ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 21 ಜುಲೈ 2023

Published 20 ಜುಲೈ 2023, 22:56 IST
Last Updated 20 ಜುಲೈ 2023, 22:56 IST
ಅಕ್ಷರ ಗಾತ್ರ

ಮೈತ್ರಿಯ ಹಿಂದೆ...

ರಾಜಕಾರಣದಲ್ಲಿ
ಮೈತ್ರಿಯೆಂಬುದೇ
ಮಹಾಮೋಸ, ಸುಳ್ಳು,
ಅದೇನಿದ್ದರೂ
ತೆರೆಮರೆಯ ಅಪ್ಪಟ ವ್ಯಾಪಾರ
ಕೊಡು ಮತ್ತು ಕೊಳ್ಳು!

– ಆರ್.ಸುನೀಲ್, ತರೀಕೆರೆ

ವಿದ್ಯಾರ್ಥಿ ಬಸ್‌ಪಾಸ್‌: ಅರ್ಜಿ ಸಲ್ಲಿಕೆ ತೊಡಕು

ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಉಚಿತ ಬಸ್‌ಪಾಸ್‌ಗಾಗಿ ಆನ್‌ಲೈನ್‌ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ ಶಾಲಾ SATSನಲ್ಲಿನ (ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ) ಮಕ್ಕಳ ಹೆಸರಿಗೂ ಅವರು ಈಗಾಗಲೇ ಮಾಡಿಸಿರುವ ಆಧಾರ್ ಕಾರ್ಡ್‌ನಲ್ಲಿನ ಹೆಸರಿಗೂ ತಾಳೆ ಆಗದೇ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆಲವು ಗಂಡು ಮಕ್ಕಳಿಗೆ ಶಾಲಾ ಕಾಲೇಜಿಗೆ ಹೋಗಲು ಕಷ್ಟವಾಗುತ್ತಿದೆ. ಈ ಮೊದಲಿನಂತೆ ಅರ್ಜಿಯನ್ನು ಭೌತಿಕವಾಗಿ ಸಲ್ಲಿಸುವಂತೆ ಮಾಡುವುದು ಉತ್ತಮ.

–ಅಶೋಕ ಚನ್ನಳ್ಳಿ, ಹಿರೇಕೆರೂರು 

ಚಿತ್ರರಂಗದವರು ಅರಿಯಬೇಕಾದ್ದು ಬಹಳಷ್ಟಿದೆ

‘ತೊಂಬತ್ತರಲ್ಲಿ ಕೆಟ್ಟು ನಿಂತ ಸಿನಿಮಾಬಂಡಿ’ ಎಂಬ ರಘುನಾಥ ಚ.ಹ. ಅವರ ಲೇಖನ (ಪ್ರ.ವಾ., ಜುಲೈ 20) ಕನ್ನಡ ಚಿತ್ರರಂಗದ ಇಂದಿನ ದುಃಸ್ಥಿತಿಯನ್ನು ಸೂಕ್ಷ್ಮವಾಗಿ ತೋರಿಸಿದೆ. ಈ ಪರಿಸ್ಥಿತಿಯನ್ನು ಸಿನಿಮಾ ಮಂದಿ ಒಂದೆಡೆ ಕುಳಿತು ಅವಲೋಕನ ಮಾಡಿಕೊಳ್ಳಬೇಕಿದೆ. ಈ ಮೊಬೈಲ್ ಯುಗದಲ್ಲಿ ಜನರಿಗೆ ಸಿನಿಮಾ ಬೇಕಾಗಿಲ್ಲ ಎಂಬ ಸತ್ಯವನ್ನು, ಇಂದಿನ ದಿನಗಳಲ್ಲಿ ಹೊಸ ಸಿನಿಮಾಗಳು ಬರದಿದ್ದರೂ ಜನರ ಮನರಂಜನೆಗೇನೂ ಧಕ್ಕೆ ಇಲ್ಲ ಎಂಬುದನ್ನು ಚಿತ್ರರಂಗದವರು ಅರಿಯಬೇಕಿದೆ.

ಕರ್ನಾಟಕದಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸಿನಿಮಾ ಮಂದಿರಗಳು ಮುಚ್ಚಿಹೋಗಿವೆ. ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ. ಪ್ರಸಿದ್ಧ ಕಲಾವಿದರೆಲ್ಲ ಟಿ.ವಿ ಪರದೆ ಮೇಲೆ ಕಾಣಿಸುತ್ತಿದ್ದಾರೆ. ದೊಡ್ಡ ದೊಡ್ಡ ನಾಯಕನಟರು ಕೇಳಿದಷ್ಟು ಸಂಭಾವನೆ ಸಿಗದಿದ್ದರೆ ವರ್ಷಗಟ್ಟಲೆ ಸಿನಿಮಾ ಮಾಡುವುದೇ ಇಲ್ಲ. ಹೊಸಬರು ಬಂದರೂ ಒಂದೋ ಎರಡೋ ಸಿನಿಮಾ ಮಾಡಿದ ನಂತರ ತೆರೆಮರೆಗೆ ಹೋಗುತ್ತಿದ್ದಾರೆ. ಬಹಳಷ್ಟು ಸಿನಿಮಾಗಳು ಒಂದೆರಡು ದಿನ ಓಡಿ ಮೂಲೆ ಸೇರುತ್ತಿವೆ. ಇಷ್ಟೆಲ್ಲಾ ಗೊತ್ತಿದ್ದೂ ಗಾಂಧಿನಗರ ಮೌನವಾಗಿದೆ ಮತ್ತು ದುಃಸ್ಥಿತಿಯನ್ನು ಒಪ್ಪಿಕೊಂಡಂತಿದೆ. ನಿರ್ಮಾಪಕರನ್ನು ಅನ್ನದಾತರು, ಪ್ರೇಕ್ಷಕರನ್ನು ಅಭಿಮಾನಿ ದೇವರುಗಳು ಎಂದು ಹೇಳುತ್ತಿದ್ದ ಅಮೂಲ್ಯ ಮಾತುಗಳು ಕಣ್ಮರೆಯಾಗಿ ದಶಕಗಳೇ ಕಳೆದುಹೋದವು. ಚಿತ್ರರಂಗದ ಸುವರ್ಣಯುಗ ಎಂಬುದು ಇನ್ನು ಮುಂದೆ ಮರೀಚಿಕೆಯಾಗುವುದೇ?

– ವಿ.ತಿಪ್ಪೇಸ್ವಾಮಿ, ಹಿರಿಯೂರು

ಸದನ ಕಲಾಪ: ಅರಸು ಮಾದರಿ

ಸದನದ ಕಲಾಪ ನಡೆಯುತ್ತಿತ್ತು. ವಿರೋಧ ಪಕ್ಷದ ಸದಸ್ಯರೊಬ್ಬರು, ವೃದ್ಧಾಪ್ಯ ಪಿಂಚಣಿ ಕೆಲವೇ ಜಾತಿಗಳವರ ಪಾಲಾಗುತ್ತಿದೆ, ಸಚಿವರು ತಮ್ಮ ಜಾತಿಯವರಿಗೆ ಮಾತ್ರ ಪಿಂಚಣಿ ಕೊಡಿಸುತ್ತಿದ್ದಾರೆ ಎಂದು ಆರೋಪ ಮಾಡಿದರು. ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರು ಎದ್ದು ನಿಂತು, ತಮ್ಮ ಟೇಬಲ್ ಮೇಲಿನ ನೀರಿನ ಲೋಟವನ್ನು ಎತ್ತಿ ಕೈಯಲ್ಲಿ ಹಿಡಿದು ‘ಇದು ಸರ್ಕಾರದ ಯೋಜನೆ. ಈ ನೀರಿನ ಲೋಟವನ್ನು ದಾಹವಿದ್ದವನಿಗೆ ಕೊಟ್ಟು ಬಾ ಎಂದರೆ, ನಮ್ಮ ಪಕ್ಷದವರು ತಮ್ಮ ಜಾತಿಯವರನ್ನಷ್ಟೇ ಹುಡುಕಿ ಕೊಡಬಾರದು. ಇದು ಸಚಿವರಿಗೆ, ಸರ್ಕಾರಕ್ಕೆ ಭೂಷಣವಲ್ಲ. ಹೀಗೆ ಮಾಡುವುದು ಜನದ್ರೋಹ’ ಎಂದು ಗುಡುಗಿದ್ದರು.

ಬಿಜೆಪಿಯ 10 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಶಾಸಕರಾದ ಬಸವರಾಜ ಬೊಮ್ಮಾಯಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ವಿರೋಧ ಪಕ್ಷದ ಶಾಸಕರೊಂದಿಗೆ ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಚಿತ್ರ ನೋಡಿ, ಅರಸು ಅವರ ಈ ಪ್ರಕರಣ ಎಲ್ಲ ಕಾಲಕ್ಕೂ ನೀತಿ ಪಾಠದಂತಿದೆ ಅನಿಸಿತು. ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯದಲ್ಲಿ ಹಿರಿಯರು ಎಂಬ ಗೌರವಕ್ಕೆ ಪಾತ್ರರಾದವರು. ಸದನದಲ್ಲಿ ಶಾಸಕರು ಮಸೂದೆಗಳ ಪ್ರತಿಗಳನ್ನು ಹರಿದು ಉಪಸಭಾಧ್ಯಕ್ಷರ ಮುಖಕ್ಕೆ ಎಸೆದದ್ದು ದೊಡ್ಡ ತಪ್ಪು, ಇದು ಹುಂಬತನದ ಪರಮಾವಧಿ ಎಂದು ಕಿವಿಮಾತು ಹೇಳಬೇಕಾಗಿತ್ತು. ಅದು ಬಿಟ್ಟು ಪ್ರತಿಭಟನೆ ನಡೆಸಿದ್ದು ವಿರೋಧಕ್ಕಾಗಿ ವಿರೋಧ ಎಂಬಂತೆ ಕಾಣಿಸುತ್ತದೆ.

ಅರಸು ಮುಖ್ಯಮಂತ್ರಿಯಾಗಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ.ದೇವೇಗೌಡರು ಕಾವೇರಿ ನೀರಾವರಿ ವಿಷಯವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಮಾತನಾಡುತ್ತಿದ್ದರು. ಅವರ ವಾದಸರಣಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸಾಗಿತ್ತು. ಅರಸು ಮಧ್ಯಪ್ರವೇಶಿಸಿ ‘ಗೌಡ್ರೆ, ನಿಮ್ಮ ಗಂಟಲು ಒಣಗಿದಂತೆ ಕಾಣುತ್ತದೆ, ದಯವಿಟ್ಟು ಸ್ವಲ್ಪ ನೀರು ಕುಡಿದು ಮುಂದುವರಿಸಿ. ನಾವು ಕೇಳುವುದಕ್ಕೆ ಸಿದ್ಧರಿದ್ದೇವೆ’ ಎಂದು ಪ್ರೋತ್ಸಾಹಿಸಿದ್ದರು. ವಿರೋಧ ಪಕ್ಷದವರ ಟೀಕೆ ಟಿಪ್ಪಣಿಗಳನ್ನು ಸಹನೆಯಿಂದ ಕೇಳುವ ಮನೋಭಾವವನ್ನು ಆಡಳಿತ ಪಕ್ಷದವರು ಬೆಳೆಸಿಕೊಳ್ಳಬೇಕು ಎಂಬುದಕ್ಕೆ ಅರಸು ಅವರ ಈ ನಡೆ ಒಂದು ಮಾದರಿಯಾಗಿದೆ.


–ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ಸದನದ ಗೌರವ ಕಾಪಾಡಿ...

ವಿಧಾನಸಭಾ ಅಧಿವೇಶನದಲ್ಲಿ ಬುಧವಾರ ನಡೆದ ಗದ್ದಲದ ಚಿತ್ರ ಹಾಗೂ ವಿವರವು ಪತ್ರಿಕೆಯ ಮುಖಪುಟದಲ್ಲಿ (ಪ್ರ.ವಾ., ಜುಲೈ 20) ಮುದ್ರಣವಾಗಿದೆ. ಹಾಗೆಯೇ ಶಾಲಾ ವಿದ್ಯಾರ್ಥಿಗಳು ಇದೇ ಕಲಾಪ ನೋಡಲು ಕಾಯುತ್ತಿದ್ದ ಚಿತ್ರವೊಂದು ಪುಟ 6ರಲ್ಲಿ ಪ್ರಕಟವಾಗಿದೆ. ಆದರೆ ವಿದ್ಯಾರ್ಥಿಗಳ ಈ ಚಿತ್ರವನ್ನು ಮುಖಪುಟದಲ್ಲಿ ಪ್ರಕಟವಾಗಿರುವ ಸದನದ ಗದ್ದಲದ ಚಿತ್ರದ ಪಕ್ಕದಲ್ಲೇ ಪ್ರಕಟಿಸಿದ್ದರೆ ಚೆನ್ನಾಗಿತ್ತು ಹಾಗೂ ಅದು ಅರ್ಥಪೂರ್ಣವಾಗುತ್ತಿತ್ತು. ಸದನದಲ್ಲಿನ ಗದ್ದಲ ನೋಡಿ ಈ ಮಕ್ಕಳ ಮನಸ್ಸಿಗೆ ಎಷ್ಟೊಂದು ಗಾಸಿಯಾಗಿರಬಹುದು ಎಂಬುದರ ಬಗ್ಗೆ ಯಾರೂ ಯೋಚಿಸಲೇ ಇಲ್ಲ ಅನಿಸುತ್ತದೆ. ಸದನದ ಕಲಾಪ ಅವರಿಗೆ ಅರ್ಥವಾಯಿತೋ ಇಲ್ಲವೋ ತಿಳಿಯದು. ಆದರೆ ಅಲ್ಲಿ ಹಿರಿಯರು ನಡೆದುಕೊಂಡ ರೀತಿಯನ್ನು ನೋಡಿ, ‘ಇವರೇನಾ ನಮ್ಮ ಜನಪ್ರತಿನಿಧಿಗಳು’ ಎಂಬ ಭಾವನೆಯಂತೂ ಬಂದಿರಬಹುದು.

ಮಾನ್ಯ ಜನಪ್ರತಿನಿಧಿಗಳೇ, ದಯವಿಟ್ಟು ಸದನದ ಗೌರವ ಕಾಪಾಡಿ ಹಾಗೂ ನೀವು ನಿಮ್ಮ ಕ್ಷೇತ್ರದಲ್ಲಿ ಓಡಾಡಿದಾಗ ಜನರಲ್ಲಿ ನಿಮ್ಮ ಬಗ್ಗೆ ಜುಗುಪ್ಸೆ ಮೂಡದಂತೆ ನೋಡಿಕೊಳ್ಳಿ. ಆಗ ನಿಮಗೂ ಹಾಗೂ ಸದನಕ್ಕೂ ಗೌರವ ಬರುತ್ತದೆ.


–ಪಿ.ಎನ್.ಎಂ. ಗುಪ್ತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT