ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮದ್ಯರಾತ್ರಿ?

Published 3 ಜನವರಿ 2024, 0:07 IST
Last Updated 3 ಜನವರಿ 2024, 0:07 IST
ಅಕ್ಷರ ಗಾತ್ರ

ಮದ್ಯರಾತ್ರಿ?

ಡಿಸೆಂಬರ್ 31ರಂದು
₹ 193 ಕೋಟಿ ಮೌಲ್ಯದ
ಮದ್ಯ ಮಾರಾಟವಾಗಿದೆಯಂತೆ!
(ಪ್ರ.ವಾ., ಜ.2).
ಅಂದಿನ ‘ಮಧ್ಯರಾತ್ರಿ’ಯು
‘ಮದ್ಯರಾತ್ರಿ’ಯಾಗಿ
ಬದಲಾದುದು
ವಿಪರ್ಯಾಸ!

-ಪಿ.ಜೆ.ರಾಘವೇಂದ್ರ, ಮೈಸೂರು

ಬಾಕಿ ಪ್ರಕರಣ: ಮುಜುಗರದ ಸ್ಥಿತಿ ತಂದೀತು

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 2,511 ನ್ಯಾಯಾಂಗ ನಿಂದನೆ ಪ್ರಕರಣಗಳು ಹೈಕೋರ್ಟ್‌ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಬಾಕಿ ಉಳಿದಿರುವುದು (ಪ್ರ.ವಾ.,
ಜ. 2) ನ್ಯಾಯಾಂಗದೆಡೆಗೆ ಅಧಿಕಾರಿಶಾಹಿಯು ಹೊಂದಿರುವ ಅನಾದರವನ್ನು ಎತ್ತಿ ತೋರಿಸುತ್ತದೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು ಇಲಾಖಾ ಮಟ್ಟದಲ್ಲಿ ಪರಿಹಾರ ಸಿಗದೇ ಜನಸಾಮಾನ್ಯರು ಕೋರ್ಟ್ ಮೆಟ್ಟಿಲೇರಿ ತಮ್ಮ ಪರ ತೀರ್ಪು ಪಡೆದಿರುವಂತಹವಾಗಿರುತ್ತವೆ. ಆದರೆ ತೀರ್ಪಿನ ಪ್ರಕಾರ ನಡೆದುಕೊಳ್ಳದೆ ಅಲ್ಲೂ ವಿಳಂಬ ಧೋರಣೆ ತಳೆದು, ಪರಿಹಾರ ಎಂಬುದು ಕೋರ್ಟ್ ಮೆಟ್ಟಿಲೇರಿದವರಿಗೆ ಮರೀಚಿಕೆ ಆಗುವಂತೆ ನೋಡಿಕೊಳ್ಳುವ ದುರುದ್ದೇಶ ಇದರ ಹಿಂದೆ ಇರಬಹುದು. ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಒಂದೆಡೆಯಾದರೆ, ಮುಖ್ಯಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಮಾಡಿರುವ 49 ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಇರುವುದು ಏನನ್ನು ಸೂಚಿಸುತ್ತದೆ? ಇಂತಹ ನಡವಳಿಕೆ ಮುಂದೊಂದು ದಿನ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿ ತಂದೊಡ್ಡಿದರೆ
ಆಶ್ಚರ್ಯವಿಲ್ಲ.

-ನವೀನ್ ತಾಜ್ ಎಚ್.ಆರ್., ಹಾಸನ

ಇಂಥ ಪ್ರತಿಭಟನೆ ಸಲ್ಲ

ರಾಮನಗರ ತಾಲ್ಲೂಕಿನ ಅಣ್ಣಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಕಾರ್ಯದರ್ಶಿಯ ನೇಮಕ ಖಂಡಿಸಿ ಹಾಗೂ ಈ ನೇಮಕದ ಹಿಂದೆ ಬಮೂಲ್ ನಿರ್ದೇಶಕ ಪಿ.ನಾಗರಾಜ್ ಅವರ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಗ್ರಾಮದ ಹಾಲು ಉತ್ಪಾದಕರು ರಾಮನಗರಕ್ಕೆ ಹಸುಗಳನ್ನು ಕರೆತಂದು, ರಸ್ತೆಯಲ್ಲಿ ಹಾಲು ಚೆಲ್ಲಿ ಪ್ರತಿಭಟಿಸಿದ್ದಾರೆ.

ಪೌಷ್ಟಿಕ ಆಹಾರ ದೊರಕದೆ ಅಪೌಷ್ಟಿಕತೆ ಕಾಡುತ್ತಿದೆ ಎಂದು ಸರ್ಕಾರವು ಶಾಲಾ ಮಕ್ಕಳಿಗೆ ಹಾಲು, ಹಣ್ಣು, ಮೊಟ್ಟೆ, ಊಟ ನೀಡುತ್ತಿದೆ. ಹಾಲು ಪೌಷ್ಟಿಕ ಆಹಾರ. ಅನ್ಯಾಯ ಆದಾಗ ಪ್ರತಿಭಟನೆ ಮಾಡುವುದು ಜನರ ಹಕ್ಕು. ಪ್ರತಿಭಟನೆಗೆ ನಾನಾ ಮಾರ್ಗಗಳಿವೆ. ಆದರೆ, ಈ ರೀತಿ ಹಾಲಿನಂತಹ ಆಹಾರ ಪದಾರ್ಥಗಳನ್ನು ರಸ್ತೆಗೆ ಚೆಲ್ಲಿ ಪ್ರತಿಭಟಿಸುವುದು ತರವಲ್ಲ. ಅದರ ಬದಲು ಬಡಮಕ್ಕಳಿಗೆ ಹಂಚಲಿ. ಕಪ್ಪುಬಟ್ಟೆ ಧರಿಸಿ ಜನರಿಗೆ ಉಚಿತವಾಗಿ ನೀಡಲಿ. ಹಾಲು, ಹಣ್ಣು ಅಥವಾ ಇನ್ನಾವುದೇ ಆಹಾರವನ್ನು ವ್ಯರ್ಥ ಮಾಡುವವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಇಂತಹ ಕೃತ್ಯಗಳು ನಿಯಂತ್ರಣಕ್ಕೆ ಬರಬಹುದು.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ನಾಗರಿಕ ಸಮಾಜ ಸಾಗುತ್ತಿರುವ ಈ ಪರಿ!

ರಾಜ್ಯದಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅದರಲ್ಲೂ ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಯುವಸಮೂಹವು ಅಬ್ಬರದ ಪಾಶ್ಚಾತ್ಯ ಸಂಗೀತ, ಡಿ.ಜೆ. ಸದ್ದಿಗೆ ಹೆಜ್ಜೆ ಹಾಕುತ್ತಾ ಕುಣಿದದ್ದು, ಕೆಲ ಯುವಕ, ಯುವತಿಯರು ಕಂಠಪೂರ್ತಿ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದುದು, ಇನ್ನು ಕೆಲವರು ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಳ್ಳುತ್ತಿದ್ದುದು ವರದಿಯಾಗಿದೆ. ಇದನ್ನೆಲ್ಲ ನೋಡಿದಾಗ, ಭಾರತದ ಭವ್ಯ ಸಂಸ್ಕೃತಿ, ಸಂಸ್ಕಾರಕ್ಕೆ ಏನಾಗಿದೆ ಮತ್ತು ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳು ಮೂಡಿದವು. ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು ನಿಜ. ಆದರೆ ಅದು ಮಿತಿಮೀರದಂತೆ ನೋಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ.

-ಬಿ.ಎಸ್.ಚೈತ್ರ, ಚಿತ್ರದುರ್ಗ

ಮಕ್ಕಳಲ್ಲಿ ದ್ವೇಷಭಾವನೆ ಹೆಚ್ಚಿತೇಕೆ?

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಗಲಾಟೆ ಮಾಡಿಕೊಂಡ ಪ್ರಕರಣ ರಾಯಚೂರು ನಗರದ ಮದರ್ ಟ್ರಸ್ಟ್ ಶಾಲೆಯ ಆವರಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ
(ಪ್ರ.ವಾ., ಜ. 2). ಇವರೆಲ್ಲ 7 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಎಂಬುದು ಆತಂಕಕಾರಿ. ಈ ನವ ಪೀಳಿಗೆಗೆ ಹಿಂಸಾರಭಸಮತಿಯು ಅವರು ಪ್ರೌಢ ವಯಸ್ಸಿಗೆ ಬರುವ ಮೊದಲೇ ವಕ್ಕರಿಸಿಕೊಂಡಿರುವುದು ದುರದೃಷ್ಟಕರ.

ಇಂಥ ಅಹಿತಕರ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಗೋಲಿ ಆಡುವಂಥ ಮಕ್ಕಳ ಕೈಗೆ ಬಂದಿರುವ ಮೊಬೈಲ್‍ಗಳು ಮಕ್ಕಳ ಮನಸ್ಸಿನಲ್ಲಿ ಹಿಂಸೆ, ದ್ವೇಷ ಹೆಚ್ಚಿಸುವುದಕ್ಕೆ ಕಾರಣವಾಗಿವೆ ಹಾಗೂ ಈ ಮಕ್ಕಳಿಗೆ ದೊರೆಯುತ್ತಿರುವ ಪರೀಕ್ಷಾಕೇಂದ್ರಿತ ಶಿಕ್ಷಣವೂ ಹೇತುವಾಗಿದೆ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಉಸ್ತುವಾರಿ ವ್ಯವಸ್ಥೆ ಜನಸ್ನೇಹಿ ಆಗಲಿ

ಅಭಿವೃದ್ಧಿ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಪ್ರತಿ ತಾಲ್ಲೂಕಿಗೂ ಒಬ್ಬರು ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಇಂತಹ ಕ್ರಮಗಳ ಬಗ್ಗೆ
ಶ್ರೀಸಾಮಾನ್ಯನಿಗೆ ಬಹಳಷ್ಟು ನಿರೀಕ್ಷೆಗಳು ಇರುತ್ತವೆ. ಈ ದಿಸೆಯಲ್ಲಿ ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿ, ಜನರಿಗೆ ಸುಲಭವಾಗಿ ಸಿಗುವಂತೆ ಆಗಬೇಕು. ಜನರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು.

ಜನ ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ವ್ಯವಸ್ಥೆ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ತಾಲ್ಲೂಕು ಉಸ್ತುವಾರಿ ಅಧಿಕಾರಿಗಳ ನೇಮಕದ ಮೂಲಕ ಜನರ ಕಷ್ಟಕಾರ್ಪಣ್ಯಗಳು ಬೇಗ ಬಗೆಹರಿಯುವಂತಾಗಲಿ ಮತ್ತು ವ್ಯವಸ್ಥೆ ಮೇಲೆ ಅವರ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿ.

-ಪ್ರಸಾದ್‌ ಜಿ.ಎಂ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT