ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷಗಳ ಸಂದಿಗ್ಧ ಮತ್ತು ಆತಂಕ

ಹಿಂಸೆ– ಪ್ರಗತಿ ಮಾರ್ಗಗಳ ನಡುವಿನ ಸಂಘರ್ಷ ಭಾರತಕ್ಕಷ್ಟೇ ಸೀಮಿತವಲ್ಲ
Last Updated 8 ಸೆಪ್ಟೆಂಬರ್ 2015, 19:58 IST
ಅಕ್ಷರ ಗಾತ್ರ

ಸಾಕ್ರಟೀಸನಿಗೆ ವಿಷಪ್ರಾಶನದ ಶಿಕ್ಷೆ ವಿಧಿಸಿದ ನಂತರ  ಈ ಶಿಕ್ಷೆಯನ್ನು ಹೇಗಾದರೂ ತಪ್ಪಿಸಬೇಕೆಂದು ಅಥೆನ್ಸ್‌ ಸರ್ಕಾರ ನಿರ್ಧರಿಸಿತು. ಪ್ಲೇಟೊ, ಕ್ರಿಟೊ ಮುಂತಾದ ಸಾಕ್ರಟೀಸನ ಆಪ್ತ ಶಿಷ್ಯರ ಒತ್ತಡವೂ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ, ತಮ್ಮ ಗುರುಗಳನ್ನು ಗುಟ್ಟಾಗಿ ಅಥೆನ್‌್ಸ ನಗರದ ಗಡಿ ದಾಟಿಸಿಬಿಟ್ಟರೆ ಸರ್ಕಾರವು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೆಂದು ಈ ಆಪ್ತ ಶಿಷ್ಯರನ್ನು ಕರೆದು ಸೂಚನೆ ನೀಡಲಾಗುತ್ತದೆ.

ಆ ಪ್ರಕಾರ ಪ್ಲೇಟೊ ಮತ್ತಿತರರು ಬಂದೀಖಾನೆಯಲ್ಲಿದ್ದ ಸಾಕ್ರಟೀಸನನ್ನು ಭೇಟಿಯಾಗಿ ‘ರಾತ್ರೋರಾತ್ರಿ ಗುಟ್ಟಾಗಿ ಗಡಿ ದಾಟಿಸಿಬಿಡುತ್ತೇವೆ’ ಎಂದು ಹೇಳುತ್ತಾರೆ.  ಸಾಕ್ರಟೀಸ್‌ ಆ ಸಂದರ್ಭದಲ್ಲಿ ಶಿಷ್ಯರಿಗೆ ಕೊಟ್ಟ ಉತ್ತರ ಕೇವಲ ಸಾಂದರ್ಭಿಕ ಪ್ರಸ್ತುತತೆಯನ್ನಷ್ಟೇ ಹೊಂದಿಲ್ಲ, ಸಾರ್ವತ್ರಿಕ. ಎಲ್ಲ ಕಾಲಕ್ಕೂ ಪ್ರಸ್ತುತವೂ, ಮಹತ್ವವೂ ಆಗಿಬಿಡುತ್ತದೆ.

ಆತ ಹೇಳುತ್ತಾನೆ: ‘ನನಗೆ ಈಗ ಎಪ್ಪತ್ತು ವರ್ಷ. ಈಗ ನಿಮ್ಮ ಸೂಚನೆಯಂತೆ ನಾನು ಊರು ಬಿಟ್ಟು ರಾತ್ರೋರಾತ್ರಿ ತಲೆಮರೆಸಿಕೊಂಡು ಓಡುವುದು ಮೂರ್ಖತನವೆನಿಸುತ್ತದೆ. ಇಷ್ಟು ವರ್ಷ ನಾನು ಸತ್ಯ ಎಂದು ತಿಳಿದದ್ದನ್ನು ಹೇಳುತ್ತ, ಸತ್ಯಾನ್ವೇಷಣೆಯ ಆಸಕ್ತಿಯಲ್ಲಿ ಹಾಗೂ ಯುವಕರಲ್ಲಿ ವಿಚಾರಶೀಲತೆಯನ್ನು ಸ್ಫುರಿಸುವ ಯತ್ನದಲ್ಲಿ ತೊಡಗಿಕೊಂಡು ಬಂದಿದ್ದೇನೆ. ಈಗ ಈ ನಶ್ವರ ಬದುಕನ್ನು ಉಳಿಸಿಕೊಳ್ಳುವುದಕ್ಕೆ ಕಳ್ಳನ ಹಾಗೆ ತಲೆಮರೆಸಿಕೊಂಡು ಓಡಿದರೆ ನನಗೇ ನಾನು ದ್ರೋಹ ಬಗೆದುಕೊಂಡ ಹಾಗೆ ಆಗುವುದಿಲ್ಲವೆ’ ಎಂದು ಕೇಳಿ ಶಿಷ್ಯರನ್ನು ಮೂಕರನ್ನಾಗಿಸಿಬಿಡುತ್ತಾನೆ.

ಇದು ಮೂರು ಸಾವಿರ ವರ್ಷಗಳಿಗೆ ಮೀರಿದ ಹಿಂದಿನ ಐತಿಹಾಸಿಕ ಘಟನೆಯಾದರೆ, ಎರಡು ಸಾವಿರ ವರ್ಷಗಳ ಕೆಳಗೆ ಜೀಸಸ್ ಕ್ರಿಸ್ತನ ಉದಾಹರಣೆ ಕೂಡ ಅಷ್ಟೇ ಮಹತ್ವದ್ದು. ರೋಮನ್ನರು ಕ್ರಿಸ್ತನನ್ನು ಶಿಲುಬೆಗೆ ಹಾಕಿ ಕೈಕಾಲುಗಳಿಗೆ ಮೊಳೆ ಹೊಡೆದು ಸಾಯಿಸುವ ಶಿಕ್ಷೆ ನೀಡಿದ್ದಾರೆ. ಕ್ರಿಸ್ತನಿಗೆ ಆಗ 34 ವರ್ಷ ವಯಸ್ಸು. ಸಾಕ್ರಟೀಸ್‌ ವಯಸ್ಸಿನ ಅರ್ಧದಷ್ಟು. ತಾನು ಹೇಳಿಕೊಂಡು ಬರುತ್ತಿರುವ ಮಾತುಗಳನ್ನು ಹಿಂತೆಗೆದುಕೊಂಡರೆ, ರೋಮನ್‌ ಚಕ್ರಾಧಿಪತ್ಯದ ಪಾರಮ್ಯವನ್ನು ಒಪ್ಪಿಬಿಟ್ಟರೆ ನೀಡಿದ ಶಿಕ್ಷೆ ಹಿಂಪಡೆಯುವುದು ಸಾಧ್ಯವಿತ್ತು ಎಂಬುದು ಕ್ರಿಸ್ತನಿಗೂ ಗೊತ್ತಿತ್ತು, ಅವನ ಶಿಷ್ಯರಿಗೂ ಮತ್ತು ಅಪಾರ ಭಕ್ತವೃಂದಕ್ಕೂ ಗೊತ್ತಿತ್ತು. ಆದರೆ ಕ್ರಿಸ್ತ ಶಿಲುಬೆಗೆ ಏರಲೇ ನಿರ್ಧರಿಸುತ್ತಾನೆ.

‘ನಾನೇ ಮಾರ್ಗ’ ಎಂದು ಘೋಷಿಸಿದ ಕ್ರಿಸ್ತ ಈ ಸಂದರ್ಭದಲ್ಲಿ ತೋರಿದ ಮಾರ್ಗ ಅನಂತಕಾಲಕ್ಕೂ ಮಹತ್ವವಾದುದು. ಶಿಲುಬೆ ಏರಿದ ಮೇಲೂ  ಅವನು ಮಾಡುವ ಪ್ರಾರ್ಥನೆ ಎಂದರೆ ‘ತಾವು ಏನು ಮಾಡುತ್ತಿದ್ದೇವೆಂದು ಅರಿಯದ ಈ ಜನರನ್ನು ಓ ದೇವ, ಕ್ಷಮಿಸಿಬಿಡು’ ಎಂದು. ನನ್ನನ್ನು ಶಿಲುಬೆಗೆ ಏರಿಸಿದರೆ ಸತ್ಯವನ್ನೇ, ಋಜುಮಾರ್ಗದ ಬದುಕಿನ ಆಕರ್ಷಣೆಯನ್ನೇ ಶಿಲುಬೆಗೆ ಏರಿಸಿಬಿಡುತ್ತಿದ್ದೇವೆಂದು ಭ್ರಮಿಸಿದ ಅಧಿಕಾರ ವರ್ಗ ಕುರಿತು ಅವನಿಗೆ ಇದ್ದುದು ಮರುಕ ಮಾತ್ರ.

ತನ್ನೊಬ್ಬನನ್ನು ಸಾಯಿಸಿದರೆ ಸತ್ಯವನ್ನು ಸಾಯಿಸಿದಂತಲ್ಲ.  ನಶ್ವರವಾದುದನ್ನು ಸಾಯಿಸುವುದೆಂದರೆ ಶಾಶ್ವತ ಸತ್ಯಗಳಿಗೆ ಧಕ್ಕೆಯೂ ಇಲ್ಲ. ಕ್ರಿಸ್ತ  ಜಗತ್ತಿಗೇ ಗುರುವಾಗುವುದು ಹೀಗೆ. ನಮ್ಮ ಯುಗದಲ್ಲೇ ನಾವು ಅಬ್ರಹಾಂ ಲಿಂಕನ್‌, ಗಾಂಧಿ, ಮಾರ್ಟಿನ್‌ ಲೂಥರ್‌ ಕಿಂಗ್‌ –ಇವರನ್ನು ಮರೆಯಲು ಹೇಗೆ ಸಾಧ್ಯ?

ಒಂದು ನಾಡೇ ಒಡೆದು ಹೋಗುವಂಥ ಸ್ಥಿತಿ ಮುಟ್ಟಿದ್ದ ಸಮಯದಲ್ಲಿ ಅಮೆರಿಕದ ಅಧ್ಯಕ್ಷನಾಗಿದ್ದ ಲಿಂಕನ್‌ ಸಮಾನತೆಗಾಗಿ, ಬಿಳಿ–ಕಪ್ಪುಗಳ ಮಧ್ಯದ ಗೋಡೆಗಳನ್ನು ಒಡೆಯುವುದಕ್ಕೆ ಆಂತರಿಕ ಯುದ್ಧಕ್ಕೂ ಹೇಸದೆ, ಹೆದರದೆ ಹೋರಾಡಿ ಕೊನೆಗೆ ವಿಜಯ ಸಾಧಿಸಿದರೂ, ತಾನು ಮಾತ್ರ ಒಬ್ಬ ದುಷ್ಕರ್ಮಿಯಿಂದ, ಒಂದು ನಾಟಕ ಗೃಹದಲ್ಲಿ ಹತ್ಯೆಯಾಗುತ್ತಾನೆ. ನಾಯಕತ್ವ ಅಂದರೆ ಜನಪ್ರಿಯತೆಯನ್ನು ಕಳೆದುಕೊಳ್ಳುವ ಧೈರ್ಯವನ್ನೂ ಉಳಿಸಿಕೊಳ್ಳುವುದು ಎಂದರ್ಥ.

ಜನಪ್ರಿಯತೆಗಾಗಿ ಮಾನವೀಯ ಮೌಲ್ಯಗಳನ್ನು ನಿರಾಕರಿಸುವುದು, ಗಾಳಿಪಾಲು ಮಾಡುವುದು ಎಂದರೆ ನಾಡಿಗೆ ಹಾಗೂ ಭವಿಷ್ಯಕ್ಕೆ ದ್ರೋಹ ಬಗೆದ ಹಾಗೆ ಎಂದು ಗೊತ್ತಿದ್ದ ನಾಯಕ ಲಿಂಕನ್‌.  ಅಂದಿನ ಲಿಂಕನ್‌ನ ಹೋರಾಟದ ಪರಿಣಾಮವಾಗಿಯೇ ಅಲ್ಲವೆ ಇಂದು ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿರುವುದು? ಹಾಗೆಯೇ ಮತ್ತು ಹೆಚ್ಚು ಪಾಲು ಈ ಮೌಲ್ಯಗಳಿಗಾಗಿಯೇ ಸ್ವತಃ ತಾನೇ ಕಪ್ಪುಜನಾಂಗದ ನಾಯಕನಾಗಿದ್ದ ಮಾರ್ಟಿನ್‌ ಲೂಥರ್‌ ಕಿಂಗ್‌ ಕೂಡ ಜೀವಭಯದ ಮಧ್ಯದಲ್ಲಿಯೇ ಅಂಜದೆ, ಅಳುಕದೆ ಕೊನೆಗೆ ಗುಂಡಿಗೆ ಬಲಿಯಾಗುತ್ತಾನೆ.

ಹಾಗೇ ನಮ್ಮ ಗಾಂಧೀಜಿ ಕೂಡ. 1948ರ ಜನವರಿ 20ರಂದು ತಮ್ಮ ಮೇಲೆ ಹತ್ಯೆಯ ಯತ್ನ ನಡೆದಿದ್ದು ಗೊತ್ತಾದ ಮೇಲೂ ಸರ್ಕಾರದ ರಕ್ಷಣೆಯನ್ನು ಬಹು ಖಂಡಿತವಾಗಿ ಮತ್ತು ಕಟುವಾಗಿ ನಿರಾಕರಿಸಿ ಕೊನೆಗೂ ಅದೇ ಪ್ರಾರ್ಥನಾ ಸಂದರ್ಭದಲ್ಲಿ ಜನವರಿ 30ರಂದು ಹತ್ಯೆಗೊಳಗಾಗುತ್ತಾರೆ. ‘ನಶ್ವರತೆ ಎಂಬ ಅನಿವಾರ್ಯವನ್ನು ಮುಂದೂಡಬಹುದೇ ಹೊರತು ಸಂಪೂರ್ಣ ನಿವಾರಿಸಿಕೊಳ್ಳುವುದು ಸಾಧ್ಯವೇ ಇಲ್ಲ’ ಎಂಬ ಸತ್ಯ ಗೊತ್ತಿದ್ದ ಮಹಾನ್‌ ವ್ಯಕ್ತಿಗಳು ಇವರು.

ಈ ಮೇಲೆ ಹೇಳಿದ ಎಲ್ಲ ನಿದರ್ಶನಗಳು ಎಲ್ಲರಿಗೂ ಪರಿಚಿತವಾದುವೇ. ಆದರೆ ಆಗಿಂದಾಗ್ಗೆ ಇವುಗಳನ್ನು ನೆನೆಸಿಕೊಳ್ಳುವುದಷ್ಟೇ ಅಲ್ಲ, ಅದರಿಂದ ನಮ್ಮ ಗುರುತಿನ ರೀತಿಯನ್ನೇ ರೂಪಿಸಿಕೊಳ್ಳುತ್ತಿರುವುದೂ ತೀರಾ ಅವಶ್ಯಕ ಎನಿಸುತ್ತದೆ.

ಅಭಿಪ್ರಾಯ ಭೇದವನ್ನು, ಪರಸ್ಪರ ವಿರೋಧವನ್ನು  ಅವು ಎಷ್ಟೇ ಗಂಭೀರವಾದವುಗಳಾಗಲಿ ಅಥವಾ ತೀವ್ರವಾದದ್ದಾಗಲಿ ಹಿಂಸೆಯ ಮೂಲಕವಷ್ಟೇ ಇತ್ಯರ್ಥಗೊಳಿಸಲು ಸಾಧ್ಯ, ಅದೊಂದೇ ಮಾರ್ಗ ಎಂದು ನಂಬಿದ ಜನರು, ಬಣಗಳು, ಇವುಗಳನ್ನು ಹಣ, ಕುಮ್ಮಕ್ಕುಗಳ ಮೂಲಕ ಪೋಷಿಸಿ ಅವುಗಳ ಸಂಪೂರ್ಣ ಲಾಭ ಪಡೆಯುತ್ತಿರುವ  ಪ್ರಭಾವಶಾಲಿ ಶಕ್ತಿಗಳು ದಿನೇ ದಿನೇ ಹೆಚ್ಚಾಗುತ್ತಿವೆ.

ಸಾಮಾಜಿಕವಾಗಿ, ಗಂಭೀರವಾಗಿ ಅನಿಸಿದ್ದನ್ನು ಈ ಸಶಸ್ತ್ರಧಾರಿ ವಿರೋಧಿಗಳಿಗೆ ಅಂಜಿ ನಮಗೆ ಹೇಳಲಿಕ್ಕಾಗದೇ, ಹೇಳಿದರೆ ಉಂಟಾಗಬಹುದಾದ ಕಲ್ಪನೆಗಳಲ್ಲೇ ಜರ್ಝರಿತರಾಗುತ್ತ, ಜಾಣತನದ ಮೌನವ್ರತ ಆಚರಿಸೋಣವೇ? ‘ನಾಲ್ಕು ಜನರಿಂದ ಭೇಷ್‌’  ಎನಿಸಿಕೊಳ್ಳುವಂತೆ ಪ್ರಿಯವಾದ ಮಾತುಗಳನ್ನು, ಆಕರ್ಷಕ ಭಾಷೆಯಲ್ಲಿ ಆಡುತ್ತ ಎಂಥ ಅಪಾಯವೂ ಇಲ್ಲದೆ ಕ್ಷೇಮಕರ ಕ್ರಾಂತಿಯ ಮಾತುಗಳನ್ನು ಆಡುತ್ತ ಎರಡೂ ಲೋಕಗಳಲ್ಲಿ ಸಲ್ಲುತ್ತ ಹೋಗೋಣವೆ? ನಮ್ಮ  ಮೌನಕ್ಕೆ, ನಮ್ಮ ನಿಷ್ಕ್ರಿಯತೆಗೆ ‘ಹೆಂಡತಿ, ಮಕ್ಕಳ ಕ್ಷೇಮಕ್ಕಾಗಿ’ ಎಂದು ಅವರನ್ನು ರಕ್ಷಕ ಗುರಾಣಿಗಳನ್ನಾಗಿ ಬಳಸೋಣವೆ?

ಹಿಂಸೆ ಇಂದು ಅಂತರರಾಷ್ಟ್ರೀಯ ಏಕಮೇವಾದ್ವಿತೀಯ ಭಾಷೆ. ಈ ಭಾಷಾ ಬಳಕೆಗೆ ಪ್ರಜಾತಂತ್ರವೂ, ಸ್ವಾರ್ಥಿ ಭ್ರಷ್ಟ ಅಧಿಕಾರವರ್ಗವೂ, ಮಠ ಧರ್ಮಗಳ ನೂರಕ್ಕೆ ತೊಂಬತ್ತರಷ್ಟು ಎಲ್ಲ ಧರ್ಮಗಳ ಕಾವೀಧಾರಿಗಳ ಬಹು ಸಾರ್ಥಕ ಸಾಧಕಗಳಾಗಿ ಕಾಣುತ್ತಿವೆ. 

ವ್ಯಕ್ತಿಯನ್ನು ಏಕಾಕಿಯನ್ನಾಗಿ, ಹತಾಶನನ್ನಾಗಿ, ದಿಕ್ಕು ಕಾಣದೆ ಮಾನಸಿಕ ವಿಭ್ರಮಿತ ಸ್ಥಿತಿಯಲ್ಲಿ ದಿನಗಳನ್ನು ತಳ್ಳುತ್ತ ಹೋಗುವಂತೆ ಮಾಡುತ್ತಿರುವ ಕಾಲ ಇದು. ಹೇಗಾದರೂ ಸರಿ ಜೀವ ಉಳಿಸಿಕೊಳ್ಳ ಬೇಕೆಂಬುದೊಂದೇ ಜೀವನೋದ್ದೇಶವಾಗಿ ಕಾಣುತ್ತಿರುವ ಕಾಲ. ಇಷ್ಟಕ್ಕೂ ಮತ್ತೆ ನಮ್ಮ ಉಸಿರಿಗೆ,  ನಮ್ಮ ಬದುಕಿಗೆ ಚೈತನ್ಯ, ವಿಶ್ವಾಸ ತುಂಬುವುದು ಸತ್ಯದ ಪರ ದಿಟ್ಟವಾಗಿ ನಿಂತ ಸಾಕ್ರಟೀಸ್‌, ಕ್ರಿಸ್ತ, ಗಾಂಧಿಯಂಥ ಪುಣ್ಯಾತ್ಮರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT