ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಗಳು ಬರೀ ಕಲಿಕಾ ಕೇಂದ್ರಗಳೇ?

Last Updated 22 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಕಾಲೇಜು, ವಿಶ್ವವಿದ್ಯಾಲಯಗಳ ಪ್ರಸ್ತಾಪ ಬಂದಾಗ ಅನೇಕರು, ಅದರಲ್ಲೂ ಹಿರಿಯರು, ವಿದ್ಯಾ ಕೇಂದ್ರಗಳಲ್ಲಿ ರಾಜಕೀಯಕ್ಕೆ ಆಸ್ಪದ ನೀಡಬಾರದೆಂಬ ಅಭಿಪ್ರಾಯಗಳನ್ನು ಹರಿಯಬಿಡುತ್ತಿರುತ್ತಾರೆ.  ಅಂದರೆ ಅವರು ರಾಜಕೀಯವನ್ನು ನಕಾರಾತ್ಮಕ ನೆಲೆಯಿಂದ ಅರ್ಥೈಸುತ್ತಿರುತ್ತಾರೆ. ಹೀಗೆ ಮಾಡುವಾಗ, ಅವರು ರಾಜಕೀಯಕ್ಕೆ ಹಲವು ಆಯಾಮಗಳಿವೆ ಎಂಬ ಗಮನಾರ್ಹ ಅಂಶವನ್ನು ಪರಿಗಣಿಸುವುದಿಲ್ಲ.

ಆದರೆ ನಮ್ಮ ದೇಶದ ಮತ್ತು ವಿಶ್ವದ ಇತಿಹಾಸದ ಪುಟಗಳನ್ನು ತಿರುಗಿಸಿದಾಗ, ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ರಂಗಗಳಲ್ಲಿ ಛಾಪನ್ನು ಮೂಡಿಸಿರುವ ಅನೇಕರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯದ ಪ್ರಭಾವಕ್ಕೆ ಒಳಗಾದ ಅನೇಕ ನಿದರ್ಶನಗಳು ದೊರೆಯುತ್ತವೆ. ಪುರೋಗಾಮಿ ಚಿಂತನೆಗಳಿಗೆ ಸ್ಪಂದಿಸುತ್ತ, ಕ್ರಿಯಾಶೀಲರಾಗಿ, ನಂತರ ಸಮಷ್ಟಿಯ ಹಿತದಲ್ಲಿ ಅನುಪಮ ಕೊಡುಗೆಗಳನ್ನು ನೀಡಿದ ಅನೇಕ ಮಹನೀಯರು ಆಗಿಹೋಗಿದ್ದಾರೆ. ಪ್ರಸ್ತುತ ಅಂತಹ ಅನೇಕರು ನಮ್ಮ ನಡುವೆ ಇದ್ದಾರೆ. ಅಂತಹವರನ್ನು ರೂಪಿಸುವುದರಲ್ಲಿ ವಿದ್ಯಾರ್ಥಿ ಚಳವಳಿಗಳ ಪಾತ್ರ ಮಹತ್ವದ್ದು.

ಕೋಲ್ಕತ್ತದ ವಿವಿಯನ್‌ ಡಿರೋಜಿಯೊ (Vivian Derozio) ಎಂಬ ಪೋರ್ಚುಗೀಸ್‌ ಯುವಕ 1828ರಲ್ಲಿ ‘ದಿ ಅಕಾಡೆಮಿಕ್‌ ಅಸೊಸಿಯೇಷನ್‌’ ಎಂಬ ವಿದ್ಯಾರ್ಥಿ ಸಂಸ್ಥೆಯನ್ನು ಸ್ಥಾಪಿಸಿದ. ಆತ ಅಲ್ಲಿನ ಹಿಂದೂ ಕಾಲೇಜಿನ ಉಪನ್ಯಾಸಕನಾಗಿದ್ದ. ಕೆಲವು ಉಜ್ವಲ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಈ ಸಂಸ್ಥೆಯನ್ನು ಹುಟ್ಟುಹಾಕಿದ. ಇದರ ವತಿಯಿಂದ ನಿಯಮಿತವಾಗಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗೆಗೆ ಚರ್ಚೆಗಳು ಜರುಗುತ್ತಿದ್ದವು. ಅಲ್ಲದೆ ಸಾಮಾಜಿಕ ಪಿಡುಗುಗಳು, ಧಾರ್ಮಿಕ ಗೊಡ್ಡುತನ, ಅಂಧಶ್ರದ್ಧೆ ಇತ್ಯಾದಿಗಳ ವಿರುದ್ಧ ಹಾಗೂ ಸಾಮಾಜಿಕ ಸುಧಾರಣೆಗಳ ಪರವಾಗಿ ಈ ಸಂಸ್ಥೆ ಅಭಿಯಾನಗಳನ್ನು ಆಯೋಜಿಸುತ್ತಿತ್ತು. ಇದರಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ ಮತ್ತು ಇತರ ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳು ಇದ್ದರು. ಒಂದು ಮೂಲದ ಅನ್ವಯ, ಇದೇ ಭಾರತದ ಮೊದಲ ವಿದ್ಯಾರ್ಥಿ ಸಂಸ್ಥೆ.

ಕ್ರಮೇಣ ಆಧುನಿಕ ಶಿಕ್ಷಣ ಪಸರಿಸಿದಂತೆ ಪ್ರಜಾತಂತ್ರ, ಉದಾರತಾವಾದ, ಸ್ವಾತಂತ್ರ್ಯ ಇತ್ಯಾದಿ ಪರಿಕಲ್ಪನೆಗಳು ವಿದ್ಯಾರ್ಥಿಗಳು ಮತ್ತು ಯುವಕರನ್ನು ಸೆಳೆದವು. ಹೀಗೆ 19ನೇ ಶತಮಾನದಲ್ಲಿ ‘ಸೊಸೈಟಿ ಫಾರ್‌ ದಿ ಅಕ್ವಿಸಿಷನ್‌ ಆಫ್‌ ಜನರಲ್‌ ನಾಲೆಡ್ಜ್‌ (1838), ಸ್ಟೂಡೆಂಟ್‌್ಸ ಲಿಟರರಿ ಅಂಡ್‌ ಸೈಂಟಿಫಿಕ್‌ ಸೊಸೈಟಿ (1848), ಸ್ಟೂಡೆಂಟ್‌್ಸ ಅಸೋಸಿಯೇಷನ್‌ ಮತ್ತು ಇತರ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. 19ನೇ ಶತಮಾನದ ಕೊನೆಯ ಮತ್ತು 20ನೇ ಶತಮಾನದ ಆದಿ ವರ್ಷಗಳಲ್ಲಿ ಕೋಲ್ಕತ್ತ, ಮುಂಬೈ, ಮದ್ರಾಸು ಮತ್ತು ಅಲಹಾಬಾದ್‌ ವಿಶ್ವವಿದ್ಯಾಲಯಗಳು ಶುರುವಾದವು.  ಅನೇಕ ಶಾಲೆಗಳು, ಕಾಲೇಜುಗಳನ್ನು ತೆರೆಯಲಾಯಿತು. ಸ್ವಾತಂತ್ರ್ಯ ಚಳವಳಿಯ ಕಿಡಿಗಳು ನಿಧಾನವಾಗಿ ಕಾಣತೊಡಗಿದವು. ರಷ್ಯಾದಲ್ಲಿ ಜರುಗಿದ ಮಹಾನ್‌ ಕ್ರಾಂತಿ ಬ್ರಿಟಿಷ್‌ ವಸಾಹತುಗಳ ಸ್ವಾತಂತ್ರ್ಯ ಚಳವಳಿಗಳ ಮೇಲೆ ಪರಿಣಾಮಕಾರಿಯಾದ ಪ್ರಭಾವ ಬೀರಿತು. ಭಾರತದಲ್ಲೂ ಸಮಾಜವಾದಿ ಪರಿಕಲ್ಪನೆಗಳು ಜನರ ನಡುವೆ ಹಬ್ಬತೊಡಗಿದವು. ವಿದ್ಯಾರ್ಥಿಗಳು ಮತ್ತು ಯುವಕರು ಇವುಗಳಿಂದ ಪ್ರಭಾವಿತರಾದರು.

ಗಾಂಧೀಜಿ ಮತ್ತು ಕಾಂಗ್ರೆಸ್‌ನ ನೇತೃತ್ವದಲ್ಲಿ 1920ರಲ್ಲಿ ಅಸಹಕಾರ ಚಳವಳಿ ಶುರುವಾಯಿತು. ಇದರ ತಯಾರಿಯ ಸಂದರ್ಭದಲ್ಲಿ ದೇಶದಾದ್ಯಂತ ಅನೇಕ ವಿದ್ಯಾರ್ಥಿ ಸಂಸ್ಥೆಗಳು ವಿಸ್ತೃತ ನೆಲೆಯಲ್ಲಿ ಜನ್ಮತಳೆದವು. ಕೆಲವು ಉಳಿದವು; ಕೆಲವು ಅಸುನೀಗಿದವು. ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಅಧಿವೇಶನದ ಭಾಗವಾಗಿ ಆಲ್‌ ಇಂಡಿಯಾ ಕಾಲೇಜ್‌ ಸ್ಟೂಡೆಂಟ್‌್ಸ ಕಾನ್ಫರೆನ್‌್ಸ 1920ರ ಡಿಸೆಂಬರ್‌ನಲ್ಲಿ ಜರುಗಿತು. ಇದು ಅಖಿಲ ಭಾರತ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಸಂಘವಾಗಿ ಮಾರ್ಪಟ್ಟಿತು. ಇದೇ ಅಖಿಲ ಭಾರತ ಮಟ್ಟದ ಪ್ರಥಮ ವಿದ್ಯಾರ್ಥಿಗಳ ಸಂಸ್ಥೆಯಾಗಿ (ಯೂನಿಯನ್‌) ಅನೇಕ ವರ್ಷ ವಿದ್ಯಾರ್ಥಿ ಸಮುದಾಯದ ಏಳ್ಗೆಗಾಗಿ ಶ್ರಮಿಸಿತು.

1936ರ ಆಗಸ್ಟ್‌ನಲ್ಲಿ ಆಲ್‌ ಇಂಡಿಯಾ ಸ್ಟೂಡೆಂಟ್‌್ಸ ಫೆಡರೇಷನ್‌ ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಸಂಬಂಧಿಸಿದ ಸಮ್ಮೇಳನವನ್ನು ಜವಾಹರಲಾಲ್‌ ನೆಹರೂ ಉದ್ಘಾಟಿಸಿದರು. ಇದರಲ್ಲಿ ಕಮ್ಯುನಿಸ್‌್ಟ ವಿಚಾರಧಾರೆಯ ಒಲವುಳ್ಳ ವಿದ್ಯಾರ್ಥಿಗಳಷ್ಟೇ ಇರಲಿಲ್ಲ, ಅನೇಕ ಉದಾರವಾದಿ ಚಿಂತನೆಯುಳ್ಳ ವಿದ್ಯಾರ್ಥಿಗಳೂ ಸದಸ್ಯರಾಗಿದ್ದರು. ಶಿಕ್ಷಣ ಕ್ಷೇತ್ರದ ಸಮಸ್ಯೆಗಳಲ್ಲದೆ ಸಾಮ್ರಾಜ್ಯಶಾಹಿ, ಫ್ಯಾಸಿಸಂ ವಿರುದ್ಧ ಹಾಗೂ ಸಮಸಮಾಜದ ಸ್ಥಾಪನೆಯ ಪರವಾಗಿ ಅನೇಕ ಸತ್ವಶಾಲಿ ಕಾರ್ಯಕ್ರಮಗಳನ್ನು ಈ ಸಂಘ ಹಮ್ಮಿಕೊಂಡಿತು. ಪ್ರಸ್ತುತ ಸುದ್ದಿಯಲ್ಲಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಕನ್ಹಯ್ಯಾ ಕುಮಾರ್‌ ಈ ಸಂಘದ ಸದಸ್ಯರಾಗಿದ್ದಾರೆ.

ಸ್ವಾತಂತ್ರ್ಯ ಗಳಿಸಿದ ತರುವಾಯ ಕೆಲವು ರಾಷ್ಟ್ರೀಯ ಪಕ್ಷಗಳ ಜೊತೆ ಅನೇಕ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಪಕ್ಷಾಧಾರಿತ ವಿದ್ಯಾರ್ಥಿ ಸಂಘಟನೆಗಳು ಹೆಚ್ಚಾದವು. ಆಯಾ ಕಾಲದಲ್ಲಿ ಮುನ್ನೆಲೆಗೆ ಬಂದ ಗಹನ ವಿಷಯಗಳಿಗೆ ಅನೇಕ ವಿದ್ಯಾರ್ಥಿಗಳು ಸ್ಪಂದಿಸುತ್ತಾ ಬಂದಿದ್ದಾರೆ. ಗುಜರಾತಿನಲ್ಲಿ ಜರುಗಿದ ನವ ನಿರ್ಮಾಣ್‌ ವಿದ್ಯಾರ್ಥಿ ಚಳವಳಿ (1973), ಬಿಹಾರದ ವಿದ್ಯಾರ್ಥಿ ಆಂದೋಲನ (1974), ಅಸ್ಸಾಂ ವಿದ್ಯಾರ್ಥಿ ಚಳವಳಿ (1979), ಜಾರ್ಖಂಡ್‌ ವಿದ್ಯಾರ್ಥಿ ಆಂದೋಲನ (1986) ಮುಂತಾದವುಗಳ ಮೂಲಕ ಅನೇಕ ವಿದ್ಯಾರ್ಥಿಗಳು ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿದರು.

ಅಸ್ಸಾಂನಲ್ಲಿ ವಿದ್ಯಾರ್ಥಿ ಚಳವಳಿಯ ನಾಯಕರಾಗಿದ್ದ ಪ್ರಫುಲ್ಲ ಕುಮಾರ್‌ ಮಹಂತ ಮುಂದೆ ಮುಖ್ಯಮಂತ್ರಿಯೂ ಆದರು. ಅಲ್ಲದೆ ವಿದ್ಯಾರ್ಥಿ ಚಳವಳಿಗಳಲ್ಲಿ ಸಕ್ರಿಯರಾಗಿದ್ದವರು ಚಿಪ್ಕೊ, ತುರ್ತು ಪರಿಸ್ಥಿತಿ ವಿರೋಧಿ, ಮಂಡಲ್‌ ವರದಿ ಪರ ಮತ್ತು ವಿರೋಧಿ ಮತ್ತು ಇತರ ಚಳವಳಿಗಳಲ್ಲಿ ಭಾಗವಹಿಸಿದರು.

ಶಿಕ್ಷಣ ಕ್ಷೇತ್ರದ ಖಾಸಗೀಕರಣ, ವ್ಯಾಪಾರೀಕರಣ, ಕ್ಯಾಪಿಟೇಶನ್‌ ಶುಲ್ಕ ಇತ್ಯಾದಿ ಹತ್ತು ಹಲವು ಪಿಡುಗುಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದರ ಜೊತೆಗೆ ಸಮಾಜದ ಜ್ವಲಂತ ಸಮಸ್ಯೆಗಳಾದ ಬಡತನ, ಅನಕ್ಷರತೆ, ಹಸಿವು, ಅಸಮಾನತೆ, ಕೋಮುವಾದ, ಮೂಲಭೂತವಾದ ಇತ್ಯಾದಿಗಳ ಬಗೆಗೆ ಪುರೋಗಾಮಿ ವಿದ್ಯಾರ್ಥಿ ಸಂಘಟನೆಗಳು ದನಿ ಎತ್ತುತ್ತಾ ಬಂದಿವೆ.

ನಮ್ಮ ಶ್ರೇಣೀಕೃತ ಸಮಾಜದಲ್ಲಿರುವ ಅನೇಕ ಋಣಾತ್ಮಕ ಅಂಶಗಳು ವಿದ್ಯಾರ್ಥಿ ಸಂಘಟನೆಗಳಲ್ಲೂ ಇವೆ, ವಿದ್ಯಾರ್ಥಿಗಳು ಧರ್ಮ, ಜಾತಿ, ಪಕ್ಷ, ಪ್ರಾಂತ್ಯ, ಭಾಷೆ ಮುಂತಾದ ಆಧಾರಗಳಡಿ ಹರಿದು ಹಂಚಿಹೋಗಿದ್ದಾರೆ ಎಂಬ ಕೂಗೂ ಇದೆ. ಪುಣೆಯ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯ, ದೆಹಲಿಯ ಜೆಎನ್‌ಯು, ಜಾಧವಪುರ ಮತ್ತು ಅಲಹಾಬಾದ್‌ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಹೋರಾಟಗಳು ಅನೇಕ ಗಂಭೀರ ಪ್ರಶ್ನೆಗಳನ್ನು ಸಾರ್ವಜನಿಕರ ಮುಂದಿಟ್ಟಿವೆ. ಇಂತಹ ವಿಚಾರ ಪ್ರಬೋಧಕ ಪ್ರಶ್ನೆಗಳು, ಭಿನ್ನ ವ್ಯಾಖ್ಯೆಗಳನ್ನು ಮಂಡಿಸಿದ್ದಕ್ಕೆ ಆ ವಿದ್ಯಾರ್ಥಿ ಸಂಘಟನೆಗಳು ಆಳುವ ಸರ್ಕಾರದಿಂದ ಪ್ರಹಾರಗಳನ್ನು ಎದುರಿಸುತ್ತಿವೆ. ಆದರೆ ಇವುಗಳಿಗೆ ಅವು ದಿಟ್ಟ ಉತ್ತರಗಳನ್ನೂ ನೀಡುತ್ತಿವೆ. ಕಾಲೇಜು, ವಿಶ್ವವಿದ್ಯಾಲಯಗಳು ಬರೀ ಕಲಿಕಾ ಕೇಂದ್ರಗಳಾಗಿರಬೇಕು ಎನ್ನುವವರು ನಮ್ಮ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ನಡೆದು ಬಂದ ಹಾದಿಯನ್ನು, ಅದರಿಂದ ಸಂದಾಯವಾದ ಕೊಡುಗೆಗಳನ್ನೂ ಗಮನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT