ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಕ್ಕ ಶಾಸ್ತಿಯಾಗಲಿ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಾಟ್ಸ್‌ಆ್ಯಪ್ ಮೂಲಕ ಮಕ್ಕಳ ಅಶ್ಲೀಲ ಚಿತ್ರ ಹಂಚಿಕೆಯಾದ ವಿಷಯ ಓದಿ ಆಘಾತ ಮತ್ತು ಆಶ್ಚರ್ಯವಾಯಿತು (ಪ್ರ.ವಾ., ಫೆ. 23). ಉತ್ತರ ಪ್ರದೇಶದ ಕನೋಜ್‌ನ ನಿಖಿಲ್‍ ವರ್ಮ ಹೆಸರಿನ 20 ವರ್ಷದ ಯುವಕ ವಾಟ್ಸ್‌ಆ್ಯಪ್ ಗುಂಪಿನ ಅಡ್ಮಿನ್ ಆಗಿ ಈ ಜಾಲವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡಿ ದೇಶದ ಮಾನ ಹರಾಜಿಗಿಟ್ಟಿದ್ದಾನೆ.

ಇಂತಹ ಕೀಳು ಮಟ್ಟದ ಕಾರ್ಯದಲ್ಲಿ ತೊಡಗಿರುವ ಇನ್ನೂ ನಾಲ್ಕು ಅಡ್ಮಿನ್‍ಗಳಿದ್ದಾರೆ ಮತ್ತು ವಿವಿಧ 19 ದೇಶಗಳ ಪ್ರಜೆಗಳು ಈ ಗುಂಪುಗಳ ಸದಸ್ಯರಾಗಿದ್ದಾರೆ ಎಂಬ ವಿಷಯ ಮತ್ತಷ್ಟು ದಿಗಿಲು ಹುಟ್ಟಿಸುತ್ತದೆ.

ಮಕ್ಕಳು ದೇವರ ಸಮಾನ ಎಂಬ ಭಾವನೆ ನಮ್ಮ ದೇಶದಲ್ಲಿದೆ. ಆದರೆ ಏನೂ ಅರಿಯದ ಮುಗ್ಧ ಮಕ್ಕಳನ್ನು ಲೈಂಗಿಕ ಚಿತ್ರಗಳಿಗಾಗಿ ಬಳಸಿಕೊಂಡು ವಿಕೃತ ಸಂತೋಷ ಪಡುವುದು ಮತ್ತು ಅವರಂತೆ ವಿಕೃತ ಕಾಮಿಗಳಾದಂಥವರಿಗೆ ಹಂಚುವುದು ಖಂಡನಾರ್ಹ. ಇದಕ್ಕಿಂತ ಕೀಳು ಮಟ್ಟದ ವಿಚಾರ ಮತ್ತೊಂದಿರಲು ಸಾಧ್ಯವಿಲ್ಲ. ಸ್ವಲ್ಪ ತಡವಾಗಿಯಾದರೂ ಇಂತಹ ಕಟು ಶಬ್ದಗಳಲ್ಲಿ ಟೀಕಿಸಬಹುದಾದ ವಿಷಯವನ್ನು ಸಿ.ಬಿ.ಐ ಪತ್ತೆ ಹಚ್ಚಿದೆ. ಇದು ಪ್ರಶಂಸಾರ್ಹ.

ಈ ಜಾಲವನ್ನು ಕೆಲವೇ ಜನರಿಂದ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ. ಸದ್ಯಕ್ಕೆ ತಿಳಿದು ಬಂದಿರುವ ಐದು ಅಡ್ಮಿನ್‍ಗಳಿಗಿಂತ ಹೆಚ್ಚಿನವರು ಭಾಗಿಯಾಗಿರುವ ಸಾಧ್ಯತೆ ಇದೆ. ಗ್ರೂಪ್ ಸದಸ್ಯರು ಕೂಡ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ.

ವಿಕೃತ ಮನಸ್ಸಿನವರು ಮತ್ತು ಹಣ ಗಳಿಸುವ ಉದ್ದೇಶವುಳ್ಳವರು ಎಂತಹ ನೀಚ ಮಾರ್ಗವನ್ನಾದರೂ ಅನುಸರಿಸಬಲ್ಲರು ಮತ್ತು ಎಂತಹ ಕೀಳು ಮಟ್ಟಕ್ಕಾದರೂ ಇಳಿಯಲು ಹಿಂಜರಿಯುವುದಿಲ್ಲ. ನೈತಿಕತೆ ಎಂಬುದೇ ಅವರಿಗೆ ತಿಳಿದಿರುವುದಿಲ್ಲ. ಅಂಥವರನ್ನೆಲ್ಲಾ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಮಾಡಬೇಕು.

ವಿಜ್ಞಾನ, ತಂತ್ರಜ್ಞಾನ ಈಗ ಬಹಳ ಮುಂದುವರೆದಿದೆ. ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳಂತಹ ಸಾಧನಗಳು ಸುಲಭವಾಗಿ ದೊರಕುತ್ತವೆ. ಆದರೆ ಈ ಮುಂದುವರೆದ ಟೆಕ್ನಾಲಜಿಯನ್ನು ಒಳ್ಳೆಯ ಕಾರ್ಯಗಳಿಗೆ ಬಳಸುವ ಬದಲಾಗಿ ನೀಚ ಕಾರ್ಯಗಳಿಗೆ ಬಳಸುವವರಿಗೆ ತಕ್ಕ ಶಾಸ್ತಿಯಾಗಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT