ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 30 ಏಪ್ರಿಲ್ 2024, 22:26 IST
Last Updated 30 ಏಪ್ರಿಲ್ 2024, 22:26 IST
ಅಕ್ಷರ ಗಾತ್ರ

ಅತ್ತೆಯ ದೂರಿಗಿಲ್ಲ ಪ್ರಾಶಸ್ತ್ಯ!

ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರುದಾರ ಮಹಿಳೆಯ ಅತ್ತೆ ಪತ್ರಿಕಾಗೋಷ್ಠಿ ನಡೆಸಿ, ‘ದೂರು ನೀಡಿರುವ ಮಹಿಳೆ ಸರಿಯಿಲ್ಲ’ ಎಂದು ಹೇಳಿಕೆ ನೀಡಿರುವುದು ವರದಿಯಾಗಿದೆ (ಪ್ರ.ವಾ., ಏ. 30). ಭಾರತೀಯ ಸಮಾಜದ ಕುಟುಂಬ ವ್ಯವಸ್ಥೆಯಲ್ಲಿ ಅತ್ತೆಗೆ ಸೊಸೆ ಮತ್ತು ಸೊಸೆಗೆ ಅತ್ತೆ ಸರಿಯಾಗಿ ಕಾಣುವ ಉದಾಹರಣೆಗಳು ವಿರಳ. ಸೊಸೆಯ ಬಗ್ಗೆ ಅತ್ತೆ ಮತ್ತು ಅತ್ತೆಯ ಬಗ್ಗೆ ಸೊಸೆ ಹೊರಿಸುವ ಆಪಾದನೆಗಳನ್ನು ಜನರು ಈ ಕಿವಿಯಿಂದ ಕೇಳಿ ಆ ಕಿವಿಯಲ್ಲಿ ಬಿಟ್ಟುಬಿಡುತ್ತಾರೆ. ಆ ಆಪಾದನೆಗಳನ್ನು ಯಾರಾದರೂ ಗಂಭೀರವಾಗಿ ಪರಿಗಣಿಸಿದರೆ, ಅಂಥವರಿಗೆ ನಮ್ಮ ಕುಟುಂಬ ವ್ಯವಸ್ಥೆಯ ಸರಿಯಾದ ಜ್ಞಾನ ಇಲ್ಲವೆಂದೇ ಅರ್ಥ.

ಅದೇ ಪತ್ರಿಕಾಗೋಷ್ಠಿಯಲ್ಲಿ ಅತ್ತೆ, ದೂರುದಾರ ಮಹಿಳೆ ಸುಳ್ಳು ಹೇಳುತ್ತಿರುವುದನ್ನು ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡಿ ಸಾಬೀತುಪಡಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಆದರೆ ದೂರುದಾರ ಸೊಸೆಯು ಸರಿಯಿಲ್ಲ ಎಂಬುದನ್ನಾಗಲೀ ಮತ್ತು ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂಬುದನ್ನಾಗಲೀ ಸಾಬೀತುಪಡಿಸಬೇಕಿರುವುದು ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಅಲ್ಲ, ಬದಲಿಗೆ ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ, ನ್ಯಾಯಾಧೀಶರ ಸಮ್ಮುಖದಲ್ಲಿ ಎಂಬುದನ್ನು ತಿಳಿದವರು ಅತ್ತೆಯ ಗಮನಕ್ಕೆ ತರಬೇಕಿದೆ.

⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಮತ ಎಣಿಕೆ: ಕಾಲೇಜಿನಲ್ಲೇ ಏಕೆ?

ಲೋಕಸಭಾ ಚುನಾವಣೆಯ ಮತ ಎಣಿಕೆಗಾಗಿ ಜಾಗ ಬಿಟ್ಟುಕೊಟ್ಟಿರುವ ರಾಜ್ಯದ ಕಾಲೇಜುಗಳಲ್ಲಿ ಎರಡು ತಿಂಗಳು ತರಗತಿಗಳಿಗೆ ಕುತ್ತು ಉಂಟಾಗಲಿದೆ ಎಂಬ ವರದಿಯು (ಪ್ರ.ವಾ., ಏ. 30) ತರಗತಿ ನಷ್ಟದ ಬಗ್ಗೆ ಬೆಳಕು ಚೆಲ್ಲಿದೆ. ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸುವ ಸಲುವಾಗಿ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳು ವುದು ಏಕೆ? ಈಗಾಗಲೇ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜೆ ಆರಂಭ ವಾಗಿದೆ. ಇನ್ನು ಶಾಲೆ ಪ್ರಾರಂಭವಾಗುವುದು ಜೂನ್ ಮೊದಲ ವಾರದಲ್ಲಿ. ಈ ಶಾಲೆಗಳನ್ನು ಮತಯಂತ್ರ ಸಂರಕ್ಷಣೆಗೆ ಬಳಸಿಕೊಂಡರೆ ಮಕ್ಕಳಿಗೆ ಒಂದು ವಾರ ರಜೆ ನೀಡಿದರಷ್ಟೇ ಸಾಕಾಗುತ್ತದೆ. ಹೇಗೂ ಪಠ್ಯಪುಸ್ತಕ, ಮಕ್ಕಳ ದಾಖಲಾತಿ ಎಂದು ತರಗತಿಗಳು ಸರಿಯಾಗಿ ಪ್ರಾರಂಭವಾಗುವುದೇ ಜೂನ್ ಮಧ್ಯಭಾಗದಲ್ಲಿ. ಈ ದಿಸೆಯಲ್ಲಿ ಚುನಾವಣಾ ಆಯೋಗ ಯೋಚಿಸಲಿ.

⇒ವಿನುತ ಮುರಳೀಧರ, ಬಾಳೆಬೈಲು, ತೀರ್ಥಹಳ್ಳಿ

ನೀರಿನ ದುರ್ಬಳಕೆ: ವಂಚನೆಯೇ ಹೌದು

ಬಿಸಿಲ ಬೇಗೆಯಲ್ಲಿ ನೀರಿನ ಅಭಾವದ ನಡುವೆಯೂ ಹಳ್ಳಿಯೊಂದರ ಜಾತ್ರೆಯಲ್ಲಿ ದೇವರ ಉತ್ಸವದ ಹಿಂದೆ ಸರತಿ ಸಾಲಿನಲ್ಲಿ ಮೂರ್ನಾಲ್ಕು ಕಿ.ಮೀ. ದೂರದವರೆಗೂ ಡಾಂಬರು ರಸ್ತೆಯಲ್ಲಿ ನೂರಾರು ಜನ ಮಲಗುವುದನ್ನು, ಅವರ ಮೇಲೆ ಯಥೇಚ್ಛವಾಗಿ ನೀರು ಸುರಿಸುತ್ತಾ ಹೋಗುವ ಟ್ಯಾಂಕರುಗಳನ್ನು ನೋಡಿದಾಕ್ಷಣ, ‘ಕುಡಿಯಲು ನೀರಿಲ್ಲದೆ ಜೀವಬಿಟ್ಟ ನವಿಲು’ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಓದಿದ್ದು ನೆನಪಾಯಿತು. ಭೂಮಿಯ ಮೇಲಿನ ಸಂಪನ್ಮೂಲಗಳು ಸಕಲ ಜೀವರಾಶಿಗಳಿಗೂ ಸೇರಿದವು ಎಂಬುದನ್ನು ಮರೆತಿರುವ ಮನುಷ್ಯ, ಬಿಸಿಲ ಬೇಗೆಯಿಂದ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಾ ಜನವಸತಿ ಪ್ರದೇಶಗಳಿಗೆ ವಲಸೆ ಬರುತ್ತಿರುವ ಈ ಹೊತ್ತಿನಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆಯಾಗಲಿ, ಸಹ ಜೀವಸಂಕುಲಗಳ ಬಗ್ಗೆಯಾಗಲಿ ಕನಿಷ್ಠ ಕಳಕಳಿಯನ್ನೂ ತೋರದೆ ತನಗೆ ತೋಚಿದಂತೆ ಬದುಕುತ್ತಿದ್ದಾನೇನೊ ಎಂದೆನಿಸಿತು.

ಭಕ್ತಿ, ಆಡಂಬರ, ಮೋಜುಮಸ್ತಿಯ ಹೆಸರಿನಲ್ಲಿ ನೀರಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದು ನಾವು ಸಹಜೀವಿಗಳಿಗೆ ಮಾಡುವ ವಂಚನೆ. ಕೆಲವು ರಾಷ್ಟ್ರಗಳಲ್ಲಿ ನೀರಿನ ರೇಷನ್ ಪದ್ಧತಿ ಶುರುವಾಗಿರುವಂತೆ, ನಮ್ಮಲ್ಲೂ ಆಗಬಾರದೆಂದರೆ ಪರಿಸರ ದಿನ, ಜಲಸಾಕ್ಷರತಾ ದಿನದ ಆಚರಣೆಗಷ್ಟೇ ನಮ್ಮ ಕಳಕಳಿ ಸೀಮಿತ
ಆಗಬಾರದು. ಮನೆಗಳು, ಶಾಲಾಕಾಲೇಜುಗಳಲ್ಲಿ ನೀರಿನ ಬಳಕೆ, ಉಳಿತಾಯದ ಕುರಿತು ಅರಿವು ಮೂಡಿಸುವಂತೆ ಆಗಬೇಕು.‘

⇒ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ಮಿಕ್ಸಿ ಮೋಟರ್‌: ಶಬ್ದರಹಿತವಾಗಲಿ

ಮೊದಲೆಲ್ಲ ಸ್ಕೂಟರ್‌, ಕಾರು, ಬಸ್ಸುಗಳು ಸಂಚರಿಸಬೇಕಾದರೆ ಬಹಳಷ್ಟು ಸದ್ದು ಮಾಡುತ್ತಿದ್ದವು. ತಂತ್ರಜ್ಞಾನ ಉತ್ತಮಗೊಂಡಂತೆ ಈಗ ಇಂತಹ ವಾಹನಗಳ ಮೋಟರುಗಳ ಸದ್ದು ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಎಲ್ಲರ ಮನೆಗಳಲ್ಲೂ ಬೆಳಿಗ್ಗೆ ಬೇಗನೆ ಅಥವಾ ರಾತ್ರಿ ಹೊತ್ತಲ್ಲಿ ತಿರುಗುವ ಮಿಕ್ಸಿಗಳ ಸದ್ದು ಮಾತ್ರ ಕಡಿಮೆಯಾಗಿಯೇ ಇಲ್ಲ. ಇವುಗಳ ಕರ್ಕಶ ಸದ್ದಿನಿಂದ ಮನೆಯಲ್ಲಿರುವ ಹಾಗೂ ಪಕ್ಕದ ಮನೆಯಲ್ಲಿರುವ ವೃದ್ಧರಿಗೆ, ರೋಗಿಗಳಿಗೆ, ಚಿಕ್ಕ ಮಕ್ಕಳಿಗೆ, ನಿದ್ರಿಸುವವರಿಗೆ ತೊಂದರೆ ಉಂಟಾಗುತ್ತದೆ. ಇವನ್ನು ತಯಾರು ಮಾಡುವ ಕಂಪನಿಗಳು, ಎಂಜಿನಿಯರ್‌ಗಳು ಈ ದಿಸೆಯಲ್ಲಿ ಗಮನಹರಿಸಿ ಮಿಕ್ಸಿ ಮೋಟರುಗಳ ಸದ್ದನ್ನು ಕಡಿಮೆಗೊಳಿಸಿದರೆ ಶಬ್ದಮಾಲಿನ್ಯ
ವನ್ನು ಕಡಿಮೆ ಮಾಡಬಹುದು.

⇒ಬಿ.ಎನ್.ಭರತ್, ಬೆಂಗಳೂರು

ನೈತಿಕ ಮಹಾಪತನಕ್ಕೆ ಕೊನೆಯೆಂದು?

ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಶಾಸಕರನ್ನು ಬೇಟೆಯಾಡಿ, ಬಹುಮತವನ್ನು ಅಕ್ರಮವಾಗಿ ಸೃಷ್ಟಿಸಿ ಕೊಳ್ಳುವ ಅನೈತಿಕ ರಾಜಕಾರಣದ ಒಂದು ಮಾದರಿಯನ್ನು ಕರ್ನಾಟಕವು ದೇಶಕ್ಕೆ ನೀಡಿದಾಗಲೇ ನಾವು ತಲೆ ತಗ್ಗಿಸಬೇಕಾಯಿತು. ಮುಖ್ಯಮಂತ್ರಿ ಆಗಿದ್ದವರೊಬ್ಬರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದಾಗಲೂ ನಾವು ದೇಶದ ಮುಂದೆ ತಲೆ ತಗ್ಗಿಸಿದೆವು. ಸುಮಾರು ಅದೇ ಅವಧಿಯಲ್ಲಿ ಮಂತ್ರಿಗಳು ಭ್ರಷ್ಟಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಾಲು ಸಾಲಾಗಿ ಜೈಲು ಪಾಲಾದಾಗಲೂ ಮತ್ತೆ ತಲೆ ತಗ್ಗಿಸಿದೆವು. ವಿಧಾನಸಭೆಯಲ್ಲಿ ಕೆಲವು ಶಾಸಕರು ಅಶ್ಲೀಲ ಚಿತ್ರಗಳನ್ನು ನೋಡಿದಾಗ, ಮಠಾಧಿಪತಿಯೊಬ್ಬರು ಎಳೆ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಆರೋಪದ ಮೇಲೆ ಜೈಲಿಗೆ ಹೋದಾಗಲೂ ನಾವು ದೇಶದ ಮುಂದೆ ನಾಚಿಕೆಯಿಂದ ತಲೆ ತಗ್ಗಿಸದೆ ಬೇರೆ ದಾರಿಯೇ ಇರಲಿಲ್ಲ. ಈಗ ಒಬ್ಬ ಯುವ ಸಂಸದನ ಲೈಂಗಿಕ ದೌರ್ಜನ್ಯ ಪ್ರಕರಣದಿಂದಾಗಿ
ದೇಶದ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಈ ನೈತಿಕ ಮಹಾಪತನಗಳ ಸರಣಿಗೆ ಕೊನೆಯೆಂದು?

⇒ರುದ್ರಪ್ಪ ಸಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT