ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಯರ್‌’ ಸಂಬೋಧನೆ ತಪ್ಪೇ?

ವಿಶ್ವದೆಲ್ಲೆಡೆ ಸಂಬೋಧನಾ ಕ್ರಮ ಬದಲಾಗುತ್ತಿರುವಾಗ, ‘ಗೌರವಾನ್ವಿತ’ವಾಗಿ ಸಂಬೋಧಿಸದಿರುವವರನ್ನು ಛೇಡಿಸುವುದು ಭಾಷಾ ಅಸಹನೆಯೇ ಸರಿ
Last Updated 16 ಜೂನ್ 2016, 19:30 IST
ಅಕ್ಷರ ಗಾತ್ರ

ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಮ್ಮನ್ನು ಟ್ಟಿಟರ್‌ನಲ್ಲಿ ಬಿಹಾರದ ಶಿಕ್ಷಣ ಸಚಿವ ಅಶೋಕ್ ಚೌಧರಿ ಅವರು ‘ಡಿಯರ್‌’ ಎಂದು ಸಂಬೋಧಿಸಿದ್ದನ್ನು ಬಲವಾಗಿ ವಿರೋಧಿಸಿದ್ದಾರೆ. ಆದರೆ, ಈ ಸಂಬೋಧನೆ ಏಕೆ ಸರಿಯಲ್ಲವೆಂದು ಅರ್ಥವಾಗುತ್ತಿಲ್ಲ.

ಡಿ.ವಿ.ಗುಂಡಪ್ಪ ಮತ್ತು ಬಿ.ಎಂ.ಶ್ರೀಕಂಠಯ್ಯ ಅವರಂತಹ ಸದಸ್ಯರನ್ನೊಳಗೊಂಡ ವಿದ್ವಾಂಸರ ಸಂಪಾದಕ ಮಂಡಳಿ ಸೇರಿ ರಚಿಸಿದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್‌- ಕನ್ನಡ ನಿಘಂಟಿನಲ್ಲಿ ‘ಡಿಯರ್‌’ ಎಂಬ ಪದಕ್ಕೆ ಕೊಟ್ಟ ಮೊದಲ ಅರ್ಥ ಹೀಗಿದೆ: ‘ಒಲವಿನ, ನೆಚ್ಚಿನ, ಪ್ರಿಯ, ಪ್ರೀತಿಯ, ಮಮತೆಯ, ಅಕ್ಕರೆಯ... ಪತ್ರ ವ್ಯವ
ಹಾರದ ಮೊದಲಲ್ಲಿ ವಿನಯ ಯಾ ಗೌರವಸೂಚಕವಾಗಿ ಬಳಸುವ ಪದ’.

  ಇಂಗ್ಲೆಂಡ್‌ನಲ್ಲಿ ಸಲುಗೆಯಿಂದಲೂ, ಅಮೆರಿಕದಲ್ಲಿ ಕಡಿಮೆ ಔಪಚಾರಿಕವಾಗಿ ಈ ಪದದ ಬಳಕೆಇದೆಯೆಂದೂ ಶಬ್ದಕೋಶ ಸೂಚಿಸುತ್ತದೆ. ಈ ಶಬ್ದ ಬಳಕೆಯಲ್ಲಿ ಅಪಾರ್ಥ ಬರುವಂತಹುದೇನೂ ಕಾಣುತ್ತಿಲ್ಲ.

ಈ ಶಬ್ದಕೋಶ ರಚನೆಯ ಕಾಲಕ್ಕಿಂತಲೂ ಈಗ ಸಮಾಜದಲ್ಲಿ ಜನರ ಒಡನಾಟಗಳು ಬಹು ಆಯಾಮಗಳಲ್ಲಿ ಹೆಚ್ಚಿ, ಸಾಮಾಜಿಕ ಜಾಲತಾಣಗಳು ಬಲಿಷ್ಠವಾಗಿ ಬೆಳೆದು ಸಂಬೋಧನಾ ಶೈಲಿ ಬದಲಾಗಿ, ಹಿರಿಯ ಕಿರಿಯರೆಂಬ ಭೇದ ಕಡಿಮೆಯಾಗಿದೆ.

ಯುವಕ ಯುವತಿಯರು ಕಚೇರಿಗಳಲ್ಲಿ ಪ್ರಮುಖ ಪಾತ್ರ ವಹಿಸಲಾರಂಭಿಸಿ ಹಿರಿಯ ಸಹೋದ್ಯೋಗಿಗಳನ್ನು ‘ಹೇ, ಹಾಯ್’ ಎಂದು ಸಂಬೋಧಿಸಿ ಮಾತನಾಡುವುದು ಸಾಮಾನ್ಯವಾಗಿದೆ. ಇ-ಮೇಲ್‌ಗಳನ್ನು ಇದೇ ರೀತಿಯಲ್ಲಿ ಬರೆಯಲಾರಂಭಿಸಿದ್ದಾರೆ.  ಹಳೆ ತಲೆಮಾರಿನ ಕೆಲವರಿಗೆ ಇದರಿಂದ ಇರಿಸುಮುರಿಸು ಆದರೂ, ಕಾಲನ ಚಕ್ರಕ್ಕೆ ಬಹುತೇಕರು ಹೊಂದಿಕೊಂಡು ಹೋಗುತ್ತಿದ್ದಾರೆ.

ಯುವಜನರ ನಾಡಿಬಡಿತಕ್ಕೆ ಮಿಡಿಯುತ್ತಿದ್ದಾರೆ. ಅಲ್ಪಸ್ವಲ್ಪ ಪರಿಚಯದವರು, ಪರಿಚಿತರಲ್ಲದವರೂ ‘ಹಾಯ್’ ಸಂಬೋಧನೆಯನ್ನು ಬಳಸುವುದು ಹೆಚ್ಚುತ್ತಿರುವ ಈ ಕಾಲದಲ್ಲಿ, ‘ಡಿಯರ್‌’ ಪದವನ್ನು ಹೆಚ್ಚು ಔಪಚಾರಿಕವಾಗಿಯೇ ಬಳಸಲಾಗುತ್ತಿದೆ. ಇನ್ನೂ ಬೆಳವಣಿಗೆಗಳಾಗಿ, ‘ಡಿಯರ್‍ ಮಿಸ್ಟರ್‌’, ‘ಡಿಯರ್‌ ಮಿಸ್’, ‘ಡಿಯರ್‌ ಮಿಸಸ್’ ಸಂಬೋಧವಾಚಕಗಳೂ ಕಣ್ಮರೆಯಾಗುತ್ತಿವೆ.

‘ಡಿಯರ್‌ ಸೋ ಅಂಡ್‌ ಸೋ’ ಎಂಬುದು ಆಧುನಿಕ ಜಗದ ಸರ್ವೇಸಾಮಾನ್ಯ ಸಂಬೋಧನಾವಾಚಕ ಶಬ್ದವಾಗಿ ಮೂಡಿಬರುತ್ತಿದೆ. ಅನೇಕ ದೇಶಗಳವರು ಭಾಗವಹಿಸುವ, ಜಾಲತಾಣದಲ್ಲೇ ಮಾಡಬಹುದಾದ ಕೆಲವು ಕೋರ್ಸುಗಳಲ್ಲಿ, ಇಂಗ್ಲೆಂಡಿನ ವಿಶ್ವವಿದ್ಯಾಲಯಗಳು ನಡೆಸುವ ಇ-ತರಗತಿಗಳಲ್ಲಿ ಕೂಡ ಶಿಕ್ಷಕರನ್ನು ವಿದ್ಯಾರ್ಥಿಗಳು ಮಿಸ್ಟರ್‌–ಮಿಸ್ ಪದವಿಲ್ಲದೆ ನೇರವಾಗಿ ಡಿಯರ್‌ ಎಂದೇ ಸಂಬೋಧಿಸುತ್ತಾರೆ.

ವಿಶ್ವದೆಲ್ಲೆಡೆ ಸಂಬೋಧನಾ ಕ್ರಮ ಬದಲಾಗಿದೆ, ಬದಲಾಗುತ್ತಿದೆ. ಈ ವಿಷಯದಲ್ಲಿ ವಿಶ್ವ ಇಂದು ಹೆಚ್ಚು ಪ್ರಜಾಪ್ರಭುತ್ವವಾದಿಯಾಗುತ್ತಿದೆ. ಹಾಗಿರುವಾಗ ಸಚಿವರು ‘ಗೌರವಾನ್ವಿತ’ವಾಗಿ ಉಳಿಯಬೇಕೇ?  ಹಾಗೆ ಸಂಬೋಧಿಸದಿರುವವರನ್ನು ಛೇಡಿಸುವುದು ಒಂದು ರೀತಿಯ ಭಾಷಾ ಅಸಹನೆಯೇ ಸರಿ. ಮೇಲಾಗಿ ಇತ್ತೀಚಿನ ದಿನಗಳಲ್ಲಿ ಪ್ರಭುತ್ವದಲ್ಲಿರುವವರ ಬಗ್ಗೆ ಗೌರವ ಕಡಿಮೆಯಾಗುತ್ತಿರುವಾಗ, ಜನ ಅವರನ್ನು ‘ಗೌರವಾನ್ವಿತ’ ಎಂದು ಕರೆಯುವಂತೆ ಮಾಡುವುದು ಅಧಿಕಾರದಲ್ಲಿರುವವರದೇ ಜವಾಬ್ದಾರಿ.

ಗೌರವ ಕೇಳಿ ಪಡೆಯುವ ವಸ್ತುವಲ್ಲ. ಅನರ್ಹರಿಗೆ ‘ಗೌರವಾನ್ವಿತ’ ಪದ ಬಳಕೆ ಆಗಿ ಆಗಿ, ಈ ಶಬ್ದದಲ್ಲಿನ ಗೌರವ ಭಾವ ಕಡಿಮೆ ಆಗಿದೆ. ಅಲ್ಲದೆ ಅದನ್ನು ಬಳಸಿದಾಗ ಅದು, ಹಿಂದೆ ರಾಜರಿಗೆ ಬಹುಪರಾಕ್‌ ಹೇಳುತ್ತಿದ್ದಂತೆ  ಕೇಳಿಸುತ್ತದೆ. ಇದು, ಮಹಾಪೌರರಿಗೆ ಪೂಜ್ಯ ಎನ್ನಬೇಕು ಎಂಬ ಸಂಪ್ರದಾಯದ ನೆನಪು ತರುತ್ತದೆ.

‘ಪೂಜ್ಯ ಮಹಾಪೌರರೆ’ ಎಂದು ಸಂಬೋಧಿಸುವ ಕ್ರಮ ಎಷ್ಟು ತಮಾಷೆಯಾಗಿರುತ್ತದೆ ಎಂಬುದನ್ನು ನೋಡಲು ಯಾವುದಾದರೂ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಹೋಗಬೇಕು. ಸಚಿವರಿಗೆ ಔಪಚಾರಿಕ ಪತ್ರ ಬರೆಯುವಾಗಲೂ ‘ಡಿಯರ್‍’ ಎಂದೇ ಬರೆಯಬೇಕೆಂಬ ವಾದವೇನೂ ಇಲ್ಲ. ಆದರೆ, ಯಾರಾದರೂ ಹಾಗೆ ಮಾಡಿದರೂ ಅದರಲ್ಲಿ ತಪ್ಪೇನಿಲ್ಲ. ಅದು ಆಕ್ಷೇಪಾರ್ಹ ವಿಷಯವಾಗಬಾರದು. ಹಾಗೆ ಬರೆದರೂ ಸಚಿವರು, ಅಧಿಕಾರಿಗಳು ಬರೆದವರ ಕೋರಿಕೆಗಳಿಗೆ ನ್ಯಾಯ ಸಿಗುವಂತೆ ನೋಡಿಕೊಂಡರೆ, ಪ್ರಜೆಯೇ ಪ್ರಭು ಎಂಬುದಕ್ಕೆ ಒಂದು ಮೌಲ್ಯ ಸಿಕ್ಕೀತು.

ಅಲ್ಲದೆ, ಅಧಿಕಾರದಲ್ಲಿರುವವರು ಇತರರು ತಮ್ಮನ್ನು ಹೀಗೇ ಸಂಬೋಧಿಸಬೇಕೆಂದು ಬಯಸುವುದು ದರ್ಪದ ಮಾತಾಗುತ್ತದೆ. ಈ ಅಧಿಕಾರದ ದರ್ಪವನ್ನು ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಹೊರಹಾಕುತ್ತಾರೆ. ಸಂಪುಟ ಸಹೋದ್ಯೋಗಿಗಳನ್ನೂ ತಮ್ಮ ಕಾಲಿಗೆ ಬೀಳಿಸಿಕೊಳ್ಳುವ ಸಂಪ್ರದಾಯ ಪಕ್ಕದ ರಾಜ್ಯದಲ್ಲೇ ಇದೆ. ಇಂತಹ ಅನಿಷ್ಟ ಪದ್ಧತಿಗಳಿಗೆ ಹಾಗೂ ಮಂತ್ರಿ, ಅಧಿಕಾರಿಗಳು ತಮ್ಮನ್ನು ಇತರರು ‘ಗೌರವಾನ್ವಿತ’ ಎಂದು ಸಂಬೋಧಿಸಬೇಕೆನ್ನುವ ಪರಿಪಾಠಗಳಿಗೆ ಕಡಿವಾಣ ಬೀಳಬೇಕು.

ಅಧಿಕಾರಿಗಳು, ರಾಜಕಾರಣಿಗಳು ತಾವು ಜನರ ಸೇವೆಗಾಗಿ ಇರುವವರು ಎಂಬ ಮೂಲ ಸತ್ಯದ ಅರಿವಿಟ್ಟುಕೊಂಡೇ ತಮ್ಮ ಆಚಾರ ವಿಚಾರಗಳನ್ನು ಪ್ರತಿಪಾದಿಸಲಿ.
ನಾವು ಮುಂದುವರಿದಂತೆ, ಜರ್ಮನಿಯ ಮಾದರಿಗೆ ಶರಣು ಹೋದರೆ ಒಳ್ಳೆಯದೆನಿಸುತ್ತದೆ. ಅಲ್ಲಿ ಯಾರೇ ಇಬ್ಬರು ಅಥವಾ ಎರಡು ಗುಂಪುಗಳು ಪರಸ್ಪರ ಸಂಬೋಧಿಸುವ ಕ್ರಮದ ಬಗ್ಗೆ ಮೊದಲೇ ಮಾತನಾಡಿಕೊಂಡು ಬಿಡುತ್ತಾರೆ.

ವಯಸ್ಸು, ಅಂತಸ್ತು, ಅಧಿಕಾರದ ಭಿನ್ನತೆ ಎಷ್ಟೇ ಇದ್ದರೂ ಸಂಭಾಷಣೆಯಲ್ಲಿ, ಪತ್ರೋತ್ತರಗಳಲ್ಲಿ ಮೊದಲೇ ಮಾತನಾಡಿಕೊಂಡಂತೆ ಔಪಚಾರಿಕ ಇಲ್ಲವೇ ಅನೌಪಚಾರಿಕ ಭಾಷೆಯನ್ನು ಪರಸ್ಪರ ಬಳಸುತ್ತಾರೆ. ಒಬ್ಬರು ಔಪಚಾರಿಕವಾಗಿ ಮತ್ತು ಇನ್ನೊಬ್ಬರು ಅನೌಪಚಾರಿವಾಗಿ ಸಂಬೋಧಿಸುವ ಕ್ರಮ ಅಲ್ಲಿಲ್ಲ. ಕನ್ನಡ ಮತ್ತು ಹಿಂದಿಯಂತೆ ಅಲ್ಲಿಯೂ ಪ್ರತಿ ವಾಕ್ಯವನ್ನು ಔಪಚಾರಿಕ ಅಥವಾ ಅನೌಪಚಾರಿಕ ರೀತಿಯಲ್ಲಿ ಹೇಳಬಹುದು, ಬರೆಯಬಹುದು.

ಹಾಗಾಗಿ, ಒಬ್ಬ ಕಿರಿಯ ವಿದ್ಯಾರ್ಥಿ ಅಲ್ಲಿ ತನ್ನ ಅತ್ಯಂತ ಹಿರಿಯ ವಯಸ್ಸಿನ ಗುರುವನ್ನು, ‘ನೀನು ಹೇಳಿದ್ದು ನನಗೆ ಅರ್ಥವಾಗಿಲ್ಲ; ದಯವಿಟ್ಟು ಇನ್ನೊಮ್ಮೆ ಹೇಳುವಿಯಾ’ ಎಂದು ಕೇಳಬಹುದು. ಇಬ್ಬರೂ ಔಪಚಾರಿಕವಾಗಿಯೇ ಮಾತನಾಡಬೇಕೆಂದು ನಿರ್ಧರಿಸಿಕೊಂಡಿದ್ದರೆ ಆಗ ಗುರು ತನ್ನ ವಿದ್ಯಾರ್ಥಿಗೆ, ‘ಹೌದೇ, ತಮಗೆ ನಾನು ಹೇಳಿದ್ದು ತಿಳಿಯಲಿಲ್ಲವೇ?  ತಮಗಾಗಿ ಇನ್ನೊಮ್ಮೆ ವಿವರಿಸುತ್ತೇನೆ’ ಎನ್ನುತ್ತಾರೆ.

ಇತ್ತೀಚಿನ ಬೆಳವಣಿಗೆಯೆಂದರೆ, ಅಲ್ಲಿಯೂ ಔಪಚಾರಿಕ ಸಂಬೋಧನೆ ಕಡಿಮೆಯಾಗುತ್ತಿದ್ದು ಹೆಚ್ಚು ಹೆಚ್ಚು ಜನರು ಅನೌಪಚಾರಿಕ ಸಂಭಾಷಣೆಯತ್ತ ವಾಲುತ್ತಿದ್ದಾರಂತೆ. ಇನ್ನೂ ವಿಶೇಷವೆಂದರೆ, ಅಲ್ಲಿ ಯಾರಿಗಾದರೂ ನೀವು ‘ಸರ್‌’ ಎಂದು ಸಂಬೋಧಿಸಿದರೆ, ನೀವು ಅವರನ್ನು ಬೇಕಂತಲೇ ದೂರವಿಡಲು ಈ ಪದ ಬಳಸುತ್ತಿದ್ದೀರಿ ಎಂದು ಭಾವಿಸಿ ಕೆಂಪಗಾಗಿಬಿಡುತ್ತಾರೆಂದು ಜರ್ಮನಿ ಜನರೊಡನೆ ಒಡನಾಡುವ ನನ್ನ ಜರ್ಮನ್ ಭಾಷಾ ಗುರುಗಳು ಹೇಳುತ್ತಾರೆ.

 ನಾವೂ ‘ಗೌರವಾನ್ವಿತ’ (ಸರ್‍ ಶಬ್ದಕ್ಕೆ ಸಮವೆಂದು ಭಾವಿಸಬಹುದು) ಎಂದು ಸಂಬೋಧಿಸುತ್ತ ದೂರವಾಗುವ ಬದಲು ಪರಸ್ಪರ ‘ಡಿಯರ್‌’ ಎನ್ನುತ್ತ ಹತ್ತಿರವಾಗೋಣ. ಡಿಯರ್‌ ಎಂದರೆ, dear to heart (ಹೃದಯಕ್ಕೆ ಹತ್ತಿರ) ಎಂದೇ ಭಾವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT