ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಲಿ

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಅಥವಾ ಕನ್ನಡ ಭಾಷೆ ಶಿಕ್ಷಣ ಮಾಧ್ಯಮವಾಗಿರಬೇಕೆಂಬ ಕರ್ನಾಟಕ ಸರ್ಕಾರದ ಆದೇಶದ ವಿವಾದವು ಈಗ ಸುಪ್ರೀಂ­ ಕೋರ್ಟಿನ ಸಾಂವಿ­ಧಾನಿಕ ಪೀಠದ ಮುಂದೆ ಜನವರಿ 21ರಿಂದ ವಿಚಾರಣೆಗೆ ಬರಲಿದೆ. ಸರ್ಕಾರದ 1994ರ ಆದೇಶದಲ್ಲಿ ಕನ್ನಡ, ತಮಿಳು, ತೆಲುಗು, ಮರಾಠಿ, ಉರ್ದು, ಮಲ­ಯಾಳಂ, ಹಿಂದಿ, ಇಂಗ್ಲಿಷ್‌ ಭಾಷೆಗಳನ್ನು ಮಾತೃ­ಭಾಷೆಯಾಗಿ ಗುರುತಿಸಲಾಗಿದೆ.

ಸರ್ಕಾರದ 1994ರ ಆದೇಶವು, 1989ರಲ್ಲಿ ಸರ್ಕಾ­ರವು ಹೊರಡಿಸಿದ್ದ ಭಾಷಾನೀತಿ ಆದೇಶಕ್ಕೆ ಅನುಗುಣ­ವಾಗಿದೆ. 1989ರ ಸರ್ಕಾರಿ ಆದೇಶದ ಸಿಂಧುತ್ವವನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳು ಎತ್ತಿ ಹಿಡಿ­ದಿವೆಯಲ್ಲದೆ ಭಾಷಾನೀತಿಯನ್ನು ಹೇಗೆ ಜಾರಿಗೊಳಿಸ­ಬೇಕೆಂಬುದು ರಾಜ್ಯಕ್ಕೆ ತಿಳಿದಿದೆಯೆಂದು ಹಾಗೂ ಇದರಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶಿಸಬಾರ­ದೆಂದು ಕೂಡ ಸುಪ್ರೀಂ ಕೋರ್ಟ್‌ ತೀರ್ಪಿತ್ತಿದೆ. ಹೀಗಿದ್ದೂ 1994ರ ಸರ್ಕಾರಿ ಆದೇಶವನ್ನು ರಾಜ್ಯದ ಹೈಕೋರ್ಟ್‌ ತಳ್ಳಿಹಾಕಿದ್ದರಿಂದ ವಿವಾದ ಈಗ ಮತ್ತೆ ಸುಪ್ರೀಂ ಕೋರ್ಟ್‌ನ ಮುಂದಿದೆ.

1994ರ ಆದೇಶದಲ್ಲಿ ಸರ್ಕಾರದಿಂದ ಅಂಗೀಕೃತ­ವಾದ ಎಲ್ಲ ಶಾಲೆಗಳಲ್ಲಿ 1ರಿಂದ 4ನೇ ತರಗತಿ­ಯವರೆಗಿನ ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಕನ್ನಡ ಭಾಷೆಯೇ ಆಗಿರಲು ಅವಕಾಶ ಕಲ್ಪಿಸಲಾಗಿದೆ. ಐದನೆಯ ತರಗತಿಯ ನಂತರ ಇಂಗ್ಲಿಷ್‌ ಅಥವಾ ಬೇರೆ ಭಾಷಾ ಮಾಧ್ಯಮಕ್ಕೆ ಬದ­ಲಾವಣೆ ಮಾಡಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ.

ಶಿಕ್ಷಣ, ಭಾಷೆ, ಕಲಿಕಾ ಮಾಧ್ಯಮದಂತಹ ವಿಷಯ­ಗಳು ನ್ಯಾಯಾಲಯದ ಅಂಗಳದಲ್ಲಿ ತೀರ್ಮಾನ­ವಾಗ­ಬೇಕಾಗಿ ಬಂದಿರುವುದು, ಅಂದರೆ ಶಿಕ್ಷಣ ತಜ್ಞರಿಂದ, ಸರ್ಕಾರದಿಂದ ನಿರ್ಣಯಗೊಳ್ಳಬೇಕಾದ ಅಂಶಗಳು ಇತರೆಡೆ ತೀರ್ಮಾನ­ಗೊಳ್ಳು­ವುದು ವಿಷಾದದ ಸಂಗತಿ­ಯಾಗಿದೆ. ಸ್ವಾತಂತ್ರ್ಯಾ­ನಂತರ ಇಷ್ಟು ವರ್ಷಗಳಲ್ಲಿ ನಮ್ಮ ರಾಷ್ಟ್ರ ಅಥವಾ ರಾಜ್ಯ­ಗಳಿಗೆ ಒಂದು ಸ್ಪಷ್ಟ ಭಾಷಾ ನೀತಿ­ಯಿಲ್ಲ. ಭಾಷಾವಾರು ಪ್ರಾಂತ ರಚನೆಯಾದ ಮೇಲೂ ರಾಜ್ಯಭಾಷೆಗಳಿಗೆ ನೂರೆಂಟು ಕುತ್ತುಗಳು ಬರುತ್ತಿವೆ. ಒಂದರಿಂದ ನಾಲ್ಕನೇ ತರಗತಿ­ಯವರೆಗೆ ಮಾತ್ರ ಮಾತೃ­ಭಾಷೆ ಅಥವಾ ಕನ್ನಡ ಮಾಧ್ಯಮ­ದಲ್ಲಿ ಓದಿದ ಮಗು­ವಿನ ಭಾಷೆ ಎಷ್ಟರಮಟ್ಟಿಗೆ ಗಟ್ಟಿಗೊ­ಳ್ಳುತ್ತದೆ ಎಂಬುದು ಸಂಶಯಾಸ್ಪದ. ಭಾಷೆ ಗಟ್ಟಿಗೊಳ್ಳಲು ಕನಿಷ್ಠ ಒಂದರಿಂದ ಹತ್ತನೆಯ ತರಗತಿವರೆಗಾದರೂ ಕಲಿಕಾ ಮಾಧ್ಯಮ ಮಗುವಿನ ಮಾತೃಭಾಷೆ ಅಥವಾ ಕನ್ನಡವಾಗಿರಬೇಕು. ಇದರೊಂದಿಗೆ ಸಮಾನ ಶಿಕ್ಷಣ, ಸಮಾನ ಶಾಲಾ ವ್ಯವಸ್ಥೆಗಳ ಆಶಯಗಳು ಕೂಡ ಬೆಸೆದುಕೊಂಡಿವೆ.

ಆಂಗ್ಲಭಾಷಾ ಶಾಲೆಗಳ ಹಾವಳಿಯಿಂದಾಗಿ ಕನ್ನಡ ಸಹಿತ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಆತಂಕ ಎದುರಾಗಿದೆ. ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ದಿಶೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮುಂದೆ ಪ್ರಬಲ ವಾದ ಮಂಡಿಸಿ, ಭಾಷಾ ನೀತಿ ರೂಪಣೆಯ ವಿಷಯವನ್ನು ಈ ಹಿಂದೆ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವಂತೆ ತನ್ನ ವ್ಯಾಪ್ತಿಗೆ ಪಡೆದುಕೊಂಡು, ಭಾಷೆಯ ಉಳಿವಿಗೆ ಎಲ್ಲ ಅಗತ್ಯ ಕ್ರಮಗಳನ್ನು ಜರುಗಿಸಬೇಕು. ಅದೇ ವೇಳೆ ಪ್ರಸ್ತುತ ಸರ್ಕಾರದ ಧೋರಣೆಯಂತೆ ಇಂಗ್ಲಿಷನ್ನು ಕೂಡ ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಶಾಲೆಗಳಲ್ಲಿ ಕಲಿ­ಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಹಾಗೂ ಕನ್ನಡ ಶಾಲೆಗಳ ಗುಣಮಟ್ಟ ಸುಧಾರಿಸಲು ಕೂಡ ಪ್ರಯತ್ನಿಸ­ಬೇಕು. ಕನ್ನಡ ಶಾಲೆಗಳು, ಕನ್ನಡ ಭಾಷೆ ಎದುರಿಸು­ತ್ತಿ­ರುವ ಇಂತಹದ್ದೊಂದು ಕ್ಲಿಷ್ಟ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮುಂದೆ ಸರ್ಕಾರ ದೃಢ ನಿಲುವು ತಾಳಿ, ವಿವಾದಿತ ವಿಷಯದ ತಜ್ಞತೆ ಮತ್ತು ಭಾಷಾ ಅಭಿಮಾನ ಇರುವ ಹಿರಿಯ ವಕೀಲರನ್ನು ನೇಮಿಸಿ ತನ್ನ ನಿಲುವು ಮತ್ತು ಬದ್ಧತೆ­ಯನ್ನು ತೋರಬೇಕು. ಇದಕ್ಕೆ ಪೂರ್ವ­ಭಾವಿ­­ಯಾಗಿ ಸರ್ಕಾರ ಶಿಕ್ಷಣ ತಜ್ಞರ ಮತ್ತು ಸರ್ಕಾರಿ ವಕೀಲರ ಸಭೆ ಆಯೋಜಿಸುವುದು ಸೂಕ್ತವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT