಅಂತ ನೀವಾದ್ರು ಸ್ವಲ್ಪ ಬುದ್ಧಿ ಹೇಳ್ರಿ’.

‘ಎಷ್ಟು ಬ್ಯಾಡ ಅಂತ ಹೇಳಿದ್ರೂ ನನ್ಮಗ ಪಾರಿವಾಳ ಸಾಕ್ಯಾನ. ಅವನ ಗೆಳೆಯರು ಬಾ ಅಂತ ಫೋನ್ ಮಾಡಿದ ಕೂಡಲೇ ನಮಗೂ ಹೇಳಲಾರದ ಊರೂರು ಅಲೆತಾನ. ನಾನು ಪ್ರೀತಿಯಿಂದ ಪಾರಿವಾಳ ಸಾಕೀನಿ, ನೀವು ಬ್ಯಾಡ ಅಂತ ಹೇಳಬ್ಯಾಡ್ರಿ ಅಂತಾನ’ ಎನ್ನುವುದು ಇನ್ನೊಬ್ಬ ತಾಯಿಯ ಅಳಲು.

‘ಈಗಾಗಲೇ ಅವನಿಗೆ ಫೋನ್ ಕೊಡಿಸಿದ್ದೇಕೆ’ ಎಂಬ ನಮ್ಮ ಪ್ರಶ್ನೆಗೆ, ‘ನಾವು ಬಡವ್ರು. ದುಡಿದಾಗ ನಮಗ ಹೊಟ್ಟಿಗೆ ಸಿಗತೈತಿ. ಮಗ ನಮ್ಮಂಗ ಆಗಬಾರದಂತ ಅವರಪ್ಪ ಕೊಡಿಸ್ಯಾನ’ ಎಂದು ಮತ್ತೊಬ್ಬ ತಾಯಿ ಸಮರ್ಥಿಸಿಕೊಂಡಳು.

ಎಸ್‌ಎಸ್‌ಎಲ್‌ಸಿ  ಪರೀಕ್ಷೆಯಲ್ಲಿ ಭಯ ಮುಕ್ತವಾಗಿ, ನಕಲುರಹಿತವಾಗಿ, ಸಿ.ಸಿ. ಟಿ.ವಿ. ಕ್ಯಾಮೆರಾ ಎದುರಿಸುತ್ತಲೇ ಆರಾಮವಾಗಿ ಪರೀಕ್ಷೆ ಬರೆಯಲು ಹೇಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ಪಾಲಕ-ಶಿಕ್ಷಕ-ವಿದ್ಯಾರ್ಥಿ ಸಂವಾದ ಕಾರ್ಯಕ್ರಮಕ್ಕಾಗಿ ಪರೀಕ್ಷೆ ಆರಂಭಕ್ಕೆ ಕೆಲ ದಿನ ಮೊದಲು ವಿದ್ಯಾರ್ಥಿಗಳ ಮನೆ ಮನೆಗೆ ಹೋದಾಗ ಅನಕ್ಷರಸ್ಥ ಪಾಲಕರಿಂದ ಈ ಮಾತುಗಳು ಕೇಳಿಬಂದವು.

ಅವರ ಮಕ್ಕಳು ತಂದೆ ತಾಯಿಗಳ ಕಡೆಗೊಮ್ಮೆ, ನಮ್ಮನ್ನೊಮ್ಮೆ ನೋಡುತ್ತಾ ‘ಸುಮ್ಮನೆ ನೀವು ಬಂದದ್ದು ವ್ಯರ್ಥ’ ಎನ್ನುವ ರೀತಿಯಲ್ಲಿ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ನಿರಾಳವಾಗಿದ್ದರು. ಇಂಥ ಅನೇಕ ಸಮಸ್ಯೆಗಳನ್ನು ಪರಿಹರಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ನಮ್ಮ ತಂಡಕ್ಕೆ ಸಾಕು ಸಾಕಾಯಿತು.

ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಜವಾಬ್ದಾರಿ ಕಳಚಿಕೊಂಡರೆ ಸಾಲದು. ಮಕ್ಕಳು ಶಿಕ್ಷಣ ಪಡೆಯುವಲ್ಲಿ ಯಾವ ಹಂತದಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳಲು ಅವರು ಶಿಕ್ಷಕರೊಂದಿಗೆ ಸದಾ ಸಂಪರ್ಕದಲ್ಲಿ ಇರಬೇಕಾಗುತ್ತದೆ.

ತಮ್ಮ ಮಕ್ಕಳ ಬಗ್ಗೆ ಯಾರೋ ಹೇಳಿದ್ದನ್ನು ಕೇಳುತ್ತಾ, ತಂತ್ರಜ್ಞಾನದ ಈ ಯುಗದಲ್ಲೂ  ಅದನ್ನೇ ಅನುಸರಿಸಿಕೊಂಡು ಹೋಗುತ್ತಿರುವ ಪಾಲಕರ ಮೂಢತನಕ್ಕೆ ಏನು ಹೇಳಬೇಕು? ಇದು ನಮ್ಮ ಅಸ್ತಿತ್ವದ ದುರಂತ. ನನ್ನ ಉದ್ದೇಶ ಅವರನ್ನು ನಂಬಿಕೆಯಿಂದ ವಿಮುಖರನ್ನಾಗಿ ಮಾಡುವುದಲ್ಲ. ಅವರ ನಂಬಿಕೆ ಅವರಿಗೆ.

ಆದರೆ ನಾವು ಮನಸ್ಸು ಮಾಡಿದರೆ ಮಕ್ಕಳನ್ನು ಹೇಗೆ ಸುಲಭದಲ್ಲಿ ಸರಿಪಡಿಸಬಹುದು ಎಂಬುದನ್ನು ಅವರಿಗೆ ತಿಳಿಸಲೇಬೇಕಾಗುತ್ತದೆ. ಕೇವಲ ಓದುವುದು ಮತ್ತು ಬರೆಯುವುದನ್ನು ಕಲಿಸುವುದರಿಂದ ಮನುಷ್ಯನಿಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನೂ ನಾವು ಬಗೆಹರಿಸಬಹುದು ಎಂದುಕೊಂಡಿರುತ್ತೇವೆ.

ವಿದ್ಯಾರ್ಥಿಗಳು ಪಾಲಕರ ಮಾತನ್ನೂ ಕೇಳದೆ, ಶಿಕ್ಷಕರ ಬೋಧನೆಗೂ ಲಕ್ಷ್ಯ ವಹಿಸದೆ ಸಮಸ್ಯೆ ತಂದುಕೊಳ್ಳುವ ಪರಿಸ್ಥಿತಿ ಎಷ್ಟೋ ಕಡೆ ಇದೆ. ಈ ವರ್ತಮಾನ ಮತ್ತು ಭವಿಷ್ಯದ ಮಧ್ಯೆ ಅದೆಷ್ಟೋ ವಾಸ್ತವಗಳಿವೆ. ಭವಿಷ್ಯವನ್ನು ನಂಬಿ ಕೂರುವುದಕ್ಕಿಂತ ಇಂದಿನ ಪರಿಸ್ಥಿತಿಯನ್ನು ಎದುರಿಸುವಂತೆ ಮಕ್ಕಳನ್ನು ಬೆಳೆಸಬೇಕಾಗಿದೆ.

ಕೇವಲ ನಮ್ಮೊಳಗಿನ ಅರ್ಥಪೂರ್ಣ ಆಮೂಲಾಗ್ರ ತಿಳಿವಳಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿದೆ. ಗೊತ್ತಿಲ್ಲದ ಭವಿಷ್ಯಕ್ಕಾಗಿ ವರ್ತಮಾನವನ್ನು ಬಲಿಕೊಟ್ಟು ನಾವು ಏನನ್ನೂ ಸಾಧಿಸಲಾಗುವುದಿಲ್ಲ. ವರ್ತಮಾನದಲ್ಲಿ ಹುಟ್ಟಿದ ಸಮಸ್ಯೆಗೆ ವರ್ತಮಾನದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು.

ಅಭಿಪ್ರಾಯ ಮತ್ತು ಸಂಪ್ರದಾಯಗಳು ವಿದ್ಯಾರ್ಥಿಗಳ ಎಳೆಯ ವಯಸ್ಸಿನಿಂದಲೇ  ವಿಚಾರ ಹಾಗೂ ಭಾವನೆಗಳನ್ನು ರೂಪಿಸುತ್ತಿರುತ್ತವೆ. ಅದುವೇ ನಮ್ಮ ಪ್ರಜ್ಞೆ ಮತ್ತು ಸುಪ್ತ ಪ್ರಜ್ಞೆಗೆ ಆಕೃತಿಯನ್ನು ಕೊಡುತ್ತದೆ. ಹೀಗೆ ಬಾಲ್ಯಾವಸ್ಥೆಯಲ್ಲಿಯೇ ವಿಚಾರಗಳು ಮಕ್ಕಳ ಮನಸ್ಸಿನಲ್ಲಿ ಸ್ಥಾಪನೆಯಾಗುತ್ತಾ ಹೋಗುತ್ತವೆ. ಅಂಥ ಸಂದರ್ಭದಲ್ಲಿ ಪಾಲಕರು ಅಂಧಶ್ರದ್ಧೆಗಳನ್ನು ಮಕ್ಕಳ ಮೇಲೆ ಹೇರುವುದಕ್ಕಿಂತ ವಾಸ್ತವದ ಚಿಂತನೆಯಲ್ಲಿ ಅವರಿಗೆ ತಿಳಿಹೇಳಬೇಕು.

ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮವಾಗಿ ನಿರ್ವಹಣೆ ತೋರುವ ಹಾಗೂ ಸಾಧಾರಣ ನಿರ್ವಹಣೆ ತೋರುವ ವಿದ್ಯಾರ್ಥಿಗಳೆಲ್ಲರೂ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲೇಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಒಂದೆಡೆ ಶಿಕ್ಷಕರಿಗೆ ಫಲಿತಾಂಶ ಹೆಚ್ಚಳದ ಜವಾಬ್ದಾರಿ, ಮತ್ತೊಂದೆಡೆ ಕಡಿಮೆ ಫಲಿತಾಂಶಕ್ಕೆ ನೇರ ಹೊಣೆ ಹೊರಬೇಕಾದ ಅನಿವಾರ್ಯ ಸ್ಥಿತಿ.

ಶಾಲೆಯಲ್ಲಿ ಬೋಧನೆ ಮಾತ್ರವಲ್ಲದೆ ವಿದ್ಯಾರ್ಥಿಗಳು ಗೈರುಹಾಜರಾಗದಂತೆ, ಪರೀಕ್ಷೆಯಲ್ಲಿ ನಕಲು ಮಾಡದೆ ಉತ್ತೀರ್ಣರಾಗುವಂತೆ ಮಾಡಲು ಅವರ ಮನೆ ಮನೆಗೆ ತೆರಳಿ ಅವರ ಮನವೊಲಿಸಿ ಸಕಾರಾತ್ಮಕ ಭಾವನೆಗಳನ್ನು ಅವರಲ್ಲಿ ತುಂಬುವಲ್ಲಿ ಸಹ ಶ್ರಮಿಸುತ್ತಿದ್ದಾರೆ.

ಹಿಂದಿನಂತೆ ಇಂದಿಲ್ಲ. ಇಂದಿನಂತೆ ಮುಂದೆ ಇರುವುದಿಲ್ಲ. ಜೀವನ ನಾವಂದುಕೊಂಡಷ್ಟು ಸರಳವೂ ಅಲ್ಲ, ಸಂಕೀರ್ಣವೂ ಅಲ್ಲ. ಸಮಸ್ಯೆಗಳಿಗೆ ಮುಖಾಮುಖಿಯಾಗಿಸುತ್ತಲೇ ಸಕಾರಾತ್ಮಕವಾಗಿ ಚಿಂತಿಸುವ, ಅವಲೋಕಿಸುವ ಮನೋಭೂಮಿಕೆಯನ್ನು ಮಕ್ಕಳಲ್ಲಿ ಬೆಳೆಸುವ ಆದ್ಯ ಕರ್ತವ್ಯ ಪಾಲಕರದಾಗಿದೆ.

ಈಗಾಗಲೇ ಪರೀಕ್ಷೆಗಳು ಪ್ರಾರಂಭವಾಗಿವೆ. ಪಾಲಕರು ತಮ್ಮ ಮಕ್ಕಳೆಡೆಗೆ ಗಮನ ಹರಿಸಿದರೆ ಹಾಗೂ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಉತ್ತಮ ಫಲಿತಾಂಶ ಪಡೆದರೆ ಶಿಕ್ಷಕರ ಶ್ರಮ, ಪ್ರಯತ್ನ, ಬದ್ಧತೆಗೆ ಸಾರ್ಥಕತೆ ಸಿಕ್ಕೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT