ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಮರೆಮಾಚದೆ ಸೌಹಾರ್ದ ಸಾಧ್ಯವಿಲ್ಲವೇ?

ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಪ್ರತ್ಯೇಕತೆಯ ಭಾವ ಬಿತ್ತಿದ್ದು ಯಾರು?
Last Updated 25 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಈಚಿನ ಎರಡು ಲೇಖನಗಳನ್ನು (ಮುಜಾಪ್ಫರ್ ಅಸ್ಸಾದಿ, ಸೆ.19 ಮತ್ತು ಆಕಾರ್ ಪಟೇಲ್, ಸೆ.21) ಓದಿದಾಗ ಸತ್ಯ ಮರೆ ಮಾಚದೆ ಸೌಹಾರ್ದ ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಮೂಡಿತು. ಭಾರತದ ವಿವಿಧ ಜಾತಿ–ಮತಗಳ ನಡುವೆ ಸೌಹಾರ್ದ ಸಂಬಂಧ ಇರಬೇಕೆಂಬ ಈ ಲೇಖನಗಳ ಮೂಲ ಆಶಯವನ್ನು ಎಲ್ಲರೂ ಒಪ್ಪಬೇಕು.

ಆದರೆ, ಈ ಆಶಯದ ಈಡೇರಿಕೆ ದೃಷ್ಟಿಯಿಂದ ಈ ಲೇಖನಗಳು ಮಂಡಿಸುವ ವಾದಗಳನ್ನು ಗಮನಿಸಿದಾಗ, ಎರಡು ಸಾಧ್ಯತೆಗಳು ಕಾಣುತ್ತವೆ. ಅವುಗಳೆಂದರೆ, ಈ ಲೇಖಕರು ಸತ್ಯದ ಆಳಕ್ಕಿಳಿದು ನೋಡುವ ಸೂಕ್ಷ್ಮತೆಯನ್ನು ಹೊಂದಿಲ್ಲ ಅಥವಾ ಅರ್ಧಸತ್ಯವನ್ನು ಮರೆಮಾಚಲು ಯತ್ನಿಸಿದ್ದಾರೆ. ಅಸ್ಸಾದಿಯವರು ಧರ್ಮಾಧಾರಿತ ಜಾತಿಗಣತಿಯು ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ನಿರ್ದಿಷ್ಟ ಸಮುದಾಯಗಳನ್ನು ನಿರ್ಮಿಸುವ ಜನಗಣತಿ ಎನ್ನುತ್ತಾರೆ. ಹೀಗೆ ನೇರ ಮತ್ತು ನಿರ್ದಿಷ್ಟ ಸಮುದಾಯಗಳನ್ನು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಪ್ರತ್ಯೇಕ ಅಲ್ಪಸಂಖ್ಯಾತರ ಖಾತೆ ಇತ್ಯಾದಿ ಮೂಲಕ ಎಂದೋ ನಿರ್ಮಿಸಲಾಗಿಲ್ಲವೆ? ಅದನ್ನು ಹೊಸತಾಗಿ ನಿರ್ಮಿಸಲಿಕ್ಕೇನಿದೆ?

ಜನಗಣತಿಯ ಅಂಕಿಅಂಶಗಳನ್ನು ತಮಗೆ ಬೇಕಾದಂತೆ ವಿಶ್ಲೇಷಿಸುವ ಕೆಲಸವನ್ನು ಎಲ್ಲರೂ ಮಾಡುತ್ತಾರೆ. ಕೋಮುಭಾವನೆ ಬಿತ್ತಬೇಕೆಂದು ಬಯಸುವವರು ಒಂದು ರೀತಿಯಲ್ಲಿ ಮಾಡಿದರೆ, ಸೆಕ್ಯುಲರ್‌ವಾದಿಗಳು ಎನಿಸಿಕೊಂಡವರು  ಇನ್ನೊಂದು ರೀತಿಯಲ್ಲಿ ಮಾಡುತ್ತಾರೆ. ವಿವಿಧ ಧರ್ಮಗಳು ಹೊಂದಿದ ಜನಸಂಖ್ಯೆಯ ಬಗ್ಗೆ ಜನಗಣತಿಯು ಮುಂದಿಟ್ಟ ನೇರ ಅಂಕಿಅಂಶಗಳು ಸಾರ್ವಜನಿಕರಿಗೆ ಲಭ್ಯವಿವೆ. ಇವು ರಾಜಕೀಯಕ್ಕೆ ಬಳಕೆಯಾಗಲು ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂದು ದೇಶದ ಜನರನ್ನು ವಿಭಾಗಿಸಿರುವುದೇ ಕಾರಣವಲ್ಲವೆ?

ಮುಸ್ಲಿಮರಲ್ಲಿರುವ ಪರಿಶಿಷ್ಟ ಪಂಗಡಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕೆಂದು ಸೂಚಿಸುವ ಅಸ್ಸಾದಿಯವರ ಉದ್ದೇಶವೇನು? ಅದೇ ಮಾನದಂಡದಲ್ಲಿ ಹಿಂದೂಗಳಲ್ಲಿರುವ ಪರಿಶಿಷ್ಟ ಪಂಗಡದವರನ್ನು ಪ್ರತ್ಯೇಕವಾಗಿ ಪರಿಗಣಿಸಬೇಕೆಂದು ಯಾಕೆ ಹೇಳುವುದಿಲ್ಲ? ಧಾರ್ಮಿಕ ಜನಗಣತಿಯು ವಸಾಹತುಶಾಹಿಯ ಪಳೆಯುಳಿಕೆಯಾಗಿರುವುದರಿಂದ ಅದನ್ನು ಬಿಡಬೇಕೆನ್ನುವ ಅವರು, ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ವಿಭಾಗೀಕರಣವು ಯಾವುದರ ಪಳೆಯುಳಿಕೆ ಎಂಬ ಬಗ್ಗೆ ಚಿಂತಿಸುವುದಿಲ್ಲ. ಹಿಂದೂಗಳು ಬಹುಸಂಖ್ಯಾತರು ಎಂಬ ಪರಿಕಲ್ಪನೆಯ ಹಿಂದಿರುವ ಏಕರೂಪಿ ಹಿಂದೂ ಸಮುದಾಯದ ಗ್ರಹಿಕೆಯೇ ತಪ್ಪು. ಕಡಿಮೆ ಸಂಖ್ಯೆಯಲ್ಲಿರುವವರು ದಬ್ಬಾಳಿಕೆಗೆ ಒಳಗಾಗುತ್ತಾರೆ ಎಂಬುದು ಭಾರತೀಯ ಸನ್ನಿವೇಶದಲ್ಲಿ ನಿಜವೆಂದಾದರೆ ಬ್ರಾಹ್ಮಣರು ಅತೀ ಹೆಚ್ಚು ಶೋಷಣೆಗೆ ಒಳಗಾದವರಾಗಿರಬೇಕಿತ್ತು. ಪಾರ್ಸಿಗಳು ನಿರ್ನಾಮವಾಗಬೇಕಿತ್ತು.

ಆಕಾರ್ ಪಟೇಲ್ ಲೇಖನದಲ್ಲಿ ಕೆಲವು ಒಪ್ಪತಕ್ಕ ಅಂಶಗಳಿವೆಯಾದರೂ ಮೇಲ್ಪದರದ ಹೇಳಿಕೆಗಳೇ ಅಲ್ಲಿ ಪ್ರಧಾನ ವಾದಾಂಶಗಳಾಗಿ ಮೂಡಿಬಂದಿವೆ. ಮುಸ್ಲಿಮ್ ಸಮುದಾಯದಲ್ಲಿ ಆಗಬೇಕಾದ ಬದಲಾವಣೆ ಹಿಂದೂಗಳಿಗೆ ಸಂಬಂಧವೇ ಇಲ್ಲದ ಸಂಗತಿ ಎಂಬ ಒಂದು ಗ್ರಹಿಕೆಯನ್ನು ಅವರ ಲೇಖನ ಮುಂದಿಡುತ್ತದೆ. ಇದು ಅಷ್ಟು ಸರಳವಲ್ಲ. ಸಹಬಾಳ್ವೆ ಮಾಡಬೇಕಾದ ವಿವಿಧ ಸಮುದಾಯಗಳು ಆಧುನಿಕತೆಗೆ ಅಥವಾ ಬದಲಾವಣೆಗೆ ತೆರೆದುಕೊಳ್ಳುವ ವೇಗದಲ್ಲಿ ದೊಡ್ಡ ವ್ಯತ್ಯಾಸವಿದ್ದಾಗ ಸಂಘರ್ಷ ಸಹಜ. ಉದಾಹರಣೆಗೆ ಹೆಣ್ಣುಮಕ್ಕಳು ಹೊರಗಡೆ ದುಡಿಯಬಾರದೆಂಬ ಸಮುದಾಯದೊಳಗಿನ ನಿರ್ಬಂಧವು ಇಂದು ಮುಸ್ಲಿಮರ ಬಡತನಕ್ಕೆ ಒಂದು ಅತಿಮುಖ್ಯ ಕಾರಣವಲ್ಲವೆ? 

ಅದರ ಹೊಣೆಯನ್ನು ಹಿಂದೂಗಳ ಮೇಲೆ ಹೊರಿಸಿ ಮೀಸಲಾತಿ ಇತ್ಯಾದಿ ಉಪಕ್ರಮಗಳನ್ನು ಆರಂಭಿಸಬೇಕು  ಎಂದಾಗ ಪ್ರತ್ಯೇಕತೆಯ ಭಾವನೆ  ಮೂಡುವುದು ಸಹಜ. ಶಿಕ್ಷಣವೇ ಪರಿಹಾರ ನಿಜ. ಆದರೆ, ಮುಸ್ಲಿಮ್ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕೆಂಬ ರೀತಿಯ ಶಿಫಾರಸುಗಳು ಕೂಡ ಪ್ರತ್ಯೇಕತೆಯ ಭಾವನೆಯನ್ನು ಕಡಿಮೆ ಮಾಡುವಂಥವುಗಳಲ್ಲ. ಈಚಿನ ವರ್ಷಗಳಲ್ಲಿ ಉದ್ಯಮ, ಉದ್ಯೋಗ, ಶಿಕ್ಷಣ ಇತ್ಯಾದಿ ಬೆಳವಣಿಗೆಗಳಿಂದಾಗಿ ಸಮುದಾಯಗಳ ನಡುವೆ ಪರಸ್ಪರ ಬೆರೆಯುವಿಕೆ ಹೆಚ್ಚುವುದು ಅನಿವಾರ್ಯ. ಹೀಗಿರುವಾಗ, ಬದಲಾವಣೆಯ ವೇಗದಲ್ಲಿ ಸಮುದಾಯಗಳ ನಡುವೆ ಕನಿಷ್ಠ ಮಟ್ಟಿಗಾದರೂ  ಸಮತೋಲನ ಅಗತ್ಯ. ಹೀಗಾಗಿ ಯಾವುದೇ ಸಮುದಾಯದ ಏಳಿಗೆಯು ಇತರ ಸಮುದಾಯಗಳಿಗೂ ಅಗತ್ಯ. ಸಮುದಾಯಗಳ ನಡುವಿನ ಸೌಹಾರ್ದವಾಗಲೀ ದ್ವೇಷವಾಗಲೀ ಮುಖ್ಯವಾಗಿ ಭಾವನೆಗಳನ್ನು ಅವಲಂಬಿಸಿದ್ದೇ ಹೊರತು ಶುದ್ಧ ವೈಚಾರಿಕತೆಯನ್ನಲ್ಲ.

ಹೀಗಾಗಿ ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಪ್ರತ್ಯೇಕತೆಯ ಭಾವನೆಗಳನ್ನು ಬಿತ್ತಿದ ಹಾಗೂ ಮುಸ್ಲಿಮರು ಆಧುನಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಒತ್ತಾಯಗಳೆಲ್ಲವೂ ಅಲ್ಪಸಂಖ್ಯಾತರ ಸಂಸ್ಕೃತಿಯ ಮೇಲಿನ ಆಕ್ರಮಣ ಎನಿಸಿಕೊಳ್ಳುತ್ತದೆ ಎಂದು ಬಿಂಬಿಸಿದ ಹೊಣೆಯನ್ನು ಪ್ರಭುತ್ವ ಮತ್ತು ತಥಾಕಥಿತ ಲಿಬರಲ್ ಮತ್ತು ಸೆಕ್ಯುಲರ್‌ವಾದಿಗಳು ಹೊರಲೇಬೇಕಾಗಿದೆ. ಈಗಿನ ಹಿಂದೂ ಮೂಲಭೂತವಾದದ ಬೆಳವಣಿಗೆಯ ಹಿಂದೆ ಸೆಕ್ಯುಲರ್‌ವಾದಿಗಳ ಕೊಡುಗೆ ಇಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT