ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ವಿದ್ಯಾರ್ಥಿಗಳನ್ನು ಅಸ್ತ್ರವಾಗಿ ಬಳಸುವುದು ಸಲ್ಲ

Published 15 ಫೆಬ್ರುವರಿ 2024, 0:28 IST
Last Updated 15 ಫೆಬ್ರುವರಿ 2024, 0:28 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳನ್ನು ಅಸ್ತ್ರವಾಗಿ ಬಳಸುವುದು ಸಲ್ಲ

ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮನಿಂದನೆಯ ಮಾತುಗಳನ್ನಾಡಿದ ಆರೋಪದಡಿ ಹಲವು ದಿನಗಳಿಂದ ಮಾಧ್ಯಮಗಳ ಕಣ್ಣು ಅತ್ತ ನೆಟ್ಟಿದೆ. ಶಿಕ್ಷಕಿಯ ಮಾತುಗಳ ಕುರಿತ ನಿಷ್ಕರ್ಷೆ, ಅವುಗಳ ಸಾಂವಿಧಾನಿಕತೆ ಬೇರೆಯದೇ ಆದ ಚರ್ಚೆಯ ವಿಷಯ. ಆದರೆ ತಮ್ಮ ಕ್ಷೇತ್ರವ್ಯಾಪ್ತಿಯ ಸಮಸ್ಯೆಯೊಂದನ್ನು ಜನಪ್ರತಿನಿಧಿಗಳು ನಿರ್ವಹಿಸಿದ ರೀತಿ ಆತಂಕಕಾರಿಯಾಗಿದೆ. ಪೋಷಕರ ಮನಸ್ಸಿನಲ್ಲಿ ಮೂಡುತ್ತಿರುವ ಬಿರುಕನ್ನು ಹೆಚ್ಚಿಸುವ ರೀತಿಯಲ್ಲಿ ಅಲ್ಲಿನ ಶಾಸಕರು ಹೇಳಿಕೆಯನ್ನು ನೀಡಿದ್ದಾರೆ.

ತರಗತಿಗಳು ನಡೆಯುತ್ತಿದ್ದ ಹೊತ್ತಿನಲ್ಲಿ ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡುವ ಮೂಲಕ, ಶಿಕ್ಷಕಿ ಹಾಗೂ ಆಡಳಿತ ಮಂಡಳಿಯನ್ನು ಬೆದರಿಸುವ ರೀತಿಯಲ್ಲಿ ಮಾತನಾಡುವ ಮೂಲಕ ಅವರು ಮಕ್ಕಳಿಗೆ ಯಾವ ರೀತಿಯ ಸಂದೇಶವನ್ನು ನೀಡಿದಂತಾಗಿದೆ? ಜನಪ್ರತಿನಿಧಿಗಳು, ನಾಯಕರು ಎಳೆಯ ವಿದ್ಯಾರ್ಥಿಗಳ ಮನದಲ್ಲಿ ವಿಷ ತುಂಬಿ ಅವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಇಲ್ಲಿ ನಿಚ್ಚಳವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಮಾಧ್ಯಮಗಳು ವಿದ್ಯಾರ್ಥಿಗಳ ಹೇಳಿಕೆಯನ್ನು ಪಡೆದಿವೆ. ಮಕ್ಕಳು ದಬಾಯಿಸುವ ಧ್ವನಿಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನೂ ಹತ್ತನೇ ತರಗತಿಯನ್ನೂ ಮುಗಿಸದೇ ಇರುವ ಮಕ್ಕಳಿಂದ ಬಹಿರಂಗ ಹೇಳಿಕೆಗಳನ್ನು ಪಡೆಯಬಹುದೇ? 18 ವರ್ಷದೊಳಗಿನ ಮಕ್ಕಳ ಫೋಟೊಗಳ ಪ್ರಕಟಣೆಗೆ ಸಂಬಂಧಿಸಿದ ನಿಯಮ ಇಲ್ಲಿ ಅನ್ವಯವಾಗದೇ? ಮುಂದಿನ ದಿನಗಳಲ್ಲಿ ಒಟ್ಟು ಮಕ್ಕಳ, ಸಮಾಜದ ಆರೋಗ್ಯದ ದೃಷ್ಟಿಯಿಂದ ಇದು ಬೀರಬಹುದಾದ ಪರಿಣಾಮದ ಬಗ್ಗೆ ಯೋಚಿಸಬೇಡವೇ? ಶಿಕ್ಷಕಿಯನ್ನು ಅಮಾನತುಗೊಳಿಸಿದ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹವು ನೃತ್ಯ ಮಾಡಿರುವ ವಿಡಿಯೊವಂತೂ ದಿಗ್ಭ್ರಮೆ ಉಂಟುಮಾಡುವಂತಿದೆ. ಒಂದಕ್ಷರವನ್ನು ಕಲಿಸಿದರೂ ಆತ ಗುರು ಎಂದು ಸಾರುತ್ತಾ ಬಂದಿರುವವರೇ ಇಂತಹವುಗಳನ್ನು ವಿಜೃಂಭಿಸುತ್ತಿರುವುದು ವ್ಯಂಗ್ಯವಾಗಿದೆ.

ಸರ್ಕಾರ, ಮಕ್ಕಳ ಹಕ್ಕುಗಳ ಆಯೋಗವು ಈ ಪ್ರಕರಣದತ್ತ ಗಮನಹರಿಸಬೇಕು. ಮಕ್ಕಳ ಹೇಳಿಕೆಗಳು, ನೃತ್ಯದ ವಿಡಿಯೊಗಳನ್ನು ತಕ್ಷಣವೇ ಆನ್‌ಲೈನ್‌ನಿಂದ ಕಿತ್ತು ಹಾಕಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ತರಗತಿಯಲ್ಲಿ, ಪಠ್ಯದಲ್ಲಿ ಅಥವಾ ಶಿಕ್ಷಕರ ಬೋಧನೆಯಲ್ಲಿ ಯಾವುದೇ ರೀತಿಯ ಧರ್ಮವಿರೋಧಿ ಸಂದೇಶ ಅಥವಾ ಯಾರ ಭಾವನೆಗಾದರೂ ಧಕ್ಕೆ ತರುವ ಅಂಶಗಳಿದ್ದರೆ ಅದನ್ನು ಪೋಷಕರು ಹಾಗೂ ಮಕ್ಕಳು ಮೊದಲಿಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತಂದು ಸಂವಿಧಾನಾತ್ಮಕವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕೇ ವಿನಾ ರಾಜಕೀಯ ಪಕ್ಷದ ಮುಖಂಡರನ್ನು ಕರೆದುಕೊಂಡು ಹೋಗಿ ಗಲಾಟೆ ಎಬ್ಬಿಸುವುದಲ್ಲ. ವಿದ್ಯಾರ್ಥಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ತರವಲ್ಲ. ಮಕ್ಕಳ ಮನಸ್ಸು ವಿಷವನ್ನು ಬಿತ್ತಿ ಬೆಳೆಯುವ ಕಾರ್ಖಾನೆಯಾಗದ ಹಾಗೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರದು.

⇒ಭಾರತಿ ದೇವಿ ಪಿ., ಅಕ್ಷತಾ ಹುಂಚದಕಟ್ಟೆ, ಆಸ್ಮಾ ಮೇಲಿನಮನಿ, ಶಿವಮೊಗ್ಗ, ಬಿ.ಜಯಲಕ್ಷ್ಮಿ, ಮೈಸೂರು

ಮಟ್ಕಾ, ಬೆಟ್ಟಿಂಗ್ ದಂಧೆಗೆ ಬೀಳಲಿ ಕಡಿವಾಣ

ಕ್ರಿಕೆಟ್ ಬೆಟ್ಟಿಂಗ್ ತಡೆಯಲು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವಂತೆ ವಿಧಾನಸಭೆಯಲ್ಲಿ ಆಗ್ರಹಿಸಿರುವ ಶಾಸಕ ಗಣಿಗ ರವಿಕುಮಾರ್ ಅವರ ಕಳಕಳಿ ಮೆಚ್ಚುವಂಥದ್ದು. ಈ ಹಿಂದೆ ಅಂಕೋಲಾದಂತಹ ಚಿಕ್ಕ ಊರಿನಲ್ಲಿ ಕೂಡ ಮಟ್ಕಾ ಹಾವಳಿ ತೀವ್ರವಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಗಮನಸೆಳೆದ ಬಳಿಕ, ಎರಡು ತಿಂಗಳವರೆಗೆ ಅಂಕೋಲಾದಲ್ಲಿ ‘ಮಟ್ಕಾ’ ಆಟ ಬಂದ್ ಆಗಿತ್ತು. ಆದರೆ ಈಗ ನಾಲ್ಕು ತಿಂಗಳುಗಳಿಂದ ಮತ್ತೆ ಯಥಾವತ್ತಾಗಿ ಹಿಂದಿನದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ರಾಜಕೀಯ ವ್ಯಕ್ತಿಗಳೇ ಇದರಲ್ಲಿ ಬುಕ್ಕಿಗಳಾಗಿ ಮೆರೆಯುತ್ತಿದ್ದಾರೆ. ಇದಕ್ಕೆ ಪೊಲೀಸ್‌ ಅಧಿಕಾರಿಗಳೂ ಕೈಜೋಡಿಸಿದ್ದಾರೆ ಎಂಬ ಆರೋಪಗಳಿವೆ. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಆಟದ ದಾಸರಾಗಿ ಪಠ್ಯ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ. ಬಡ ಹೆಂಗಸರು ಅಭಿವೃದ್ಧಿ ಸಂಘಗಳಿಂದ ಪಡೆದ ಹಣವನ್ನು ಈ ಆಟಕ್ಕೆ ಉಪಯೋಗಿಸುತ್ತಿದ್ದಾರೆ. ಇಂತಹ ಮಟ್ಕಾ ಆಟ ಅಥವಾ ಕ್ರಿಕೆಟ್ ಬೆಟ್ಟಿಂಗ್ ತಡೆಯಲು ಪೊಲೀಸ್‌ ಪಡೆ ಅತ್ಯಂತ ಜಾಗರೂಕವಾಗಿರಬೇಕು. ಅವರಿಗೇ ಈ ಬಗ್ಗೆ ಕಾಳಜಿ ಇಲ್ಲವೆಂದ ಮೇಲೆ ಇದಕ್ಕೆ ತಡೆ ಒಡ್ಡುವವರು ಯಾರು?

⇒ಚಂದ್ರಕಾಂತ ನಾಮಧಾರಿ, ಅಂಕೋಲಾ, ಉತ್ತರ ಕನ್ನಡ

ಸಂಚಾರ ಪೊಲೀಸರೊಂದಿಗೆ ಸಂಘರ್ಷ ತರವಲ್ಲ

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲು ಮುಂದಾದ ಕಾರಣಕ್ಕೆ ಯುವಕನೊಬ್ಬ ಹೆಡ್‌
ಕಾನ್‌ಸ್ಟೆಬಲ್‌ ಒಬ್ಬರ ಕೈ ಬೆರಳನ್ನು ಕಚ್ಚಿ ಗಾಯಗೊಳಿಸಿರುವುದು ಆತಂಕಕಾರಿ ಸಂಗತಿ. ಬೆಂಗಳೂರು ನಗರದಲ್ಲಿ ಈಗಾಗಲೇ ಸಂಚಾರದಟ್ಟಣೆಯಿಂದ ಸಾರ್ವಜನಿಕರು ಒದ್ದಾಡುತ್ತಿದ್ದಾರೆ. ಸಂಚಾರ ಪೊಲೀಸರು ಹಗಲಿರುಳೆನ್ನದೆ ಶ್ರಮಿಸುತ್ತಾ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಹಸಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸರಿಗೆ ಜೀವ ಬೆದರಿಕೆ ಒಡ್ಡುವುದು, ಅವಾಚ್ಯ ಮಾತುಗಳಿಂದ ನಿಂದಿಸುತ್ತಾ ನಡುರಸ್ತೆಯಲ್ಲಿ ವಿಕೃತವಾಗಿ ವರ್ತಿಸುವುದು ವಿಷಾದಕರ ಸಂಗತಿ. ಇಂದಿನ ಯುವಪೀಳಿಗೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಂಚಾರ ಪೊಲೀಸರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕಾಗಿದೆ.

⇒ಮಲ್ಲಿಕಾರ್ಜುನ್ ತೇಲಿ, ಜಮಖಂಡಿ

ಚಿತ್ರ ಹಾಕಿದರಷ್ಟೇ ಸಾಲದು...

‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ, ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಗಾಂಧಿ, ಅಂಬೇಡ್ಕರ್, ನೆಹರೂ, ಬಸವಣ್ಣನಂತಹವರ ಭಾವಚಿತ್ರಗಳನ್ನು ಬರೀ ಗೋಡೆಯ ಮೇಲೆ ನೇತುಹಾಕುವುದರಿಂದ ಉಪಯೋಗವಿಲ್ಲ. ಆ ಮಹನೀಯರ ತತ್ವ, ಆದರ್ಶಗಳನ್ನು ಪಾಲಿಸಬೇಕು. ದೂರದೃಷ್ಟಿಯುಳ್ಳ ಅವರ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಮಹಾತ್ಮ ಗಾಂಧಿ ಚಿತ್ರದ ಅಡಿಯಲ್ಲೇ ಲಂಚ ತೆಗೆದುಕೊಳ್ಳುವಂತಾದರೆ ಅದರಿಂದ ಪ್ರಯೋಜನವೇನು? ‘ಇವ ನಮ್ಮವ ಇವ ನಮ್ಮವ’ ಎನ್ನುತ್ತ ಎಲ್ಲರನ್ನೂ ಒಂದೇ ಭಾವದಿ ಕಂಡ ಮತ್ತು ಕಾಣುವಂತೆ ಸಾರಿದ ಬಸವಣ್ಣನವರ ಚಿತ್ರದಡಿ ಜಾತಿ ರಾಜಕೀಯ ಮಾಡಿದರೆ ಫಲವೇನು? ಜನಪ್ರತಿನಿಧಿಗಳು ಭಾವಚಿತ್ರಗಳನ್ನು ಅಳವಡಿಸುವುದಕ್ಕಿಂತ ಹೆಚ್ಚಾಗಿ ಸ್ವಂತ ಜೀವನದಲ್ಲಿ ಮತ್ತು ಸರ್ಕಾರಿ ಆಡಳಿತದಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT