ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ: ಪ್ರಶಸ್ತಿ, ಸನ್ಮಾನಗಳಾಚೆ

ಶಿಕ್ಷಕರು ವೃತ್ತಿಪರತೆ ರೂಢಿಸಿಕೊಳ್ಳುವ ಬಗ್ಗೆ, ಬೋಧನಾ ಕೌಶಲ ಹೆಚ್ಚಿಸಿಕೊಳ್ಳುವುದರ ಕಡೆ ಗಮನಹರಿಸುವುದು ಅಗತ್ಯ
Last Updated 4 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮತ್ತೊಂದು ಶಿಕ್ಷಕರ ದಿನವನ್ನು ಆಚರಿಸುತ್ತಿದ್ದೇವೆ. ಶಿಕ್ಷಕ ವೃತ್ತಿಯ ಘನತೆಯನ್ನು ಸ್ಮರಿಸಿಕೊಳ್ಳಲು, ಸಮಾಜಕ್ಕೆ ಶಿಕ್ಷಕರು ನೀಡುತ್ತಿರುವ ಕೊಡುಗೆಯನ್ನು ಕೊಂಡಾಡಲು ನೆಪವಾಗುವ ಈ ದಿನವು ಮಹತ್ವದ್ದೇ ಸರಿ.

ಚಾರಿತ್ರಿಕವಾಗಿ ಅವಲೋಕಿಸಿದರೆ ದೇಶ ಕಂಡ ಅಪ್ರತಿಮ ವಿದ್ವಾಂಸ, ರಾಜತಾಂತ್ರಿಕ, ಶ್ರೇಷ್ಠ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರು ರಾಷ್ಟ್ರಪತಿಗಳಾಗಿದ್ದ ವೇಳೆಯಲ್ಲಿ ತಮ್ಮ ಜನ್ಮದಿನಾಚರಣೆಯನ್ನು ಆಚರಿಸದೇ ‘ಆ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ನನಗೆ ಹೆಮ್ಮೆ’ ಎಂದು ನೀಡಿದ ಕರೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಶಿಕ್ಷಕರ ದಿನಾಚರಣೆಯ ಸಂಪ್ರದಾಯ ಶುರುವಾಯಿತು.

ತಮ್ಮ ಬದುಕು, ಬೋಧನೆ, ಬರಹಗಳ ಮೂಲಕ ಶಿಕ್ಷಕರಲ್ಲಿಯೇ ಆದರ್ಶಪ್ರಾಯರಾಗಿದ್ದ ರಾಧಾಕೃಷ್ಣನ್‌ರವರು ನೊಬೆಲ್ ಸಾಹಿತ್ಯ ಪುರಸ್ಕಾರಕ್ಕಾಗಿ 15 ಬಾರಿ ಹಾಗೂ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ 11 ಬಾರಿ ನಾಮನಿರ್ದೇಶನಗೊಂಡವರು. ಅಂತಹ ಮಹಾನ್ ಶಿಕ್ಷಕರ ಜನ್ಮದಿನವನ್ನು ರಾಷ್ಟ್ರದ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ಶಿಕ್ಷಕರೆಲ್ಲರಿಗೂ ಹೆಮ್ಮೆಯೇ ಸರಿ.

ಭಾರತದಂತೆಯೇ ವಿಶ್ವದ ಅನೇಕ ದೇಶಗಳಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಅಮೆರಿಕದಲ್ಲಿ ವರ್ಷದ ಮೇ ಮೊದಲ ವಾರದ ಮಂಗಳವಾರದಿಂದ ವಾರಪೂರ್ತಿ ಶಿಕ್ಷಕರ ದಿನವನ್ನು ಶಿಕ್ಷಕರನ್ನು ಮೆಚ್ಚುವ ಮತ್ತು ಅಭಿನಂದಿಸುವ ವಾರವನ್ನಾಗಿ ಆಚರಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ವರ್ಷದ ಅಕ್ಟೋಬರ್ ತಿಂಗಳ ಕೊನೆಯ ಶುಕ್ರವಾರದಂದು ಶಿಕ್ಷಕರ ದಿನವನ್ನು ಆಚರಿಸುತ್ತಾರೆ. ಜರ್ಮನಿಯಲ್ಲಿ ಜೂನ್ 12ರಂದು, ಚೀನಾದಲ್ಲಿ ಸೆಪ್ಟೆಂಬರ್ 10 ರಂದು, ಟರ್ಕಿಯಲ್ಲಿ ನವೆಂಬರ್ 24 ರಂದು, ಬ್ರೆಜಿಲ್‌ನಲ್ಲಿ ಅಕ್ಟೋಬರ್ 15ರಂದು, ವಿಯಟ್ನಾಮ್‌ನಲ್ಲಿ ನವೆಂಬರ್ 20ರಂದು, ಇಂಡೊನೇಷಿಯಾದಲ್ಲಿ ನವೆಂಬರ್ 25ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚಿನ ದೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಶುಭಾಶಯ ಪತ್ರ, ಹೂಗುಚ್ಛ, ಕಾಣಿಕೆಗಳನ್ನು ನೀಡುವ ಮೂಲಕ ಆಚರಿಸಿದರೆ, ಇನ್ನೂ ಕೆಲವು ದೇಶಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಬೋಧನೆ ಮಾಡುವ ಮೂಲಕ ಆಚರಿಸಲಾಗುತ್ತದೆ.

ಯುನೆಸ್ಕೊ ಸಂಸ್ಥೆಯು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯೊಂದಿಗೆ 1966ರ ಅಕ್ಟೋಬರ್ 5ರಂದು ಪ್ಯಾರಿಸ್‌ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕರ ಸ್ಥಾನ ಮತ್ತು ಪಾತ್ರಗಳ ಕುರಿತಂತೆ ಕೆಲವು ಮಹತ್ವದ ಶಿಫಾರಸುಗಳನ್ನು ನೀಡಿತು. ಈ ಶಿಫಾರಸುಗಳ ಅನ್ವಯ 1994ರಲ್ಲಿ ಯುನೆಸ್ಕೊ ನೀಡಿದ ಕರೆಯಂತೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಜಗತ್ತಿನ 100ಕ್ಕೂ ಅಧಿಕ ದೇಶಗಳಲ್ಲಿ ಪ್ರತಿ ವರ್ಷದ ಅಕ್ಟೋಬರ್ 5ರಂದು ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. 1966ರ ಸಮಾವೇಶದ ಮೂಲಕ ಯುನೆಸ್ಕೊ ಸಂಸ್ಥೆಯು ಶಿಕ್ಷಕರ ಕುರಿತಂತೆ ನೀಡಿರುವ ಶಿಫಾರಸುಗಳು ಇಂದಿಗೂ ಮಹತ್ವಪೂರ್ಣವಾಗಿವೆ.

ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸುವ ಏಕೈಕ ಅಂಶವೆಂದರೆ ಶಿಕ್ಷಕರು ಮಾತ್ರ. ಈ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ, ತರಬೇತಿ, ವೃತ್ತಿಯಲ್ಲಿ ಮುಂದುವರೆಯುವಿಕೆ, ಶಿಕ್ಷಕರ ಸ್ಥಾನಮಾನ ಹಾಗೂ ಶಿಕ್ಷಕರು ಕಾರ್ಯನಿರ್ವಹಿಸುವ ಸನ್ನಿವೇಶಗಳು ಗುಣಾತ್ಮಕ ಶಿಕ್ಷಣವನ್ನು ಖಾತ್ರಿಪಡಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತವೆ.

ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಸರ್ಕಾರಗಳು, ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳು, ಆಸಕ್ತ ಖಾಸಗಿ ಸಂಘಟನೆಗಳು, ವಿಶ್ವಸಂಸ್ಥೆಯ ಸಂಘಟನೆಗಳು ಒಗ್ಗೂಡಿ ಅಂತರರಾಷ್ಟ್ರೀಯ ಶಿಕ್ಷಕರ ಕಾರ್ಯಪಡೆಯನ್ನು ರಚಿಸಿಕೊಂಡಿವೆ. ಈ ಕಾರ್ಯಪಡೆಯು ವಿಶ್ವದ ಶಿಕ್ಷಕರಲ್ಲಿ ಇರಬಹುದಾದ ಕೊರತೆಗಳನ್ನು ಕೊನೆಗಾಣಿಸಲು ಯುನೆಸ್ಕೊ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಈ ನಿಟ್ಟಿನಲ್ಲಿ ಕೈಗೊಂಡ ಇಂಚಿಯಾನ್ ಘೋಷಣೆಯು ಮಹತ್ವಪೂರ್ಣವಾಗಿದೆ. ಶಿಕ್ಷಕರು ಮತ್ತು ಶಿಕ್ಷಕರ ತರಬೇತುದಾರರು ಸಮರ್ಥರು, ವೃತ್ತಿ ಸಂಬಂಧಿತ ವಿದ್ಯಾರ್ಹತೆ ಹೊಂದಿದವರು, ಅತ್ಯುತ್ತಮ ತರಬೇತಿ ಪಡೆದವರಾಗಿರಬೇಕು. ಶಿಕ್ಷಕರ ಕೊರತೆ ಇರಬಾರದು. ಅಲ್ಲದೇ ಶಿಕ್ಷಕರನ್ನು ಮತ್ತು ಶಿಕ್ಷಕರ ಶಿಕ್ಷಕರನ್ನು ಆಡಳಿತ ವ್ಯವಸ್ಥೆ ಬೆಂಬಲಿಸಬೇಕು ಎಂದು ಘೋಷಿಸಲಾಗಿದೆ.

ಶಿಕ್ಷಕರ ಸ್ಥಾನಮಾನದ ಕುರಿತಂತೆ ಯುನೆಸ್ಕೊ ನೀಡಿರುವ ಶಿಫಾರಸುಗಳಲ್ಲಿ ನನ್ನ ಗಮನ ಸೆಳೆದವುಗಳೆಂದರೆ ಶಿಕ್ಷಕರ ವೃತ್ತಿಸಂಬಂಧಿತ ಸ್ವಾತಂತ್ರ್ಯ, ವೃತ್ತಿಪರತೆ, ಶಿಕ್ಷಣ ಕ್ಷೇತ್ರದ ಕಾರ್ಯನೀತಿ ರಚನೆಯಲ್ಲಿ ಶಿಕ್ಷಕರನ್ನು ಸಹಭಾಗಿಗಳನ್ನಾಗಿ ತೊಡಗಿಸಿಕೊಳ್ಳುವ ಅಂಶಗಳು. ಶಿಕ್ಷಕರು ತಮ್ಮ ಬೋಧನೆಗೆ ಅಗತ್ಯವಾದ ನವೀನ ಕಲಿಕಾ ವಿಧಾನ, ಕಲಿಕಾ ಸಂಪನ್ಮೂಲಗಳನ್ನು ತಾವೇ ಆಯ್ಕೆ ಮಾಡಿಕೊಂಡು ಅನುಷ್ಠಾನ ಮಾಡುವ ಸ್ವಾತಂತ್ರ್ಯ ಹೊಂದಿರಬೇಕು. ನಿರ್ದಿಷ್ಟ ಬೋಧನಾ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗುವ ಸನ್ನಿವೇಶವು ಶಿಕ್ಷಕರ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಒದಗಿದ ಧಕ್ಕೆಯೆನ್ನಬಹುದು.

ಶಿಕ್ಷಣ ಕ್ಷೇತ್ರದ ಕಾರ್ಯನೀತಿ, ಕಾರ್ಯಕ್ರಮಗಳನ್ನು ಶಿಕ್ಷಕರ ಅಭಿಪ್ರಾಯಗಳನ್ನು ಪಡೆದು ರೂಪಿಸುವುದು ಯುನೆಸ್ಕೊ ಶಿಫಾರಸಿನಲ್ಲಿ ಪ್ರಮುಖವಾದುದಾಗಿದೆ. ಆದರೆ ಪ್ರಸ್ತುತ ಈ ನಿಟ್ಟಿನಲ್ಲಿ ಆಶಾದಾಯಕವಾದ ವಾತಾವರಣ ಇಲ್ಲವೆಂದೇ ಹೇಳಬಹುದು. ಶಿಕ್ಷಕರಿಗೆ ಬೋಧನಾ ವಿಧಾನ, ಕಲಿಕಾ ಸಂಪನ್ಮೂಲ ಅಥವಾ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ನೀತಿ-ನಿರೂಪಣೆಯಲ್ಲಿ ಭಾಗಿಯಾಗಲು ಅಗತ್ಯವಾದ ಪರಿಣತಿ, ಸಾಮರ್ಥ್ಯಗಳು ಇಲ್ಲವೆಂದೂ ವಾದಿಸಬಹುದು. ಇದೊಂದು ರೀತಿಯಲ್ಲಿ ಬೀಜ-ವೃಕ್ಷ ನ್ಯಾಯದಂತೆ. ಶಿಕ್ಷಕರು ತಮ್ಮ ವೃತ್ತಿಗೆ ಅಗತ್ಯವಾದ ಪಠ್ಯಕ್ರಮ, ಬೋಧನಾ ವಿಧಾನ, ವ್ಯವಸ್ಥೆಗಳನ್ನು ರೂಪಿಸಿಕೊಳ್ಳಲು ಅನುವಾಗಿಸುವ ಸ್ವಾತಂತ್ರ್ಯ ಇಲ್ಲದಿರುವ ಕಾರಣದಿಂದಲೇ ಹೆಚ್ಚಿನ ಶಿಕ್ಷಕರು ಅವುಗಳ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪೂರಕವಾದ ವಾತಾವರಣ ಸೃಷ್ಟಿಸಿದಲ್ಲಿ ಯುನೆಸ್ಕೊದ ಆಶಯ ಈಡೇರಬಹುದು. ಶಿಕ್ಷಕರ ಅಭಿಪ್ರಾಯ, ಚಿಂತನೆಗಳ ಫಲವಾಗಿ ಅತ್ಯುತ್ತಮ ಶೈಕ್ಷಣಿಕ ನೀತಿ ಹೊಂದಲು ಸಾಧ್ಯವಿದೆ. ಶಿಕ್ಷಕರ ಪರಿಣತಿ, ಪ್ರೌಡಿಮೆಗಳ ಕುರಿತಾದ ನಮ್ಮ ನಂಬಿಕೆಗಳಲ್ಲಿ ಬದಲಾವಣೆಗಳಾಗಬೇಕಿದೆ.

ಶಿಕ್ಷಕರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ವಾತಾವರಣವನ್ನು ಸೃಷ್ಟಿಸಬೇಕು. ಉತ್ತಮ ಸಾಧನೆ ತೋರುವ ಶಿಕ್ಷಕರನ್ನು ಪುರಸ್ಕರಿಸುವ ಹಾಗೂ ಕೆಲಸದಲ್ಲಿ ನಿರ್ಲಕ್ಷ್ಯ ತೋರುವವರನ್ನು ಕಿವಿ ಹಿಂಡುವ ಕೆಲಸ ಆಗಬೇಕು.

ದೇಶದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಸರಿಸುಮಾರು 75 ಲಕ್ಷಕ್ಕೂ ಅಧಿಕ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆ ಜಗತ್ತಿನ ಕೆಲವು ಪುಟ್ಟ ದೇಶಗಳ ಒಟ್ಟು ಜನಸಂಖ್ಯೆಗೆ ಸಮನಾಗಿದೆ. ವಿವಿಧ ಹಂತಗಳ ಶಿಕ್ಷಣ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಬಡ್ತಿ, ವೇತನ, ಸೌಲಭ್ಯಗಳ ಬಗ್ಗೆ ಹೆಚ್ಚು ಗಮನ ಕೊಡುವುದನ್ನು ಬಿಟ್ಟು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇರಿಸಿಕೊಂಡು ಕಾರ್ಯನಿರ್ವಹಿಸಿದಲ್ಲಿ ಶಿಕ್ಷಕ ಸಮುದಾಯವು ಇಡೀ ಸಮಾಜಕ್ಕೆ ದಾರಿದೀಪವಾಗಲಿದೆ.

ಶಿಕ್ಷಕರ ದಿನಾಚರಣೆಯಂದು ಶಿಕ್ಷಕರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಲ್ಲೇ ಕಳೆದುಹೋಗಬಾರದು. ವೃತ್ತಿಪರತೆ ರೂಢಿಸಿಕೊಳ್ಳುವ ಬಗ್ಗೆ, ವೃತ್ತಿ ನೈಪುಣ್ಯ ಹಾಗೂ ಶಿಕ್ಷಕ ವೃತ್ತಿಯ ಘನತೆ ಹೆಚ್ಚಿಸುವುದರ ಕುರಿತು ಆಲೋಚಿಸಬೇಕು. ಶಿಕ್ಷಕರ ಜವಾಬ್ದಾರಿ ಹಾಗೂ ಹಕ್ಕುಗಳು, ಉತ್ತರದಾಯಿತ್ವ, ಶೈಕ್ಷಣಿಕ ಸ್ವಾತಂತ್ರ್ಯದಂಥ ವಿಷಯಗಳ ಕುರಿತು ಚಿಂತನ-ಮಂಥನ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT