ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆ ಆಶಯ ಸೋಲಬಾರದು!

ನಿರ್ಲಕ್ಷ್ಯಕ್ಕೆ ಒಳಗಾದ ನಮ್ಮ ಸುಧಾರಣಾ ಗೃಹಗಳ ಲೋಪಗಳನ್ನು ಮೊದಲು ಸರಿಪಡಿಸಬೇಕು
Last Updated 20 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಸುಧಾರಣಾ ಗೃಹದಿಂದ  ಬಿಡುಗಡೆಯಾದವನಿಂದ ಮತ್ತೆ ಅಪರಾಧ! ಎರಡು ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು 17 ವರ್ಷ ದಾಟಿದ್ದ ಬಾಲಕನೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವನನ್ನು ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಿ  ಸುಧಾರಣೆಗಾಗಿ ಪರಿವೀಕ್ಷಣಾಲಯದಲ್ಲಿ (Observation Home) ಇರಿಸಲಾಗಿತ್ತು. ಅವನು ಇಬ್ಬರೊಡನೆ ಸೇರಿ ಕೊಲೆ ಮಾಡಿದ್ದ ಎಂಬುದು ಪೊಲೀಸರು ಹೊರಿಸಿದ್ದ ಆರೋಪ.

ವಿಚಾರಣೆಯ ಸಂದರ್ಭದಲ್ಲಿ ಮಕ್ಕಳ ನ್ಯಾಯ ಮಂಡಳಿಯ ನ್ಯಾಯಾಧೀಶರು ಪ್ರಕರಣದ ತನಿಖೆ, ವರದಿ ಹಾಗೂ ಕೃತ್ಯದಲ್ಲಿ ಈ ಬಾಲಕನ ಪಾತ್ರ ಕುರಿತು ಅನುಮಾನ ವ್ಯಕ್ತಪಡಿಸಿದರು. ‘ಈ ಬಾಲಕ ‘ಕಾನೂನುಭಂಗ’ ಮಾಡಿದ್ದಾನೆ ಎಂಬುದಕ್ಕೆ ಸಾಕ್ಷಿ ಇಲ್ಲ, ಇವನ  ಸಹವರ್ತಿಗಳನ್ನು ಪೊಲೀಸರು ಬಂಧಿಸಿಲ್ಲ. ಹೀಗಾಗಿ ಬಾಲಕನನ್ನು ಖುಲಾಸೆ ಮಾಡಬಹುದು’ ಎಂದರು. ಬಿಡುಗಡೆ ಮಾಡಿಯೇಬಿಟ್ಟಿದ್ದರು! ಅದೇ ಬಾಲಕ ಸುಧಾರಣಾ ಗೃಹದಿಂದ ಹೊರಬಂದ ಎರಡೇ ವಾರದಲ್ಲಿ ಹೊಸತೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾದ.

ಆದರೆ, ಬಾಲಕನ (ಮಕ್ಕಳ ನ್ಯಾಯ ಕಾಯಿದೆಯಂತೆ 18 ವರ್ಷದೊಳಗಿನವರೆಲ್ಲರೂ ಮಕ್ಕಳು) ಜೊತೆ ಸಮಾಲೋಚನೆ ನಡೆಸುತ್ತಿದ್ದ ಸ್ವಯಂಸೇವಾ ಸಂಘಟನೆಯವರು ಕೊಟ್ಟಿದ್ದ ವರದಿ ಭಿನ್ನವಾಗಿತ್ತು. ‘ಬಾಲಕ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ. ಇನ್ನಿಬ್ಬರೊಡನೆ ಸೇರಿ ಹೇಗೆ ಈ ಕೃತ್ಯ ಮಾಡಿದೆ ಎಂದು ವಿವರಿಸುತ್ತಾನೆ. ಇವನನ್ನು ತಕ್ಷಣವೇ ಸುಧಾರಣಾ ಪ್ರಕ್ರಿಯೆಗೆ ಒಳಪಡಿಸಬೇಕು.  ಬಿಡುಗಡೆ ಮಾಡದೆ ಈಗಲೇ ಇವನಿಗೆ ಸಹಾಯ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಅವನಿಂದ ಮತ್ತೊಂದು ಅಪರಾಧ ಘಟಿಸುವ ಸಾಧ್ಯತೆ ಇದೆ’.

ಆದರೆ, ನ್ಯಾಯಮಂಡಳಿ ಈ ಸಲಹೆ ಗಮನಿಸಿರಲಿಲ್ಲ! ಈ ಬಾಲಕ ಮಕ್ಕಳ ನ್ಯಾಯ ವ್ಯವಸ್ಥೆಯೊಳಗೆ ಬಂದು ಸುಮಾರು ಎಂಟು ತಿಂಗಳಾದರೂ ಅವನ ಸ್ವಭಾವದಲ್ಲಿ ಏನೂ ಬದಲಾವಣೆ ಆಗಿರಲಿಲ್ಲ. ಏಳೆಂಟು ತಿಂಗಳ ಕಾಲ ಅವನು ಸುಧಾರಣಾ ಗೃಹದಲ್ಲಿ ಇದ್ದನಷ್ಟೆ. ಅವನಿಗೆ ಆಪ್ತ ಸಮಾಲೋಚನೆ, ಮಾನಸಿಕ ಚಿಕಿತ್ಸೆ, ಕೌಶಲ ತರಬೇತಿ, ಸಮಾಜಮುಖಿಯಾಗಲು ಬೇಕಾದ ಸಿದ್ಧತೆ ಆಗಿರಲಿಲ್ಲ. ಬಹುತೇಕ ಸುಧಾರಣಾ ಗೃಹಗಳಲ್ಲಿ ಇಂತಹ ಕೆಲಸಗಳನ್ನು ನಡೆಸಿಕೊಡಲು ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಹೀಗಾಗಿ, ಹೊರಬಂದವನಿಂದ ನಡೆದ ಕೃತ್ಯ ಈ ಬಾರಿ ವಯಸ್ಕ ಸ್ಥಾನಕೊಟ್ಟು ಬಂದೀಖಾನೆಗೆ ತಳ್ಳಿತು.

ಇಂಥ ಘಟನೆ ಬಹಳ ಸಾಮಾನ್ಯ. 18 ವರ್ಷದೊಳಗಿನವರು ಕಳ್ಳತನ, ಹೊಡೆದಾಟ, ಕೊಲೆ, ಮಾನಭಂಗ, ಅತ್ಯಾಚಾರ ಇತ್ಯಾದಿಗಳಲ್ಲಿ ತೊಡಗುವುದು, ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಮಕ್ಕಳ ನ್ಯಾಯ ಮಂಡಳಿಯೆದುರು ಹಾಜರುಪಡಿಸುವುದು, ಆ ಮಂಡಳಿ ಮಕ್ಕಳ ನ್ಯಾಯ ಕಾನೂನಿನ ನಿರ್ದೇಶನಗಳಂತೆ ಮಕ್ಕಳನ್ನು ಬಿಡುಗಡೆ ಮಾಡುವುದೋ ಇಲ್ಲವೇ ನಿರ್ದಿಷ್ಟ ಕಾಲಾವಧಿಗೆ ಸುಧಾರಣಾ ಗೃಹದಲ್ಲಿ ಇರಿಸುವುದೋ ನಡೆದಿದೆ. ಈ ಗೃಹದಿಂದ ಹೊರಬಿದ್ದ ಮೇಲೆ ಕೆಲವರು ಬದಲಾದರೆ, ಉಳಿದವರು ಅಪರಾಧ ಕೃತ್ಯದಲ್ಲಿ ತೊಡಗಿಕೊಳ್ಳುವುದು, ಈ ಮೇಲೆ ಹೇಳಿದ ಬಾಲಕನ ಪ್ರಕರಣದಂತೆ ದೊಡ್ಡವರ ಬಂದೀಖಾನೆಗೆ ಹೋಗುವುದು, ಇಲ್ಲವೇ ತಾವೇ ಕೊಲೆಯಾಗುವುದೂ ಆಗಿದೆ.

ಇಲ್ಲಿ ಸೋತವರಾರು, ತಪ್ಪಾಗಿರುವುದೆಲ್ಲಿ? ಸದ್ಯ, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿರುವ ಚರ್ಚೆ, ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ದೋಷಿಯಾಗಿರುವ ಬಾಲಕ ಮೂರು ವರ್ಷಗಳ ಸುಧಾರಣಾ ಗೃಹವಾಸ ಮುಗಿಸಿ ಇದೀಗ ಬಿಡುಗಡೆಯಾಗಿದ್ದಾನೆ! ದೇಶದುದ್ದಕ್ಕೂ ಪ್ರತಿದಿನ ಹೀಗೆ ಬಾಲಕ-ಬಾಲಕಿಯರು ಬಿಡುಗಡೆ ಹೊಂದುವುದು ಇದ್ದೇಇದೆ. ಆದರೆ, ದೆಹಲಿಯ ಬಾಲಕನ ಕುರಿತು ಅತಿಯಾದ ಗಮನ. ಸರ್ಕಾರವೂ ಮುಂದಾಗಿ ಅವನನ್ನು ಬಿಡುಗಡೆ ಮಾಡಿದರೆ ಏನೋ ದುರಂತವಾಗಿಬಿಡುತ್ತದೆ ಎಂಬಂತೆ ವರ್ತಿಸುತ್ತಿದೆ. ತಾನು ಮುಂದೆಂದೂ ಅಪರಾಧ ಕೃತ್ಯ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳುತ್ತಿದೆ!

ಮಕ್ಕಳ ಹಕ್ಕುಗಳು, ಮಕ್ಕಳ ನ್ಯಾಯ ಕುರಿತು ಅಂತರರಾಷ್ಟ್ರೀಯ ಮಟ್ಟದ ಚಿಂತನೆಯೊಂದಿಗೆ ಬಂದಿರುವ, ‘18  ವರ್ಷದೊಳಗಿನವರು ಮಕ್ಕಳು, ಅವರನ್ನು ಅಪರಾಧಿಗಳು ಎಂದು ಪರಿಗಣಿಸಬಾರದು, ಎಲ್ಲ ರೀತಿಯ ಸುಧಾರಣಾ ಕ್ರಮ ಬಳಸಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರಬೇಕು’ ಎನ್ನುವ ತತ್ವವನ್ನೇ ಬದಿಗೆ ಸರಿಸಿ 16ರಿಂದ 18 ವರ್ಷದೊಳಗಿನವರು ಹೀನ ಕೃತ್ಯಗಳಲ್ಲಿ ಭಾಗಿಯಾದರೆ, ಅವರನ್ನು ಬಂದೀಖಾನೆಗೆ ತಳ್ಳುವಂತೆ ಕಾನೂನು ಬದಲಿಸಲು ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಕೆಲಸದಲ್ಲಿ ಸರ್ಕಾರವೇ ಮುಂದಾಗಿದೆ! ಇದನ್ನು ವಿರೋಧಿಸಿದವರನ್ನು ದೇಶದ್ರೋಹಿಗಳೆಂದೂ, ಮಾನಭಂಗ, ಅತ್ಯಾಚಾರದಂತಹ ಕೃತ್ಯಗಳಿಗೆ ಸಹಕರಿಸುತ್ತಾರೆಂದೂ ಹೀಗಳೆಯಲಾಗುತ್ತಿದೆ.

ಸುಧಾರಣಾ ವ್ಯವಸ್ಥೆಗಳಲ್ಲಿ ನೂರಾರು ಲೋಪಗಳನ್ನಿಟ್ಟುಕೊಂಡು, ಅಪರಾಧ ಮಾಡಲು ಕುಮ್ಮಕ್ಕು ಕೊಡುವಂತಹ ಸನ್ನಿವೇಶಗಳನ್ನು ಸೃಷ್ಟಿಸಿ, ಒಬ್ಬನಿಂದ ತಾನು ಅಪರಾಧ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡರೆ ಏನೂ ಪ್ರಯೋಜನವಾಗುವುದಿಲ್ಲ. ಬಹಳ ಮುಖ್ಯವಾಗಿ, ಮಕ್ಕಳ ನ್ಯಾಯ ಕಾಯ್ದೆಯ ಜಾರಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕಿದೆ. ಮಕ್ಕಳ ನ್ಯಾಯ ಮಂಡಳಿಗಳಿಗೆ ಎಡತಾಕುವ ಬಹುತೇಕ ವಕೀಲರಿಗೆ ಮಕ್ಕಳ ನ್ಯಾಯ ಕಾಯ್ದೆ ಹಿಂದಿರುವ ತತ್ವದ ಅರಿವಿಲ್ಲ. ಸರ್ಕಾರಿ ವಕೀಲರಿಗೆ, ನ್ಯಾಯಾಧೀಶರಿಗೆ ಪ್ರಕರಣಗಳ ಅಧ್ಯಯನಕ್ಕೆ ಹೆಚ್ಚಿನ ಸಮಯವಿರುವುದಿಲ್ಲ.

ಮಿಗಿಲಾಗಿ, ಸುಧಾರಣಾ ಗೃಹಗಳು ಹೊರಜಗತ್ತು ಕರೆಯುವಂತೆ, ಮಿನಿ ಜೈಲೇ ಹೌದು. ಅಲ್ಲಿಗೆ ಬರುವ ಮಕ್ಕಳ ಮನಃಪರಿವರ್ತನೆಗೆ ಬೇಕಾದಂತಹ ವ್ಯವಸ್ಥೆಗಳು, ಎಲ್ಲೋ ಕೆಲವು ಕಡೆ ಬಿಟ್ಟರೆ, ಇಲ್ಲವೇ ಇಲ್ಲ. ನಾನು ಸ್ವೀಡನ್ ದೇಶದಲ್ಲಿನ ಸುಧಾರಣಾ ಗೃಹಗಳ ಅಧ್ಯಯನ ನಡೆಸಿದ್ದೇನೆ. ಸುಧಾರಣಾ ಗೃಹಗಳಿಗೆ ಕೊಟ್ಟಿರುವ ಸ್ಥಳಾವಕಾಶ, ಸಿಬ್ಬಂದಿ, ವ್ಯವಸ್ಥೆ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಪುನಃ ಸೇರಿಸುವ ಉದ್ದೇಶ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ, ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾದಂತೆ ನಮ್ಮ ದೇಶದ ಬಹುತೇಕ ಸುಧಾರಣಾ ಗೃಹಗಳನ್ನು ನಿರ್ಲಕ್ಷಿಸಲಾಗಿದೆ.

ಅಲ್ಲಿ ಆಪ್ತ ಸಮಾಲೋಚನೆ ನಡೆಸಲು ನುರಿತ ಕಾಯಂ ಸಿಬ್ಬಂದಿಯಿಲ್ಲ. ಯಾವುದೇ ಚಟುವಟಿಕೆಗಳಿಲ್ಲ. ಹೀಗಾಗಿ, ಸುಧಾರಣೆ ಎನ್ನುವುದು ಮರೀಚಿಕೆ. ನಿರ್ಭಯಾ ಪ್ರಕರಣದ ಬಾಲಕ ಯಾರು ಎಂದು ಬಹಿರಂಗಪಡಿಸಿ ಎಂಬ ಒತ್ತಾಯ ಇದೆ. ಅಲ್ಲದೆ, ಅವನನ್ನು ಬಿಡುಗಡೆ ಮಾಡಲೇಬಾರದು ಎಂದು ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಬಿಡುಗಡೆ ಹೊಂದುವುದು ಮತ್ತು ತನ್ನ ಗುರುತನ್ನು ಬಹಿರಂಗಪಡಿಸಬಾರದು ಎನ್ನುವುದು ಸುಧಾರಣೆಯ ತತ್ವದಡಿ ಆ ಬಾಲಕನ ಹಕ್ಕು.

ಬಾಲಕ ಹೊರಬಂದು ಸಾಮಾನ್ಯ ಜೀವನ ನಡೆಸಲು ಸಾಧ್ಯವಾದರೆ, ಮುಂದೆ ಎಂದೂ ಅಪರಾಧ ಎಸಗದಿದ್ದರೆ, ನಾವು ಸುಧಾರಣಾ ಗೃಹ, ಅಲ್ಲಿನ ಆಪ್ತ ಸಮಾಲೋಚನೆ, ಮನಃಪರಿವರ್ತನೆ ವ್ಯವಸ್ಥೆ ಮತ್ತು ಹೊರ ಸಮಾಜಕ್ಕೆ ಕೃತಜ್ಞರಾಗಿರಬೇಕು. ದುರದೃಷ್ಟವಶಾತ್, ಸುಧಾರಣಾ ಗೃಹದಿಂದ  ಹೊರಬಂದ  ಅವನ ಹೆಸರು, ಭಾವಚಿತ್ರ ಪ್ರಕಟಿಸಲು ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ. ಹಾಗೆ ಮಾಡಿದವರ ಮೇಲೆ ಒಂದು ಮೊಕದ್ದಮೆ ಹೂಡಿ, ₹ 25 ಸಾವಿರ ದಂಡ ವಿಧಿಸಬಹುದು. ಬಾಲಕನ ಗುರುತು ಬಹಿರಂಗದಿಂದಾಗುವ ಅನಾಹುತ ಕುರಿತು ಮಾಧ್ಯಮ, ಸಮಾಜ ಚಿಂತಿಸಬೇಕಿದೆ.

ಮಕ್ಕಳ ನ್ಯಾಯ ಕಾನೂನಿನಂತೆ ಸುಧಾರಣಾ ಗೃಹದಿಂದ ಬಿಡುಗಡೆಯಾಗುವ ಎಲ್ಲರೂ ನಿರ್ದಿಷ್ಟ ಪರಿವೀಕ್ಷಣಾಧಿಕಾರಿಗಳ ಕಣ್ಗಾವಲಿನಲ್ಲಿ ಇರಬೇಕು. ಇಲ್ಲವೇ ಸರ್ಕಾರದಿಂದ ಮಾನ್ಯತೆ ಪಡೆದಿರುವ  ಸಂಸ್ಥೆಗಳು ನಡೆಸುವ ವಿಶೇಷ ಪಾಲನಾ ಗೃಹಗಳಲ್ಲಿ ನಿರ್ದಿಷ್ಟ ಅವಧಿಗೆ ಇರಿಸಿ ಮಾರ್ಗದರ್ಶನ, ವೃತ್ತಿಕೌಶಲ ತರಬೇತಿ ಕೊಡಿಸಬೇಕು. ದೆಹಲಿ ಪ್ರಕರಣದ ಆರೋಪಿ ಬಾಲಕನನ್ನು ಸದ್ಯ ಯಾವುದಾದರೂ ಅರ್ಹ ವಿಶೇಷ ಪಾಲನಾಗೃಹದಲ್ಲಿ ಇರಿಸಿ ಸಾರ್ವಜನಿಕರು, ಮಾಧ್ಯಮಗಳಿಂದ ರಕ್ಷಿಸುವುದೇ ಮೇಲು.

ಮಕ್ಕಳ ನ್ಯಾಯ ವ್ಯವಸ್ಥೆಯನ್ನು ಎಲ್ಲ ರಾಜ್ಯಗಳಲ್ಲಿ ಸುಧಾರಿಸುವುದು ತಕ್ಷಣದ ಅಗತ್ಯ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾನೂನು, ಹಣಕಾಸು ಇಲಾಖೆ ಗಮನ ಹರಿಸಬೇಕಿದೆ. ಮಕ್ಕಳು, ಮಹಿಳೆಯರ ಕುರಿತು ಇರುವ ಶಾಸಕರ ಸಮಿತಿ, ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಘಟನೆಗಳೊಡನೆ ಸಮಾಲೋಚಿಸಿ, ಅಗತ್ಯ ಸಿಬ್ಬಂದಿ ಮತ್ತು ವ್ಯವಸ್ಥೆಗಳನ್ನೊದಗಿಸಿ  ಎಲ್ಲ ಪರಿವೀಕ್ಷಣಾಲಯಗಳನ್ನು ನಿಜವಾಗಿಯೂ ಸುಧಾರಣಾ ಗೃಹಗಳಾಗಿ ಪರಿವರ್ತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT