ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದರ್ವೇಸಿ’ಗಳತ್ತ ನೋಡಿ!

Last Updated 8 ಜೂನ್ 2015, 19:30 IST
ಅಕ್ಷರ ಗಾತ್ರ

‘ದರ್ವೇಸಿ’ ಎಂಬುದು ಒಂದು ಬೈಗುಳವಾಗಿ ಮಾತ್ರ ನಮ್ಮ ಸಭ್ಯ ಸಮಾಜಕ್ಕೆ ಪರಿಚಯವಾಗಿದೆ ಹೊರತು ಇದೊಂದು ಮನುಷ್ಯ ಸಮುದಾಯ ಎಂದಲ್ಲ! ಸದಾ ಬಡತನ, ದಾರಿದ್ರ್ಯ, ಅನಕ್ಷರತೆಯೊಂದಿಗೆ ಬಳಲುತ್ತಿರುವ ದರ್ವೇಸಿ ಸಮುದಾಯ ಎಂದಿಗೂ ಮುಖ್ಯವಾಹಿನಿಗೆ ಬರಲಾರದೇನೋ ಎನ್ನುವಷ್ಟು ಹಿಂದುಳಿದಿದೆ.

ದರ್ವೇಸಿಗಳು ಈಚೀಚೆಗೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂಬ ಕನಸು ಕಾಣುತ್ತಿದ್ದಾರೆ. ಆದರೆ ಜಾತಿ ಪ್ರಮಾಣಪತ್ರ ನೀಡದ ಕಾರಣ ಅವರ ಈ ಕನಸು ನನಸಾಗುತ್ತಿಲ್ಲ. ದರ್ವೇಸು, ದರ್ವೇಶಿ, ದರ್ವೇಸ್‌ ಎಂದು ಕರೆಯಲಾಗುವ ದರ್ವೇಸಿಗಳಿಗೆ ಜಾತಿ ಪ್ರಮಾಣಪತ್ರ  ನೀಡಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಮುದಾಯದ ಬಗ್ಗೆ ಕನಿಷ್ಠ ಅರಿವಿರಬೇಕು. ಆದರೆ ದರ್ವೇಸಿಗಳ ಬಗ್ಗೆ ಅಧಿಕಾರಿಗಳು, ಸರ್ಕಾರದ  ಅಜ್ಞಾನದಿಂದಾಗಿ ಈ ಸಮುದಾಯ ‘ಅಸ್ತಿತ್ವ’ ಕಳೆದುಕೊಂಡಿದೆ.

ಈ ಕಾರಣಕ್ಕೆ ತಮ್ಮ ಮಕ್ಕಳನ್ನು ಅಕ್ಷರ ಲೋಕದಿಂದ ದೂರವೇ ಇಟ್ಟಿದೆ. ಸದಾ ತನ್ನ ಅಸ್ಮಿತೆಗಾಗಿ ಒದ್ದಾಡುತ್ತಿರುವ ಈ ಸಮುದಾಯ ತನ್ನ ಇಡೀ ಭಿಕ್ಷೆಯ ಹಣವನ್ನು ಕೂಡಿಟ್ಟು 2013ರ ನವೆಂಬರ್ 21ರಂದು ಬೆಂಗಳೂರಿನ ಪುರಭವನದಲ್ಲಿ ಸಮಾವೇಶವೊಂದನ್ನು ಸಂಘಟಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಸುಮಾರು ಅರ್ಧ ಡಜನ್ ಮಂತ್ರಿಗಳನ್ನು ಆಹ್ವಾನಿಸಿತ್ತು.

ಎಲ್ಲರೂ ಬರುತ್ತೇವೆಂದು ಆಶ್ವಾಸನೆ ಕೊಟ್ಟಿದ್ದರಾದರೂ  ಕಡೆಗೆ ಯಾರೂ ಇತ್ತ ತಿರುಗಿನೋಡಲಿಲ್ಲ. ದರ್ವೇಸಿಗಳ  ಬಗ್ಗೆ ಕೊಂಚ ಓದಿ ತಿಳಿದಿದ್ದ ಆಗಿನ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರು ಸಭೆಗೆ ಬಂದು ಸರ್ಕಾರವನ್ನು ಬೈದು, ದರ್ವೇಸಿಗಳ ಬಗ್ಗೆ ತಾವು ತಯಾರಾಗಿ ಬಂದಿದ್ದ ಭಾಷಣ ಮಾಡಿ ಹೋದರು.

ಈ ಸಂದರ್ಭದಲ್ಲಿ ದರ್ವೇಸಿ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಸೈಯದ್ ಖಲಾಂ ಉಲ್ಲಾ ಷಾ ನನ್ನೊಂದಿಗೆ ಮಾತನಾಡುತ್ತಾ ‘ದೊಡ್ಡ ಜಾತಿ ಜನರ ಸಮಾವೇಶಕ್ಕೆ ಇವರು ಹೀಗೇ ಚಕ್ಕರ್ ಹೊಡಿತಾರಾ ಸಾರ್? ನೋಡಿ ನಮ್ಮಂಥವರೆಂದರೆ ಅವರಿಗೆ ನಿರ್ಲಕ್ಷ್ಯ’ ಎಂದು ನೋವು ತೋಡಿಕೊಂಡರು. ಸಮಸ್ಯೆ ಕೇಳಿಸಿಕೊಳ್ಳಬೇಕಾದ ಕಿವಿಗಳೇ ಇಲ್ಲದ ಕಾರಣ ಇಡೀ ಸಮಾವೇಶ ನಿಷ್ಪ್ರಯೋಜಕವಾಯಿತು.

ದರ್ವೇಸಿ ಸಮುದಾಯ ಇಸ್ಲಾಂ ಮತದೊಂದಿಗೆ ಇದ್ದರೂ ತನ್ನ ಸಾಂಸ್ಕೃತಿಕ ಅನನ್ಯತೆಯಿಂದಾಗಿ ಅದು ಎಲ್ಲ ಮುಸ್ಲಿಮರಂತಿಲ್ಲ. ದರ್ವೇಸಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿ ಪ್ರವರ್ಗ-1ರಲ್ಲಿ ಇಡಲಾಗಿದೆ. ಇಸ್ಲಾಂ ಅನ್ನು ಒಪ್ಪಿಕೊಂಡ ಅಲೆಮಾರಿ ಸಮುದಾಯಗಳಾಗಿದ್ದು ಪ್ರವರ್ಗ-1ರಲ್ಲಿರುವ ಜಾತಗಾರ್, ಪಿಂಜಾರ್, ನದಾಫ್, ಚಪ್ಪರ್ಬಂದ್, ಗಂಟೀಚೋರ್, ಕಂಜರ್‌ಬಾಟ್‌ರೊಂದಿಗೆ ದರ್ವೇಸಿಗಳನ್ನು ಇಡಲಾಗಿದೆ.

ಇವರು ಮುಸ್ಲಿಮರಂತೆ ಇರುವುದರಿಂದ ಇವರ ಹಿನ್ನೆಲೆಯನ್ನು ಅರಿಯದ, ಜಾತಿ ಪ್ರಮಾಣಪತ್ರ ನೀಡುವ ತಹಶೀಲ್ದಾರರು ಪ್ರವರ್ಗ-2(ಬಿ)ಯಲ್ಲಿ ಪ್ರಮಾಣಪತ್ರ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ. ಪ್ರವರ್ಗ-2(ಬಿ) ಮುಸ್ಲಿಂ ಸಮುದಾಯಕ್ಕಾಗಿಯೇ ಮೀಸಲಿದೆ. ಅತಿ ಹಿಂದುಳಿದ ದರ್ವೇಸಿಗಳನ್ನು ಪ್ರವರ್ಗ-1ರಲ್ಲಿ ಇಟ್ಟಿರುವ ಬಗ್ಗೆ ಅನೇಕ ತಹಶೀಲ್ದಾರರಿಗೆ ಅರಿವಿಲ್ಲದ ಕಾರಣ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ನಾನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ  ಸಂದರ್ಭದಲ್ಲಿ, ದರ್ವೇಸಿಗಳ ಸಮಸ್ಯೆ ಬಗ್ಗೆ ಕೊಂಚ ಕಾಳಜಿ ವಹಿಸಿಕೊಂಡು ಈ ಸಮುದಾಯವಿರುವ ಕಲಬುರ್ಗಿ,  ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ಕೋಲಾರ ಮುಂತಾದೆಡೆ ಹೋದಾಗ, ಸದಾ ಅಲೆಮಾರಿಗಳಾಗಿರುವ ದರ್ವೇಸಿಗಳು ಒಂದಷ್ಟು ಕಡೆ ನೆಲೆನಿಂತು ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದುದರ ಅರಿವಾಯಿತು. ಇವರ ಬಗ್ಗೆ ಅರಿಯಲು ಹೋದಂತೆಲ್ಲ ಅನೇಕ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದವು.

ದರ್ವೇಸು, ದರ್ವೇಸಿ, ಫಕೀರ್ ಎಂದು ಕರೆಯಲಾಗುವ ಈ ಸಮುದಾಯವು ಸೂಫಿ ತಾತ್ವಿಕ ಪರಂಪರೆಗೆ ಸೇರಿದ್ದು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದು, ದಾನ ಇಲ್ಲವೇ ಭಿಕ್ಷೆಯ ಮೂಲಕ ತನ್ನ ಜೀವನ ನಿರ್ವಹಿಸಿಕೊಳ್ಳುವ ಅನನ್ಯತೆಯನ್ನು ತನ್ನದಾಗಿಸಿಕೊಂಡಿದೆ. ದರ್ವೇಸು ಎಂಬ ಪದವು  ಪರ್ಷಿಯನ್‌ ಮೂಲದ್ದಾಗಿದ್ದು, ಶಬ್ದಕೋಶದ ಪ್ರಕಾರ ಈ ಪದದ ಅರ್ಥ ಧಾರ್ಮಿಕ ಸೇವಕ ಎಂದಾಗುತ್ತದೆ. ದರ್ವೇಸ್‌ ಎಂಬ ಪದದ ಅರ್ಥ ದರ್ವಾಸ್‌ ಅಂದರೆ ಬಾಗಿಲು.

ಪ್ರೀತಿ, ಕರುಣೆ, ಮಾನವೀಯತೆಗೆ ತೆರೆದ ಹೃದಯದ ಬಾಗಿಲು ಎಂದು ಇದರ ಅರ್ಥ. ದರ್ವೇಸುಗಳನ್ನೇ ಸೂಚಿಸುವ ಫಕೀರ್ ಎಂಬ ಪದದ ಮೂಲವು ಅರೇಬಿಕ್ ಭಾಷೆಯದ್ದಾಗಿದ್ದು, ಆಧ್ಯಾತ್ಮಿಕ ಆತ್ಮಾಭಿಮಾನವನ್ನು ಸೂಚಿಸುತ್ತದೆ. ಈ ಎರಡು ಪದಗಳು ಈ ಸಮುದಾಯದ ಧಾರ್ಮಿಕ ಅಥವಾ ಆಧ್ಯಾತ್ಮಿಕವಾದ ಅನನ್ಯತೆಯನ್ನು ಸೂಚಿಸುತ್ತವೆ. ಹಾಗಾಗಿ ದರ್ವೇಸು ಸಮುದಾಯದ್ದು ಧಾರ್ಮಿಕ ವೃತ್ತಿ ಪರಂಪರೆ ಎಂದು ಪರಿಭಾವಿಸಬಹುದಾಗಿದೆ.

ದರ್ವೇಸುಗಳಲ್ಲಿ ಕೆಲವರು ದರ್ಗಾ, ಇಲ್ಲವೇ ಇವರದ್ದೇ ಆದ ಮಕಾನ್/ ಮಠಗಳಲ್ಲಿ ನೆಲೆನಿಂತು ಅಲ್ಲಿಯೇ ದಾನವನ್ನು ಪಡೆಯುವರು. ಇನ್ನು ಕೆಲವರು ಊರೂರು ಅಲೆದು ಸೂಫಿ ಹಾಡು, ಹಟ ಯೋಗ ಸಾಧನೆಗಳನ್ನು ಪ್ರದರ್ಶಿಸಿ ದಾನ, ಭಿಕ್ಷೆಯನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳೆಂದು ಪರಿಗಣಿಸಬಹುದಾಗಿದೆ.

ಇಸ್ಲಾಂ ಧರ್ಮ ಸ್ಥಾಪನೆಯ ಮೂರನೇ ತಲೆಮಾರಿನಿಂದ ಆರಂಭಗೊಂಡ ದರ್ವೇಸು ಪರಂಪರೆ ಬಾಗ್ದಾದಿನಿಂದ ಆರಂಭಗೊಂಡರೂ, ಭಾರತದಲ್ಲಿ ಅಜ್ಮೀರಿನ ಖ್ವಾಜಾ ಗರೀಬನ್ನವಾಜ್‌ನಿಂದ ಶುರುವಾಗುತ್ತದೆ. ಕರ್ನಾಟಕದಲ್ಲಿ ದರ್ವೇಸುಗಳು ಕಲಬುರ್ಗಿ, ವಿಜಯಪುರ, ಬೀದರ್‌, ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ರಾಜ್ಯದಲ್ಲಿರುವ ಪ್ರತಿ ದರ್ಗಾ ಹಾಗೂ ದರ್ಗಾ ಕೇಂದ್ರಿತ ಭೌಗೋಳಿಕ ವಲಯದಲ್ಲಿ ಅವರನ್ನು ಕಾಣಬಹುದಾಗಿದೆ. ದರ್ಗಾವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಅವರದೇ ಆದ ಚೌಕ ಅಥವಾ ಮಂಡಲಗಳನ್ನು ರಚಿಸಿಕೊಂಡಿರುತ್ತಾರೆ.  ಪ್ರತಿ ದರ್ವೇಸು ಕುಟುಂಬ ಇಂತಹ ಚೌಕಗಳ  ವ್ಯಾಪ್ತಿಯಲ್ಲಿರುತ್ತದೆ.

ದರ್ವೇಸು ಸಮುದಾಯವು ಗುರು ದೀಕ್ಷಾ ವಿಧಾನವನ್ನು ಹೊಂದಿದ್ದು, ಕುಲ ವೃತ್ತಿಯನ್ನು ಮುಂದುವರಿಸ ಬಯಸುವ ಪ್ರತಿ ದರ್ವೇಸಿಯು ಗುರುವಿನಿಂದ ದೀಕ್ಷೆ ಪಡೆಯುವುದು ಕಡ್ಡಾಯವಾಗಿರುತ್ತದೆ. ದರ್ವೇಸುಗಳಲ್ಲಿ ಬಾನುವಾ,  ರಫಾಯಿ, ಜಲಾಲ್ (ಖಾದ್ರಿಯಾ, ಖಲಂದರಿಯಾ) ಮತ್ತು ಅಹಲೇತಫ್ಕಾತ್‌ಗಳೆಂದು ನಾಲ್ಕು ಒಳ ಪಂಗಡಗಳನ್ನು ಗುರುತಿಸಲಾಗಿದೆ. ಇವುಗಳಲ್ಲದೇ 14 ಉಪ ಪಂಗಡಗಳಿರುವುದು (ಕೆಲವರ ಪ್ರಕಾರ 16) ತಿಳಿದುಬರುತ್ತದೆ. ಭಿಕ್ಷಾಟನೆಯನ್ನು ತೊರೆದು ನೆಲೆ ನಿಂತವರನ್ನು ಮಕಾಂದಾರರೆಂದು ಕರೆಯಲಾಗುತ್ತದೆ.

ದರ್ವೇಸಿಗಳ ಬಗ್ಗೆ ನಮ್ಮ ಅಧಿಕಾರಿಗಳಿಗೆ, ಸರ್ಕಾರಗಳಿಗೆ ಸ್ವಲ್ಪವಾದರೂ ಅರಿವು ಮೂಡಲೆಂದು ಇಷ್ಟೆಲ್ಲ ಹಿನ್ನೆಲೆ ಹೇಳಬೇಕಾಯಿತು. ಒಮ್ಮೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಬಳಿಗೂ ದರ್ವೇಸಿಗಳನ್ನು ಕರೆದೊಯ್ದೆ. ಇವರ ಕಷ್ಟಗಳನ್ನು ಆಲಿಸಿದ ಮಂತ್ರಿಗಳು ಒಂದು ತಿಂಗಳಲ್ಲಿ ಸಮಸ್ಯೆ  ಪರಿಹರಿಸುತ್ತೇನೆ ಎಂದು ಹೇಳಿ ಈಗಾಗಲೇ ಐದು ತಿಂಗಳಾಯಿತು.

ದರ್ವೇಸಿಗಳೇ ಪಟ್ಟಿ ತಯಾರಿಸಿ ಸರ್ಕಾರಕ್ಕೆ ನೀಡಿರುವ ಪ್ರಕಾರ ಬಾದಾಮಿ, ದಾವಣಗೆರೆ, ಹೊಳೆನರಸೀಪುರ, ಗೌರಿಬಿದನೂರು, ಖಾನಾಪುರ ಮುಂತಾಗಿ ಸುಮಾರು 27 ತಹಶೀಲ್ದಾರರು ಈಚೀಚೆಗೆ ಇವರ ಬಗ್ಗೆ ಅರಿವು ಮೂಡಿಸಿಕೊಂಡು ಜಾತಿ ಪ್ರಮಾಣಪತ್ರ ಕೊಡುತ್ತಿದ್ದಾರಂತೆ. ಆದರೆ ಉಡುಪಿ, ಹೊನ್ನಾಳಿ, ಶಿವಮೊಗ್ಗ, ಸಾಗರ, ಹಾವೇರಿ, ರಾಮನಗರ ಮುಂತಾಗಿ ಸುಮಾರು 47 ತಹಶೀಲ್ದಾರರು ಇವರಿಗೆ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ.

ದರ್ವೇಸಿಗಳಿಗೆ ಜಾತಿ ಪ್ರಮಾಣಪತ್ರದೊಂದಿಗೆ, ಆರೋಗ್ಯ ಸೌಲಭ್ಯ, ಬಿಪಿಎಲ್ ಪಡಿತರ ಕಾರ್ಡ್‌ ಮುಂತಾಗಿ ಸೌಲಭ್ಯ ಸಿಗುತ್ತಿಲ್ಲ. ಜಾತಿ ಪ್ರಮಾಣಪತ್ರ ಸಿಕ್ಕರೆ ಇವರ ಮಕ್ಕಳಿಗೆ ನಾಲ್ಕು ಅಕ್ಷರ ಸಿಗುತ್ತದೆ. ಇಲ್ಲದಿದ್ದಲ್ಲಿ ಅವರು ಕೂಡ ತಮ್ಮ ಪೋಷಕರಂತೆಯೇ ಹಾದಿಬೀದಿಗಳಲ್ಲಿ ಹಾಡುತ್ತಾ, ಭಿಕ್ಷಾಟನೆ ಮಾಡುತ್ತಾ ಇರಬೇಕಾಗುತ್ತದಷ್ಟೇ. ಸರ್ಕಾರದ ನಾಲ್ಕು ಸಾಲಿನ ಒಂದು ಪ್ರಕಟಣೆ  ದರ್ವೇಸಿಗಳ ಬದುಕನ್ನೇ ಬದಲಾಯಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT