ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಟೈರ್‌ಗೆ ಬೆಂಕಿ: ನಿಮ್ಮನ್ನೇ ಸುಟ್ಟೀತು!

Published 4 ಜನವರಿ 2024, 0:07 IST
Last Updated 4 ಜನವರಿ 2024, 0:07 IST
ಅಕ್ಷರ ಗಾತ್ರ

ಟೈರ್‌ಗೆ ಬೆಂಕಿ: ನಿಮ್ಮನ್ನೇ ಸುಟ್ಟೀತು!

ಪ್ರತಿಭಟನೆಗೆ ಮುಂದಾಗುವ ಹೆಚ್ಚಿನವರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಚಳವಳಿ, ಧರಣಿ, ಪ್ರತಿಭಟನೆ ಮಾಡುವುದು ತಪ್ಪಲ್ಲ. ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಇಂತಹ ಅವಕಾಶವನ್ನು ನೀಡಿದೆ. ಆದರೆ ಟೈರ್ ಸುಡುವುದು, ವಾಹನಗಳಿಗೆ ಬೆಂಕಿ ಹಚ್ಚುವುದಕ್ಕೆ ಅವಕಾಶ ಇದೆಯೇ?

ವಾಹನಗಳಿಗೆ ಬೆಂಕಿ ಹಚ್ಚಿದರೆ ರಾಜ್ಯಕ್ಕೆ, ರಾಷ್ಟ್ರಕ್ಕೆ ಮಾತ್ರ ನಷ್ಟವಲ್ಲ, ಅದರ ಹೊರೆ ಪ್ರಜೆಗಳ ಮೇಲೆ ಬೀಳುತ್ತದೆ ಎಂಬ ಅರಿವು ಇರಬೇಕು. ಟೈರ್‌ಗೆ ಬೆಂಕಿ ಹಾಕಿದರೆ ವಾಯುಮಾಲಿನ್ಯ ಉಂಟಾಗಿ, ಅದರಿಂದ ಸಕಲ ಜೀವರಾಶಿಗೆ ಅಪಾಯವೇ ಹೆಚ್ಚು. ಈ ಸತ್ಯವನ್ನು ಪ್ರತಿಭಟನಕಾರರು ಅರಿಯಬೇಕು. ಇಂತಹ ಕೃತ್ಯ ಎಸಗುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುವುದು ಸೂಕ್ತ.

-ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಅರಿಯಬೇಕಿದೆ ಹೇಳಿಕೆಯ ಮರ್ಮ

ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ಸಿದ್ಧತೆ ನಡೆದಿರುವ ಸಂದರ್ಭದಲ್ಲೇ, ಮೂವತ್ತು ವರ್ಷ ಹಳೆಯದಾದ ಪ್ರಕರಣದಲ್ಲಿ ಕರಸೇವಕರ ಬಂಧನವಾಗಿರುವುದು ಕಾಕತಾಳೀಯ. ಆದರೆ ಇದು ಬಿಜೆಪಿಯ ಬಾಯಿಗೆ ಆಹಾರವಾಗಿದ್ದರೆ, ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.

ರಾಜಕಾರಣಿಗಳು ಏನೇ ಹೇಳಿಕೊಂಡರೂ ಪ್ರಕರಣದ ಬಗೆಗಿನ ವಾಸ್ತವಾಂಶವನ್ನು ಜನ ಅರಿತರೆ ಒಳ್ಳೆಯದು. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಲಯವು ಸರ್ಕಾರಕ್ಕೆ ಸೂಚನೆ ನೀಡಿದ್ದು, ಈ ವಿಚಾರವಾಗಿ ಅಧೀನ ಕಾರ್ಯದರ್ಶಿಯವರಿಗೂ ನೋಟಿಸ್ ಜಾರಿಯಾಗಿದೆ. ಅದರಂತೆ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ ಅಷ್ಟೇ. ಆದರೆ, ಎಸ್‌ಡಿಪಿಐನಂತಹ ಸಂಘಟನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಾಪಸ್ ಪಡೆದಿರುವ ಸರ್ಕಾರ, ರಾಮಭಕ್ತರನ್ನು ಮಾತ್ರ ಬಂಧಿಸುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈಗ ಹೀಗೆ ಆರೋಪಿಸುವ ಬದಲು, ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಪ್ರಕರಣಗಳನ್ನು ವಾಪಸ್ ಪಡೆಯಬಹುದಿತ್ತಲ್ಲವೇ? ಅದನ್ನು ಮಾಡದೆ ಈಗ ಎಲ್ಲಿಲ್ಲದ ಪ್ರೀತಿ ತೋರಿಸುತ್ತಿರುವುದರ ಮರ್ಮವನ್ನು ಜನ ಅರಿತರೆ, ರಾಜಕಾರಣಕ್ಕೆ ತಾವು ಬಳಕೆಯಾಗಿ ಕೋಮು ಸಂಘರ್ಷಕ್ಕೆ ಎಡೆ ಮಾಡುವುದನ್ನು ತಪ್ಪಿಸಬಹುದು.

ಜಾತಿ, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿ, ವಿವಾದ ಸೃಷ್ಟಿಸಿ, ಚುನಾವಣೆಯಲ್ಲಿ ಗೆಲ್ಲುವುದೊಂದೇ ರಾಜಕಾರಣಿಗಳ ಗುರಿ. ಇದಕ್ಕೆ ಬಲಿಯಾಗುವುದು ಆಯಾ ಪಕ್ಷಗಳ ಕಾರ್ಯಕರ್ತರೇ ವಿನಾ ನಾಯಕರಲ್ಲ. ಎಲ್ಲ ಪಕ್ಷಗಳ ನಾಯಕರೂ ಅಭಿವೃದ್ಧಿಯ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕೇ ವಿನಾ ಜಾತಿ, ಧರ್ಮವನ್ನು ಆಧಾರವಾಗಿ ಇಟ್ಟುಕೊಂಡಲ್ಲ.

-ದಡದಹಳ್ಳಿ ರಮೇಶ್, ಚಂದಕವಾಡಿ, ಚಾಮರಾಜನಗರ

ಕಹಿ ಸತ್ಯ ಸಾರುವ ಆ ಮಾತು

ಕಾಲಚಕ್ರ ಉರುಳಿದರೂ ಸಾಮಾಜಿಕ ವ್ಯಾಧಿಗಳು ಹಾಗೇ ಉಳಿದುಕೊಂಡಿವೆ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಅವರು 50 ವರ್ಷಗಳ ಹಿಂದೆ ಪ್ರಗತಿಪರ ಸಮಾಜವಾದಿಗಳ ಸಮ್ಮೇಳನವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಆಡಿದ ಮಾತುಗಳು ನಮಗೆ ಕಟ್ಟಿಕೊಡುತ್ತವೆ (ಪ್ರ.ವಾ., 50 ವರ್ಷಗಳ ಹಿಂದೆ– ಜ. 2).

‘ರಾಷ್ಟ್ರದಲ್ಲಿ ಇಂದು ವ್ಯಾಪಕವಾಗಿ ಹಬ್ಬಿರುವ ಅಶಾಂತಿ, ಭ್ರಷ್ಟಾಚಾರ, ಲಂಚಕೋರತನ, ಬೆಲೆಗಳ ಏರಿಕೆ, ಸರ್ವತೋಮುಖ ನೈತಿಕ ಅಧಃಪತನಕ್ಕೆ ಮೂರರಲ್ಲಿ ಎರಡು ಪಾಲು ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕಾರಣರು. ಉಳಿದ ಒಂದು ಪಾಲಿಗೆ ಮಾತ್ರ ಜನರು ಮತ್ತು ಸನ್ನಿವೇಶಗಳು ಹೊಣೆ’ ಎಂಬ ಅವರ ಮಾತು ಇಂದಿಗೂ ಪ್ರಸ್ತುತ ಎನಿಸುವಂತೆ ಇರುವುದು ವರ್ತಮಾನ ಮತ್ತು ಭವಿಷ್ಯದ ದುರಂತವೇ ಸರಿ.

-ಆರ್.ಶಿವರಾಮ, ಸಂಡೂರು

ಲಭ್ಯವಾಗಲಿದೆ ಅಂಚೆ ಲೇಖನ ಸಾಮಗ್ರಿ

ಪೋಸ್ಟ್‌ ಕಾರ್ಡ್‌, ಇನ್‌ಲ್ಯಾಂಡ್‌ ಲೆಟರ್‌, ಸ್ಟ್ಯಾಂಪ್‌ನಂತಹ ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿರುವ ಅಂಚೆ ಕಚೇರಿಗಳು ಗ್ರಾಹಕಸ್ನೇಹಿ ಆಗಲಿ ಎಂದು ಕೆ.ಸದಾನಂದ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಡಿ. 29). ತಾತ್ಕಾಲಿಕ ಅಭಾವದಿಂದಾಗಿ ಕೆಲವು ಅಂಚೆ ಕಚೇರಿಗಳಲ್ಲಿ ಇಂತಹ ವಸ್ತುಗಳ ಕೊರತೆ ಇತ್ತು. ಹೈದರಾಬಾದ್‌ನ ಸೆಕ್ಯೂರಿಟಿ ಪ್ರಿಂಟಿಂಗ್‌ ಪ್ರೆಸ್‌ (ಎಸ್‌ಪಿಪಿ) ಸದ್ಯದಲ್ಲೇ ಹುಬ್ಬಳ್ಳಿಯ ಪೋಸ್ಟಲ್‌ ಸ್ಟೋರ್ಸ್‌ ಡಿಪೊಗೆ ಈ ವಸ್ತುಗಳನ್ನು ರವಾನಿಸಲಿದೆ. ಅದರಂತೆ, ಅಂಚೆ ಲೇಖನ ಸಾಮಗ್ರಿಗಳ ದಾಸ್ತಾನು ಈ ತಿಂಗಳು ಸಾಕಷ್ಟು ಪ್ರಮಾಣದಲ್ಲಿ ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿದೆ.

-ರಾಮ ಸುಧಾಕರ ರಾವ್‌, ಸಹಾಯಕ ನಿರ್ದೇಶಕ (ಸ್ಟಾಕ್‌), ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌, ಕರ್ನಾಟಕ ವೃತ್ತ, ಬೆಂಗಳೂರು

ಪ್ರಾಣಿ– ಪಕ್ಷಿ ಪ್ರತಿಭಟನೆ ನಡೆಸುವಂತಿದ್ದರೆ...

‘ಸದ್ದು, ಸಂಭ್ರಮ, ಸಂಕಟ’ ಎಂಬ ಲೇಖನದಲ್ಲಿ (ಸಂಗತ, ಜ. 3) ಡಾ. ಮುರಳೀಧರ ಕಿರಣಕೆರೆ ಅವರು ಸ್ಪಷ್ಟವಾಗಿ ತಿಳಿಸಿರುವಂತೆ, ಪಟಾಕಿ ಹಚ್ಚುವ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳು ಅನುಭವಿಸುವ ಸಂಕಟವು ಪದಗಳಿಗೆ ನಿಲುಕದು. ವಿಪರೀತ ಸದ್ದು ಮಾಡುವ, ಪರಿಸರಕ್ಕೂ ಮಾರಕವಾಗಿರುವ ಸಿಡಿಮದ್ದುಗಳನ್ನೇ ನಿಷೇಧ ಮಾಡುವಂತಹ ಕಠಿಣ ನಿರ್ಧಾರಕ್ಕೆ ಸರ್ಕಾರ ಎಂದಿಗೂ ಕೈ ಹಾಕಲಾರದು. ಇಂತಹ ಪಟಾಕಿಗಳನ್ನು ತಯಾರಿಸುವ ಕಂಪನಿಗಳಿಂದ ದೊರಕುವ ತೆರಿಗೆಯ ಮೇಲೇ ಸರ್ಕಾರಕ್ಕೆ ಕಣ್ಣಿರುತ್ತದೆ. ಅಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗವೂ ದೊರಕುವ ಕಾರಣ, ಪ್ರಾಣಿ, ಪಕ್ಷಿ, ಮರ  ಗಿಡಗಳಿಗಾಗುವ ಅತೀವ ತೊಂದರೆ, ಪರಿಸರ ಮಾಲಿನ್ಯ ಇವೆಲ್ಲ ನಗಣ್ಯ. ಅಂದಹಾಗೆ, ತೊಂದರೆ ಅನುಭವಿಸುವ ಮುಗ್ಧ ಪ್ರಾಣಿ, ಪಕ್ಷಿ, ಮರ ಗಿಡಗಳು ಗುಂಪು ಕಟ್ಟಿಕೊಂಡು ಪ್ರತಿಭಟನೆ ನಡೆಸುವಂತಿದ್ದರೆ ಸರ್ಕಾರ ಏನು ಮಾಡುತ್ತಿತ್ತೋ ಏನೋ?

- ಬಿ.ಎನ್.ಭರತ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT