ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದರ ಫಲವಾಗಿ ನಮ್ಮ ನಾಗರಿಕರ ಮೇಲೆ ₨ 900 ಕೋಟಿ ಹೊರೆ ಬಿತ್ತು. ಒಬಾಮ ಅವರ ಜೊತೆಗೆ ಟಿ.ವಿ ತುಂಬಾ ಕಾಣುತ್ತಿದ್ದವರು ಪ್ರಧಾನಿ ನರೇಂದ್ರ ಮೋದಿ. ಚಿನ್ನದ ದಾರದಿಂದ ತಮ್ಮ ಹೆಸರನ್ನು ಬಟ್ಟೆಯುದ್ದಕ್ಕೂ ಹೆಣೆದಿದ್ದ, ಲಂಡನ್ನಿನಲ್ಲಿ ಹೊಲಿದು ಸಿದ್ಧಪಡಿಸಿದ್ದ ಸೂಟನ್ನು ಅವರು ಧರಿಸಿದ್ದರು. ಒಂದೇ ದಿನದಲ್ಲಿ ನಾಲ್ಕು ಬಾರಿ ಸೂಟು ಬದಲಾಯಿಸಿ ಮಿಂಚಿದ ಫ್ಯಾಷನ್ ಐಕಾನ್ ನಮ್ಮ ಹೆಮ್ಮೆಯ ಪ್ರಧಾನಿ!
ಮಹಾತ್ಮ ಗಾಂಧಿ ಅವರು ದೇಶದ ಎಲ್ಲರಿಗೂ ಕನಿಷ್ಠ ಉಡುಪು ದೊರಕುವವರೆಗೂ ತಾವು ಅರೆಬೆತ್ತಲೆಯಾಗಿಯೇ ಇರಲು ನಿರ್ಧರಿಸಿ ವಿದೇಶಿಗರಿಂದ ‘ಫಕೀರ’ ಎನ್ನಿಸಿಕೊಂಡಿದ್ದರು. ಅದೇ ದಿರಿಸಿನಲ್ಲಿ ಲಂಡನ್ನಿನ ದುಂಡು ಮೇಜಿನ ಪರಿಷತ್ತಿಗೂ ಹೋಗಿಬಂದಿ-ದ್ದರು. ಹರಿದಿದ್ದ ತಮ್ಮ ಶರ್ಟನ್ನು ಮುಚ್ಚಿಕೊಳ್ಳಲು ಮೇಲೊಂದು ಕೋಟು ತೊಟ್ಟು ರಷ್ಯಾಗೆ ಹೋದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಗೂಢವಾಗಿ ಪ್ರಾಣ ಕಳೆದುಕೊಂಡರು. ಇಂತಹವರಿಗೆ ಇಂದಿನ ಪ್ರಧಾನಿಯನ್ನು ಯಾವ ರೀತಿ ಹೋಲಿಸಲು ಸಾಧ್ಯ?
ದೇಶದ ಮೊದಲ ಪ್ರಧಾನಿಯ ಬಟ್ಟೆ ಲಂಡನ್ನಿನಿಂದ ಇಸ್ತ್ರಿಯಾಗಿ ಬರುತ್ತಿತ್ತಂತೆ. ಇಂದಿನ ರಾಷ್ಟ್ರೀಯ ಪಕ್ಷವೊಂದರ ನಾಯಕಿಯ ಮನೆಗೆ ಇಟಲಿಯಿಂದಲೇ ಬ್ರೆಡ್ ಬರಬೇಕಂತೆ.
ಅವರೆಲ್ಲ ಚಿನ್ನದ್ದೋ ಬೆಳ್ಳಿಯದ್ದೋ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡೇ ಹುಟ್ಟಿದವರು. ಆದರೆ ನಮ್ಮ ಹೆಮ್ಮೆಯ ಪ್ರಧಾನಿ ‘ಚಾಯ್ವಾಲಾ’ ಆಗಿದ್ದವರು. ಬಡತನವನ್ನು ಅತಿ ಹತ್ತಿರದಿಂದ ನೋಡಿದವರು. ಅವರ 5 ಮೀಟರ್ ಬಟ್ಟೆಗೆ ಆದ ಖರ್ಚು ₨ 9.27 ಲಕ್ಷ! ಇದು ಬಡಜನರ ಬಗೆಗಿನ ಅವರ ಕಾಳಜಿಯನ್ನು ಯಾವ ರೀತಿ ತೋರಿಸುತ್ತದೆ?