ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚೇ ಸಾಧನೆಯಲ್ಲ

Last Updated 19 ಜನವರಿ 2016, 19:32 IST
ಅಕ್ಷರ ಗಾತ್ರ

ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇತ್ತೀಚೆಗೆ ಮಾತನಾಡಿದ ಮುಖ್ಯಮಂತ್ರಿ, ಮೀಸಲಿಟ್ಟ ಹಣದಲ್ಲಿ ಶೇ 40ರಷ್ಟು ಮಾತ್ರವೇ ಖರ್ಚಾಗಿದ್ದು ಉಳಿದ ಹಣ ಖರ್ಚಾಗದೇ ಇರುವುದನ್ನು  ಪ್ರಸ್ತಾಪಿಸಿದ್ದಾರೆ. ಅವರ ಕಾಳಜಿ ಮೆಚ್ಚುವಂತಹದು. ಆದರೆ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಪ್ರತಿ ಇಲಾಖೆಗೆ ವಿವಿಧ ಯೋಜನೆಗಳಿಗಾಗಿ ಮೀಸಲಿಟ್ಟಂತಹ ಹಣ, ಆ ವರ್ಷದ ಆರ್ಥಿಕ ಅವಧಿಯ ಅಂತ್ಯದ ಒಳಗೆ ಸಂಪೂರ್ಣವಾಗಿ ಖರ್ಚಾದಾಗ ಮಾತ್ರ ನೂರಕ್ಕೆ ನೂರರಷ್ಟು ಸಾಧನೆಯಾದಂತೆ ಎಂಬ ಸಾಮಾನ್ಯ ಅಭಿಪ್ರಾಯ ಇದೆ.

ಮುಂಗಡ ಪತ್ರದಲ್ಲಿ ವಿವಿಧ ಇಲಾಖೆಗಳಿಗೆ ಮೀಸಲಿಡುವ ಹಣವನ್ನು ಕೇವಲ ಖರ್ಚಾಗಬೇಕೆನ್ನುವ ಕಾರಣಕ್ಕಾಗಿ ಖರ್ಚು ಮಾಡುವುದೇ ಹೆಚ್ಚಾಗಿದೆ. ಮೀಸಲಿಟ್ಟ ಹಣ ಸಂಪೂರ್ಣವಾಗಿ ಖರ್ಚಾಗದಿದ್ದರೂ ಪರವಾಗಿಲ್ಲ, ಅದರ ಸದ್ಬಳಕೆಯಾಗಿದೆಯೇ ಎಂಬುದು ಪ್ರಮುಖ ಪ್ರಶ್ನೆ.

ಈ ಹಿನ್ನೆಲೆಯಲ್ಲಿ, ಕೇವಲ ಖರ್ಚು ಮಾಡುವ ಸಲುವಾಗಿ ಯೋಜನೆಗಳನ್ನು ರೂಪಿಸಿ, ಮಧ್ಯವರ್ತಿಗಳ ಜೇಬು ತುಂಬಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಖರ್ಚು ಮಾಡಿದ ಮಾತ್ರಕ್ಕೆ ಇಲಾಖೆಯಲ್ಲಿ ಸಾಧನೆ ಆಗುವುದಿಲ್ಲ. ಆ ಹಣ ನಿಜವಾದ ಫಲಾನುಭವಿಗಳನ್ನು ಮುಟ್ಟುವುದಿಲ್ಲ. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಮುಂತಾದ ಇಲಾಖೆಗಳಲ್ಲಿ ನಿಜಕ್ಕೂ ಜನರಿಗೆ ಅವಶ್ಯವಿರುವ, ಸಮಾಜದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಬದಲಾಯಿಸಬಲ್ಲಂತಹ ಮತ್ತು ಪರಿಣಾಮ ಬೀರಬಲ್ಲಂತಹ ಯೋಜನೆಗಳನ್ನು ಮಾತ್ರ ರೂಪಿಸಬೇಕು. ಈ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ, ಖರ್ಚಾಗುವ ಪ್ರತಿ ಪೈಸೆಯೂ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು.

ಕೇವಲ ಹಣ ಖರ್ಚು ಮಾಡುವುದೇ ಸಾಧನೆ ಎಂದಾದರೆ ಸಾಧಿಸಿದ್ದು ಮಾತ್ರ ಶೂನ್ಯವಾಗುತ್ತದೆ. ಅನೇಕ ದಶಕಗಳಿಂದ ಅನೇಕ ಇಲಾಖೆಗಳಲ್ಲಿ ಹಣ ಖರ್ಚಾಗುತ್ತಲೇ ಇದೆ. ತಿಂದವರೇ ತಿನ್ನುತ್ತಿದ್ದಾರೆ. ಮಧ್ಯವರ್ತಿಗಳ ಜೇಬು ತುಂಬುತ್ತಿದೆ. ಧ್ವನಿ ಇಲ್ಲದ ಅನೇಕ ಕುಟುಂಬಗಳು ಇಂದಿಗೂ ಸರ್ಕಾರಿ ಸೌಲಭ್ಯಗಳ ಬಿಡಿಗಾಸು ಪಡೆದುಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT