ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕೆ ಪಕ್ಷವೇ ಬಿಸಿತುಪ್ಪ

Last Updated 4 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಪರ್ಯಾಯ ಆಯ್ಕೆ ಅಸಾಧ್ಯವಾದರೆ ಮಾತ್ರ ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ಪಕ್ಷದ ಅನೇಕ ನಾಯಕರ ಅಭಿಮತ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸ್ಥಿತಿ ಅತಂತ್ರವಾಗಿಬಿಟ್ಟಿದೆಯೇ? ಹೌದು ಎನ್ನುತ್ತದೆ ನಾವು ನಡೆಸಿದ ಅಧ್ಯಯನದ ಫಲಿತಾಂಶ. ಯಡಿಯೂರಪ್ಪ  ಜನಾನುರಾಗಿ, ರೈತಪರ ಹೋರಾಟಗಾರ, ಹೃದಯವಂತ, ಪ್ರಜಾಪ್ರಭುತ್ವ ಮೌಲ್ಯಗಳ ಪಾಲಕ, ಅಪ್ರತಿಮ ಹೋರಾಟಗಾರ, ಪ್ರಖರ ವಾಗ್ಮಿ ಎಲ್ಲವೂ ಹೌದು. ಆದರೆ, ಈಗಂತೂ ಬಿಜೆಪಿ ರಾಜ್ಯ ನಾಯಕರನೇಕರಿಗೆ ಯಡಿಯೂರಪ್ಪ ಬೇಡ. ಪಕ್ಷದ ಕಾರ್ಯಕರ್ತರು ‘ಯಡಿಯೂರಪ್ಪನವರು ಇಲ್ಲದಿದ್ದರೆ ಬಿಜೆಪಿಗೆ ರಾಜ್ಯದಲ್ಲಿ ಪರಿಸ್ಥಿತಿ ದುಸ್ತರವಾಗಿಬಿಡುತ್ತದೆ’ ಎಂದು ಅಂಗಲಾಚಿಕೊಂಡರೂ ಯಡಿಯೂರಪ್ಪ ಪರವಾದಂತಹ ಸರ್ವಾನುಮತದ ನಿರ್ಧಾರಕ್ಕೆ ನಾಯಕರು ಬರುವುದು ಅಸಾಧ್ಯ ಎನ್ನಲಾಗುತ್ತಿದೆ.

ಬಹಿರಂಗವಾಗಿ, ಅದರಲ್ಲೂ ಪತ್ರಿಕೆ ಹಾಗೂ ಟಿ.ವಿ. ಹೇಳಿಕೆ ನೀಡುವ ಸಂದರ್ಭದಲ್ಲಿ ಪಕ್ಷದ ಮುಖಂಡರು ಯಡಿಯೂರಪ್ಪನವರ ಪರ ಮಾತನಾಡುವಂತೆ ಕಂಡರೂ, ಅವರಿಗೆ ಪರ್ಯಾಯವಾಗಿ ಯಾರಾದರೂ ಸಿಗುವಂತಿದ್ದರೆ ಆ ವ್ಯಕ್ತಿಗೇ ಮಣೆಹಾಕಲು ಸಿದ್ಧರಾಗಿರುವಂತಿದೆ. ಅಂಥ ವ್ಯಕ್ತಿ ಸಿಗುವ ತನಕ ಕಾಯಲು ಕೂಡ ರಾಜ್ಯ ನಾಯಕತ್ವ ನಿರ್ಧರಿಸಿದಂತಿದೆ. ಯಡಿಯೂರಪ್ಪ ಈಗ ಬಹುತೇಕ ದೋಷಮುಕ್ತರು. ಅವರೀಗ ಸ್ವತಂತ್ರರಾಗಿರುವಂತೆ ಕಂಡುಬರುತ್ತಿದೆ. ಆ ಕಾರಣಕ್ಕಾದರೂ ಅವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಡಬೇಕು ಎನ್ನುವ ವಾದ ಮುಂದಿಟ್ಟರೆ ಅನೇಕರು ಹೇಳುವುದು: ಯಡಿಯೂರಪ್ಪ ಅವರ ಮೇಲಿನ ಭ್ರಷ್ಟಾಚಾರದ ಆರೋಪ ಯಾವತ್ತಿಗೂ ದೊಡ್ಡ ವಿಷಯವೇ ಆಗಿರಲಿಲ್ಲ. 

ಅವರನ್ನು ಸುಮ್ಮನಿರಿಸಲು ಆ ವಿಷಯ ಮುಂದಿಡಲಾಗುತ್ತಿತ್ತು. ಬಿಜೆಪಿಯಲ್ಲಿ ಆರೋಪ ಹೊತ್ತವರಿಗೆ ಸ್ಥಾನ ಕೊಟ್ಟಿರುವ ಅನೇಕ ಉದಾಹರಣೆಗಳಿವೆ. ಕೊಡಬೇಕೆಂದಿದ್ದರೆ ಯಡಿಯೂರಪ್ಪನವರಿಗೆ ಎಂದೋ  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ದಯಪಾಲಿಸಬಹುದಿತ್ತು. ಆದರೆ, ಆರೋಪಮುಕ್ತರಾದ ಮೇಲೂ ಹಾಗೆ ಮಾಡದೆ ಸಬೂಬು ಹೇಳಲಾಗುತ್ತಿದೆ ಎನ್ನುವುದು ಯಡಿಯೂರಪ್ಪ ಅವರಿಗೇ ಸ್ಪಷ್ಟವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಯಡಿಯೂರಪ್ಪ ಅವರನ್ನು ಕೇಂದ್ರದ ಮಂತ್ರಿಯನ್ನಾಗಿ ಮಾಡದಿದ್ದಾಗ ಸಮಂಜಸ ಕಾರಣ ನೀಡದೇ ಇದ್ದಿದ್ದರಿಂದ ಅವರಿಗೆ ಬೇಸರವಾಗಿದ್ದಂತೂ ನಿಜ.

 ಆದರೆ ‘ಪರವಾಗಿಲ್ಲ ಬಿಡಿ, ನಿಮ್ಮನ್ನು ಹೇಗೂ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರನ್ನಾಗಿ ಮಾಡುತ್ತೀವಲ್ಲ’ ಎಂದು ಪಕ್ಷದವರು ಹೇಳಿದಾಗ ಅವರು ತಾತ್ಕಾಲಿಕವಾಗಿ ಸಮಾಧಾನಪಟ್ಟುಕೊಂಡಿದ್ದರು. ‘ಇಷ್ಟರಲ್ಲೇ ಎಲ್ಲ ಆರೋಪಗಳಿಂದಲೂ ಖುಲಾಸೆಯಾಗಿ ಆರೋಪಮುಕ್ತರಾಗುತ್ತೀರ. ಆಗ ನಿಮ್ಮನ್ನು ಅಧ್ಯಕ್ಷರನ್ನಾಗಿಸೋಣ’ ಎಂದಾಗ ಯಡಿಯೂರಪ್ಪನವರಿಗೆ ‘ಇದರಲ್ಲೇನೋ ಸರಿ ಇಲ್ಲ’ ಎನಿಸಿದ್ದು ಸಹಜ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪದವಿ ಕೊಡುವಾಗ ತೊಡಕಾಗದ ಭ್ರಷ್ಟಾಚಾರ ಆರೋಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೇಗೆ ತೊಡಕಾಯಿತೆಂಬುದು ಅವರಿಗೆ ಅರ್ಥವಾಗಿಲ್ಲ. 

ಕೇಂದ್ರ ಸಂಪುಟ ಪುನರ್‌ರಚನೆ ಆಗಿಬಿಡಲಿ, ಕರ್ನಾಟಕದ ಮಂತ್ರಿಮಂಡಲ ಪುನರ್‌ರಚನೆ ಆಗಿಬಿಡಲಿ, ಈ ಆಷಾಢ ಮುಗಿದುಬಿಡಲಿ, ಧನುರ್ಮಾಸ ಕಳೆಯಲಿ, ಗ್ರಹಣದ ಪ್ರಭಾವ ಕಡಿಮೆ ಆಗಲಿ, ಗ್ರಾಮ ಪಂಚಾಯಿತಿ ಚುನಾವಣೆ ಮುಗಿಯಲಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಪೂರ್ಣಗೊಳ್ಳಲಿ, ಜಿಲ್ಲಾ ಪಂಚಾಯಿತಿ ಚುನಾವಣೆ ತಲೆಬಿಸಿ ಹೋಗಿಬಿಡಲಿ, ಪಕ್ಷದ ಜಿಲ್ಲಾವಾರು ಚುನಾವಣೆ ಮುಗಿದುಬಿಡಲಿ ಎಂದು ಒಂದೊಂದೇ ಸಬೂಬು ಹೇಳುತ್ತಾ ಯಡಿಯೂರಪ್ಪನವರ ಕಿವಿಯ ಮೇಲೆ ಒಂದೊಂದೇ ಕಮಲದ ಹೂವಿಡುತ್ತಾ ಬಿಜೆಪಿ ನಾಯಕತ್ವ ಅವರು ತಾಳ್ಮೆ ಕೆಡದಂತೆ ಹೇಗೆ ಅವರನ್ನು ನಡೆಸಿಕೊಂಡು ಬಂದಿದೆಯೋ ಅದೇ ಆಶ್ಚರ್ಯಕರ ಸಂಗತಿ.

ಯಡಿಯೂರಪ್ಪನವರಿಗೆ ತಮ್ಮ ಕುಟುಂಬದವರು ವ್ಯಾವಹಾರಿಕವಾಗಿ ಸಬಲರಾಗಿರುವುದು ಸಮಾಧಾನದ ವಿಷಯವಾಗಿದ್ದರೂ, ವೃತ್ತಿ ರಾಜಕಾರಣಿಯಾಗಿರುವ ಅವರು ದೊಡ್ಡ ಜವಾಬ್ದಾರಿಯಿಲ್ಲದೆ, ಸದಾನಂದ ಗೌಡ ಮುಂತಾದವರು ಕೇಂದ್ರ ಮಂತ್ರಿಗಳಾಗಿರುವುದನ್ನು ನೋಡುತ್ತಾ ಸಹಿಸಿಕೊಂಡಿರುವುದೇ ಹರಸಾಹಸ. ಹಾಗೆ ನೋಡಿದರೆ ಯಡಿಯೂರಪ್ಪನವರಿಗೆ ಅಂಥ ವಿರೋಧಿಗಳ್ಯಾರೂ ಇಲ್ಲ. ವೈಯಕ್ತಿಕವಾಗಿ ಅನೇಕರು  ಅವರ ಬಗ್ಗೆ ಒಳ್ಳೆಯದನ್ನೇ ಹೇಳುತ್ತಾರೆ. ಸಮಸ್ಯೆ ಇರುವುದು ಅವರ ನಡವಳಿಕೆ ಹಾಗೂ ಅವರ ಒಡನಾಡಿಗಳ ಬಗ್ಗೆ. ಪದವಿ ಅಥವಾ ಅಧಿಕಾರ ಸಿಕ್ಕ ತಕ್ಷಣ ಅವರು ಬದಲಾಗಿಬಿಡುತ್ತಾರೆ.

ತಮ್ಮ ಸುತ್ತಲೂ ಆಪ್ತರ ಗುಂಪು ಕಟ್ಟಿಕೊಂಡು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ, ತಮ್ಮ ಆಪ್ತರನ್ನೇ ಪ್ರಮುಖರನ್ನಾಗಿ ಮಾಡುತ್ತಾರೆ, ಭ್ರಷ್ಟಾಚಾರದಲ್ಲಿ ತೊಡಗಿಬಿಡುತ್ತಾರೆ, ಸಿಟ್ಟು ಸೆಡವು ಎಲ್ಲ ಆರಂಭಿಸುತ್ತಾರೆ, ತಾಳ್ಮೆ ಕಳೆದುಕೊಂಡು ಬಿಡುತ್ತಾರೆ ಎಂದೆಲ್ಲ ಹೇಳಲಾಗುತ್ತದೆ. ಯಡಿಯೂರಪ್ಪನವರ ಬಲದಿಂದ ಬಿಜೆಪಿ  ಅಧಿಕಾರಕ್ಕೆ ಬಂದರೂ ಅದು ಯಡಿಯೂರಪ್ಪ ಅವರಿಗೆ ಸಿಕ್ಕ ಅಧಿಕಾರವಾಗಿ ಬಿಡುತ್ತದೆಯೇ ವಿನಾ ಬಿಜೆಪಿ ಅಧಿಕಾರವಲ್ಲ ಎಂದೂ ಟೀಕಾಕಾರರು ಹೇಳುತ್ತಾರೆ. ಯಡಿಯೂರಪ್ಪ ಅವರಿಗೆ  ಯಾವ ಪರ್ಯಾಯವೂ ಸಾಧ್ಯವಿಲ್ಲದಿದ್ದರೆ ಮಾತ್ರ ಮನಸ್ಸಿಲ್ಲದ ಮನಸ್ಸಿನಿಂದ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅನೇಕ ನಾಯಕರು ಹೇಳುತ್ತಾರೆ.

ಮುಂದಿನ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಒಂದು ಮಂತ್ರಿಸ್ಥಾನ ಸಿಗುವಂತೆ ಮಾಡಿ ಕೇಂದ್ರಕ್ಕೆ ಕಳುಹಿಸಿ
ಬಿಡಬೇಕು ಎಂಬ ಆಲೋಚನೆಯೂ ಇದೆ. ಯಡಿಯೂರಪ್ಪ ಅವರನ್ನು ಮಂತ್ರಿ ಮಾಡುವ ವಿಚಾರದಲ್ಲಿ ಹೈಕಮಾಂಡ್‌ಗೂ ಒಲವಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅನೇಕ ಯಡವಟ್ಟುಗಳನ್ನು ಮಾಡಿಕೊಂಡು, ಚೌಕಾಸಿ ಮಾಡುವ ಸಾಮರ್ಥ್ಯವನ್ನೂ ಕಳೆದುಕೊಂಡು, ಬಹಳಷ್ಟು ಹಣವನ್ನೂ ಕಳೆದುಕೊಂಡು ದುರ್ಬಲರಂತೆ ಕಂಡುಬರುತ್ತಿರುವ ಯಡಿಯೂರಪ್ಪ, ಮತ್ತಷ್ಟು ಯಡವಟ್ಟು ಮಾಡಿಕೊಳ್ಳಲು ಸಿದ್ಧರಿದ್ದಂತಿಲ್ಲ. ಅದರಲ್ಲೂ ಸಿ.ಟಿ.ರವಿ ಅವರಂಥ ಕಿರಿಯ  ನಾಯಕನನ್ನು ಯಡಿಯೂರಪ್ಪ ಅವರ ಪ್ರತಿಸ್ಪರ್ಧಿ ಎಂಬಂತೆ ಬಿಂಬಿಸುತ್ತಿರುವುದು ಮತ್ತು ಆ ಬಗ್ಗೆ ಚರ್ಚೆ ನಡೆಸುತ್ತಿರುವುದು ಯಡಿಯೂರಪ್ಪನವರಿಗೆ ಮಾಡುವ ಅಪಮಾನವೇ ಸರಿ.

ಈ ಮಧ್ಯೆ ವಿಪರೀತ ಹುಷಾರಾಗಿ ಬಿಟ್ಟಿರುವ ಜಗದೀಶ ಶೆಟ್ಟರ್ ಸದನದಲ್ಲಿ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಾ, ಆರ್ಭಟಿಸುತ್ತಾ, ಸರ್ಕಾರವನ್ನು ಕಾರಣವಿದ್ದೋ ಇಲ್ಲದೆಯೋ ಟೀಕಿಸುತ್ತಾ, ತಾವೇ ಬಿಜೆಪಿಯ ರಾಜ್ಯನಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಮತ್ತು ಪಕ್ಷದ ಕಾರ್ಯಕರ್ತರು ಬಹಳಷ್ಟು ಗೊಂದಲಕ್ಕೀಡಾಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಬಿಎಸ್‌ವೈ ಅಧ್ಯಕ್ಷರಾದರೆ ರಾಜ್ಯದಲ್ಲಿ ಪಕ್ಷದ ಅದೃಷ್ಟ ಖುಲಾಯಿಸುವುದಂತೂ ಖಂಡಿತ. ಕಾರ್ಯಕರ್ತರಲ್ಲೂ ಹುರುಪು ಮೂಡುವುದು ಖಚಿತ. ಪಕ್ಷದಲ್ಲಿ ಬಹಳಷ್ಟು ಚೇತರಿಕೆ ಕಂಡು ಅಧಿಕಾರಕ್ಕೂ ಬರುವ ಸಾಧ್ಯತೆ ಇದೆ. ಆದರೂ ಸದ್ಯಕ್ಕೆ  ಪಕ್ಷವೇ ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT