ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕೆ–ಸೆಟ್‌: ರಜೆ ದಿನ ನಡೆಯಲಿ

Published 4 ಜನವರಿ 2024, 23:53 IST
Last Updated 4 ಜನವರಿ 2024, 23:53 IST
ಅಕ್ಷರ ಗಾತ್ರ

ಪ್ರಾಂಶುಪಾಲರಿಂದ ಮುಚ್ಚಳಿಕೆ: ಅಮಾನವೀಯ ಕೃತ್ಯ

‘ಪ್ರಸಕ್ತ ವರ್ಷದ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ನೀಡುತ್ತೇವೆ. ಕಳಪೆ ಫಲಿತಾಂಶ ಬಂದರೆ ಶಿಸ್ತುಕ್ರಮಕ್ಕೆ ಬದ್ಧರಾಗಿರುತ್ತೇವೆ’ ಎಂಬ ಮುಚ್ಚಳಿಕೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಕೆಲವು ಜಿಲ್ಲೆಗಳ ಉಪನಿರ್ದೇಶಕರು ಪಿ.ಯು. ಕಾಲೇಜುಗಳ ಪ್ರಾಂಶುಪಾಲರು ಮತ್ತು ವಿಷಯವಾರು ಉಪನ್ಯಾಸ ಕರಿಂದ ಬರೆಸಿಕೊಳ್ಳುತ್ತಿರುವುದು ಅಮಾನವೀಯ, ಅನಾಗರಿಕ ಕೃತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದ ಬಹುತೇಕ ಪಿ.ಯು. ಕಾಲೇಜು ಪರೀಕ್ಷಾ ಕೇಂದ್ರಗಳು ಪರೀಕ್ಷೆಯನ್ನು ಯಾವುದೇ ನಕಲು ಅಥವಾ ಅಡ್ಡದಾರಿಗೆ ಅವಕಾಶವಿಲ್ಲದಂತೆ ವ್ಯವಸ್ಥಿತವಾಗಿ ನಡೆಸುವುದರ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದಿವೆ. ಈ ರೀತಿಯ ಆದೇಶ ನೀಡಿರುವ ಉಪನಿರ್ದೇಶಕರು ಸಹ ಹಿಂದೆ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದವರೇ ಆಗಿರುತ್ತಾರೆ. ಆಗ ಅವರ ಕಾಲೇಜಿನಲ್ಲಿ ಶೇಕಡ ನೂರು ಫಲಿತಾಂಶ ಬಂದಿತ್ತೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.

ಉಳ್ಳವರ ಮಕ್ಕಳು ನಗರದ ಪ್ರತಿಷ್ಠಿತ ಕಾಲೇಜುಗಳಿಗೆ ಸೇರುತ್ತಾರೆ. ಸರ್ಕಾರಿ ಪಿ.ಯು. ಕಾಲೇಜುಗಳಿಗೆ ಸೇರುವವರಲ್ಲಿ ಬಹುತೇಕರು ಬಡವರ ಮಕ್ಕಳು ಮತ್ತು ಶಿಕ್ಷಣದಲ್ಲಿ ಹಿಂದು ಳಿದವರು ಆಗಿರುತ್ತಾರೆ. ಇಂತಹ ಮಕ್ಕಳಿಗೆ ಪ್ರಾಮಾಣಿಕವಾಗಿ ಬೋಧಿಸಿ ಅವರನ್ನು ಕನಿಷ್ಠ ಅಂಕಗಳೊಂದಿಗೆ ಪಾಸಾಗುವಂತೆ ಮಾಡುವುದು ಎಂತಹ ಕಷ್ಟದ ಕೆಲಸ ಎಂಬುದು ಈ ಆದೇಶ ನೀಡಿರುವ ಉಪನಿರ್ದೇಶಕರಿಗೆ ತಿಳಿದಿಲ್ಲ ಎನ್ನಿಸುತ್ತದೆ. ಗ್ರಾಮೀಣ ಕಾಲೇಜುಗಳ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗದೆ ಕೂಲಿ ಕೆಲಸಕ್ಕೆ ಹೋಗುವುದೂ ಉಂಟು. ಇಂತಹ ಸ್ಥಿತಿಯಲ್ಲಿ ಶೇಕಡ ನೂರು ಫಲಿತಾಂಶ ಕನಸಿನ ಮಾತಾಗಿ ಉಳಿಯುತ್ತದೆ.

ಈ ಆದೇಶವೇನಾದರೂ ಅಧಿಕೃತವಾಗಿ ಜಾರಿಯಾಗಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಶಿಕ್ಷೆ ಅನುಭವಿಸುವಂತಾದರೆ, ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಗಳು ಅಧೋಗತಿಗೆ ಇಳಿಯುತ್ತವೆ. ಪರೀಕ್ಷಾ ಕೇಂದ್ರಗಳು ನಕಲು ಕೇಂದ್ರಗಳಾಗುವ ಮೂಲಕ ಬಿಹಾರ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ನಡೆಯುವ ಪರೀಕ್ಷೆಗಳಂತೆ ಆಗುತ್ತವೆ. ಉಪನ್ಯಾಸಕರ ಮನಃಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹೀಗಾಗಿ, ಈ ರೀತಿಯ ಆದೇಶ ನೀಡಿ ದಬ್ಬಾಳಿಕೆ ನಡೆಸಿರುವ ಉಪನಿರ್ದೇಶಕ
ರನ್ನು ಶಿಕ್ಷಿಸುವ ಮೂಲಕ, ಪಿ.ಯು. ಕಾಲೇಜುಗಳು ಎಂದಿನಂತೆ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸರ್ಕಾರ ಅನುವು ಮಾಡಿಕೊಡಬೇಕು.

-ಮೋದೂರು ಮಹೇಶಾರಾಧ್ಯ, ಹುಣಸೂರು

ಲೋಕಾಯುಕ್ತರಿಗೆ ಸಿಗಲಿ ಪೂರ್ಣ ಅಧಿಕಾರ

ಒಡವೆ ಕದ್ದನೆಂದು ಬಂಧಿಸಿದ್ದ ಕಳ್ಳನೊಬ್ಬನನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಬಿಡುಗಡೆ ಮಾಡುವಂತೆ ನ್ಯಾಯಾಧೀಶರು ತೀರ್ಪು ನೀಡಿದರಂತೆ. ಆಗ ಆ ಕಳ್ಳನು ‘ಹಾಗಾದರೆ ಆ ಒಡವೆಗಳನ್ನು ನಾನೇ ಇಟ್ಟುಕೊಳ್ಳಬಹುದೇ ಸ್ವಾಮಿ?’ ಎಂದು ನ್ಯಾಯಾಧೀಶರನ್ನು ಕೇಳಿದನಂತೆ! ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ, ಲಂಚ ಪ್ರಕರಣಗಳ ಆರೋಪ ಹೊತ್ತಿರುವ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡದ ಸಂಬಂಧಪಟ್ಟ ಪ್ರಾಧಿಕಾರಗಳ ಅಧಿಕಾರಿಗಳಿಗೆ ಈ ಸಂಬಂಧ ನಿರ್ದೇಶನ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಪತ್ರ ಬರೆದಿರುವ ಸುದ್ದಿಯನ್ನು (ಪ್ರ.ವಾ, ಡಿ. 25) ಓದಿದಾಗ ಈ ಕಥೆ ನೆನಪಿಗೆ ಬಂತು!

ಲೋಕಾಯುಕ್ತ ದಾಳಿ ನಡೆದು ಕಂತೆ ಕಂತೆ ಕರೆನ್ಸಿ ನೋಟುಗಳು, ಪೆಟ್ಟಿಗೆ ತುಂಬಾ ಒಡವೆಗಳು, ಆಸ್ತಿಪಾಸ್ತಿ ದಾಖಲೆಗಳು ಜಪ್ತಿಯಾದ ಮೇಲೂ ಅಂತಹವರ ವಿರುದ್ಧ ಮೊಕದ್ದಮೆ ಹೂಡಲು ಸಕ್ಷಮ ಪ್ರಾಧಿಕಾರದ ಅನುಮತಿ ಬೇಕೆಂಬ ನಿಯಮವೇ ತಪ್ಪಲ್ಲವೆ? ಸರ್ಕಾರಕ್ಕೆ ನಿಜವಾಗಿಯೂ ಭ್ರಷ್ಟಾಚಾರವನ್ನು ನಿಗ್ರಹಿಸುವ ಆಸಕ್ತಿಯಿದ್ದರೆ ಕೂಡಲೇ ಈ ನಿಯಮವನ್ನು ತೆಗೆದುಹಾಕಬೇಕು. ಲೋಕಾಯುಕ್ತ ಅಧಿಕಾರಿಗಳೇ ನೇರವಾಗಿ ಮೊಕದ್ದಮೆ ಹೂಡುವಂತೆ ನಿಯಮ ಜಾರಿಗೊಳಿಸಬೇಕು. ಆಗ ಅಂತಹ ಭ್ರಷ್ಟ ಅಧಿಕಾರಿಗಳಿಗೆ ಅವರ ಜೀವಿತಾವಧಿಯಲ್ಲಿಯೇ ಶಿಕ್ಷೆ ದೊರೆತೀತು.

-ಎಚ್‌.ಎಸ್.ಮಂಜಪ್ಪ, ಸೊರಬ

ಕೆ–ಸೆಟ್‌: ರಜೆ ದಿನ ನಡೆಯಲಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ 13ರ ಎರಡನೇ ಶನಿವಾರದಂದು ಕೆ–ಸೆಟ್ ಪರೀಕ್ಷೆ (ಉಪನ್ಯಾಸಕರ ಅರ್ಹತಾ ಪರೀಕ್ಷೆ) ನಡೆಸಲಿದೆ. ಎರಡನೇ ಶನಿವಾರವು ವಿಶ್ವವಿದ್ಯಾಲಯ ಸೇರಿದಂತೆ ಕೆಲವು ಸರ್ಕಾರಿ ಸಂಸ್ಥೆಗಳಿಗೆ ರಜೆಯ ದಿನವಾಗಿರುತ್ತದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕರ್ತವ್ಯದ ದಿನವಾಗಿರುತ್ತದೆ. ಈ ಪರೀಕ್ಷಾರ್ಥಿಗಳಲ್ಲಿ ಬಹುತೇಕರು ಖಾಸಗಿ ಶಿಕ್ಷಣ ಸಂಸ್ಥೆಗಳ ಅತಿಥಿ ಶಿಕ್ಷಕರು ಅಥವಾ ಅತಿಥಿ ಉಪನ್ಯಾಸಕರಾಗಿರುತ್ತಾರೆ. ಅಂತಹವರು ಪರೀಕ್ಷೆ ಬರೆಯುವ ಸಲುವಾಗಿ ಒಂದು ದಿನದ ರಜೆ ಹಾಕಬೇಕಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾಸಿಕ ಒಂದು ದಿನ ಮಾತ್ರ ವೇತನಸಹಿತ ರಜೆ ಲಭ್ಯವಿರುತ್ತದೆ.

ಈವರೆಗೆ ಕೆ–ಸೆಟ್ ಪರೀಕ್ಷೆ ಭಾನುವಾರದಂದೇ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ರಾಧಿಕಾರವು ಕರ್ತವ್ಯದ ದಿನದಂದು ಪರೀಕ್ಷೆ ನಡೆಸುತ್ತಿದೆ. ಪರೀಕ್ಷಾ ಶುಲ್ಕವೆಂದು ಈಗಾಗಲೇ ಸಾವಿರ ರೂಪಾಯಿಯನ್ನು ಪಾವತಿಸಿರುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸಾರಿಗೆ ವೆಚ್ಚ, ಊಟೋಪಚಾರ ಸೇರಿದಂತೆ ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದರ ಮೇಲೆ ಪರೀಕ್ಷೆಗೆ ಹಾಜರಾಗಲು ರಜೆ ಹಾಕಿದರೆ ವೇತನ ಕಡಿತದ ಭಾರವನ್ನೂ ಹೊರಬೇಕಾಗುತ್ತದೆ. ಆದ್ದರಿಂದ ಪ್ರಾಧಿಕಾರವು ಪರೀಕ್ಷೆಯನ್ನು ಭಾನುವಾರದಂದು ನಡೆಸಿ ಪರೀಕ್ಷಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಅಥವಾ ಪರೀಕ್ಷೆಗೆ ಹಾಜರಾಗಲಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳಿಗೆ ಕರ್ತವ್ಯದ ರಜೆ (ಒ.ಡಿ.) ನೀಡುವಂತೆ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಬೇಕು.

-ಅಶೋಕ ಓಜಿನಹಳ್ಳಿ, ಕೊಪ್ಪಳ

ಗೌರವಸೂಚಕವೇ?

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ

ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ  ‌

ಪ್ರಥಮ ಇನಿಂಗ್ಸ್ ಬ್ಯಾಟಿಂಗ್‌ನಲ್ಲಿ

ನಮ್ಮ ಆರು (ಅರ್ಧಕ್ಕೂ ಹೆಚ್ಚು!)

ಆಟಗಾರರು (ಬ್ಯಾಟ್ಸ್‌ಮನ್) 

ಯಾವುದೇ ರನ್ ಗಳಿಸದೆ

ಸೊನ್ನೆಗೆ ಔಟ್ ಆಗಿದ್ದಾರೆ.

ಬಹುಶಃ ಸೊನ್ನೆ (ಶೂನ್ಯ)

ಕಂಡುಹಿಡಿದ

ಆರ್ಯಭಟನಿಗೆ ಗೌರವ

ಸಲ್ಲಿಸಲೂ ಇರಬಹುದು!

-ನಗರ ಗುರುದೇವ್ ಭಂಡಾರ್ಕರ್,  ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT