ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಾಂತರಿ ಕಷ್ಟ–ನಷ್ಟ

Last Updated 24 ಏಪ್ರಿಲ್ 2016, 19:34 IST
ಅಕ್ಷರ ಗಾತ್ರ

ಬಾಪು ಹೆದ್ದೂರ ಶೆಟ್ಟಿ ಅವರ  ‘ಬೇಕು ಕುಲಾಂತರಿ ತಂತ್ರಜ್ಞಾನ’ (ಪ್ರ.ವಾ., ಚರ್ಚೆ, ಏ. 19) ಲೇಖನ ಈಸ್ಟ್ ಇಂಡಿಯಾ ಕಂಪೆನಿಗೆ ಮಣೆ ಹಾಸಿದಂತಿದೆ. ಕುಲಾಂತರಿ ಹತ್ತಿ ಬೆಳೆದು ಅನೇಕ  ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕಳೆದ ವರ್ಷ ರಾಯಚೂರು ಜಿಲ್ಲೆಯಲ್ಲಿ ಬಿ.ಟಿ. ಹತ್ತಿ ಬೆಳೆಗೆ ಗುಲಾಬಿ ಕಾಯಿಕೊರಕದ ಬಾಧೆ ಉಂಟಾದ ಕಾರಣ  ₹ 300 ಕೋಟಿ ನಷ್ಟವಾಗಿರುವ ಸುದ್ದಿ  ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕುಲಾಂತರಿ ಹತ್ತಿ ಬೆಳೆದದ್ದರಿಂದ ಶೇ 60–70 ರಷ್ಟು ಬೆಳೆ ನಷ್ಟವಾಗಿದೆ ಎಂದು ಕೃಷಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಬಿ.ಟಿ. ಹತ್ತಿ ತಂತ್ರಜ್ಞಾನ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ತಂಡ ವರದಿ ನೀಡಿದೆ.  ಹತ್ತಿಗೆ ಬೀಳುವ ಕೀಟಗಳಿಂದ ಸಂರಕ್ಷಣೆಗೆ ಬಿ.ಟಿ. ತಂತ್ರಜ್ಞಾನದ ಬದಲಾಗಿ ‘ಸಮಗ್ರ ಪೀಡೆ ನಿರ್ವಹಣೆ’ ಎಂಬ ಮಂತ್ರವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ರೈತ ಕ್ಷೇತ್ರ ಪಾಠಶಾಲೆಗಳಲ್ಲಿ ತಿಳಿಸಿ ಕೊಟ್ಟಿದೆ.

‘ಹಸಿರು ಕ್ರಾಂತಿ’ಯಿಂದ ನಮ್ಮ ದೇಶದ ಜನರಿಗೆ ಆಹಾರ ದೊರಕಿದೆ ಎಂಬುದು ಹಸಿ ಸುಳ್ಳು. ಹಸಿರು ಕ್ರಾಂತಿಯಿಂದ ಲಾಭ ಪಡೆದವರು ಬಿತ್ತನೆ ಬೀಜ ಕಂಪೆನಿಗಳು, ರಸಗೊಬ್ಬರ ಕಂಪೆನಿಗಳು, ಕೀಟನಾಶಕ ಕಂಪೆನಿಗಳು ಮತ್ತು ಉಪಕರಣ ಕಂಪೆನಿಗಳು. ಹಸಿರು ಕ್ರಾಂತಿಯಿಂದ ಮಣ್ಣಿನ ಮಾಲಿನ್ಯ, ನೀರಿನ ಮಾಲಿನ್ಯ ಹೆಚ್ಚಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಗುಜರಾತಿನ ಸಾವಯವ ಕೃಷಿ ರೈತ ಭಾಸ್ಕರ ಸಾವೆ ಅವರು 1963ರಿಂದ ಕೀಟನಾಶಕಗಳ ಬಳಕೆ ಮಾಡದೆ 50 ವರ್ಷ ನಿರಂತರವಾಗಿ ಹೆಚ್ಚಿನ ಇಳುವರಿ ಪಡೆದಿರುವುದನ್ನು ಸಾವಿರಾರು ರೈತರು ಇವರ ತೋಟಕ್ಕೆ ಭೇಟಿ ನೀಡಿ ಕಂಡಿದ್ದಾರೆ. ನಾನು 1973 ರಲ್ಲಿ ಕೃಷಿ ಇಲಾಖೆಗೆ ಕೆಲಸಕ್ಕೆ ರಾಯಚೂರು ಜಿಲ್ಲೆಯಲ್ಲಿ ಸೇರಿದಾಗ ರೈತರು ವರಲಕ್ಷ್ಮಿ ಹತ್ತಿಯನ್ನು ಬೆಳೆದು ಎಕರೆಗೆ 15 ಕ್ವಿಂಟಲ್‌ ಇಳುವರಿ ಪಡೆದಿದ್ದರು.

ವರಲಕ್ಷ್ಮಿ ಮತ್ತು ಡಿ.ಸಿ.ಎಚ್‌–32 ಬಿತ್ತನೆ ಬೀಜ ಕೆ.ಜಿ.ಗೆ ₹ 200ರಂತೆ  ಮಾರಾಟ ಮಾಡುತ್ತಿದ್ದರು. ಬಿ.ಟಿ. ಹತ್ತಿ ಬೀಜ ಕೆ.ಜಿ.ಗೆ ₹ 2000ದಿಂದ ₹ 3000 ವರೆಗೂ ಮಾರಾಟ ಆಗುತ್ತಿದೆ. ರೈತರ ಶೋಷಣೆಯಾಗುತ್ತಿದೆ. ಕುಲಾಂತರಿ ತಂತ್ರಜ್ಞಾನಕ್ಕೆ ಧಿಕ್ಕಾರವಿರಲಿ. ರೈತರ ಸ್ಥಳೀಯ ತಂತ್ರಜ್ಞಾನಕ್ಕೆ ಜೈಕಾರವಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT