ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಲೋಕ ಮತ್ತು ಮಹಿಳಾ ವಿಮೋಚನೆ

ವ್ಯಾಪಾರೀಕರಣಗೊಂಡಿರುವ ವೈದ್ಯಕೀಯ ವೃತ್ತಿಯನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಪ್ರಶ್ನಿಸಬೇಕಾಗಿದೆ
Last Updated 29 ಮಾರ್ಚ್ 2016, 19:30 IST
ಅಕ್ಷರ ಗಾತ್ರ

‘ಎಗ್ಗಿಲ್ಲದೇ ನಡೆಯುತ್ತಿರುವ ಗರ್ಭಕೋಶ ತೆಗೆಯುವ ದಂಧೆ’ ವರದಿ (ಪ್ರ.ವಾ., ಮಾರ್ಚ್ 8), ಮಹಿಳೆಯರ ದೇಹಗಳ ಮೇಲೆ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಮಾಜಿಕ ಮೌಲ್ಯಗಳು ಬೀರುತ್ತಿರುವ ಪರಿಣಾಮಗಳನ್ನು  ಚೆನ್ನಾಗಿ  ವಿಶ್ಲೇಷಿಸಿದೆ.

ಆದರೆ ಇಲ್ಲಿ ಜಾತಿ, ವರ್ಗ, ಲಿಂಗ ಆಧಾರಿತ ಅಸಮಾನತೆಯ ಮೂರು ಪಟ್ಟು ಹೊರೆ ಹೊತ್ತಿರುವ ದಲಿತ, ಬಡ ಮಹಿಳೆಯರನ್ನು ಅನಗತ್ಯ, ಅನೈತಿಕ ಶಸ್ತ್ರಚಿಕಿತ್ಸೆಗಳಿಗೆ ಗುರಿಯಾಗಿಸುತ್ತಿರುವ ವೈದ್ಯಕೀಯ ವೃತ್ತಿಯ ಮೂಲ ಪಾತ್ರವನ್ನು ವಿಶ್ಲೇಷಣೆಗೆ ಒಳಪಡಿಸದಿರುವುದು ಒಂದು ಲೋಪ.

ಬೀರೂರು, ಕಲಬುರ್ಗಿ ಪ್ರಕರಣಗಳ ಕುರಿತು ಕರ್ನಾಟಕ ಜನಾರೋಗ್ಯ ಚಳವಳಿಯ  (ಕೆಜೆಸಿ) ಸತ್ಯಶೋಧನೆ ವರದಿಗಳಲ್ಲಿ ವೈದ್ಯಕೀಯ ವೃತ್ತಿಯು ಶೋಷಿತ ಸಮುದಾಯಗಳ ಮಹಿಳೆಯರ ಮೇಲೆ ಹೇಗೆ ದಾಳಿ ಮಾಡುತ್ತಿದೆ ಎಂಬುದನ್ನು ಉಲ್ಲೇಖಿಸಲಾಗಿದೆ, ಈ ಮಹಿಳೆಯರಿಗೆ  ಅವೈಜ್ಞಾನಿಕ  ಮಾಹಿತಿಗಳನ್ನು ನೀಡಿ ಭಯ ಹುಟ್ಟಿಸುವುದಲ್ಲದೆ ಎಲ್ಲ ವೈದ್ಯಕೀಯ ವೃತ್ತಿಪರ ಮೌಲ್ಯ ಹಾಗೂ ಚಿಕಿತ್ಸಾ ಮಾನದಂಡಗಳನ್ನು ಉಲ್ಲಂಘಿಸಿ ಅಪಾಯಕಾರಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಕಲಬುರ್ಗಿ ಹಾಗೂ ಚಿಂಚೋಳಿ ತಾಲ್ಲೂಕಿನ 19 ಪಂಚಾಯಿತಿಗಳಿಗೆ ಸೇರಿದ 38 ತಾಂಡಾಗಳಲ್ಲಿ ನಡೆದ ಒಟ್ಟು 707 ಗರ್ಭಕೋಶ ಶಸ್ತ್ರಚಿಕಿತ್ಸೆಗಳಲ್ಲಿ, ಶೇಕಡ 98ರಷ್ಟು ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿದ್ದವು. ಮುಖ್ಯವಾಗಿ ಕಲಬುರ್ಗಿ ನಗರ, ಉಮರ್ಗಾ ನಗರ, ತಾಂಡೂರ ಮತ್ತು ಜೈರಾಬಾದ್ ನಗರಗಳಲ್ಲಿನ ಕೇವಲ 4 ಆಸ್ಪತ್ರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು (55%)  ಶಸ್ತ್ರಚಿಕಿತ್ಸೆಗಳು ನಡೆದಿದ್ದವು.

ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ಒಟ್ಟು ಮಹಿಳೆಯರಲ್ಲಿ ಶೇ 51ರಷ್ಟು ಮಂದಿ 35 ವರ್ಷಕ್ಕಿಂತ,  ಶೇ 22.5ರಷ್ಟು ಮಹಿಳೆಯರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಈ ಎಲ್ಲ ಶಸ್ತ್ರಚಿಕಿತ್ಸೆಗಳು ಕೇವಲ ಒಂದು ಸ್ಕ್ಯಾನಿನ ಆಧಾರದ ಮೇಲೆ ನಡೆದಿದ್ದವು. ಕೆಜೆಸಿ ಪರಿಶೀಲಿಸಿದ ಒಟ್ಟು 69 ವೈದ್ಯಕೀಯ ದಾಖಲೆಗಳಲ್ಲಿ ಕೇವಲ 15ರಲ್ಲಿ ಡಿಸ್ಚಾರ್ಜ್ ಸಮ್ಮರಿ ನೀಡಲಾಗಿತ್ತು. ಬಹುಪಾಲು ದಾಖಲೆಗಳಲ್ಲಿ ಡಯಾಗ್ನೋಸಿಸ್ ಇರಲಿಲ್ಲ.

ಈ ರೀತಿ ಹಕ್ಕುಗಳನ್ನು ಉಲ್ಲಂಘಿಸುವವರನ್ನು ಟೀಕಿಸದೆ ಸಮುದಾಯಗಳಲ್ಲಿನ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವುದು ‘ಸಂತ್ರಸ್ತರನ್ನು ದೂರುವ’  ಪ್ರವೃತ್ತಿಯನ್ನು ಸೂಚಿಸುತ್ತದೆ. ನಿಜ, ಮಹಿಳೆಯರ ಅಸಹಾಯಕತೆಯನ್ನು ಹೆಚ್ಚಿಸುವ ಹಲವಾರು ಅಂಶಗಳಲ್ಲಿ ಬಾಲ್ಯ ವಿವಾಹವೂ ಒಂದು.  ಆದರೆ ನಮ್ಮ   ವಿಮರ್ಶೆ  ಕೇವಲ ಸಾಮಾಜಿಕ, ಸಾಂಸ್ಕೃತಿಕ ಕಾರಣಗಳಿಗೇ ಸೀಮಿತಗೊಳ್ಳುವುದು ಸರಿಯಲ್ಲ. ಹೆಣ್ಣು ಮಕ್ಕಳ  ಅಸಹಾಯಕತನವನ್ನು ಬಂಡವಾಳ ಮಾಡಿಕೊಂಡು ಅವರನ್ನು ಇನ್ನಷ್ಟು ಅಂಚಿಗೆ ತಳ್ಳುತ್ತಿರುವ ಹಲವಾರು ಶಕ್ತಿಗಳಲ್ಲಿ ಒಂದಾದ ವೈದ್ಯಕೀಯ ವೃತ್ತಿಯಲ್ಲಿನ ಲಾಭಕೋರತನವನ್ನೂ ಪ್ರಶ್ನಿಸಬೇಕು. ಇಲ್ಲದಿದ್ದಲ್ಲಿ ಅದೇ ದೊಡ್ಡ ಅನ್ಯಾಯವಾಗುತ್ತದೆ.

ವೈಜ್ಞಾನಿಕ ವಸ್ತುನಿಷ್ಠತೆಯ ಹೆಸರಿನಲ್ಲಿ ಮಹಿಳೆಯರ ಅನುಭವಗಳನ್ನು, ದೇಹಗಳನ್ನು, ಮನಸ್ಸುಗಳನ್ನು ‘ಮೆಡಿಕಲೈಸ್’ ಮಾಡಿ ಸ್ವಾಭಾವಿಕವಾದದ್ದನ್ನೂ ರೋಗ ಅಥವಾ ರೋಗ ಲಕ್ಷಣ ಎಂಬಂತಹ ಪಟ್ಟಿ ಮಾಡಿರುವುದು ಕಂಡುಬರುತ್ತದೆ.

ಕೆಜೆಸಿಯ ಸತ್ಯಶೋಧನೆಯನ್ನು ಆಧರಿಸಿ ಹಲವಾರು ಮಹಿಳಾ ಸಂಘಟನೆಗಳು, ಪ್ರಗತಿಪರರು ಕಲಬುರ್ಗಿಯಲ್ಲಿ ಬೀದಿ ಹೋರಾಟ ನಡೆಸಿದ ಪರಿಣಾಮವಾಗಿಯೇ  ಈ ವಿಚಾರದ ಕುರಿತಂತೆ ಎರಡು ತನಿಖಾ ತಂಡಗಳು ರಚನೆಯಾದವು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ- ಆರ್‌ಸಿಎಚ್) ನೇತೃತ್ವದಲ್ಲಿ ಒಟ್ಟು ನಾಲ್ವರು ಸದಸ್ಯರ (ವಾಣಿ ವಿಲಾಸ ಆಸ್ಪತ್ರೆಯ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಮಾಲಿನಿ, ರಾಮಯ್ಯ ಆಸ್ಪತ್ರೆಯ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಸುಂದರಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಲೀಡ್ ಕನ್ಸಲ್ಟೆಂಟ್) ತನಿಖಾ ತಂಡ ರಚಿಸಲಾಗಿತ್ತು. 

2015ರ  ಸೆಪ್ಟೆಂಬರ್ 11, 12ರಂದು ಕಲಬುರ್ಗಿ ಜಿಲ್ಲೆಗೆ ಈ ತಂಡ ಭೇಟಿ ನೀಡಿ ತನಿಖೆ ನಡೆಸಿತು. ಅದೇ ಸಮಯದಲ್ಲಿ ರಾಜ್ಯ ಮಹಿಳಾ ಆಯೋಗವೂ  ಸ್ವಪ್ರೇರಿತವಾಗಿ  ಈ ಬಗ್ಗೆ  ಗಮನಹರಿಸಿ ಕೆ.ನೀಲಾ ಅವರ ನೇತೃತ್ವದಲ್ಲಿ ಮತ್ತೊಂದು ತನಿಖಾ ತಂಡ ರಚಿಸಿತು.  ಆದರೆ ಈ ತನಿಖಾ ತಂಡಗಳ ವರದಿಗಳು ಬಹಿರಂಗ ಆಗಿಲ್ಲ. ತನಿಖೆ ನಡೆಸಿದವರು ಎಷ್ಟರಮಟ್ಟಿಗೆ ಸ್ಪಷ್ಟವಾಗಿ ಸಮಸ್ಯೆಗಳನ್ನು ವಿಶ್ಲೇಷಿಸಿ, ವೈದ್ಯಕೀಯ ಮಾನದಂಡಗಳ ಉಲ್ಲಂಘನೆ, ವೈದ್ಯರ ದುರ್ನಡತೆ, ಮಹಿಳೆಯರ ಆರೋಗ್ಯದ ಹಕ್ಕಿನ ಉಲ್ಲಂಘನೆಗಳನ್ನು ಗುರುತಿಸಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವರೆಂಬುದು ಪ್ರಶ್ನೆ.

ಉದಾಹರಣೆಗೆ, ಆರೋಗ್ಯ ಇಲಾಖೆಯ ತನಿಖಾ ತಂಡ ಕಲಬುರ್ಗಿ ಜಿಲ್ಲೆಗೆ ಭೇಟಿ ನೀಡಿದಾಗ ತನಿಖಾ ತಂಡದ ಸದಸ್ಯರಿಗೆ ತನಿಖೆಯ ವ್ಯಾಪ್ತಿ, ಅದರ ವಿಧಾನ ಮತ್ತು ಅವಧಿಯ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕೇವಲ ಎರಡು ದಿನಗಳಲ್ಲಿ ಎಷ್ಟರ ಮಟ್ಟಿಗೆ ಈ ತನಿಖಾ ತಂಡ ಎಲ್ಲ ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು ಎಂಬುದಕ್ಕೆ ಅದರ ವರದಿಯೇ ಉತ್ತರವಾಗಿರುತ್ತದೆ.

ಅಡ್ಡಪರಿಣಾಮಗಳ  ಚಿಕಿತ್ಸೆಗಾಗಿ ಮತ್ತಷ್ಟು ಸಾಲಕ್ಕೆ ಸಿಲುಕಿ ಬಳಲುತ್ತಿರುವ ಮಹಿಳೆಯರಿಗೆ ಹಣಕಾಸಿನ ಪರಿಹಾರದೊಂದಿಗೆ, ಮತ್ತೊಮ್ಮೆ ಅವರ ಮೇಲೆ ಈ ರೀತಿ ಹಿಂಸೆ ನಡೆಯದಂತೆ ಅವರನ್ನು ಲಾಭಕೋರ ವೈದ್ಯಕೀಯ ವೃತ್ತಿಯಿಂದ ರಕ್ಷಿಸುವ ಮತ್ತು ವೈದ್ಯಕೀಯ ವೃತ್ತಿ ಮೇಲೆ ನಿಯಂತ್ರಣದ ಶಿಫಾರಸುಗಳು ಅಗತ್ಯ. ಮಹಿಳೆಯರ ಈ ನಿರೀಕ್ಷೆಗಳು ಈಡೇರುವುವೋ ಇಲ್ಲವೋ ಎಂಬುದು ತನಿಖಾ ತಂಡಗಳ ವರದಿಗಳು ಬಹಿರಂಗವಾದ ಮೇಲೆ ತಿಳಿಯುತ್ತದೆ.

ಆರೋಗ್ಯ ಸೇವೆಗಳ ವ್ಯಾಪಾರೀಕರಣ ಎಷ್ಟರ ಮಟ್ಟಿಗೆ ಸಹಜೀಕರಣಗೊಂಡಿದೆ ಎಂದರೆ ವೈದ್ಯಕೀಯ ನಿರ್ಲಕ್ಷ್ಯದ ದೂರನ್ನು ಗ್ರಾಹಕರ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ದಾಖಲಿಸಬೇಕಾಗಿದೆ! ಸಾರ್ವಜನಿಕರ ಆರೋಗ್ಯದ ಹಕ್ಕನ್ನು ರಕ್ಷಿಸುವ ಪ್ರತ್ಯೇಕ ಕಾನೂನು ಇಲ್ಲದ ಕಾರಣ, ಅವುಗಳ ಉಲ್ಲಂಘನೆಗೆ ಮುಕ್ತ ಆಮಂತ್ರಣ ನೀಡಿದಂತಾಗಿದೆ.

ಮಹಿಳೆಯರ ಮೇಲಿನ ವೈದ್ಯಕೀಯ ಹಲ್ಲೆಗಳು ಕೇವಲ ಕಲಬುರ್ಗಿ ಮತ್ತು ಬೀರೂರಿಗೆ ಸೀಮಿತವಲ್ಲ. ರಾಜಸ್ತಾನ,  ಛತ್ತೀಸಗಡ, ಬಿಹಾರ ಮುಂತಾದ ರಾಜ್ಯಗಳಲ್ಲೂ ಇಂತಹ ಕೃತ್ಯಗಳು ಕಂಡುಬಂದಿದ್ದು ಬೇರೆ ಯಾವುದೇ ಪರ್ಯಾಯವಿಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಯಿತು. ಈಗ ಕರ್ನಾಟಕವನ್ನೂ ಸೇರ್ಪಡೆ ಮಾಡಬೇಕೆಂದು ಅರ್ಜಿ ಸಲ್ಲಿಸಲಾಗಿದೆ.

ಅನಗತ್ಯ ಗರ್ಭಕೋಶ ಶಸ್ತ್ರಚಿಕಿತ್ಸೆಗಳು ಮಹಿಳೆಯರ ಮೇಲೆ ನಡೆಯುತ್ತಿರುವ ವೈದ್ಯಕೀಯ ಹಿಂಸೆ, ದೌರ್ಜನ್ಯದ ಒಂದು ಉದಾಹರಣೆ ಮಾತ್ರ. ಹೆಣ್ಣು ಭ್ರೂಣ ಹತ್ಯೆ, ಅನವಶ್ಯಕ ಸಿಜೇರಿಯನ್ ಶಸ್ತ್ರಚಿಕಿತ್ಸೆ, ತಾಯಿ ಮರಣ ಮುಂತಾದ ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವ ವ್ಯವಸ್ಥೆಯನ್ನು ಮತ್ತು ಕಾನೂನುಗಳನ್ನು ಉಲ್ಲಂಘಿಸುವವರಲ್ಲಿ ವೈದ್ಯ ಸಮೂಹವೂ ಸೇರಿದೆ. ಸರ್ಕಾರದ ಹತೋಟಿಯಿಲ್ಲದ, ಸ್ವ ನಿಯಂತ್ರಣವಿಲ್ಲದ, ವೃತ್ತಿಪರ ಮೌಲ್ಯಗಳನ್ನು ಗಾಳಿಗೆ ತೂರಿ ಲಾಭವನ್ನೇ ಗುರಿಯನ್ನಾಗಿಸಿಕೊಂಡಿರುವ ವೈದ್ಯಕೀಯ ವೃತ್ತಿ ಇಂದು ಮಹಿಳೆಯರಿಗೆ ಅಪಾಯ ಒಡ್ಡುತ್ತಿರುವುದು ವಿಪರ್ಯಾಸ.

ಜಾತಿ, ವರ್ಗದ ಪ್ರಾಬಲ್ಯ, ಪುರುಷ ಪ್ರಾಧಾನ್ಯ  ಮತ್ತು ವ್ಯಾಪಾರೀಕರಣದ ಮೌಲ್ಯಗಳು ಅಂಟಿಕೊಂಡಿರುವ ವೈದ್ಯಕೀಯ ವೃತ್ತಿಯನ್ನು ಇಂದು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಪ್ರಶ್ನಿಸಬೇಕಾಗಿದೆ. ಅನ್ಯಾಯಕ್ಕೆ ಒಳಗಾದ ಒಬ್ಬ ರೋಗಿಗೆ ವೈದ್ಯನ ವಿರುದ್ಧ ಎಫ್‌ಐಆರ್ ದಾಖಲು ಮಾಡುವ ಅಧಿಕಾರವೂ ಇಲ್ಲದ ಸಂದರ್ಭದಲ್ಲಿ, ವೈದ್ಯಕೀಯ ನಿರ್ಲಕ್ಷ್ಯವನ್ನು ಸಾಬೀತು ಮಾಡಲು ವೈದ್ಯರು ಮುಂದೆ ಬರದಿರುವ ಪರಿಸ್ಥಿತಿಯಲ್ಲಿ, ವೈದ್ಯಕೀಯ ವೃತ್ತಿ ಒಂದು ದೊಡ್ಡ ಲಾಬಿಯಾಗಿ ಪರಿವರ್ತನೆಗೊಂಡಿರುವ ಸಂದರ್ಭದಲ್ಲಿ, ಹಣ, ಬೆದರಿಕೆ ಮತ್ತು ರಾಜಕೀಯ ದಬ್ಬಾಳಿಕೆಯಿಂದ ಅನ್ಯಾಯಗಳನ್ನು ಮುಚ್ಚಿಹಾಕಿ ಯಥಾರೀತಿ ತಮ್ಮ ವ್ಯಾಪಾರವನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ ಖಾರವಾದ ಪ್ರಶ್ನೆಗಳನ್ನು ಕೇಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT