ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನವಶ್ಯಕ ತಿರುವು

Last Updated 16 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಟಿಪ್ಪು– ಕೆಂಪೇಗೌಡ ವಿವಾದವು ಅನವಶ್ಯಕ ತಿರುವು ಪಡೆಯುತ್ತಿದೆ. ಇದು ಆರೋಗ್ಯಕರ ಲಕ್ಷಣ ಖಂಡಿತ ಅಲ್ಲ.ಗಿರೀಶ ಕಾರ್ನಾಡರು ಸಭೆಯಲ್ಲಿ ಹೇಳಿದ ಮಾತುಗಳು ಕೇಳಿದಾಗ, ಓದಿದಾಗ ನನಗೂ ಆಶ್ಚರ್ಯವಾಗಿದ್ದು ನಿಜ. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಟ್ಟು ಆಗಿದೆ. ಅದರ ಕುರಿತು ಚರ್ಚೆ ಅಪ್ರಸ್ತುತವಾಗಿತ್ತಲ್ಲವೆ– ಅದೂ ಸರ್ಕಾರವೇ ಏರ್ಪಡಿಸಿದ ಸಭೆಯಲ್ಲಿ– ಎಂದು ನನಗೂ ಅನ್ನಿಸಿತು. ಆಗಿಹೋಗಿರುವುದನ್ನು ಕುರಿತು ಚರ್ಚಿಸುವುದು ಅನಗತ್ಯ. ಇದೇ ಸಂದರ್ಭದಲ್ಲಿ ಗಿರೀಶರು ಕ್ಷಮೆಯನ್ನೂ ಕೋರಿಯಾಗಿದೆ. ನಾಗರಿಕ ಸಮಾಜದಲ್ಲಿ– ಇಂಥ ಸಮಯದಲ್ಲಿ– ಇಡೀ ಅಧ್ಯಾಯ ಮುಗಿಯಿತೆಂದು ಮರೆಯಬೇಕು.

ಈಗ ಆಗುತ್ತಿರುವುದೇನು? ಒಂದನೆಯದಾಗಿ  ಕೆಂಪೇಗೌಡರಿಗೆ ಅವಮಾನವಾಯಿತೆಂದು ಒಕ್ಕಲಿಗ ಸಮಾಜ– ತಮ್ಮ ಮಠಗಳ ಸ್ವಾಮಿಗಳನ್ನೂ ಸೇರಿಸಿಕೊಂಡು– ಹುಯಿಲೆಬ್ಬಿಸುತ್ತಿರುವುದು. ಎರಡನೆಯದು– ಗಿರೀಶರ ಸಿನಿಮಾಗಳನ್ನು ಬಹಿಷ್ಕರಿಸುತ್ತೇವೆ, ಅವರಿಗೆ ನಟಿಸಲು ಅವಕಾಶ ಕೊಡುವುದಿಲ್ಲ ಎಂಬ ಸಿನಿಮಾ ಜಗತ್ತಿನ ಕೂಗು. ಮೂರನೆಯದಾಗಿ ಸಭೆ ಸಮಾರಂಭಗಳಿಗೆ ಆಹ್ವಾನ ನೀಡುವುದಿಲ್ಲ ಎಂಬಿತ್ಯಾದಿ. ನಮ್ಮ  ದೃಶ್ಯಮಾಧ್ಯಮಗಳೇನೂ ಈ ವಿಷಯದಲ್ಲಿ ಹಿಂದೆಬಿದ್ದಿಲ್ಲ. ಜತೆಗೆ ಪುರಭವನದ ಎದುರು ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ,  ಅವರ ಪ್ರತಿಕೃತಿ ದಹನ ಮಾಡಿ ಕೇಕೆಹಾಕಿದ್ದು..., ಸಾಕು.

ಇವು ಯಾವುವೂ ನಮ್ಮ ರಾಜ್ಯಕ್ಕಾಗಲೀ, ನಮ್ಮ ಸಂಸ್ಕೃತಿಗಾಗಲೀ ಶೋಭೆ ತರುವಂಥವಲ್ಲ. ಇವನ್ನೇ ಕಾರಣವಾಗಿಸಿಕೊಂಡು ಪಕ್ಷ ರಾಜಕೀಯ ಮಾಡುವುದು, ಸ್ವತಃ ಮುಖ್ಯಮಂತ್ರಿಗಳೇ ಗಿರೀಶರ ಬಾಯಲ್ಲಿ ಈ ಮಾತು ಆಡಿಸಿದ್ದಾರೆ ಎಂಬರ್ಥ ಬರುವ ರೀತಿಯಲ್ಲಿ ತಮ್ಮ ರಾಜಕೀಯ ಬೇಳೆಕಾಳುಗಳನ್ನು ಬೇಯಿಸಿಕೊಳ್ಳ ಬಯಸುತ್ತಿರುವ ರಾಜಕಾರಣಿಗಳು ಘನತೆ, ಗೌರವಗಳಿಲ್ಲದೆಯೇ ವರ್ತಿಸುತ್ತಿದ್ದಾರೆ.

ಅಸಹನೆ, ಕೋಮು ಮತ್ತು ಜಾತಿಗಳ ಹಾವಳಿಗಳ ಕಾರಣಕ್ಕೆ ಜನಗಳನ್ನೇ ಒಡೆಯುತ್ತಿರುವ ಕಾರಣಕ್ಕಾಗಿ ತಾನೆ ದೇಶದ ಲೇಖಕರು, ಚಿಂತಕರು, ವಿಜ್ಞಾನಿಗಳು, ಕಲಾವಿದರು ಎಲ್ಲರೂ ಪ್ರತಿಭಟಿಸುತ್ತಿರುವುದು? ವ್ಯವಸ್ಥೆಯನ್ನು ತೀಕ್ಷ್ಣ ಟೀಕೆಗೆ ಒಳಗು ಮಾಡುತ್ತಿರುವ ಈ ಸಂದರ್ಭದಲ್ಲಿ ನಾವುಗಳೇ ಹೀಗೆ ಅಸಹನೆ, ಕ್ರೋಧ, ದ್ವೇಷಗಳನ್ನು ಪ್ರದರ್ಶಿಸುತ್ತ ಹೋಗುವುದು ಎಷ್ಟು ಸರಿ ಎಂಬುದನ್ನು ನಾವು ಪ್ರಾಮಾಣಿಕವಾಗಿ, ದೀರ್ಘವಾಗಿ ಆಲೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT