ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಸಿಎಸ್ ಮತ್ತು ಭಾಷಾ ಬೋಧನೆ

Last Updated 15 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆವವರ ಪ್ರಮಾಣಕ್ಕೆ ತಕ್ಕಂತೆ ಸಂಶೋಧನಾ ಬರವಣಿಗೆ  ಕಾಣಿಸುವುದಿಲ್ಲ ಎಂದಾದರೆ ಅದಕ್ಕೆ ಒಂದು ಕಾರಣ ಭಾಷೆಯ ಕಡೆಗಣನೆ

ಪದವಿ ಶಿಕ್ಷಣದಲ್ಲಿ ದೇಶದಾದ್ಯಂತ ಆಯ್ಕೆ ಆಧಾರಿತ ಗುಣಾಂಕ ಪದ್ಧತಿಯನ್ನು (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ- ಸಿಬಿಸಿಎಸ್) ಅಳವಡಿಸಿಕೊಳ್ಳಬೇಕೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಸೂಚಿಸಿದೆ.

ವಿದ್ಯಾರ್ಥಿಗಳಿಗೆ ಕಲಿಕೆಯ ವಿಷಯಗಳನ್ನು ಆಯ್ದುಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ನೀಡುವ ಈ ಪದ್ಧತಿ ವಿದ್ಯಾರ್ಥಿ ಕೇಂದ್ರಿತ ಎಂದೂ ಹೇಳಲಾಗಿದೆ. ಮಾರ್ಗಸೂಚಿಯ ಪ್ರಕಾರ ಸಾರ ವಿಷಯಗಳ (ಕೋರ್ ಸಬ್ಜೆಕ್ಟ್) ಜೊತೆಗೆ ಬಹುಶಿಸ್ತುಗಳ ಹಾಗೂ ಕೌಶಲಾಧಾರಿತ ವಿಷಯಗಳ ಕಲಿಕೆಗೂ ಇಲ್ಲಿ ಅವಕಾಶವಿದೆ. ಈ ಪದ್ಧತಿ ಜಗತ್ತಿನಾದ್ಯಂತ ಒಪ್ಪಿತವಾಗಿದ್ದು, ಹೆಚ್ಚು ಸಮರ್ಪಕವಾದುದು ಎಂದೂ ಹೇಳಲಾಗುತ್ತಿದೆ.

ಈ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾದ ಒತ್ತಡದಲ್ಲಿರುವ ವಿಶ್ವವಿದ್ಯಾಲಯಗಳು, ಈಗ ಇದನ್ನು ಜಾರಿಗೆ ತರುವ ಹಂತದಲ್ಲಿವೆ. ಮಾರ್ಗಸೂಚಿ ಪ್ರಕಾರ, ಯುಜಿಸಿ ನಿಗದಿಪಡಿಸಿದ ಪಠ್ಯಕ್ರಮದಲ್ಲಿ ಕೇವಲ ಶೇಕಡ 30ರಷ್ಟು ಬದಲಾವಣೆ ಮಾಡಲು ವಿಶ್ವವಿದ್ಯಾಲಯಗಳಿಗೆ ಸ್ವಾತಂತ್ರ್ಯವಿದೆ.

ಈ ಮಾರ್ಗಸೂಚಿ ಅನ್ವಯ ಪದವಿ ಶಿಕ್ಷಣದಲ್ಲಿ ಭಾಷಾ ಬೋಧನೆಗೆ ಇರುವ ಸ್ಥಾನಮಾನ ವಿವೇಚನಾರ್ಹವಾಗಿದೆ. ಇದರಲ್ಲಿ, ಆನರ್ಸ್‌ನೊಂದಿಗಿನ ಬಿ.ಎ., ಬಿ.ಕಾಂ., ಬಿ.ಎಸ್ಸಿ. ಇತ್ಯಾದಿ ಪದವಿಗಳಲ್ಲಿ ಹಾಗೂ ಬಿ.ಎಸ್ಸಿ. ಪದವಿಯಲ್ಲಿ ಭಾಷಾ ಅಧ್ಯಯನವನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಲ್ಲ. ಭಾಷೆ ಆಯ್ಕೆ ಮಾಡಿಕೊಳ್ಳುವುದಾದರೂ ಇಂಗ್ಲಿಷ್ ಅಥವಾ ಕನ್ನಡದಂಥ ಯಾವುದಾದರೂ ಒಂದು ಆಧುನಿಕ ಭಾರತೀಯ ಭಾಷೆ ಆಯ್ದುಕೊಂಡರೆ ಸಾಕು. ಆದರೆ ಅಂಥ ಭಾಷೆಗೆ ಇರುವ ಗುಣಾಂಕ ಮುಖ್ಯ ಪತ್ರಿಕೆಗಳಿಗಿಂತ ಕಡಿಮೆ.

ಆನರ್ಸ್ ಅಲ್ಲದ ಬಿ.ಎ. ಮತ್ತು ಬಿ.ಕಾಂ. ಪದವಿಗಳಿಗೆ ಇಂಗ್ಲಿಷ್ ಮತ್ತು ಒಂದು ಆಧುನಿಕ ಭಾರತೀಯ ಭಾಷೆ ಕಡ್ಡಾಯವಿದ್ದರೂ, ಅದು ಕೇವಲ ಎರಡು ಸೆಮಿಸ್ಟರ್‌ಗಳಿಗೆ ಸೀಮಿತ. ಒಟ್ಟಿನಲ್ಲಿ, ವಿಜ್ಞಾನದಲ್ಲಿ ಪದವಿ ಪಡೆಯುವವರಿಗೆ ಹಾಗೂ ಆನರ್ಸ್ ಪದವೀಧರರಿಗೆ ಭಾಷೆ ಅನಿವಾರ್ಯವಲ್ಲ ಎಂದಾಯಿತು.

ಪದವಿಯನ್ನು ಪಡೆಯುವ ವಿದ್ಯಾರ್ಥಿಗಳು ಭಾಷೆಯನ್ನು, ಅದರಲ್ಲೂ ಕನ್ನಡದಂಥ ಪ್ರಾದೇಶಿಕ ಭಾಷೆಯನ್ನು ಏಕೆ ಕಲಿಯಬೇಕು? ಪದವಿ ಪಡೆದ ವಿದ್ಯಾರ್ಥಿಗಳಿಂದ ಸಮಾಜಕ್ಕೆ ಪ್ರಯೋಜನವಾಗಬೇಕಾದರೆ, ಅಂಥ ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಪಡೆದ ಜ್ಞಾನವನ್ನು ಇತರರಿಗೆ ತಿಳಿಸಲು ಸಾಧ್ಯವಾಗಬೇಕು. ಜ್ಞಾನದ ಪರಂಪರೆ ಮುಂದುವರಿಯಬೇಕಾದುದು ಹೀಗೆ.

ಇದಕ್ಕಿರುವ ಏಕೈಕ ಮಾಧ್ಯಮ ಭಾಷೆ. ಅರ್ಥ ಮಾಡಿಕೊಳ್ಳುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು- ಈ ನಾಲ್ಕನ್ನು ಭಾಷೆಯ ಕೌಶಲಗಳೆಂದು ಹೇಳುತ್ತಾರೆ. ಪದವಿ ಹಂತಕ್ಕೆ ತಲುಪಿದ ವಿದ್ಯಾರ್ಥಿಗೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಈ ಕೌಶಲಗಳು ಸಿದ್ಧಿಸಿರುತ್ತವೆ. ಹೀಗಿರುವಾಗ ಪದವಿಯಲ್ಲಿ ಕನ್ನಡ ಭಾಷಾ ಬೋಧನೆ ಎಂದರೆ ಏನನ್ನು ಬೋಧಿಸುವುದು?

ಈ ಪ್ರಶ್ನೆಗೆ ಉತ್ತರವಾಗಿ ಸಾಹಿತ್ಯದ ಮೂಲಕ ಭಾಷಾ ಬೋಧನೆ ಎಂಬ ಪರಿಕಲ್ಪನೆಯನ್ನೇ ನಾವು ಪರಿಗಣಿಸಬೇಕಾಗುತ್ತದೆ. ಅಂದರೆ ಮೇಲೆ ಹೇಳಿದ ನಾಲ್ಕು ಕೌಶಲಗಳಿಂದಾಚೆಗಿನ ಕೌಶಲವನ್ನು ಕಲಿಸುವುದು ಭಾಷಾ ಬೋಧಕರ ಕೆಲಸವಾಗುತ್ತದೆ. ಭಾಷೆಯನ್ನು ಬಳಸುವಾಗ ವಿವಿಧ ಶೈಲಿಗಳು ಬಳಕೆಯಾಗುತ್ತವೆ.

ಸಾಹಿತ್ಯದ ಭಾಷೆಯು ಅಲಂಕಾರಗಳೂ ಸೇರಿದಂತೆ ವಿಭಿನ್ನ ಶೈಲಿ ಗಳನ್ನು ಒಳಗೊಂಡಿರುತ್ತದೆ. ತಾಂತ್ರಿಕ ವಿಚಾರಗಳನ್ನು ಹೇಳುವಾಗ ಬಳಸುವ ತಾಂತ್ರಿಕ ಶೈಲಿಯೂ ಸಾಹಿತ್ಯದಲ್ಲಿರುತ್ತದೆ. ಹೀಗಾಗಿ ಸಾಹಿತ್ಯದ ಮೂಲಕ ಭಾಷೆಯನ್ನು ಕಲಿಯುವುದೆಂದರೆ, ಭಾಷಿಕ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಬಹು ಸಾಧ್ಯತೆಗಳನ್ನು ಅರಿಯುವುದೇ ಆಗಿದೆ.

ಹಾಗಾಗಿಯೇ ಪದವಿ ಹಂತದ ಭಾಷಾ ಕಲಿಕೆಯೆಂದರೆ ಇತರರ ವಿವಿಧ ಅಭಿವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಸ್ವತಃ ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಮಾಡುವುದನ್ನು ಕಲಿಯುವ ಪ್ರಕ್ರಿಯೆಯಾಗಿದೆ. ಅದು ಕೇವಲ ಸಂವಹನದ ಕಲಿಕೆ ಆಗಬಾರದು.

ಇಂದು ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆವವರ ಪ್ರಮಾಣಕ್ಕೆ ತಕ್ಕಂತೆ ಸಂಶೋಧನಾ ಬರವಣಿಗೆ ಇತ್ಯಾದಿ ಕಾಣಿಸುವುದಿಲ್ಲ ಎಂದಾದರೆ ಅದಕ್ಕೆ ಒಂದು ಕಾರಣ ಭಾಷೆಯ ಕಡೆಗಣನೆ. ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಯಲ್ಲಿ ಭಾಷೆಯ ಪಾತ್ರ ತುಂಬ ದೊಡ್ಡದು.

ಸಬಲೀಕರಣ ಸಾಧಿಸುವಲ್ಲಿ ಭಾಷಾ ಕೌಶಲ ಬಹು ದೊಡ್ಡ ಹತ್ಯಾರು. ವಿದ್ಯಾರ್ಥಿಗಳಿಗೆ ಮುಂದೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಿಗಬೇಕಾದರೆ ಪರಿಣಾಮಕಾರಿ ಭಾಷೆ ಅತ್ಯಗತ್ಯ.

ಹೀಗಾಗಿ ವಿಜ್ಞಾನ, ಕಲೆ ಎಂಬ ವ್ಯತ್ಯಾಸವಿಲ್ಲದೆ ಎಲ್ಲ ಪದವಿಗಳಿಗೂ ಕನಿಷ್ಠ ನಾಲ್ಕು ಸೆಮಿಸ್ಟರುಗಳಲ್ಲಾ ದರೂ ಭಾರತೀಯ ಭಾಷಾ ಪತ್ರಿಕೆಗಳು ಗರಿಷ್ಠ ಗುಣಾಂಕಗಳೊಂದಿಗೆ ಕಡ್ಡಾಯವಾಗಬೇಕು. ಮೇಲೆ ಹೇಳಿದ ರೀತಿಯ ಗ್ರಹಿಕೆ ಮತ್ತು ಅಭಿವ್ಯಕ್ತಿ ಕ್ರಮಗಳ ಕಲಿಕೆಗೆ ಪ್ರಾಯೋಗಿಕ ತರಗತಿಗಳೇ ಬೇಕು. ‘ಅಭ್ಯಾಸ’ದ ಮೂಲಕ ಕಲಿಕೆ ನಡೆಯಬೇಕಾದುದು ಇಲ್ಲಿ ಅನಿವಾರ್ಯ.

ಸಾಹಿತ್ಯದ ಮೂಲಕ ಸಂವೇದನೆ ಹಾಗೂ ಸರಿಯಾದ ‘ಭಾಷೆ’ಯನ್ನು ಕಲಿಸುವ ಅನಿವಾರ್ಯ ಇಂದಿನ ಸಮಾಜದಲ್ಲಿ ಹಿಂದೆಂದಿಗಿಂತ ಹೆಚ್ಚಾಗಿದೆ. ಜನರ ಭಾಷೆಯ ಬಳಕೆ ಸರಿಯಾಗಿದ್ದರೆ ಕೋರ್ಟು ಖಟ್ಲೆಗಳು, ಕೌಟುಂಬಿಕ ಸಂಘರ್ಷಗಳು ಹಾಗೂ ಸಾಮಾಜಿಕ ಕ್ಷೋಭೆಗಳು ಕಡಿಮೆಯಾಗಿ ಸರ್ಕಾರದ ಹಾಗೂ ಸಮಾಜದ ಹಣ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಭಾಷಾ ಬೋಧನೆಯನ್ನು ಖರ್ಚಿನ ಬಾಬ್ತು ಎಂದು ಪರಿಗಣಿಸಬಾರದು.

ಮಾರುಕಟ್ಟೆ ಆಧಾರಿತ ಜಾಗತೀಕರಣದ ಈ ಹೊತ್ತಿನಲ್ಲಿ ಭಾಷೆಯನ್ನು ನಗಣ್ಯ ಮಾಡುವ ಸಿಬಿಸಿಎಸ್ ಪದ್ಧತಿಯನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಲಾಗುತ್ತಿದೆಯಲ್ಲವೇ? ಆದರೆ ನಮ್ಮ ಉನ್ನತ ಶಿಕ್ಷಣದ ಯಾವ ಅಂಶಗಳು ಪಶ್ಚಿಮ ದೇಶಗಳ ಮಟ್ಟದಲ್ಲಿವೆ?

ಉದಾಹರಣೆಗೆ, ವಿಶ್ವವಿದ್ಯಾಲಯಗಳಲ್ಲಿ ಬೋಧಕರನ್ನು ಆಯ್ಕೆ ಮಾಡಲು ಐಎಸ್‌ಬಿಎನ್ ಸಂಖ್ಯೆಯಿರುವ ಪುಸ್ತಕ ಬರೆದರೆ ಇಷ್ಟು ಅಂಕ, ಸಂಶೋಧನಾ ಲೇಖನಕ್ಕೆ ಇಷ್ಟು ಅಂಕ ಎಂಬಿತ್ಯಾದಿ ‘ವಸ್ತುನಿಷ್ಠ’ ಮಾನದಂಡಗಳನ್ನು ನಮ್ಮಲ್ಲಿ ನಿಗದಿ ಮಾಡಲಾಗಿದೆ. ಸಂದರ್ಶಿಸಲು ಕುಳಿತ ವಿಷಯ ತಜ್ಞರಿಗೆ ‘ವಸ್ತುನಿಷ್ಠ’ವಾಗಿ ಅಭ್ಯರ್ಥಿಯನ್ನು ಅಳೆಯುವ ಸಾಮರ್ಥ್ಯ ಅಥವಾ ಪ್ರಾಮಾಣಿಕತೆ ಇಲ್ಲ ಎಂಬುದೇ ಇದರರ್ಥವಲ್ಲವೇ?

ಪಶ್ಚಿಮ ದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಹಿನ್ನೆಲೆ ಏನು? ಭಾರತದಲ್ಲಿ ಪದವಿ ಶಿಕ್ಷಣಕ್ಕೆ ಪ್ರವೇಶಿಸುತ್ತಿರುವ ಬಹುತೇಕ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಿನ್ನೆಲೆ ಏನು? 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಪದವಿ ಕೋರ್ಸುಗಳನ್ನು ಕಡ್ಡಾಯವಾಗಿ ಮುಚ್ಚಬೇಕೆಂಬ ನಿಯಮವಿರುವ ನಮ್ಮಲ್ಲಿ ‘ವಿದ್ಯಾರ್ಥಿ ಕೇಂದ್ರಿತ’ ಎಂಬುದಕ್ಕೆ ಅರ್ಥವೇನು?

ಇವೇ ಮೊದಲಾದ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಅಂತರರಾಷ್ಟ್ರೀಯ ಮಾನದಂಡ ಅಳವಡಿಸಿ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ತಯಾರು ಮಾಡುತ್ತೇವೆ ಎಂದು ಭಾವಿಸಿಬಿಟ್ಟರೆ ಹೇಗೆ? ನಮ್ಮ ಸಮಾಜ, ಸಂಸ್ಥೆಗಳು ಹಾಗೂ ಬೋಧಕರು ಆ ಮಟ್ಟಕ್ಕೇರದೆ ವಿದ್ಯಾರ್ಥಿಗಳನ್ನು ಒಂದು ಹೊಸ ಪದ್ಧತಿ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುತ್ತೇವೆ ಎಂಬುದರಲ್ಲಿ ಅರ್ಥವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT