ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತ ಅನುಷ್ಠಾನ ವರ್ತಮಾನದ ತುರ್ತು

ಚರ್ಚೆ
Last Updated 21 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮೂಢನಂಬಿಕೆಗಳದ್ದು ಒಂದು ವಿಚಿತ್ರ, ಭಯಾನಕ ಮತ್ತು ಅಸಹ್ಯ ಹುಟ್ಟಿಸುವ ಲೋಕ. ವೈಯಕ್ತಿಕ ನೆಲೆಯಲ್ಲಿ ಮೂಢನಂಬಿಕೆಗಳನ್ನು

ಪಾಲಿಸುವುದರಿಂದ  ಉಂಟಾಗುವ ಸಾಧಕ–ಬಾಧಕಗಳನ್ನು ಆಯಾ ವ್ಯಕ್ತಿ, ಕುಟುಂಬಗಳವರು ಅನುಭವಿಸುತ್ತಾರೆ. ಉದಾ: 13ನೇ ಸಂಖ್ಯೆಯ ಬಗೆಗೆ ಇರುವ ಮೂಢನಂಬಿಕೆ (ಇದು ಅನೇಕ ದೇಶಗಳ ಜನರ ನೆಮ್ಮದಿಯನ್ನು ಕೆಡಿಸಿದೆ), ರಾಹುಕಾಲ, ಗುಳಿಕಕಾಲ ಅನುಸರಿಸಿ ಕಾರ್ಯೋನ್ಮುಖವಾಗುವುದು, ಬೆಕ್ಕು ಅಡ್ಡ ಬಂದರೆ ನಿಂತು ಬಿಡುವುದು ಇತ್ಯಾದಿ.

ಆದರೆ ಸಾಮೂಹಿಕ ನೆಲೆಯ ಮೂಢ ನಂಬಿಕೆಗಳು ಸಮಷ್ಟಿಯ ಹಿತವನ್ನೇ ಬಾಧಿಸುತ್ತವೆ. ಮನುಷ್ಯನ ಘನತೆಗೆ ಕುಂದುಂಟು ಮಾಡುತ್ತವೆ. ಮೇಲು - ಕೀಳು ಭಾವನೆಗಳು ನೆಲೆಗೊಳ್ಳುವಂತೆ ಮಾಡುತ್ತವೆ. ಅವು ಸ್ಥಾಪಿತ ಹಿತಾಸಕ್ತಿಗಳ ದಾಳಗಳಾಗಿ, ಶೋಷಣೆಯ ಅಸ್ತ್ರಗಳೂ ಆಗುತ್ತವೆ. ಉದಾ: ಮಡೆಸ್ನಾನ, ಅಡ್ಡಪಲ್ಲಕ್ಕಿ, ಭೋಜನದಲ್ಲಿ ಪಂಕ್ತಿ ಭೇದ ಇತ್ಯಾದಿ.

ನಮ್ಮ ಶ್ರೇಣೀಕೃತ ಸಮಾಜದಲ್ಲಿ, ಪ್ರಭುತ್ವ ತನ್ನ ಪರಮಾಧಿಕಾರವನ್ನು ಭದ್ರಪಡಿಸಿಕೊಳ್ಳಲು ಮತ್ತು ರಕ್ಷಿಸಿಕೊಳ್ಳಲು ಅನೇಕ ಮೂಢನಂಬಿ ಕೆಗಳನ್ನು ಮತ್ತು ಮೌಢ್ಯಾಚಾರಣೆಗಳನ್ನು ಸ್ಥಿರೀಕರಿಸುವುದರಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಇತಿಹಾಸ ಪುಟಗಳ ವಿಶ್ಲೇಷಣಾತ್ಮಕ ಅಧ್ಯಯನ ಬಹಿರಂಗಗೊಳಿಸುತ್ತದೆ.

ಜಿ.ಬಿ. ಹರೀಶ್‌ ಅವರು ತಮ್ಮ ಲೇಖನದಲ್ಲಿ ಕರಡು ರಚನಾ ಸಮಿತಿಯ ಸಿಂಧುತ್ವದ ಬಗೆಗೆ ಪ್ರಶ್ನೆ ಎತ್ತಿದ್ದಾರೆ. ನಿಜ, ಯಾವುದೇ ಗಹನ, ಜ್ವಲಂತ ಸಮಸ್ಯೆ, ವಿಷಯ ಕುರಿತು ಸಮಿತಿ ರಚಿಸುವಾಗ, ಸಮಾಜದ ಎಲ್ಲ ವಿಭಾಗಗಳ ಜನರ (All--- inclusive) ಪ್ರಾತಿನಿಧ್ಯವಿರಬೇಕು. ಹರೀಶರ ವಾದಸರಣಿಯನ್ನು ಮುಂದು ವರೆಸಿದರೇ, ಈ ಸಮಿತಿಯಲ್ಲಿ ಎಲ್ಲ ಧರ್ಮಗಳ (ಬುಡಕಟ್ಟು ಗಳನ್ನೂ ಒಳಗೊಂಡು) ಪ್ರತಿನಿಧಿಗಳ ಜೊತೆ ವಾಸ್ತುತಜ್ಞರು, ಕಣಿ ಹೇಳುವವರು, ಜ್ಯೋತಿಷಿ ಗಳು, ಹಸ್ತಸಾಮುದ್ರಿಕರು ಇತ್ಯಾದಿ ಯವರು ಇರಬೇಕಿತ್ತು. ಏಕೆಂದರೆ ನಂಬಿಕೆಯನ್ನು ಸೃಷ್ಟಿ ಸುವವರು ಯಾವ ಸಂದರ್ಭದಲ್ಲಾದರೂ ಕ್ಯಾತೆ ತೆಗೆಯಬಹುದು, ಅಲ್ಲವೇ? ಆಗ ಅದು ಸಮಿತಿ ಯಾಗುತ್ತಿರಲಿಲ್ಲ, ಜಂಬೋಜೆಟ್‌ ಆಗುತ್ತಿತ್ತು.

ಕರಡು ರಚನಾ ಸಮಿತಿಯಲ್ಲಿ ಜನಪರ ವಿದ್ವಾಂಸರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ವಿಶೇಷಜ್ಞರು ಇದ್ದಾರೆ. ಅವರ ಸಾಮಾಜಿಕ ಕಾಳಜಿಯ ಬಗೆಗೆ ಎರಡು ಮಾತಿಲ್ಲ. ಅವರು ಸಿದ್ಧಪಡಿಸಿರುವ ಮಾದರಿ ಕರಡಿನ ಹಿಂದೆ ಸಮಂಜಸ, ಸಕಾರಾತ್ಮಕ ಪ್ರಯತ್ನಗಳಿವೆ.

ಇದರ ಎಲ್ಲ ವಿವರಗಳು ಸಾರ್ವಜನಿಕ ಪರಿಧಿಯಲ್ಲಿಯೇ ಇದೆ. ಆದುದರಿಂದ ಈ ವಿಷಯದಲ್ಲಿ ಸಂವಾದ, ಚರ್ಚೆ ಮತ್ತು ವಿಚಾರ ವಿನಿಮಯ ನಡೆಸಲು ಅವಕಾಶಗಳಿವೆ. ಒಂದು ಸಮಗ್ರ ಸೂಕ್ತ, ಶಕ್ತಿಶಾಲಿ ಕಾನೂನು ಜಾರಿಯಾಗುವುದರಲ್ಲಿ ಜನತೆಯ ಪಾಲು ಹಾಗೂ ಜವಾಬ್ದಾರಿಯಿದೆ. ಅಲ್ಲದೆ, ಇದರ ಸಮರ್ಪಕ ಅನುಷ್ಠಾನದಲ್ಲಿ ಜನರ ಸಹಭಾಗಿತ್ವವೂ ಮುಖ್ಯವಾಗುತ್ತದೆ. ಸರ್ಕಾರಕ್ಕೆ ಇಚ್ಛಾಶಕ್ತಿ­ಯಿದ್ದರೆ, ಈ ಕಾನೂನಿನ ಅನುಷ್ಠಾನ ಯಶಸ್ಸು ಕಾಣುವುದು ಸಾಧ್ಯ.
–ಮ.ಶ್ರೀ. ಮುರಳಿ ಕೃಷ್ಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT