ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಮನೆಯಲ್ಲೇ ಏಕೆ?

Last Updated 14 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ’ ಸುದ್ದಿಯಲ್ಲಿ (ಪ್ರ.ವಾ., ಏ. 14) ಶಿವಮೂರ್ತಿ ಮುರುಘಾ ಶರಣರು ಮತ್ತು ಇತರರು ಮಾತನಾಡಿರುವುದಕ್ಕೂ ಸುದ್ದಿಯ ಜೊತೆಗಿನ ಚಿತ್ರದಲ್ಲಿ ಕಾಣುವ ದೃಶ್ಯಕ್ಕೂ ಇರುವ ವೈರುಧ್ಯಗಳು ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.

ಮೊದಲನೆಯದಾಗಿ, ಈ ರೀತಿಯ ಸಹಪಂಕ್ತಿ ಭೋಜನಗಳು ದಲಿತರ ಮನೆಯಲ್ಲೇ ಏಕೆ ನಡೆಯುತ್ತವೆ ಎಂದು ಅರ್ಥವಾಗುವುದಿಲ್ಲ.

ಬೃಹನ್ಮಠದಲ್ಲಿಯಾಗಲಿ, ಶರಣರ ಪಕ್ಕ ಕುಳಿತ ರಾಮದಾಸರ ಮನೆಯ ಊಟದ ಕೋಣೆಯಲ್ಲಾಗಲಿ ನಡೆಯುವುದಿಲ್ಲವೇಕೆ? ಸಮಾನತೆಯ ಬಗ್ಗೆ ಸದಾ ಮಾತನಾಡುವ ಶರಣರು ಕುರ್ಚಿಯ ಮೇಲೆ ಕುಳಿತರೆ, ಉಳಿದವರು ನೆಲದ ಮೇಲೆ ಕುಳಿತು ಉಣ್ಣುವ ಅಸಮಾನತೆ ಏಕೆ? ಶರಣರ ಪಕ್ಕ ರಾಮದಾಸ್ ಕುಳಿತುಕೊಳ್ಳುತ್ತಾರೆ.

ಸೋಮಶೇಖರರನ್ನು ಏಕೆ ಕೂರಿಸುವುದಿಲ್ಲ ಅಥವಾ ಮನೆಯ ಸದಸ್ಯರನ್ನೆಲ್ಲ ಅತಿಥಿಗಳೊಡನೆ ಕೂರಿಸಿ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಆಯೋಜಿಸಿದವರು ಎಲ್ಲರಿಗೂ ಉಣಬಡಿಸಬಹುದಿತ್ತಲ್ಲ? ಅಷ್ಟೇ ಅಲ್ಲ, ಸುದ್ದಿಯಲ್ಲಿ ಅಂದು ಉಣಬಡಿಸಿದ ಅಡುಗೆಯ ಪಟ್ಟಿಯೂ ಇದೆ.

ದಲಿತರ ಮನೆಯಲ್ಲಿ ಶಿಷ್ಟ ಅಡುಗೆಗಳ ಅಗತ್ಯವೇನಿತ್ತು? ಮಾಂಸಾಹಾರವನ್ನು ಹೊರತುಪಡಿಸಿಯೂ ದಲಿತರಿಗೆ ಅವರದ್ದೇ ಆದ ವಿಶಿಷ್ಟ ಸಸ್ಯಾಹಾರ ಪದ್ಧತಿಯೂ ಇದೆಯಲ್ಲ.

ಅದನ್ನು ಮಾಡಿ ಬಡಿಸುವ ಮೂಲಕ ದಲಿತರಲ್ಲಿ ಆತ್ಮಗೌರವ ಮೂಡಿಸಬಹುದಿತ್ತಲ್ಲವೇ? ದಲಿತರು ತಮ್ಮಸಂಸ್ಕೃತಿಯಿಂದ ವಿಮುಖರಾಗುವಂತೆ ಮಾಡುವ ಹುನ್ನಾರವೇ ಈ ಕಾರ್ಯಕ್ರಮ? ಈ ಪ್ರಶ್ನೆಗೆ ಪೂರಕ ಎನ್ನುವಂತೆ  ಶರಣರು ಆ ಸಂದರ್ಭದಲ್ಲಿ ಮಾತನಾಡಿ ‘ಶೋಷಿತರು ಮತ್ತು ಸೌಲಭ್ಯ ವಂಚಿತರಿಗೆ ಸಂಸ್ಕಾರ ನೀಡಿ ಅರಿವಿನ ಜ್ಯೋತಿ ಹಚ್ಚಬೇಕಿದೆ’ ಎಂದಿದ್ದಾರೆ.

ಮುಂದುವರಿದ ಸಮುದಾಯಗಳು ಮಾತ್ರ ಸಂಸ್ಕಾರವಂತರು ಉಳಿದವರಿಗೆ ಸಂಸ್ಕಾರವಿಲ್ಲ ಎನ್ನುವ ಅರ್ಥ ಬರುವ ಈ ಮಾತು ಅಚ್ಚರಿ ಮೂಡಿಸದೇ?  ದಲಿತರಿಗೆ ಅವರದೇ ಆದ ಸಂಸ್ಕಾರವಿದೆ. ಅದನ್ನು ಪುರಸ್ಕರಿಸಿ ಸ್ವೀಕರಿಸುವ ಮನಸ್ಸು ನಮ್ಮ ಸಮಾಜದಲ್ಲಿ ಎಂದು ಮೂಡೀತು?

ಕಾರ್ಯಕ್ರಮ ಆಯೋಜಕರು, ನೆರೆಯ ಹಾಸನ ಜಿಲ್ಲೆಯಲ್ಲಿನ ಅವರ ಸಮಾನ ಮನಸ್ಕರು ಅಥವಾ ಮುರುಘಾ ಶರಣರು ಸಿಗರನಹಳ್ಳಿಯಲ್ಲಿನ ಸವರ್ಣೀಯರಿಗೆ ಸಮಾನತೆಯ ಪಾಠ ಹೇಳುವ, ದಲಿತರನ್ನು ದೇವಾಲಯದೊಳಗೆ ಕರೆದೊಯ್ಯುವ ಮೂಲಕ ಜಯಂತಿ ಆಚರಿಸಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT