ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಮ್ಮ ಸಂವಿಧಾನ ಹೇಳುವುದೇನು?

Published 5 ಜನವರಿ 2024, 23:40 IST
Last Updated 5 ಜನವರಿ 2024, 23:40 IST
ಅಕ್ಷರ ಗಾತ್ರ

ನಮ್ಮ ಸಂವಿಧಾನ ಹೇಳುವುದೇನು?

‘ಭಾರತ ಹಿಂದೂ ರಾಷ್ಟ್ರವಾಗಲು ಇನ್ನೇನು ಬಾಕಿಯಿದೆ... ಭಾರತದಲ್ಲಿ ಬಹುಸಂಖ್ಯಾತರಾದ ಹಿಂದೂಗಳು ಅಭಿಮಾನದಿಂದ ನಮ್ಮದು ಹಿಂದೂ ರಾಷ್ಟ್ರ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ನಮ್ಮ ದೇಶವನ್ನು ಹಿಂದೂಸ್ತಾನ, ಹಿಂದೂರಾಷ್ಟ್ರ ಎಂದು ಹೇಳಿಕೊಳ್ಳಬಾರದು ಎಂದು ಯಾವ ಸಂವಿಧಾನದಲ್ಲಿಯೂ ಹೇಳಿಲ್ಲ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಜ. 5). ನಾವು ನಮ್ಮ ಭಾರತದ ಸಂವಿಧಾನದ ಕುರಿತು ಮಾತನಾಡುವುದಾದರೆ, ನಮ್ಮಲ್ಲಿ ನಾಗರಿಕರಿಗೆ ತಮ್ಮದೇ ಆದ ಧರ್ಮ ಇದೆ, ಆದರೆ ರಾಷ್ಟ್ರಕ್ಕೆ ತನ್ನದೇ ಆದ ಧರ್ಮವಿಲ್ಲ. ಭಾರತವು ಮತಧರ್ಮ ನಿರಪೇಕ್ಷ ರಾಷ್ಟ್ರ ಎಂಬುದನ್ನು ಸಂವಿಧಾನದ ಮೊದಲ ಪುಟದಲ್ಲಿಯೇ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ನಮ್ಮ ನೆರೆಯ ರಾಷ್ಟ್ರ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್’, ಆದರೆ ನಮ್ಮದು ಸ್ಪಷ್ಟವಾಗಿ ‘ರಿಪಬ್ಲಿಕ್ ಆಫ್ ಇಂಡಿಯಾ’.

ಸಂವಿಧಾನದ ಪ್ರಕಾರ, ನಮ್ಮ ದೇಶದ ಹೆಸರು ‘ಇಂಡಿಯಾ’ ಎಂದರೆ, ‘ಭಾರತ’. ಆದರೆ, ಹಿಂದೂರಾಷ್ಟ್ರ ಎಂಬ ಪದ ಸಂವಿಧಾನದಲ್ಲಿ ಇಲ್ಲ. ವಿಪರ್ಯಾಸವೆಂದರೆ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುತ್ತೇವೆ ಎನ್ನುವವರನ್ನು ಭಯೋತ್ಪಾದಕರು ಎನ್ನುತ್ತೇವೆ; ಆದರೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವವರನ್ನು ದೇಶಭಕ್ತರು ಎನ್ನುತ್ತೇವೆ. ಸಂವಿಧಾನದ ಪ್ರಕಾರ ಇವೆರಡೂ ಅಪರಾಧಗಳೇ.

-ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ಸುಲಭ ರಾಜಕಾರಣ ಮತ್ತು ವಿಐಪಿ ಪಟ್ಟ

ದೇಶದಲ್ಲಿ 5.79 ಲಕ್ಷ ಮಂದಿ ವಿಐಪಿ ಪಟ್ಟಿಯಲ್ಲಿದ್ದು, ಸಕಲ ಸವಲತ್ತು, ಸೌಭಾಗ್ಯಕ್ಕೆ ಭಾಜನರಾಗಿದ್ದಾರೆ ಎಂದು ಮಿತ್ರರೊಬ್ಬರು ಜಾಲತಾಣದಲ್ಲಿ ಬರೆದಿದ್ದರು. ಇದನ್ನು ನೋಡಿ ಅತಿಶಯೋಕ್ತಿ ಎನಿಸಲಿಲ್ಲ. ರಾಜಕೀಯ ಹುಟ್ಟು ಮತ್ತು ಸ್ಥಿತಿವಂತಿಕೆ ಹೇಗಾಗುತ್ತದೆ ಎನ್ನುವುದು, ಜಾಗೃತರಾಗಿ ಆಚೀಚೆ ನೋಡಿ ಗ್ರಹಿಸುವ ಎಲ್ಲಾ ಜನಸಾಮಾನ್ಯರಿಗೆ ವೇದ್ಯವಾಗುವ ವಿದ್ಯಮಾನ!

ಹಳ್ಳಿಗಳ ಹೊರವಲಯದ ಮಾರಿಗುಡಿ, ಊರ ಮುಂದಣ ಅರಳೀಕಟ್ಟೆ, ಪಾಳುಮನೆಯ ಮುರುಕು ಜಗಲಿಯ ಮೇಲೆ ಜೂಜು-ಜಗಳ ಆಡುತ್ತಾ, ಜರ್ದಾ ಜಗಿಯುತ್ತಾ, ರಾತ್ರಿ ಏನು ಮಾಡಬೇಕು ಎಂದು ಯೋಜನೆ ಹಾಕಿಕೊಳ್ಳುತ್ತಾ ಕಾಲ ತಳ್ಳುವ ಸೋಂಬೇರಿ ಸಮೂಹದ ಸಂಖ್ಯೆ ನಮ್ಮಲ್ಲಿ ಕಮ್ಮಿಯೇ? ಈ ಪೈಕಿ ತುಸು ಚಾಲೂಕಿನವರು ತಾಲ್ಲೂಕು ಕಚೇರಿ, ಸಬ್‌ರಿಜಿಸ್ಟ್ರಾರ್‌ ಕಚೇರಿ, ಆರ್‌ಟಿಒ ಕಚೇರಿಯ ಜವಾನರು ಮತ್ತು ಗುಮಾಸ್ತರುಗಳೊಂದಿಗೆ ಒಡನಾಟ ಹೊಂದಿರುತ್ತಾರೆ. ಸ್ಥಿರಚರಾಸ್ತಿ ದಲ್ಲಾಳಿಕೆಯಲ್ಲಿ ಒಬ್ಬರಿಗಿಂತ ಒಬ್ಬರು ಸಿದ್ಧಹಸ್ತರು!  ಕಪ್ಪುಹಣದ ಹುದುಗು ನಿರ್ಮಿಸುವ ಫರ್ಮೆಂಟೇಷನ್ ಬ್ಯಾಕ್ಟೀರಿಯಾಗಳೇ ಇವರಾಗಿರುತ್ತಾರೆ ಅಂದಮೇಲೆ, ಮುಂದಿನ ರಾಜಕೀಯ ಧುರೀಣರು, ವಿಐಪಿ ಮಹೋದಯರು ಎನಿಸಿಕೊಳ್ಳುವ ಅದೃಷ್ಟ ಇಂಥವರಿಗಲ್ಲದೆ, ಅದು ಪ್ರಾಮಾಣಿಕ ಜನಸೇವಕರನ್ನು ಹುಡುಕಿಕೊಂಡು ಬರುವುದೇ?!

-ಆರ್.ಕೆ.ದಿವಾಕರ, ಬೆಂಗಳೂರು

ಆರ್ಥಿಕ ಬೆಳವಣಿಗೆ: ಸಂತೋಷ ಹೆಚ್ಚಿಸಲಿ

ವಿಶ್ವಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ‘ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ’ ಎಂಬ ವರದಿಯಲ್ಲಿ, ಭಾರತದ ಆರ್ಥಿಕತೆಯು ಹಿಂದಿನ ಕೆಲವು ವರ್ಷಗಳಲ್ಲಿ ತನ್ನ ಸಮಾನ ದೇಶಗಳನ್ನು ಮೀರಿಸಿದೆ ಹಾಗೂ ಇದು 2024 ಮತ್ತು 2025ರಲ್ಲಿ ಸಹ ಮುಂದುವರಿಯಲಿದೆ ಎಂದು ಅಂದಾಜು ಮಾಡಲಾಗಿದೆ. ಅಲ್ಲದೆ, ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದೂ ವರದಿ ಮಾಡಿದೆ. ದೇಶದಲ್ಲಿ ರಾಜಕೀಯ ಸ್ಥಿರತೆಯೊಂದಿಗೆ ಆರ್ಥಿಕ ಸ್ಥಿರತೆಯೂ ಇದ್ದು, ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಪ್ರಗತಿ ಅತ್ಯುತ್ತಮವಾಗಿದೆ ಎಂದು ಐಎಂಎಫ್‌ ಸಹ ಶ್ಲಾಘಿಸಿದೆ. ಈ ಬೆಳವಣಿಗೆಗಳು ಭಾರತೀಯರಾದ ನಾವೆಲ್ಲರೂ ಹೆಮ್ಮೆಪಡುವಂತಹವು.

ಆದರೆ ಇಷ್ಟೆಲ್ಲಾ ಆರ್ಥಿಕ ಬೆಳವಣಿಗೆಯ ನಡುವೆಯೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಕಾರ್ಯಜಾಲ ಪ್ರಕಟಿಸಿರುವ 2023ರ ವಿಶ್ವ ಸಂತೋಷ ಸೂಚ್ಯಂಕದ ಪಟ್ಟಿಯಲ್ಲಿ ಭಾರತ 150 ರಾಷ್ಟ್ರಗಳ ಪೈಕಿ 126ನೇ ಸ್ಥಾನದಲ್ಲಿದೆ. ಭಾರತದ ಶ್ರೇಯಾಂಕದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೂ ಹೆಚ್ಚು ಸಂತೋಷವಾಗಿರುವ ಜಗತ್ತಿನ ಮೊದಲ ಹತ್ತು ದೇಶಗಳಲ್ಲಂತೂ ದೇಶ ಇಲ್ಲ. ದೇಶದ ಆರ್ಥಿಕ ಅಭಿವೃದ್ಧಿಯು ನಾಗರಿಕರ ಸಂತೋಷದ
ಮಟ್ಟವನ್ನು ಹೆಚ್ಚಿಸುವಲ್ಲಿ ವಿಫಲವಾಗುವುದಕ್ಕೆ ಕಾರಣವಾದ ನ್ಯೂನತೆಗಳನ್ನು ಸರಿಪಡಿಸುವ ಕಾರ್ಯವನ್ನು
ಆದ್ಯತೆಯ ಮೇರೆಗೆ ಮಾಡಬೇಕಿದೆ. ಇಲ್ಲವಾದಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿ ಕಾರ್ಯಗಳು
ಅರ್ಥಹೀನವಾಗುತ್ತವೆ.

-ಟಿ.ಜಯರಾಂ, ಕೋಲಾರ

ಅರಿವಿನ ಹಣತೆಗೆ ಬತ್ತಿ ಹೊಸೆಯಬೇಕಿದೆ

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಹಾಗೂ ಮಹಿಳೆಯರಲ್ಲಿ ಶಿಕ್ಷಣದ ಅರಿವು ಮೂಡಿಸಿ ಸಮಾನತೆಯ ಬೀಜ ಬಿತ್ತಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಇತ್ತೀಚೆಗಷ್ಟೇ ನಾಡಿನಾದ್ಯಂತ ಆಚರಿಸಿದ್ದೇವೆ. ಇದಾದ ಕೆಲವೇ ದಿನಗಳಲ್ಲಿ, ತರೀಕೆರೆ ತಾಲ್ಲೂಕಿನ ಗೇರುಮರಡಿ ಗೊಲ್ಲರಹಟ್ಟಿಗೆ ದಲಿತ ಯುವಕನ ಪ್ರವೇಶವನ್ನು ಸಹಿಸದೆ ಅಲ್ಲಿನ ಎರಡು ದೇಗುಲಗಳಿಗೆ ಬೀಗ ಹಾಕಿರುವುದು (ಪ್ರ.ವಾ., ಜ. 5) ವಿಷಾದನೀಯ. ಪರಿಶಿಷ್ಟ ಜಾತಿಯವರು ಹಟ್ಟಿ ಪ್ರವೇಶ ಮಾಡಿದರೆ ದೇವರಿಗೆ ಮೈಲಿಗೆಯಾಗುತ್ತದೆ ಎಂಬ ಮೂಢನಂಬಿಕೆಯುಳ್ಳ ಜನರಿರುವುದನ್ನು ನೋಡಿದರೆ, ನಾವು ಆಚರಿಸಿಕೊಂಡು ಬರುತ್ತಿರುವ ಮಹಾನ್ ಪುರುಷರ ಎಷ್ಟೋ ಜಯಂತಿಗಳು ತೂತುಬಿದ್ದ ಬಿಂದಿಗೆಗಳಿಗೆ ನೀರು ತುಂಬಿಸಿದಂತೆ ಆಗುತ್ತಿವೆಯೇನೋ ಎಂದು ಅನಿಸದೇ ಇರದು.

ಮಹನೀಯರ ತ್ಯಾಗ, ಬಲಿದಾನದ ಫಲವನ್ನು ಉಣ್ಣುತ್ತಿರುವ ನಾಡಿನ ಸುಶಿಕ್ಷಿತ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಯಾಗಿದ್ದರೂ ಮಹನೀಯರು ಹಚ್ಚಿ ಹೋದ ಅರಿವಿನ ಹಣತೆಗೆ ಬತ್ತಿ ಹೊಸೆದು, ಎಣ್ಣೆ ಹಾಕುವ ಪ್ರಯತ್ನವನ್ನು ಮಾಡದೆ, ನೆರೆಹೊರೆಯವರ ಈ ತೆರನಾದ ಮೌಢ್ಯಗಳಿಗೆ ಕುರುಡಾಗಿರುವುದೂ ಇಂತಹ ಪ್ರಕರಣಗಳಿಗೆ ಕಾರಣ.  

-ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT