ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯಕ್ಕೆ ಧಕ್ಕೆ ತರುತ್ತಿರುವ ಯುಪಿಎಸ್‌ಸಿ ನಿಯಮಾವಳಿ

ಹೊಸ ನಿಯಮಗಳು ಸ್ಥಳೀಯ ಭಾಷಾ ಮಾಧ್ಯಮದಲ್ಲಿ ಕಲಿತ ಅಭ್ಯರ್ಥಿಗಳಿಗೆ ದೊಡ್ಡ ಹೊಡೆತ ನೀಡುವಂತಿವೆ.
Last Updated 13 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕೇಂದ್ರ ನಾಗರಿಕ ಸೇವೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಾಗೆಯೇ ಕೇಂದ್ರ ಸರ್ಕಾರದ ವ್ಯಾಪ್ತಿಯ ವಿವಿಧ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅಗತ್ಯವಾಗಿದ್ದ ಭಾಷಾ ಮಾನದಂಡದಲ್ಲಿ ಬದಲಾವಣೆ ಮಾಡಿರುವುದು ಸಂಪೂರ್ಣ ತಪ್ಪು. ನನ್ನ ಅಭಿಪ್ರಾಯದಲ್ಲಿ ಇದು ಅಕ್ರಮ. ಅಷ್ಟೇ ಅಲ್ಲ ಇದು ನೇರವಾಗಿ ತಾರತಮ್ಯ ಮಾಡಿದಂತೆ.

ಕಳೆದ ವರ್ಷ ಕೇಂದ್ರೀಯ ವಿದ್ಯಾಲಯಗಳ ನೇಮಕಾತಿ ಮಂಡಳಿಯ ಸದಸ್ಯರೊಬ್ಬರನ್ನು ಭೇಟಿಯಾದ ಸಂದರ್ಭದಲ್ಲಿ, ಕೇಂದ್ರೀಯ ವಿದ್ಯಾಲಯಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವಾಗ ಹಿಂದಿ ಭಾಷಾ ಪರೀಕ್ಷೆ ಕಡ್ಡಾಯಗೊಳಿಸುವ ನಿರ್ಧಾರವನ್ನು ಮಂಡಳಿ ತೆಗೆದುಕೊಂಡಿರುವುದು ನನ್ನ ಗಮನಕ್ಕೆ ಬಂತು. ಇದು ದಕ್ಷಿಣ ಭಾರತದ ಶಿಕ್ಷಕ ಅಭ್ಯರ್ಥಿಗಳಿಗೆ ಭಾರಿ ಹೊಡೆತ ನೀಡಿತು. ಕೇಂದ್ರೀಯ ವಿದ್ಯಾಲಯಗಳಿಗೆ ಆಯ್ಕೆಯಾದ 4000 ಅಭ್ಯರ್ಥಿಗಳ ಪೈಕಿ ಕೇವಲ 10 ಜನರಷ್ಟೇ ಕರ್ನಾಟಕದಿಂದ ಆಯ್ಕೆಯಾಗಿದ್ದರು.

ಭೌತಶಾಸ್ತ್ರ ಅಥವಾ ಜೀವವಿಜ್ಞಾನ ಬೋಧಿಸುವ ಶಿಕ್ಷಕರಿಗೆ ಹಿಂದಿ ಏಕೆ ತಿಳಿದಿರಬೇಕು ಎಂಬುದು ನನಗೆ ಅರ್ಥವಾಗುತ್ತಿಲ್ಲ.

ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಯುವ ಬಹುತೇಕ ಮಕ್ಕಳು ಆ ಕುಟುಂಬದ ಮೊದಲ ತಲೆಮಾರಿನ ಅಕ್ಷರಸ್ಥರಾಗಿರುತ್ತಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದಿರುತ್ತಾರೆ. ಆಯಾ ವಿಷಯಗಳನ್ನು ಬೋಧಿಸುವ ಹೊರತಾಗಿ ಶಿಕ್ಷಕರು ಆ ಮಕ್ಕಳ ಜತೆ ಹಿಂದಿಯಲ್ಲಿ ಮಾತನಾಡಲು, ಅವರಿಗೆ ಅರ್ಥವಾಗದ ವಿಚಾರಗಳನ್ನು ಹಿಂದಿಯಲ್ಲಿ ವಿವರಿಸಲು ಸಾಧ್ಯವಾದಲ್ಲಿ ಚೆನ್ನಾಗಿರುತ್ತದೆ ಎಂಬ ದೃಷ್ಟಿಯಿಂದ ಕೇಂದ್ರೀಯ ವಿದ್ಯಾಲಯಗಳ ಶಿಕ್ಷಕರಿಗೆ ಹಿಂದಿ ಭಾಷಾ ಅರ್ಹತೆ ಕಡ್ಡಾಯಗೊಳಿಸಲಾಗಿದೆ ಎಂಬ ವಿವರಣೆ ನನಗೆ ದೊರಕಿತು. ಇಂತಹ ವಾಸ್ತವ ಸಂಗತಿಯನ್ನು ವಿರೋಧಿಸುವ ಗೋಜಿಗೆ ನಾನು ಹೋಗುವುದಿಲ್ಲ. ಆದರೆ, ಇಂತಹ ಸನ್ನಿವೇಶಗಳಿಗೆ ಇದೊಂದೇ ಮದ್ದಲ್ಲ.

ಸ್ವತಂತ್ರ ಭಾರತದ ಇತಿಹಾಸದ ಉದ್ದಕ್ಕೂ ನಾವು ಮಾಡಿರುವ ತಪ್ಪನ್ನೇ ಕೇಂದ್ರ ಸರ್ಕಾರದ ನೇಮಕಾತಿ ಮಂಡಳಿಗಳು ಮಾಡುತ್ತಿವೆ. `ಒಟ್ಟಾಗಿ' ಎಂಬುದರ ಅರ್ಥ `ಒಂದೇ' ಎಂದು ಅಲ್ಲ. ಭಾರತದ ಶ್ರೇಷ್ಠತೆ ಅದರ ವೈವಿಧ್ಯತೆಯಲ್ಲಿ ಅಡಗಿದೆ. ಅದೇ ಭಾರತವನ್ನು ವಿಶೇಷ ದೇಶವಾಗಿಸಿದೆ. ಇಂತಹ ಅರ್ಥಹೀನ ನಿಯಮಾವಳಿಗಳು ಈ ವೈಶಿಷ್ಟ್ಯಕ್ಕೆ ಅವಮಾನ ಮಾಡಿದಂತೆ. ಗಣತಂತ್ರ ಮಾದರಿಯ ನಮ್ಮ ದೇಶದಲ್ಲಿ ಎಲ್ಲ ಭಾಷೆ, ಸಂಸ್ಕೃತಿಗಳನ್ನು ಗೌರವಿಸಬೇಕಾಗುತ್ತದೆ. ಸಿಬ್ಬಂದಿ ನೇಮಕಾತಿಯಲ್ಲಿ ಏಕರೂಪತೆ ಕಾಯ್ದುಕೊಳ್ಳುವಾಗಲೂ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಈ ಜನರ ಸಮಸ್ಯೆ ಅಂದರೆ ಎಲ್ಲವೂ ಕೇಂದ್ರೀಕೃತವಾಗಿರಬೇಕು ಹಾಗೂ ಏಕರೂಪದಲ್ಲಿ ಇರಬೇಕು ಎಂದು ತೀರ್ಮಾನ ಕೈಗೊಳ್ಳುವುದು. ಆನಂತರ ಈ ಕೇಂದ್ರೀಕೃತ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುವಂತೆ ನಿಯಮಾವಳಿಗಳನ್ನು ರೂಪಿಸಲು ಯತ್ನಿಸುತ್ತಾರೆ. ಭಾರತದ ವೈವಿಧ್ಯತೆಯ ಅರಿವು ಅವರಿಗಿಲ್ಲ.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಪರೀಕ್ಷೆಗಾಗಿ ರೂಪಿಸಿರುವ ಹೊಸ ನಿಯಮಗಳು ಸ್ಥಳೀಯ ಭಾಷಾ ಮಾಧ್ಯಮದಲ್ಲಿ ಕಲಿತ ಅಭ್ಯರ್ಥಿಗಳಿಗೆ ದೊಡ್ಡ ಹೊಡೆತ ನೀಡುವಂತಿವೆ. ಅಭ್ಯರ್ಥಿಗಳು ಇಂಗ್ಲಿಷ್‌ಗಿಂತ ಹೆಚ್ಚಿನ ಪರಿಣತಿಯನ್ನು ಸ್ಥಳೀಯ ಭಾಷೆಯಲ್ಲಿ ಹೊಂದಿದ್ದರೆ ತಪ್ಪೇನು? ಗುಜರಾತ್ ವೃಂದಕ್ಕೆ ನೇಮಕಗೊಂಡ ಅಸ್ಸಾಂ ಅಭ್ಯರ್ಥಿಗೆ ಭಾಷಾ ತರಬೇತಿ ನೀಡುತ್ತಿದ್ದಲ್ಲಿ, ಇಂಗ್ಲಿಷ್ ಅಥವಾ ಬೇರೇ ಯಾವುದೇ ಭಾಷೆ ತಿಳಿಯದವರಿಗೆ ಇದೇ ರೀತಿ ತರಬೇತಿ ನೀಡಬಹುದಲ್ಲವೆ?

ಕನ್ನಡ ಅಥವಾ ಒರಿಯಾ ಭಾಷೆಯಲ್ಲಿ ಪರೀಕ್ಷೆ ಬರೆಯಬಯಸುವ ಅಭ್ಯರ್ಥಿ ಆ ಭಾಷೆಯ ಮಾಧ್ಯಮದಲ್ಲಿ ಓದಿರದಿದ್ದಲ್ಲಿ ಕೇಂದ್ರ ಸರ್ಕಾರದ ಗಂಟೇನು ಹೋಗುತ್ತದೆ? ಒರಿಯಾ ಭಾಷೆಯ ಮಾಧ್ಯಮದಲ್ಲಿ ಅಧ್ಯಯನ ಮಾಡದ ಅಭ್ಯರ್ಥಿ ಆ ಭಾಷೆಯಲ್ಲಿ ಪರೀಕ್ಷೆ ಬರೆಯಲು ಮುಂದಾಗುತ್ತಾನೆ ಅಂದರೆ ಅದರ ಬಗ್ಗೆ ನಾವು ಆಳವಾಗಿ ಯೋಚಿಸಬೇಕು. ಇದು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ.

ಸ್ಪಷ್ಟವಾಗಿ ಹೇಳಬೇಕು ಅಂದರೆ ಅಖಿಲ ಭಾರತ ನಾಗರಿಕ ಸೇವೆಗಳಲ್ಲಿ ಭಾರಿ ಸುಧಾರಣೆ ಆಗಬೇಕಿದೆ. ಅದು ಕೇವಲ ಪ್ರವೇಶ ಪರೀಕ್ಷೆಗೆ ಸೀಮಿತವಾಗಬಾರದು. ರಾಜ್ಯಗಳು ತಮಗೆ ಬೇಕಾದ ಹುದ್ದೆ ಮತ್ತು ಸೇವೆಗಳಿಗೆ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುವ ವ್ಯವಸ್ಥೆಯನ್ನು ನಾವು ಸೃಷ್ಟಿಸಬೇಕು. ಕೇಂದ್ರ ಸರ್ಕಾರ ತನ್ನ ಅಗತ್ಯಗಳಿಗೆ ಈ ವೃಂದದಿಂದಲೇ ಅಭ್ಯರ್ಥಿಗಳನ್ನು ಪಡೆಯಬಹುದು ಅಥವಾ ಕೇಂದ್ರ ಸರ್ಕಾರದ ಉದ್ಯೋಗಗಳಿಗಾಗಿ ಪರ್ಯಾಯವಾದ ವ್ಯವಸ್ಥೆಯೊಂದನ್ನು ಸ್ಥಾಪಿಸಿಕೊಳ್ಳಬಹುದು. ಮೊದಲು ಜಿಲ್ಲಾಧಿಕಾರಿಗಳ ಹುದ್ದೆಯನ್ನು ರದ್ದುಗೊಳಿಸಬೇಕು. ಜಿಲ್ಲಾ ಮಟ್ಟದಲ್ಲಿ ಚುನಾಯಿತ ಸರ್ಕಾರ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಮೂಲಕ ಜಿಲ್ಲೆಗಳ ಆಡಳಿತ ನಡೆಯಬೇಕು.

ಆಡಳಿತ ಸುಧಾರಣಾ ಆಯೋಗ ಹಲವು ತಿಂಗಳ ಕಾಲ ಈ ಅಂಶಗಳನ್ನೆಲ್ಲ ಅಧ್ಯಯನ ಮಾಡಿ, ಅಖಿಲ ಭಾರತ ನಾಗರಿಕ ಸೇವೆಯ ಸ್ವರೂಪ ಬದಲಿಸಲು ಹಲವು ಶಿಫಾರಸುಗಳನ್ನು ಮಾಡಿತು. ಮತ್ತಷ್ಟು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಜಾರಿಗೆ ತರುವಂತೆ ಸೂಚಿಸಿತ್ತು. ಆದರೆ, ಆ ಶಿಫಾರಸುಗಳೆಲ್ಲ ದೂಳು ತಿನ್ನುತ್ತಿವೆ. ಆದರೆ, ಮೂರ್ಖ ನಿರ್ಧಾರಗಳೆಲ್ಲ ಜಾರಿಗೆ ಬರುತ್ತಿವೆ. ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳು ಅತಿಹೆಚ್ಚು ಅಕ್ಷರಸ್ಥರಿರುವ ದಕ್ಷಿಣ ಭಾರತದ ರಾಜ್ಯಗಳಿಂದ ಬರುವ ಅರ್ಜಿಗಳ ಸಂಖ್ಯೆಯನ್ನೇ ಕಡಿಮೆಗೊಳಿಸುವಂತಹ ನಿರ್ಧಾರ ಕೈಗೊಂಡಿವೆ.

ಈ ಹೊಸ ನಿಯಮಾವಳಿಯಿಂದ ಸಿಟ್ಟಿಗೆದ್ದಿರುವ ಜನ ಆನ್‌ಲೈನ್‌ನಲ್ಲಿ ಮನವಿ ಪತ್ರಗಳನ್ನು ಸಲ್ಲಿಸಿ ಈ ನಿರ್ಧಾರ ವಾಪಸು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದರ ಜತೆ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಅಗತ್ಯವೂ ಇದೆ. ಈ ವಿಚಾರಗಳ ಕುರಿತು ಮಾತನಾಡುವಂತೆ ನಮ್ಮ ರಾಜ್ಯದ ಸಂಸತ್ ಸದಸ್ಯರನ್ನು ನಾವು ಒತ್ತಾಯಿಸಬೇಕು.

ಕೇಂದ್ರ ಸರ್ಕಾರದ ಎಲ್ಲ ಉದ್ಯೋಗಗಳು ಕರ್ನಾಟಕ ಒಂದೇ ಅಲ್ಲ, ಭಾರತದ ಎಲ್ಲ ಭಾಗಗಳ ಜನರಿಗೂ ಲಭ್ಯವಾಗುವಂತಿರಬೇಕು. ಯಾವುದೇ ವಿವೇಚನೆಯಿಲ್ಲದೇ ತಮ್ಮ ಪಕ್ಷದ ನಿಲುವಿಗೆ ಅಂಟಿಕೊಳ್ಳುವ ರಾಜಕಾರಣಿಗಳ ಚಾಳಿ, ಕ್ಷೇತ್ರದ ಜನರನ್ನು ನಿಜವಾಗಿ ಪ್ರತಿನಿಧಿಸುವ ವ್ಯವಸ್ಥೆಯನ್ನು ಕೊಂದುಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT