ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸ್ವಾಮಿನಾಥನ್‌ ಶಿಫಾರಸು ಅನುಷ್ಠಾನಕ್ಕೆ ಬರಲಿ

Published 11 ಫೆಬ್ರುವರಿ 2024, 23:49 IST
Last Updated 11 ಫೆಬ್ರುವರಿ 2024, 23:49 IST
ಅಕ್ಷರ ಗಾತ್ರ

ಸ್ವಾಮಿನಾಥನ್‌ ಶಿಫಾರಸು ಅನುಷ್ಠಾನಕ್ಕೆ ಬರಲಿ

ಹಸಿರುಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರವು ಮರಣೋತ್ತರವಾಗಿ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿರುವುದು ಸರಿಯಷ್ಟೆ. ಆದರೆ ರೈತ ಪರವಾದ ಸ್ವಾಮಿನಾಥನ್‌ ಅವರ ಆಶಯಗಳನ್ನು ಜಾರಿಗೊಳಿಸಲು ಸರ್ಕಾರ ವಿಫಲವಾಗಿರುವುದು ದುರದೃಷ್ಟಕರ.‘ರೈತ ಬಂಧುಗಳು ಸಂಕಷ್ಟಕ್ಕೆ ಈಡಾಗುವುದನ್ನು ತಪ್ಪಿಸಲು, ಕೈಗಾರಿಕಾವಲಯಕ್ಕೆ ಆದ್ಯತೆ ನೀಡಿದಂತೆ ಕೃಷಿ ವಲಯಕ್ಕೂ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ, ಭೂಮಿ, ಕೃಷಿ ಪರಿಕರ, ಬಿತ್ತನೆ ಬೀಜ, ಗೊಬ್ಬರ, ಉಳುಮೆ
ಎಲ್ಲಕ್ಕೂ ಹೂಡಿದ ಬಂಡವಾಳ ಹಾಗೂ ಪಟ್ಟ ಶ್ರಮ ಎಲ್ಲವನ್ನೂ ಪರಿಗಣಿಸಿ,ರೈತರಿಗೆ ಅವರ ಒಟ್ಟು ಹೂಡಿಕೆಯೊಂದಿಗೆ ಹೆಚ್ಚುವರಿಯಾಗಿ ಶೇ 50ರಷ್ಟುಆದಾಯ ಬಂದರೆ ದೇಶದಲ್ಲಿ ಹಸಿರುಕ್ರಾಂತಿ ಆಗುತ್ತದೆ. ಆಗ ರೈತರುಆತ್ಮಹತ್ಯೆಗೆ ಮುಂದಾಗುವುದಿಲ್ಲ ಮತ್ತು ಯುವಕರು ಕೃಷಿಯತ್ತ ಮುಖಮಾಡುತ್ತಾರೆ. ಇದರಿಂದ ದೇಶದ 140 ಕೋಟಿ ಜನರಿಗೆ ಅನ್ನವನ್ನು ನೀಡಲು ಸಾಧ್ಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದ್ದರು.

2014ರ ಚುನಾವಣೆ ಸಮಯದಲ್ಲಿ ಬಿಜೆಪಿಯು ಸ್ವಾಮಿನಾಥನ್ ಅವರ ಈ ಸಂಬಂಧದ ಶಿಫಾರಸುಗಳನ್ನು
ಅನುಷ್ಠಾನಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ ಪಕ್ಷ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾದರೂ ಇದು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರವೂ ರೈತರ ವಿಷಯದಲ್ಲಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇಂದುರೈತನನ್ನು ದಿವಾಳಿ ಎಬ್ಬಿಸಿ, ಶ್ರೀಮಂತರಿಗೆ ಜಮೀನು ಮಾರುವಂತಹ ಸಂದರ್ಭ ಸೃಷ್ಟಿಸಲಾಗಿದೆ. ಇದರಿಂದರೈತನು ಕೂಲಿಕಾರ್ಮಿಕನಾಗಿ, ಆತನ ಮಗ ವಾಚ್‌ಮನ್‌ ಆಗಿ ಹಾಗೂ ಅವನ ಹೆಂಡತಿ ಮನೆಗೆಲಸದವಳಾಗಿದುಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ರೈತ ವಿರೋಧಿಯಾಗಿರುವ ಎರಡೂ ಸರ್ಕಾರಗಳು ತಕ್ಷಣ ತಮ್ಮ ನಡವಳಿಕೆಯನ್ನು ತಿದ್ದಿಕೊಂಡು, ರೈತ ಪರ ಕ್ರಮಗಳನ್ನು ಕೈಗೊಳ್ಳಬೇಕು. 

⇒ಬಲ್ಲೂರ್ ರವಿಕುಮಾರ್, ದಾವಣಗೆರೆ

ಆಶಾ’ ಗೌರವಧನ: ಗೊಂದಲವೇಕೆ?

ಹದಿನೈದು ವರ್ಷಗಳಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯಲ್ಲಿ ಅಹರ್ನಿಶಿ ತೊಡಗಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು 8 ವರ್ಷಗಳ ಹಿಂದೆ, ಆರ್.ಸಿ.ಎಚ್. ಪೋರ್ಟಲ್‍ಗೆ ಲಿಂಕ್ ಮಾಡಿ ಗೌರವಧನ ನೀಡುವ ಮಾದರಿಯನ್ನು ಜಾರಿಗೊಳಿಸಿದೆ. ಆಗಿನಿಂದಲೂ ತಾಂತ್ರಿಕ ಸಮಸ್ಯೆಗಳೂ ಸೇರಿ ಹಲವು ಕಾರಣಗಳಿಂದ ಕಾರ್ಯಕರ್ತೆಯರಿಗೆ ವೇತನ ಸರಿಯಾಗಿ ವಿತರಣೆಯಾಗದಿರುವುದು ವಿಪರ್ಯಾಸ. ಕೇಂದ್ರ ನಿಗದಿಗೊಳಿಸಿರುವ ಸುಮಾರು 40 ಸೇವೆಗಳಿಗೆ ಪ್ರತಿ ಕಾರ್ಯಕರ್ತೆಗೆ ಮಾಸಿಕ ₹ 7,000ದಷ್ಟು ಗೌರವಧನ ಸಿಗಬೇಕಿದ್ದರೂ ದಾಖಲೆಗಳ ಪ್ರಕಾರ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಪೋರ್ಟಲ್‍ ಸಮಸ್ಯೆಯಿಂದಾಗಿಯೇ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಉಳಿದವರೂ ಮಾಸಿಕ ₹ 2000ದಿಂದ ₹ 5000ದ ತನಕ ನಷ್ಟ ಅನುಭವಿಸುತ್ತಿದ್ದಾರೆ.

ದೇಶದ ಇತರ ರಾಜ್ಯಗಳಲ್ಲಿ ಇಲ್ಲದ ‘ಈ ಕೊಂಕಣ ಸುತ್ತಿ ಮೈಲಾರ ಸೇರುವ’ ವೇತನ ಮಾದರಿಯನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿ, ಬಡ ಕಾರ್ಯಕರ್ತೆಯರ ದುಡಿತಕ್ಕೆ ಹೊಡೆತ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಇನ್ನಾದರೂ ಪೋರ್ಟಲ್‍ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ತಕ್ಷಣವೇ ನಿಲ್ಲಿಸಿ, ಅವರ ಬ್ಯಾಂಕ್ ಖಾತೆಗೆ ಪ್ರತಿತಿಂಗಳು ನೇರವಾಗಿ ನಿಗದಿತ ಗೌರವಧನ ಹಾಕುವ ಪದ್ಧತಿ ಜಾರಿಗೊಳಿಸಬೇಕು. 

⇒ರೂಪ ಹಾಸನ, ಹಾಸನ

ಧರ್ಮಪ್ರಧಾನ ಚರ್ಚೆ: ಸಲ್ಲದ ನಡೆ

17ನೇ ಲೋಕಸಭೆಯ ಕೊನೆಯ ಅಧಿವೇಶನಕ್ಕೆ ತೆರೆ ಬೀಳುವ ಮುನ್ನ ನಡೆದ ಕಲಾಪದಲ್ಲಿ, ರಾಮ ಮಂದಿರ
ನಿರ್ಮಾಣ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯು ಚರ್ಚಿತ ವಿಷಯಗಳಲ್ಲಿ ಮುಖ್ಯ ಎನಿಸಿಕೊಂಡಿರುವುದು
ವರದಿಯಾಗಿದೆ (ಪ್ರ.ವಾ., ಫೆ. 11). ಕೊನೆಯ ಕಲಾಪವಾದ್ದರಿಂದ  ಸರ್ಕಾರ ಈ ಐದು ವರ್ಷಗಳ ಅವಧಿಯಲ್ಲಿಕೈಗೊಂಡ ನಿರುದ್ಯೋಗ ನಿವಾರಣೆ, ಶಿಕ್ಷಣ ಸುಧಾರಣೆ, ಆರೋಗ್ಯ ನಿರ್ವಹಣೆ, ಒದಗಿಸಲಾದ ರಸ್ತೆ, ನೀರು, ಸೂರಿನಂತಹ ಅಭಿವೃದ್ಧಿ ಯೋಜನೆಗಳ ಜೊತೆಯಲ್ಲಿ ಸಮಾಜವನ್ನು ಮುನ್ನಡೆಸಿದ ಬಗ್ಗೆ ಚರ್ಚೆ ಮಾಡಬೇಕಾಗಿತ್ತು. ಆದರೆ, ಧರ್ಮದ ವಿಷಯವನ್ನೇ ಪ್ರಧಾನವಾಗಿ ಇಟ್ಟುಕೊಂಡು ಕಲಾಪ ಮುಗಿಸಿರುವುದು ಪ್ರಜಾಪ್ರಭುತ್ವಕ್ಕೆಶೋಭೆ ತರುವ ಸಂಗತಿಯಲ್ಲ. 

⇒ತಾ.ಸಿ.ತಿಮ್ಮಯ್ಯ, ಬೆಂಗಳೂರು

ಹೀಗಿದೆ ವ್ಯತ್ಯಾಸ!

ಹಿಂದೆ...
ದೇಶಕ್ಕೋಸ್ಕರ
ಸಾಯಲು ತಯಾರಾಗಿದ್ದರು,
ಇಂದು...
‘ದೇಶಕ್ಕೋಸ್ಕರ’
ಕೊಲ್ಲಲು
ತಯಾರಾಗಿದ್ದಾರೆ!

ಎಚ್.ಆನಂದರಾಮ ಶಾಸ್ತ್ರೀ
ಬೆಂಗಳೂರು

ಪಠ್ಯದಲ್ಲಿ ಸಂಚಾರ ನಿಯಮ: ಸಮಂಜಸ ಕ್ರಮ

ಸಂಚಾರ ನಿಯಮಗಳ ಬಗೆಗಿನ ಜಾಗೃತಿಗೆ ಸಂಬಂಧಿಸಿದ ಪಾಠವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ಸೇರಿಸುವ ಪ್ರಯತ್ನ ನಡೆದಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್‌ ಎಂ.ಎನ್‌.ಅನುಚೇತ್‌ ಅವರು ಹೇಳಿರುವುದು (ಪ್ರ.ವಾ., ಫೆ.11) ಅತ್ಯಂತ ಸಮಂಜಸವಾಗಿದೆ. ಸಂಚಾರ ನಿಯಂತ್ರಣವು ಮಕ್ಕಳಿಗೆ ಖಂಡಿತವಾಗಿಯೂ ಕಲಿಸಬೇಕಾದ ವಿಷಯವಾಗಿದೆ. ಇದು ಶಿಕ್ಷಣಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ ಮತ್ತು ಮಕ್ಕಳ ಮೂಲಕ ಪೋಷಕರು ಸಹ ಕಲಿಯಲು ಸಹಕಾರಿಯಾಗುತ್ತದೆ.

ಪೋಷಕರು ವಾಹನ ಚಲಾಯಿಸುವಾಗ ಸುರಕ್ಷಿತವಾಗಿ ಓಡಿಸಲು ಮತ್ತು ಎಲ್ಲಾ ನಿಯಮ, ನಿಬಂಧನೆ
ಗಳನ್ನು ಅನುಸರಿಸಲು ಮಕ್ಕಳು ಒತ್ತಾಯಿಸಿದರೆ ಹೆಚ್ಚು ಪರಿಣಾಮಕಾರಿ ಆಗಬಹುದು ಹಾಗೂ ಇದು ಬಹಳಷ್ಟು ಅಪಘಾತಗಳನ್ನು ತಪ್ಪಿಸಲೂಬಹುದು. ಕೆಲವೊಮ್ಮೆ ಮಕ್ಕಳು ತುಂಬಾ ಪರಿಣಾಮಕಾರಿಯಾಗಿ ಹೇಳುವ ಚಾತುರ್ಯವನ್ನು ಹೊಂದಿರುತ್ತಾರೆ. ಇದರಿಂದ ಅವರು ಸ್ವಯಂ ಅನುಸರಿಸುವ ಮತ್ತು ಕಲಿಸುವ ಎರಡು ರೀತಿಯ ಪ್ರಯೋಜನಗಳಾಗುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ಅನೇಕ ಕಲಿಕಾ
ಕಾರ್ಯಕ್ರಮಗಳು ಯಶಸ್ವಿಯಾಗಿ ಉತ್ತಮ ಫಲಿತಾಂಶವನ್ನು ನೀಡಿದ ನಿದರ್ಶನಗಳಿವೆ. 

 ಕಡೂರು ಫಣಿಶಂಕರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT