ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುರ ಗೀತೆಗಳು

Last Updated 22 ಮೇ 2016, 19:30 IST
ಅಕ್ಷರ ಗಾತ್ರ

‘ಗಾಂಧರ್ವ ದ್ವೇಷ’ ಶೀರ್ಷಿಕೆಯಡಿ, ಆಕಾಶವಾಣಿಯಲ್ಲಿ ಬೆಳಗಿನ ವೇಳೆ ಶಾಸ್ತ್ರೀಯ ಸಂಗೀತದ  ಬದಲು ಚಿತ್ರಗೀತೆಗಳನ್ನು ಪ್ರಸಾರ ಮಾಡುತ್ತಿರುವುದರ ಬಗ್ಗೆ ಬರೆದ ಪತ್ರಕ್ಕೆ (ವಾ.ವಾ.,ಮೇ 16) ಈ ಪ್ರತಿಕ್ರಿಯೆ. ಶಾಸ್ತ್ರೀಯ ಸಂಗೀತವನ್ನು ಹೊಗಳುವ ಭರಾಟೆಯಲ್ಲಿ ಲೇಖಕರು ಚಿತ್ರಗೀತೆಗಳನ್ನು ಸಾರಾಸಗಟಾಗಿ ಅಗ್ಗವಾಗಿ ಪರಿಗಣಿಸಿದ್ದು ಏಕೆಂದು ಅರ್ಥವಾಗಲಿಲ್ಲ.

ಆಕಾಶವಾಣಿಯ ಜನಪ್ರಿಯತೆಗೆ ಶಾಸ್ತ್ರೀಯ ಸಂಗೀತದಷ್ಟೇ ಚಿತ್ರಸಂಗೀತವೂ ಕಾರಣವೆಂಬುದು ನಿರ್ವಿವಾದ. 60–70ರ ದಶಕಗಳ ಚಿತ್ರಗೀತೆಗಳು ಇಂದಿಗೂ ಪಂಡಿತ ಪಾಮರರೆಲ್ಲರ ನಾಲಗೆಯ ಮೇಲೆ ನಲಿದಾಡುತ್ತಲೇ ಇವೆ.

ಆ ಗೀತೆಗಳಲ್ಲಿನ  ವಸ್ತು, ಸಾಹಿತ್ಯ, ಸಂಗೀತ, ಕಾವ್ಯಾಂಶ, ಕಲಾತ್ಮಕತೆ ಮತ್ತು ಅವು  ಬದುಕಿನ ಬಗೆಗೆ ಪ್ರಕಟಿಸುವ ತಾತ್ವಿಕತೆ ಬೆರಗುಗೊಳಿಸುತ್ತದೆ. ಶ್ರೋತೃಗಳ ಅಪೇಕ್ಷೆಯಂತೆಯೇ ‘ಅಭಿಲಾಷಾ’, ‘ಕೋರಿಕೆ’ ಮುಂತಾದ ಚಿತ್ರಗೀತೆಗಳನ್ನಾಧರಿಸಿದ ಕಾರ್ಯಕ್ರಮಗಳು ಅಚ್ಚುಮೆಚ್ಚಾಗಿದ್ದವು.

ಲೇಖಕರು ಬರೆದಂತೆ ಟಿ.ವಿ. ಚಾನೆಲ್‌ಗಳಲ್ಲಿ ಅಜೀರ್ಣವೆನಿಸುವಷ್ಟು ಮಟ್ಟಿಗೆ ಚಿತ್ರಗೀತೆಗಳ ದೃಶ್ಯಾವಳಿಗಳು ಬಿತ್ತರಗೊಳ್ಳುತ್ತಿದ್ದರೂ ಅವು ಇತ್ತೀಚಿನ ಚಿತ್ರಗಳಿಂದ ಆಯ್ದವುಗಳು. ಅನೇಕ ಹಳೆಯ ಚಿತ್ರಗೀತೆಗಳು ಅಪರೂಪಕ್ಕೊಮ್ಮೆ ಪ್ರಸಾರವಾದರೂ ಅದು ಅಪರಾತ್ರಿಯಲ್ಲಿ ಎಲ್ಲರೂ ಮಲಗಿದ ಮೇಲೆ ಅಥವಾ ನಸುಕಿನಲ್ಲಿ ಎಲ್ಲರೂ ಏಳುವ ಮುನ್ನ.

ಅದೂ ಅಲ್ಲದೆ ಆಕಾಶವಾಣಿಯ ಸಂಗ್ರಹದಲ್ಲಿ ಇರುವಷ್ಟು ಹಳೆಯ ಚಿತ್ರಗೀತೆಗಳು, ಟಿ.ವಿ. ಚಾನೆಲ್‌ಗಳಲ್ಲಿ (ಒಂದೆರಡು ಚಾನೆಲ್‌ ಹೊರತುಪಡಿಸಿ) ಇಲ್ಲ ಎಂಬುದು ಈ ಎರಡೂ ಮಾಧ್ಯಮಗಳನ್ನು ಗಮನಿಸಿದರೆ ಅರಿವಾಗುತ್ತದೆ.

ಕವಿಗೀತೆಗಳಾದ ಕುವೆಂಪುರವರ ‘ಯಾವ ಜನ್ಮದ ಮೈತ್ರಿ’, ‘ಭಾರತ ಜನನಿಯ ತನುಜಾತೆ’, ಬೇಂದ್ರೆಯವರ ‘ಮೂಡಲ ಮನೆಯ’, ‘ಉತ್ತರ ಧ್ರುವದಿಂ ದಕ್ಷಿಣ  ಧ್ರುವಕೂ’, ಕೆ.ಎಸ್‌.ನ.ಅವರ ‘ಇವಳು ಯಾರು ಬಲ್ಲೆಯೇನು’ ಮುಂತಾದ ಗೀತೆಗಳು ಹಾಗೂ ‘ಕುಲ ಕುಲವೆಂದು ಹೊಡೆದಾಡದಿರಿ’ಯಂತಹ ದಾಸರ ಪದಗಳು ಜನಸಾಮಾನ್ಯರನ್ನು ತಲುಪಿದುದು ಚಲನಚಿತ್ರಗಳಿಗೆ ಅಳವಡಿಸಿಕೊಂಡ ಮೇಲೆ ಹಾಗೂ ಆಕಾಶವಾಣಿಯ ಮೂಲಕ ಎಂಬುದು ಕಟು ಸತ್ಯ.

‘ಭಕ್ತ ಕುಂಬಾರ’ದಂತಹ ಚಿತ್ರದ ಗೀತೆಗಳಲ್ಲಿ ಮೂರು ನಿಮಿಷಗಳಲ್ಲಿ ತಿಳಿಯುವ ಪರಮಾರ್ಥವನ್ನು ಅರಿಯಲು ಅದೆಷ್ಟು ಉದ್ಗ್ರಂಥಗಳನ್ನು ಓದಬೇಕಾದೀತೋ! ಕನ್ನಡ ಚಿತ್ರಗೀತೆಗಳಿಗೆ ಎಂಟು ದಶಕಗಳ ಇತಿಹಾಸವಿದೆ. ಕಾಡುವ ಹಾಡಾಗಿ ಉಳಿದ ಗೀತೆಗಳು ಅಸಂಖ್ಯ. ಆ ಮಾಧುರ್ಯ, ಆ ಸಾಹಿತ್ಯ, ಆ ರಾಗ ಸಂಯೋಜನೆಗಳು ಅದೆಷ್ಟು ಜನರಿಗೆ ಹುಚ್ಚುಹಿಡಿಸಿವೆಯೊ.

ಅವು ಆಯಾ ಚಲನಚಿತ್ರಗಳನ್ನು ಜನಪ್ರಿಯವಾಗಿಸಿದಂತೆಯೇ ಚಲನಚಿತ್ರ ಮಾಧ್ಯಮ ಪ್ರಬುದ್ಧತೆ ಪಡೆಯಲು ಕಾರಣವಾಗಿವೆ. ಆದರೂ ಅವುಗಳ ಜನಪ್ರಿಯತೆ ಬಗ್ಗೆ ಪೂರ್ವಗ್ರಹವೇ ಬಹಳ ಎನ್ನದೆ ವಿಧಿಯಿಲ್ಲ. ಬಹುತೇಕ ಹಳೆಯ ಚಿತ್ರಗೀತೆಗಳನ್ನು ಶಾಸ್ತ್ರೀಯ ಸಂಗೀತದ ರಾಗಗಳನ್ನು ಆಧರಿಸಿಯೇ ರಚಿಸಲಾಗಿದೆ ಎಂಬುದು ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT