ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾವೇಶಕ್ಕೆ ಹೇಗೆ ಬರಲಿ?

ಈಗಿನ ಸರ್ಕಾರಕ್ಕೆ ಎರಡು ವರ್ಷ ತುಂಬಿದೆ. ಕೃಷಿಗೆ ಸರ್ಕಾರದಿಂದ ಪ್ರೋತ್ಸಾಹವೂ ದೊರೆತಿದೆ. ಆದರೆ ಕೃಷಿಕರ ಬವಣೆ ನೀಗಿದೆಯೇ?
Last Updated 15 ಮೇ 2015, 19:30 IST
ಅಕ್ಷರ ಗಾತ್ರ

ರಾಜಕೀಯದಲ್ಲಿ ಒಂದೊಂದು ದಿನ ಕಳೆಯುವುದೂ ಕಷ್ಟವಾಗಿರುವ ಈ ಕಾಲದಲ್ಲಿ, ಹೆಚ್ಚಿನ ರಂಪಾಟಗಳಿಲ್ಲದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎರಡು ವರ್ಷಗಳನ್ನು ಪೂರೈಸಿರುವುದು ಒಂದು ಸಾಧನೆಯೇ. ಈ ಎರಡು ವರ್ಷಗಳ ಆಡಳಿತದ ಸಾರ್ಥಕ್ಯವನ್ನು ಹೇಳಿಕೊಳ್ಳಲು  ಪಕ್ಷ, ದಾವಣಗೆರೆಯಲ್ಲಿ ‘ಸರ್ವೋದಯ ಸಮಾವೇಶ’ ಏರ್ಪಡಿಸಿದೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರ ಎಂದರೆ ಜನರು. ಹಾಗಾಗಿ ಸರ್ಕಾರದ ಸಾಧನೆ ಎಂದರೆ ನಮ್ಮದೇ ಸಾಧನೆ. ಆದ್ದರಿಂದ ನಾವೂ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ‘ಚುನಾವಣೆ ವೇಳೆ ನೀಡಿದ 165 ಭರವಸೆಗಳಲ್ಲಿ 100 ಭರವಸೆಗಳನ್ನು ಈಡೇರಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಸೂಚಿಸುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ  ಸರ್ಕಾರ ಎರಡು ಬಜೆಟ್‌ ಮಂಡಿಸಿದೆ. ಜನರ ಜೀವನ ಮಟ್ಟದಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂದೂ ಗಮನಿಸಲು ಇದು ಸಕಾಲ.

ಸರ್ಕಾರ ತೆಗೆದುಕೊಳ್ಳುವ ಕೆಲವು ನಿರ್ಣಯಗಳು ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಕೃಷಿಕಳಾಗಿ  ಕೆಲವನ್ನು ಗಮನಿಸಿದ್ದೇನೆ, ಅನುಭವಿಸಿದ್ದೇನೆ.

ಹವಾಮಾನ ವೈಪರೀತ್ಯ, ಮಾರುಕಟ್ಟೆ ಏರಿಳಿತ, ಕೃಷಿ ಕಾರ್ಮಿಕರ ಅಲಭ್ಯತೆ ಇದನ್ನೆಲ್ಲಾ ಎದುರಿಸಲು ಬಹುಬೆಳೆ ಪದ್ಧತಿ ಸೂಕ್ತ ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

ಸರ್ಕಾರ ಎರಡೂ ಬಜೆಟ್‌ನಲ್ಲಿ ಕೃಷಿ, ತೋಟಗಾರಿಕೆ,  ಹೈನುಗಾರಿಕೆಗಳಿಗೆ ಉತ್ತೇಜನವನ್ನೂ ಕೊಟ್ಟಿದೆ. ಬದಲಾ ವಣೆ ಬಯಸಿ ಜನರು ಹೊಸ ಸರ್ಕಾರವನ್ನು ಆರಿಸಿದ್ದಾರೆ. ಆದ್ದರಿಂದ ಕಳೆದ ಸರ್ಕಾರಕ್ಕಿಂತ ಹೆಚ್ಚಿನ ಪ್ರೋತ್ಸಾಹಧನ, ಸಹಾಯಧನಗಳನ್ನೂ ಈ ಸರ್ಕಾರ ಕೊಟ್ಟಿದೆ. ಇದನ್ನು ರೈತರಿಗೆ ಮುಟ್ಟಿಸುವಲ್ಲಿ ಅಧಿಕಾರಿಗಳ ಪಾತ್ರವೇ ಮುಖ್ಯ ವಾದುದರಿಂದ ಅವರಿಗೆ ಸ್ಪಷ್ಟಗುರಿಯನ್ನು ನಿಗದಿಪಡಿಸ ಲಾಗಿತ್ತು. ಗುರಿ ಮುಟ್ಟಲು ಅಧಿಕಾರಿಗಳೂ ಶ್ರಮ ಹಾಕಿದರು. ಉತ್ತೇಜನಗೊಂಡ ರೈತರು ಉತ್ತಮ ಬೆಳೆ ಯನ್ನೇ ಬೆಳೆದಿದ್ದಾರೆ. ಆದರೆ ಬೆಳೆ ಬೆಳೆಯಲು ಖರ್ಚಾದ ಹಣವೂ ಕೈಗೆ ಬರುವ ಪರಿಸ್ಥಿತಿ ಮಾರುಕಟ್ಟೆಯಲ್ಲಿಲ್ಲ.

ಅಂಗಾಂಶಕೃಷಿ ಬಾಳೆ ತಳಿಗೆ ಸರ್ಕಾರದಿಂದ ಪ್ರೋತ್ಸಾ ಹಧನ ದೊರೆತದ್ದರಿಂದಲೂ, ಈ ಬಾಳೆಗಳು ರೋಗ ಮುಕ್ತವಾಗಿದ್ದು ಹೆಚ್ಚಿನ ಇಳುವರಿ ಬರುವುದರಿಂದಲೂ ಕೃಷಿಕರು ಬಾಳೆ ಬೆಳೆಯಲು ಮುಂದಾದರು. ಉತ್ತೇಜನ, ಒತ್ತಾಯದಿಂದ ವಾಡಿಕೆಗಿಂತ ಹೆಚ್ಚಿನ ಪ್ರದೇಶದಲ್ಲಿ ಬಾಳೆ ಬೆಳೆದುನಿಂತಿದೆ. ಏಕಕಾಲದಲ್ಲೇ, ನಿರಂತರವಾಗಿ ಫಸಲು ಬರಲಾರಂಭಿಸಿದ್ದರಿಂದ ಮಾರುಕಟ್ಟೆಯಲ್ಲಿ ದರ ಕುಸಿ ದಿದೆ. ಕಂಗಾಲಾದ ರೈತರು ಕಟಾವಿಗೆ ಬಂದ ಬಾಳೆಗೊನೆ ಯನ್ನು ಗಿಡದಿಂದ ಇಳಿಸದೆ ಹಾಗೇ ಬಿಟ್ಟಿದ್ದಾರೆ.

ಆಧುನಿಕ ಪದ್ಧತಿಯಲ್ಲಿ ರೇಷ್ಮೆ ಬೆಳೆ ಬೆಳೆಯಲು ರೈತರಿಗೆ ಅರಿವು ಮೂಡಿಸಲಾಯಿತು. ಕಡಿಮೆ ಕಾರ್ಮಿಕರನ್ನು ಬೇಡುವ ಈ ಹೊಸ ರೀತಿಯ ರೇಷ್ಮೆ ಕೃಷಿಗೆ ರೈತರು ಮಾರುಹೋದರು. ಹಿಪ್ಪುನೇರಳೆ ಸಸಿ ನೆಡುವುದರಿಂದ ಹಿಡಿದು ರೇಷ್ಮೆ ಗೂಡು ಮಾರುಕಟ್ಟೆಗೆ ಹೋಗುವವರೆಗೂ ಪ್ರತಿಯೊಂದು ಹಂತದಲ್ಲೂ ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ. ರೇಷ್ಮೆ ಹುಳು ಸಾಕಾಣಿಕೆಗೆ ಅನುಕೂಲವಾಗುವಂತೆ ಕಟ್ಟಡ ವಿನ್ಯಾಸಗೊಳಿಸಿ, ನಿರ್ಮಿಸಲೂ ಇಲಾಖೆಯಿಂದ ಸಹಾಯಧನ ನೀಡಲಾಯಿತು. ಸುಲಭವಾಗಿ ರೇಷ್ಮೆ ಬೆಳೆಯಲು ಅರಿತ ರೈತರು ಮುಗಿಬಿದ್ದು ರೇಷ್ಮೆ ಹುಳು ಸಾಕಲಾರಂಭಿಸಿದರು. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₨ 500ರಿಂದ ₨ 600ರ ವರೆಗೂ ಇದ್ದ ಗೂಡಿನ ಧಾರಣೆ ₨ 100ರ ಸಮೀಪ ಬಂದು ತಲುಪಿದೆ.

ನೀರಿನ ಮಿತವ್ಯಯ ಸಾಧಿಸಿ ಕಬ್ಬನ್ನೂ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆದಿದ್ದರಿಂದ, ಹೆಚ್ಚು ಇಳುವರಿ ಕೊಡುವ, ರೋಗಮುಕ್ತ ತಳಿಗಳ ಬಿತ್ತನೆ ದೊರೆತಿದ್ದರಿಂದ, ಮೈತುಂಬಿಕೊಂಡು ಆಳೆತ್ತರ ಬೆಳೆದ ಕಬ್ಬು, ಬೆಳೆದ ರೈತನಿಗೆ ಸಂತಸ ತರಲಿಲ್ಲ. ಆಲೆಮನೆಯವರು ಬೆಲ್ಲ ಮಾಡಲು ಕೇಳುವ ಹಣ, ಕಬ್ಬು ಕಟಾವು ಮಾಡಲು ಕೊಡಬೇಕಾದ ಕೂಲಿ ಎಲ್ಲವೂ ಒಂದಕ್ಕೆರಡಾಗಿ ಏರಿದೆ. ಸಕ್ಕರೆ ಕಾರ್ಖಾನೆಗಳ ಬಗ್ಗೆ ಇಲ್ಲಿ ಬರೆಯುವುದೇ ಬೇಡ, ಎಲ್ಲರಿಗೂ ಗೊತ್ತಿರುವ ವಿಷಯವೇ. ಹೀಗಾಗಿ ಕಬ್ಬು ಬೆಳೆದ ರೈತ ಅತಂತ್ರ ಸ್ಥಿತಿಯಲ್ಲಿದ್ದಾನೆ.

ಸಾಂಪ್ರದಾಯಿಕವಾಗಿ ಈ ಎಲ್ಲಾ ಬೆಳೆಯನ್ನೂ ಬೆಳೆಯುತ್ತಿದ್ದ ರೈತರ ಜೊತೆ ಹೊಸ ರೈತರೂ ಸೇರಿಕೊಂಡರು. ಮಾರುಕಟ್ಟೆ ವಿಸ್ತಾರ ಮಾಡದೆ ಬೆಳೆ ಬೆಳೆಯಲು ಪ್ರೋತ್ಸಾಹಿಸಿದ್ದರಿಂದ ರೈತರು ನಷ್ಟ ಅನುಭವಿಸುವಂತಾಯಿತು. ಪಟ್ಟಾ, ಪಹಣಿ, ಖಾತೆ, ಕಿರ್ದಿ ಇದ್ದ ರೈತರಿಗೆ ಸರ್ಕಾರದ ಸಹಾಯಧನವಾದರೂ ಸಿಕ್ಕಿದೆ. ಹಳೇ ತಲೆಮಾರಿನ ರೈತರಿಗೆ ಇದೆಲ್ಲಾ ಗೋಜಲು. ಹಾಗಾಗಿ ಬೆಳೆ ಬೆಳೆಯಲು ಸರ್ಕಾರದ ಸಹಾಯವನ್ನು ಅವರು ಪಡೆದುಕೊಳ್ಳವುದು ವಿರಳ.  ಬೆಳೆ ಬೆಳೆದ ಪ್ರದೇಶಗಳು, ಅಂದಾಜು ಇಳುವರಿ, ಮಾರುಕಟ್ಟೆಗೆ ಫಸಲು ಬರುವ ಸಮಯ, ಈ ಎಲ್ಲದರ ವಿವರಗಳೂ ಸರ್ಕಾರದ ಇಲಾಖೆಗಳಲ್ಲೇ ಇದ್ದುದರಿಂದ ಮುಂಜಾಗ್ರತೆಯಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ    ಕಲ್ಪಿಸಲು ಕ್ರಮ ಕೈಗೊಂಡಿದ್ದರೆ ತುಂಬಾ ಅನುಕೂಲ ಆಗುತ್ತಿತ್ತು.

ಹೈನುಗಾರಿಕೆಗೆ ಪ್ರೋತ್ಸಾಹಿಸಲು ಸರ್ಕಾರ, ಲೀಟರ್‌ ಹಾಲಿಗೆ ಮೊದಲಿದ್ದ ಎರಡು ರೂಪಾಯಿ ಪ್ರೋತ್ಸಾಹಧನವನ್ನು ನಾಲ್ಕು ರೂಪಾಯಿಗೆ ಹೆಚ್ಚಿಸಿತು. ಹಾಲಿನ ಗುಣಮಟ್ಟದ ಆಧಾರದ ಮೇಲೆ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಯಿತು. ಎಮ್ಮೆ, ಜರ್ಸಿಹಸು, ಎಚ್‌ಎಫ್ ಹಸುಗಳ ಹಾಲು ಬೇರೆ ಬೇರೆ ಜಿಡ್ಡಿನಂಶ ಹೊಂದಿರುತ್ತದೆ. ರೈತರು ಹಾಲು ಹಾಕುವ ಹಸುವಿನ ತಳಿ ಆಧಾರದ ಮೇಲೆ ಕೋಷ್ಟಕವನ್ನು ಮಾಡಿದ್ದರೆ ರೈತರಿಗೆ ವ್ಶೆಜ್ಞಾನಿಕ ರೀತಿಯಲ್ಲಿ ಪ್ರೋತ್ಸಾಹಧನದ ಹಣ ಕೊಟ್ಟಂತಾಗುತ್ತಿತ್ತು. ಸಂಘಗಳು ಸರಬರಾಜು ಮಾಡುವ ಹಾಲಿಗೆ ಅನ್ವಯಿಸುವಂತೆ ಏಕರೂಪದ ಕೋಷ್ಟಕದ ಗುಣಮಟ್ಟದ ಆಧಾರದ ಮೇಲೆ ಹಣ ಕೊಡುವುದರಿಂದ ಎಚ್‌ಎಫ್ ತಳಿ ಹಸುಗಳು ಹೆಚ್ಚಾಗಿರುವ ಸಂಘಗಳಲ್ಲಿ ಕಡಿಮೆ ಜಿಡ್ಡಿನಂಶದ ಹಾಲು ಸಂಗ್ರಹವಾಗುತ್ತದೆ. ಹಾಗಾಗಿ ಸರ್ಕಾರ ಕೊಡುವ ನಾಲ್ಕು ರೂಪಾಯಿ ಪ್ರೋತ್ಸಾಹಧನ  ಸಿಗುವುದೇ ಇಲ್ಲ.

ಕಳೆದ ವರ್ಷದ ಬತ್ತದ ಸುಗ್ಗಿ ಹಂಗಾಮಿನಲ್ಲಿ ಲೆವಿ ವಿಷಯದಲ್ಲಿ ಅಕ್ಕಿ ಗಿರಣಿ ಮಾಲೀಕರಿಗೂ, ಸರ್ಕಾರಕ್ಕೂ ಸಂಘರ್ಷವೇರ್ಪಟ್ಟು ಮಾರುಕಟ್ಟೆಗೆ ಬತ್ತ ಆವಕವಾಗುವ ಸಮಯದಲ್ಲೇ ಅಕ್ಕಿಗಿರಣಿಗಳಿಗೆ ಮಾಲೀಕರು ಬೀಗಮುದ್ರೆ ಹಾಕಿದ್ದರು. ಕೊನೆಗೆ ಅಕ್ಕಿಗಿರಣಿ ಮಾಲೀಕರೇ ಗೆದ್ದು, ಸರ್ಕಾರ ಯಥಾಸ್ಥಿತಿ ಕಾಪಾಡಲು ಒಪ್ಪಿಕೊಂಡಿತು. ಬತ್ತ ಸಂಗ್ರಹಿಸಲು ಅನುಕೂಲವಿಲ್ಲದೇ, ದರ ಮತ್ತಷ್ಟು ಕುಸಿದರೆ ಎಂಬ ಭೀತಿಯಿಂದ ರೈತರು, ದಲ್ಲಾಳಿಗಳು ಕೇಳಿದ ಬೆಲೆಗೆ ಬತ್ತ ಮಾರಿ ನಷ್ಟ ಮಾಡಿಕೊಂಡರು.

ಎಷ್ಟೆಲ್ಲಾ ಶ್ರಮವಹಿಸಿ, ಅನೇಕ ಬಗೆಯ ಬೆಳೆ ಬೆಳೆದರೂ, ಬದುಕುವ ದಾರಿಯನ್ನು ಹುಡುಕುವಂತಾಗಿದೆ ರೈತರಿಗೆ. ರೈತರೂ ಸಹ ಅನೇಕ ಪದಾರ್ಥಗಳನ್ನು, ಸೇವೆಗಳನ್ನು ಹಣ ಕೊಟ್ಟೇ ಪಡೆಯಬೇಕಾದ ಇಂದಿನ ದಿನಗಳಲ್ಲಿ, ದಿನ ಕಳೆಯುವುದೇ ಕಷ್ಟವಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ತರಹೇವಾರಿ ಬೆಳೆ ಬೆಳೆದೂ ನಮ್ಮ ಬದುಕು ಹಿಮ್ಮುಖ ವಾಗಿ ಚಲಿಸುತ್ತಿರುವಾಗ ‘ಸರ್ವೋದಯ ಸಮಾವೇಶ’ ದಲ್ಲಿ ನಾವು ಹೇಗೆ ಪಾಲ್ಗೊಳ್ಳುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT