ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮರ ನಡುವೆ ಅಂತರವೇಕೆ?

Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅದು 1959ರ ಅಕ್ಟೋಬರ್ 21. ಸಿಆರ್‌ಪಿಎಫ್‌ನ (ಕೇಂದ್ರೀಯ ಮೀಸಲು ಪೊಲೀಸ್‌ ಪಡೆ) ಇಪ್ಪತ್ತು ವೀರಯೋಧರು ಕರಂ ಸಿಂಗ್ ಅವರ ನೇತೃತ್ವದಲ್ಲಿ, ಮೈ ಕೊರೆಯುವ ಚಳಿಯಲ್ಲಿ 12 ಸಾವಿರ ಅಡಿ ಎತ್ತರದ ಲಡಾಖ್‌ ಪ್ರದೇಶದಲ್ಲಿ ಗಡಿ ರಕ್ಷಣೆಯ ಹೊಣೆ ಹೊತ್ತು ಗಸ್ತು ನಡೆಸುತ್ತಿದ್ದರು. ಈ ದಳದ ಮೇಲೆ ಚೀನಾ ಸೇನೆಯು ಹೊಂಚು ಹಾಕಿ ದಾಳಿ ನಡೆಸಿತು. ಆಗ ನಡೆದ ಹೋರಾಟದಲ್ಲಿ ನಾವು ಹತ್ತು ಮಂದಿ ಯೋಧರನ್ನು ಕಳೆದುಕೊಂಡೆವು. ಆ ದುರ್ಘಟನೆಯ ನೆನಪಿಗಾಗಿ ಮತ್ತು ನಮ್ಮ ಯೋಧರ ಶೌರ್ಯ, ಸಾಹಸದ ಪ್ರತೀಕದಂತಿದ್ದ ಆ ದಿನವನ್ನು ಸ್ಮರಿಸುವುದಕ್ಕಾಗಿ  ಅಕ್ಟೋಬರ್ 21ನ್ನು ಪೊಲೀಸ್ ಹುತಾತ್ಮರ ದಿನವಾಗಿ ದೇಶದಾದ್ಯಂತ ಆಚರಿಸುತ್ತಾ ಬಂದಿದ್ದೇವೆ. ಈ ದಿನ ಎಲ್ಲ ಪೊಲೀಸ್ ಕಚೇರಿಗಳಲ್ಲಿ ಶೋಕಶಸ್ತ್ರದ ಮೂಲಕ ಮೌನಾಚರಣೆ ಮಾಡಿ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

ಯೋಧರು ಗಡಿಯನ್ನು ರಕ್ಷಿಸಿದರೆ,   ಅರೆಸೇನಾ ಪಡೆಯ ಯೋಧರು ಮತ್ತು ಪೊಲೀಸರು ಆಂತರಿಕ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ದಂಗೆ ಹತ್ತಿಕ್ಕುವಲ್ಲಿ, ಮತೀಯ ಗಲಭೆಗಳನ್ನು ನಿಯಂತ್ರಿಸುವಲ್ಲಿ, ನಿಷೇಧಿತ  ನಕ್ಸಲೈಟ್‌, ಜಿಹಾದಿ ಸಂಘಟನೆಗಳನ್ನು ನಿಯಂತ್ರಿಸುವಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಬುಡಕಟ್ಟು ಆಧಾರಿತ ಉಗ್ರರ ಸಂಘಟನೆಗಳನ್ನು ಹತ್ತಿಕ್ಕುವಲ್ಲಿ, ಕಾಶ್ಮೀರ ರಾಜ್ಯದ ಪ್ರತ್ಯೇಕತೆಯ ವಿವಾದದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ವೀರಮರಣವನ್ನು ಹೊಂದುತ್ತಿದ್ದಾರೆ.

ಪೊಲೀಸ್ ಹುತಾತ್ಮರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವಲ್ಲದೆ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮವೇ  ಆದ ಕಾರ್ಯಕ್ರಮವನ್ನು ಜಾರಿಗೆ ತಂದಿವೆ. ಹುತಾತ್ಮರ ಕುಟುಂಬ ಸದಸ್ಯರಿಗಾಗಿ ಆರ್ಥಿಕ ಸಹಾಯ, ವಿಮಾ ನಿಧಿ, ಗ್ರ್ಯಾಚುಟಿ, ಸರ್ಕಾರಿ ಉದ್ಯೋಗ, ಮನೆ ಹಾಗೂ ವ್ಯವಸಾಯ ಭೂಮಿಯನ್ನು ನೀಡುವಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾಯೋಜಿಸಿವೆ.

ಇದರ ಹೊರತಾಗಿ ಸೇನೆ ಮತ್ತು ಅರೆಸೇನಾ ಪಡೆ ಯೋಧರ ಯೋಗಕ್ಷೇಮಕ್ಕಾಗಿ ರಾಷ್ಟ್ರೀಯ ರಕ್ಷಣಾ ನಿಧಿ (ನ್ಯಾಷನಲ್ ಡಿಫೆನ್ಸ್ ಫಂಡ್) ಸಂಗ್ರಹವನ್ನು ಪ್ರಧಾನಿ ಅವರ ಅಧ್ಯಕ್ಷತೆಯಲ್ಲಿ ಜಾರಿಗೆ ತರಲಾಗಿದೆ. ಈ ನಿಧಿಯು ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣವಾಗಿದ್ದು, ಈ ಮೂಲಕ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಧಿಯ ಒಂದು ಭಾಗವನ್ನು ಹುತಾತ್ಮರ ಪತ್ನಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನದ ರೂಪದಲ್ಲಿ ನೀಡಲಾಗುತ್ತಿದೆ. ಆದರೆ ಈ ಸೌಲಭ್ಯವು ಸೇನಾ ಮತ್ತು ಅರೆಸೇನಾ ಪಡೆಗಳಿಗೆ ಮಾತ್ರ ಸೀಮಿತ. ಈ ನಿಧಿಗೆ ಸಾರ್ವಜನಿಕರು ದಾನವಾಗಿ ಕೊಡುಗೆ ನೀಡಲು ಕೋರಿಕೊಳ್ಳಲಾಗಿದೆ.

ಇದಲ್ಲದೆ A.W.W.A. (Army Wives Welfare Association) ಪಡೆಯಿಂದ ‘ವೀರ ನಾರಿ ಕಲ್ಯಾಣ ಯೋಜನೆ’ ಅಡಿಯಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ಸ್ವಯಂ ಸೇವಾ ಸಂಘಟನೆಗಳು ಈ ಕಾರ್ಯದಲ್ಲಿ ತೊಡಗಿವೆ. ಮುಖ್ಯವಾಗಿ ವಸಂತ ರತ್ನ ಫೌಂಡೇಷನ್ ಎಂಬುದು ಕರ್ನಲ್ ವಸಂತ್‌ ಅವರ ಜ್ಞಾಪಕಾರ್ಥವಾಗಿ ಅವರ ವೀರ ಮಡದಿ ಸುಭಾಷಿಣಿ ಅವರು ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆ.

ಆದರೆ ಪೊಲೀಸ್ ಹುತಾತ್ಮರ ಕಲ್ಯಾಣ ಕಾರ್ಯಕ್ರಮಗಳು ದೇಶವ್ಯಾಪಿಯಾಗಿ ಏಕರೂಪವಾಗಿಲ್ಲ. ಸೇನಾಪಡೆಗಳಲ್ಲಿ ಮರಣ ಹೊಂದಿದ ಯೋಧರಿಗೆ ದೊರಕುವ ಸೌಲಭ್ಯಗಳು ಅರೆಸೇನಾ ಪಡೆಗಳಿಗೆ ಹೋಲಿಸಿದರೆ ಬೇರೆಯಾಗಿರುತ್ತವೆ. ಹಾಗೆಯೇ  ಪೊಲೀಸರಿಗೆ ದೊರಕುವ ಯೋಜನೆಗಳು ಬೇರೆಯಾಗಿರುತ್ತವೆ. ಇಂತಹ  ತಾರತಮ್ಯ ನಿವಾರಣೆ ಬಹು ಮುಖ್ಯವಾದುದು. ಗಡಿ ರಕ್ಷಣೆ ಮಾಡುತ್ತಾ ವೀರಮರಣ ಹೊಂದಿದ ಯೋಧನನ್ನು ಸೇನಾಪಡೆಯ ನಿಯಮಗಳ ರೀತ್ಯಾ ಪರಿಗಣಿಸಿದರೆ, ನಕ್ಸಲ್‌ ಚಟುವಟಿಕೆಗಳ ವಿರುದ್ಧ ಹೋರಾಡಿ ವೀರಮರಣವನ್ನು ಹೊಂದಿದ ಪೊಲೀಸರನ್ನು ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮದಡಿ ಸೇರಿಸುವುದು ಸಮಂಜಸವಲ್ಲ.

ದೇಶದ ಗಡಿ ಕಾಯುವವರಿಗೆ ನೀಡುವ ಪ್ರಾಮುಖ್ಯತೆಯನ್ನು ದೇಶದ ಆಂತರಿಕ ಭದ್ರತೆಯನ್ನು ನಿಭಾಯಿಸುವಲ್ಲಿ ಗುರುತರ ಜವಾಬ್ದಾರಿ ವಹಿಸಿಕೊಂಡಿರುವ ಪೊಲೀಸ್ ಇಲಾಖೆಗೂ ನೀಡುವುದು ಒಳಿತು. ವೈರಿಗಳ ವಿರುದ್ಧ ಹೋರಾಡಿ ಕೊನೆಯುಸಿರೆಳೆದವರನ್ನು ಸಮಾನವಾಗಿ ಕಾಣಬೇಕಾದುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಗಮನಹರಿಸಿ ಪೊಲೀಸ್ ಹುತಾತ್ಮರಿಗೂ ಸೇನಾ ಪಡೆಯಲ್ಲಿ ದೊರಕುತ್ತಿರುವ ಎಲ್ಲಾ ಸೌಲಭ್ಯಗಳನ್ನು ಕೊಡುವ ಕಡೆ ಗಮನ ಹರಿಸಬೇಕು. 

ಇತ್ತೀಚಿನವರೆಗೂ ‘ಶಹೀದ್’ ಎಂಬ ಪದವನ್ನು ಸೇನೆಯಲ್ಲಿ ವೀರಮರಣವನ್ನು ಹೊಂದಿದವರಿಗೆ ಮಾತ್ರ ಬಳಸಲಾಗುತ್ತಿತ್ತು. ಹಲವರ ಒತ್ತಾಯದಿಂದಾಗಿ ಈ ಪದವನ್ನು ಅರೆಸೇನಾ ಪಡೆಗೂ ವಿಸ್ತರಿಸಲಾಗಿದೆ. ಒಂದೇ ಬಗೆಯ ಯುದ್ಧ ಭೂಮಿ, ಒಂದೇ ಬಗೆಯ ವೈರಿಗಳ ವಿರುದ್ಧ ಹೋರಾಡಿ ‘ಶಹೀದ್’ ಆದವರನ್ನು ತಾರತಮ್ಯದಿಂದ  ನೋಡುವುದು ಒಳ್ಳೆ ಪದ್ಧತಿಯಲ್ಲ.

ರಾಜ್ಯಗಳ ಅಧೀನದಲ್ಲಿರುವ ಪೊಲೀಸ್ ಇಲಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇತರ ಕಾರಣಗಳಿಗಾಗಿ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಆತ್ಮಹತ್ಯೆಯಂಥ ಪ್ರಕರಣ ಮಾನವ ಸಮಾಜ ತಲೆ ತಗ್ಗಿಸುವಂತಹ ವಿಷಯವಾಗಿದೆ. ಕೆಲಸದ ಒತ್ತಡ, ಹಿರಿಯ ಅಧಿಕಾರಿಗಳ ಕಿರುಕುಳ, ವೈಯಕ್ತಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆಗಳಿಂದ ನೊಂದು ಬೆಂದು ಆತ್ಮಹತ್ಯೆಯಂತಹ ಹೇಡಿತನಕ್ಕೆ ಕೈ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಆತ್ಮಹತ್ಯೆ ಎಂಬುದು ಸಮೂಹ ಸನ್ನಿಯಂತಾಗಿದೆ.

ಒತ್ತಡದ ಮಧ್ಯೆ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಕೆಲಸದಿಂದ ಉಂಟಾಗುವ ಒತ್ತಡವನ್ನು (ಆಕ್ಯುಪೇಷನಲ್ ಹಜಾರ್ಡ್) ದೂರಮಾಡುವಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳು ಗಮನಾರ್ಹವಾಗಿರಬೇಕು. ರಜೆ ಕಡಿತ, ಮಿತಿಮೀರಿದ ದುಡಿಮೆಯ ಅವಧಿ, ವೇತನ ತಾರತಮ್ಯ ಮುಂತಾದವನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಪೊಲೀಸ್ ಇಲಾಖೆಯಲ್ಲಿ ಪ್ರಾರಂಭವಾಗಿರುವಂತಹ ಆತ್ಮಹತ್ಯೆ ಪರ್ವಕ್ಕೆ ಶೀಘ್ರವೇ ಇತಿಶ್ರೀ ಹಾಡಬೇಕು. ಈಗಾಗಲೇ ತಡವಾಗಿದ್ದರೂ ಇನ್ನಷ್ಟು ತಡಮಾಡದೆ ಆಂತರಿಕ ಪರಿವರ್ತನೆಯತ್ತ ಗಮನಹರಿಸುವುದು ಒಳಿತು.

ಲೇಖಕ ಆಂಧ್ರ ಪ್ರದೇಶ ಕೇಡರ್‌ನ ಐಪಿಎಸ್‌ ಅಧಿಕಾರಿ, ಕನ್ನಡಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT