ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ರೈತ ಚಳವಳಿ: ರಾಜಕೀಯ ಮೇಲಾಟ ಸಲ್ಲ

Published 15 ಫೆಬ್ರುವರಿ 2024, 23:38 IST
Last Updated 15 ಫೆಬ್ರುವರಿ 2024, 23:38 IST
ಅಕ್ಷರ ಗಾತ್ರ

ರಾಷ್ಟ್ರಪತಿ ಪತ್ರ ಬರೆಯಲಿ

ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಡಿಎಂಕೆ ನೇತೃತ್ವದ ಸರ್ಕಾರದ ಬಜೆಟ್ ಮಂಡನೆ ವೇಳೆ, ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದದೇ ತಿರಸ್ಕರಿಸಿ ಹೊರನಡೆದ ವಿಚಾರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ರವಿ ಅವರ ಇಂತಹ ಅನುಚಿತ ನಡೆ ಇದೇ ಮೊದಲೇನಲ್ಲ. ಚೆನ್ನೈನ ವಿಶ್ವವಿದ್ಯಾಲಯವೊಂದರಲ್ಲಿ ಈಚೆಗೆ ಏರ್ಪಡಿಸಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರವಿ, ‘1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದು ಸುಭಾಷ್‌ಚಂದ್ರ ಬೋಸ್. ಅದರಲ್ಲಿ ಗಾಂಧೀಜಿ ಅವರ ಪಾತ್ರ ಇಲ್ಲ. 1942ರಲ್ಲೇ ಭಾರತದಲ್ಲಿ ಗಾಂಧೀಜಿ ಅಪ್ರಸ್ತುತರಾಗಿದ್ದರು’ ಎಂದು ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ನಿಜಕ್ಕೂ ದುರ್ದೈವ.

ಮಕ್ಕಳಲ್ಲಿ ಆದರ್ಶಪ್ರಾಯ ಗುಣ ರೂಪುಗೊಳ್ಳಲು ಗಾಂಧೀಜಿ, ನೇತಾಜಿ ಅವರಂತಹ ಮಹನೀಯರು ನೀಡಿದ ಕೊಡುಗೆಗಳನ್ನು ತಮ್ಮ ಭಾಷಣಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಂಕುರಿಸುವಂತೆ ಮಾಡಬೇಕಾದುದು ಇಂತಹ ನಾಯಕರ ಕರ್ತವ್ಯ. ಆದರೆ ರವಿ ಅವರು ಅದನ್ನು ಬಿಟ್ಟು, ಒಬ್ಬ ರಾಷ್ಟ್ರ ನಾಯಕನನ್ನು ವೈಭವೀಕರಿಸಿ, ಮತ್ತೊಬ್ಬ ನಾಯಕನನ್ನು ಖಳನಾಯಕನಂತೆ ಬಿಂಬಿಸುವುದು ಎಷ್ಟು ಸರಿ? ಇದು ಬರೀ ಅನುಚಿತವಲ್ಲ, ಸಂವಿಧಾನವಿರೋಧಿ ನಡೆ. ಇದನ್ನು ಆಕ್ಷೇಪಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಪಾಲರಿಗೆ ಪತ್ರ ಬರೆಯಬೇಕು.

- ಆರ್.ವೆಂಕಟರಾಜು, ಬೆಂಗಳೂರು

ಅರ್ಥಪೂರ್ಣ ಚರ್ಚೆಯಿಂದ ಸತ್ವಪೂರ್ಣ ನಿರ್ಧಾರ

ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಿದ್ದು, ತಮ್ಮ ಕಷ್ಟಕಾರ್ಪಣ್ಯ ಹಾಗೂ ಸವಾಲುಗಳಿಗೆ ಸದನದಿಂದ ಸೂಕ್ತ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯರಿದ್ದಾರೆ. ಆದರೆ ಹಿಂದಿನ ಅಧಿವೇಶನಗಳ ಕಾರ್ಯಕಲಾಪಗಳ ಬಗ್ಗೆ ಗಮನಹರಿಸಿದರೆ, ಇಂತಹ ಅಪೇಕ್ಷೆ ಇಟ್ಟುಕೊಳ್ಳಬಹುದೇ ಎಂಬ ಪ್ರಶ್ನೆ ತಲೆದೋರುತ್ತದೆ. ಈ ಮೊದಲಿನ ಕಲಾಪಗಳಲ್ಲಿ ಕೆಲ ಸಂಗತಿಗಳು ಒಣ ಪ್ರತಿಷ್ಠೆಯಾಗಿ ಮಾರ್ಪಟ್ಟು, ಕಲಾಪದ ಅಮೂಲ್ಯ ಅವಧಿಯೇ ವ್ಯರ್ಥವಾದ ಕಹಿ ಅನುಭವ ಜನರ ನೆನಪಿನಿಂದ ಮರೆಯಾಗಿಲ್ಲ. ಚರ್ಚೆಗೂ ಅವಕಾಶ ಕೊಡದೆ, ಆಸಕ್ತಿಯೂ ಇಲ್ಲ ಎನ್ನುವ ರೀತಿಯಲ್ಲಿ ಆಡಳಿತ, ವಿರೋಧ ಪಕ್ಷಗಳ ಬಹಳಷ್ಟು ಸದಸ್ಯರು ವರ್ತಿಸಿರುವುದನ್ನು ರಾಜ್ಯದ ಜನ ಗಮನಿಸಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆ ಎದುರಾಗಲಿರುವುದರಿಂದ, ರಾಜಕೀಯ ಲಾಭ ಗಳಿಸುವ ಉದ್ದೇಶದ ದಾಳಗಳಿಗೇ ಈ ಅಧಿವೇಶನ ವೇದಿಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ವಿವಿಧೆಡೆ ಉಲ್ಬಣಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ, ರೈತರಿಗೆ ಪರಿಹಾರ ವಿತರಣೆಯಲ್ಲಿನ ವಿಳಂಬ, ಅನುದಾನ ಹಂಚಿಕೆಯಲ್ಲಿನ ತಾರತಮ್ಯ ದಂತಹ ವಿಷಯಗಳ ಕುರಿತು ಸೂಕ್ತ ಚರ್ಚೆ ನಡೆಯಬೇಕಿದೆ. ಅರ್ಥಪೂರ್ಣ ಚರ್ಚೆಯ ಮೂಲಕ ಸತ್ವಪೂರ್ಣ ನಿರ್ಧಾರಗಳು ಹೊರಹೊಮ್ಮಬೇಕಿದೆ. 

-ಬೇ.ನ.ಶ್ರೀನಿವಾಸಮೂರ್ತಿ, ತುಮಕೂರು

ಮಳಿಗೆ ಕಟ್ಟಿದರಷ್ಟೇ ಸಾಲದು...

ನಗರ, ಪಟ್ಟಣಗಳೆನ್ನದೆ ಈಗ ಎಲ್ಲಿ ನೋಡಿದರಲ್ಲಿ ವಾಣಿಜ್ಯ ಮಳಿಗೆಗಳ ಸಮುಚ್ಚಯಗಳು ತಲೆ ಎತ್ತುತ್ತಿವೆ. ಅಡಿಗಲ್ಲು ಮುಹೂರ್ತಕ್ಕೂ ಮೊದಲೇ ಅವುಗಳಲ್ಲಿನ ಮಳಿಗೆಗಳೆಲ್ಲವೂ ಬುಕ್ ಆಗಿರುತ್ತವೆ. ಆದರೆ ಈ ರೀತಿ ಮಳಿಗೆಗಳನ್ನು ಕಟ್ಟುವ ಎಷ್ಟೋ ಮಾಲೀಕರು ಅವುಗಳಲ್ಲಿ ಶೌಚಾಲಯಗಳನ್ನು ಕಟ್ಟಿಸುವ ಬಗ್ಗೆ ಯೋಚಿಸುವುದಿಲ್ಲ. ಬಾಡಿಗೆದಾರರೂ ಮಳಿಗೆಯನ್ನು ಬಾಡಿಗೆಗೆ ಪಡೆಯುವ ಮುನ್ನ ಅದರಲ್ಲಿ ಈ ವ್ಯವಸ್ಥೆ ಇದೆಯೋ ಇಲ್ಲವೋ ಎಂದು ನೋಡುವುದಿಲ್ಲ.

ಮಹಾನಗರಗಳಲ್ಲಿ ನಗರಪಾಲಿಕೆಯವರು ಅಲ್ಲಲ್ಲಿ ಶೌಚಾಲಯಗಳನ್ನು ನಿರ್ಮಿಸಿರುತ್ತಾರೆ. ಆದರೆ ಜಿಲ್ಲಾ ಕೇಂದ್ರ ಮತ್ತು ಸಣ್ಣ ಸಣ್ಣ ಪಟ್ಟಣಗಳಲ್ಲಿರುವ ಬಹುತೇಕ ಮಳಿಗೆಗಳಲ್ಲಿ ನೈಸರ್ಗಿಕ ಬಾಧೆಯನ್ನು ತೀರಿಸಿಕೊಳ್ಳಲು ಜನ, ಅದರಲ್ಲೂ ಹೆಣ್ಣುಮಕ್ಕಳು ಪರದಾಡಬೇಕಾಗಿದೆ. ವಾಣಿಜ್ಯ ಮಳಿಗೆಗಳನ್ನು ಕಟ್ಟಲು ಅನುಮತಿ ನೀಡುವ ಸ್ಥಳೀಯ ಆಡಳಿತಗಳು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಲು ಮತ್ತು ಅದನ್ನು ಸರಿಯಾಗಿ ನಿರ್ವಹಿಸಲು ಷರತ್ತು ವಿಧಿಸಬೇಕು. ಆಗಲಾದರೂ ವಾಣಿಜ್ಯ ಮಳಿಗೆಗಳಲ್ಲಿ ಕೆಲಸ ಮಾಡುವ ಸಹೋದರಿಯರಿಗೆ ಆಗುತ್ತಿರುವ ತೊಂದರೆ ತಪ್ಪೀತು.

- ವೆಂಕಟೇಶ ಬೈಲೂರು, ಕುಮಟಾ

ರೈತ ಚಳವಳಿ: ರಾಜಕೀಯ ಮೇಲಾಟ ಸಲ್ಲ

ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶಗೊಂಡಿರುವ ರೈತರು ಈಗ ಚಳವಳಿಗೆ ಇಳಿದಿದ್ದಾರೆ. ಮತ್ತೆ ದೆಹಲಿಯತ್ತ ನುಗ್ಗಿದ್ದಾರೆ. ಸ್ವಾತಂತ್ರ್ಯಾನಂತರದ ವರ್ಷಗಳಿಂದಲೂ ಕೇಂದ್ರದಲ್ಲೇ ಆಗಲಿ ರಾಜ್ಯಗಳಲ್ಲೇ ಆಗಲಿ, ಆಡಳಿತ ನಡೆಸಿದ ಸರ್ಕಾರಗಳು ಕೃಷಿ ಕ್ಷೇತ್ರದಲ್ಲಿ ಅತ್ಯಗತ್ಯವಾಗಿ ಆಗಬೇಕಾದ ಸಮಗ್ರ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವುದೇ ಕೃಷಿ ಕ್ಷೇತ್ರದ ತಳಮಳಗಳಿಗೆ ಕಾರಣ. ಸರ್ಕಾರಗಳ ಭರವಸೆಗಳ ಬಗ್ಗೆ ರೈತರಿಗೆ ನಂಬಿಕೆ ಇಲ್ಲದಂತಾಗಿದೆ. ರೈತರು ಇದುವರೆಗೂ ನಡೆಸಿರುವ ಚಳವಳಿಗಳಿಗೆ ಲೆಕ್ಕವಿಲ್ಲ. ಆದರೆ ಪ್ರತಿಸಲ ಚಳವಳಿ ನಡೆದಾಗಲೂ ಸರ್ಕಾರ ನೀಡುವ ಪರಿಹಾರ ಅಥವಾ ಆಶ್ವಾಸನೆ ಬರೀ ತಾತ್ಕಾಲಿಕ ಉಪಶಮನವಾಗಿರು
ತ್ತದೆಯೇ ವಿನಾ ರೈತರ ಗೋಳು ಕೊನೆಗೊಂಡಿಲ್ಲ.

ರೈತರ ಚಳವಳಿಗಳೇ ನೆಪವಾಗಿ ರಾಜಕೀಯ ಪಕ್ಷಗಳು ಮೇಲಾಟ ನಡೆಸುವುದು ಸಮಸ್ಯೆಯ ಇನ್ನೊಂದು ಮುಖ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ನೇಮಿಸಿದ್ದ ಸ್ವಾಮಿನಾಥನ್ ಆಯೋಗ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ವಿಷಯದಲ್ಲಿ ಮಾಡಿದ್ದ ಶಿಫಾರಸನ್ನು ಸರ್ಕಾರ ಒಪ್ಪಲಿಲ್ಲ. ಸುಮಾರು 20 ವರ್ಷಗಳಿಂದಲೂ ಇದು ಸಮಸ್ಯೆಯಾಗಿಯೇ ಉಳಿದಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾದರೆ ಕನಿಷ್ಠ ಬೆಂಬಲ ಬೆಲೆ ಜಾರಿ ಮಾಡುವುದಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಈಗ ಘೋಷಿಸಿದ್ದಾರೆ! ಹಿಂದೆ ಅಧಿಕಾರದಲ್ಲಿದ್ದಾಗ ಈ ಕೆಲಸ ಮಾಡದೆ ಈಗ ಇಂತಹ ಆಶ್ವಾಸನೆಯನ್ನು ನೀಡುವ ಮೂಲಕ ಚಳವಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. 2014ರಿಂದಲೂ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಮತ್ತು ರೈತರಿಗೆ ತಾನು ಒದಗಿಸಿರುವ ಲಕ್ಷಾಂತರ ಕೋಟಿ ಹಣದ ಬಗ್ಗೆ ಹೇಳುತ್ತದೆ. ಹಾಗಾದರೆ, ನಮ್ಮ ರೈತರು ಇನ್ನೂ ಯಾಕೆ ಆತಂಕದ ದಿನಗಳಲ್ಲೇ ಬದುಕು ಸಾಗಿಸುವಂತಾಗಿದೆ? ಎಲ್ಲ ರಾಜಕೀಯ ಪಕ್ಷಗಳದ್ದೂ ಆತ್ಮವಂಚನೆಯಲ್ಲವೇ?

- ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT