ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹ– ಅನರ್ಹದ ಈ ತರ್ಕ

ನಮ್ಮ ‘ಸ್ಮಾರ್ಟ್‌’ ನಗರಗಳು
Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಆಯ್ಕೆಯಾದ ದೇಶದ ನಗರಗಳ ಪಟ್ಟಿಯನ್ನು ಈಚೆಗೆ ಬಿಡುಗಡೆ ಮಾಡಿತು. ನಿರೀಕ್ಷೆಯಂತೆ ಈ ಪಟ್ಟಿಯಲ್ಲಿ ಬೆಂಗಳೂರು, ಮೈಸೂರಿನ ಹೆಸರು ಇರಲಿಲ್ಲ. ‘ಸ್ಮಾರ್ಟ್‌ ಆಗಲು’ (ಅಂದರೆ, ಹಣ ಮಾಡಿಕೊಳ್ಳಲು!) ತಮಗೆ ಅವಕಾಶ ನಿರಾಕರಿಸಲಾಯಿತು ಎಂದು ಸ್ಥಳೀಯ ರಾಜಕಾರಣಿಗಳು ಆರೋಪ–ಪ್ರತ್ಯಾರೋಪ ಆರಂಭಿಸಿದರು. ‘ಸ್ಮಾರ್ಟ್‌ ಸಿಟಿ’ ಯೋಜನೆ ಬಗ್ಗೆ ರಾಜ್ಯದ ಅಧಿಕಾರಿಗಳು, ರಾಜಕಾರಣಿಗಳ ಜೊತೆ ಚರ್ಚಿಸುವ ಅವಕಾಶ ನನಗೆ ದೊರೆತಿತ್ತು.

ತೀರ್ಮಾನ ಕೈಗೊಳ್ಳುವ ಸ್ಥಾನದಲ್ಲಿ ಕುಳಿತಿರುವ ಇವರಲ್ಲಿ ಯಾರೊಬ್ಬರೂ ‘ಸ್ಮಾರ್ಟ್‌ ಆಡಳಿತ’ದ ಪರಿಕಲ್ಪನೆಯ ಮೂಲದ ಬಗ್ಗೆ ತಿಳಿವಳಿಕೆ ಹೊಂದಿಲ್ಲ ಅನಿಸಿತು. ಜನ ಮತ್ತು ಅಧಿಕಾರಶಾಹಿ ‘ಸ್ಮಾರ್ಟ್‌’ ಆಗಿದ್ದರೆ ಮಾತ್ರ ನಗರಗಳು ‘ಸ್ಮಾರ್ಟ್‌’ ಆಗುತ್ತವೆ. ಆದರೆ, ಬೆಂಗಳೂರಿನ ಜನ, ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ‘ಸ್ಮಾರ್ಟ್‌’ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಷ್ಟು ‘ಸ್ಮಾರ್ಟ್’ ಆಗಿಲ್ಲ.

ಆಧುನಿಕ ಫೋನ್, ಟ್ಯಾಬ್ಲೆಟ್‌ಗಳನ್ನು ಬಳಸುವುದು ‘ಸ್ಮಾರ್ಟ್‌’ ಆಗುವ ಒಂದು ಬಗೆ ಎಂದು ಅವರಲ್ಲಿ ಬಹಳಷ್ಟು ಮಂದಿ ನಂಬಿದ್ದಾರೆ. ಆದರೆ, ಆಧುನಿಕ ಉಪಕರಣಗಳ ಮೇಲಿನ ಅವಲಂಬನೆ ಹೆಚ್ಚಾದಷ್ಟೂ ಮನುಷ್ಯನ ಬುದ್ಧಿವಂತಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಆಗುವುದಿಲ್ಲ ಎಂಬುದನ್ನು ಅವರು ಮರೆತಿದ್ದಾರೆ. ಬೆಂಗಳೂರಿನ ಬೆಳವಣಿಗೆ, ಅದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಐ–ಪ್ಯಾಡ್‌ಗಳನ್ನು ಬಳಸುವುದು, ಅದರಲ್ಲಿ ಸಿನಿಮಾ ನೋಡುವುದರಿಂದ ಅಧಿಕಾರಿಗಳು ‘ಸ್ಮಾರ್ಟ್‌’ ಆಗುವುದಿಲ್ಲ. ಇದರಿಂದ ಸಾರ್ವಜನಿಕರ ಹಣವನ್ನು ವೈಯಕ್ತಿಕ ಭೋಗಕ್ಕೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿದೆ. ಈ ತಂತ್ರಜ್ಞಾನ ಬಳಸಿ ಒಂದು ಪ್ರದೇಶಕ್ಕೆ ಸಂಬಂಧಿಸಿದ ಯೋಜನೆಯನ್ನು ಸಮರ್ಪಕವಾಗಿ ಮಾಡುವುದು, ಗರಿಷ್ಠ ಆಡಳಿತ ನೀಡುವುದರಿಂದ ಆ ಪ್ರದೇಶ ‘ಸ್ಮಾರ್ಟ್’ ಆಗುತ್ತದೆ.

‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಯಾವ ಅಂಶ ಆಧರಿಸಿ ನಗರಗಳನ್ನು ಆಯ್ಕೆ ಮಾಡಲಾಯಿತು, ಬೆಂಗಳೂರು ಏಕೆ ಅವಕಾಶ ವಂಚಿತವಾಯಿತು ಎಂಬುದನ್ನು ಗಮನಿಸೋಣ. ಜನರ ಸಹಭಾಗಿತ್ವದಲ್ಲಿ, ಪರಿಣಾಮಕಾರಿ ಆಡಳಿತ ವ್ಯವಸ್ಥೆ ರೂಪಿಸಿಕೊಂಡು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ನಗರದ ಮತ್ತು ಸಮಾಜದ ಬೆಳವಣಿಗೆಗೆ ಬಳಸಿಕೊಳ್ಳಬೇಕು. ನಾಗರಿಕರಿಗೆ ನೀಡುವ ಸೇವೆಗಳನ್ನು ಉತ್ತಮಪಡಿಸಲು ಸುಸ್ಥಿರ ಆರ್ಥಿಕ ಬೆಳವಣಿಗೆ, ಅಗತ್ಯ ಮೂಲ ಸೌಕರ್ಯ ಇರಬೇಕು. ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ, ನೀರಿನ ಸಂಪರ್ಕ, ವಿದ್ಯುತ್‌ ಪೂರೈಕೆ ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

‘ಸ್ಮಾರ್ಟ್‌’ ಪಟ್ಟಿಯಿಂದ ಬೆಂಗಳೂರು ಹೊರಗುಳಿಯಲು ಕಾರಣ ಏನಿರಬಹುದು?:
1. ನಗರ ಯೋಜನೆಗಳಲ್ಲಿ ದೂರದೃಷ್ಟಿ ಕೊರತೆ: ಜನರಿಗೆ ಶುದ್ಧ ಗಾಳಿ, ಕುಡಿಯುವ ನೀರು, ಇಂಧನ, ಜಾಗ ಮತ್ತು ಸುಸ್ಥಿರ ಜೀವನೋಪಾಯ ಕಲ್ಪಿಸುವುದು 21ನೇ ಶತಮಾನದ ದೊಡ್ಡ ಸವಾಲು. ಜಾಗತೀಕರಣದ ನಂತರದ ದಿನಗಳಲ್ಲಿ ಬೆಂಗಳೂರಿನಂತಹ ಪ್ರದೇಶಗಳಲ್ಲಿ ಕಂಡುಬಂದ ತೀವ್ರಗತಿಯ ನಗರೀಕರಣ, ಆಳುವ ವರ್ಗದ ಎದುರು ದೊಡ್ಡ ಸವಾಲನ್ನು ತಂದಿಟ್ಟಿದೆ. ಮೂಲಸೌಕರ್ಯ ಅಭಿವೃದ್ಧಿ, ಸಂಚಾರ ದಟ್ಟಣೆ, ಪರಿಸರ ಮಾಲಿನ್ಯ ಹೆಚ್ಚಳ, ವಿದ್ಯುತ್‌ ಮತ್ತು ನೀರು ಪೂರೈಕೆಯ ಸವಾಲುಗಳನ್ನು ಅವರು ಎದುರಿಸಬೇಕಿದೆ.

ಇದಲ್ಲದೆ, ನಗರೀಕರಣವು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದೆ. ನಗರದ ಶೇಕಡ 78ರಷ್ಟು ಹಸಿರು ಹೊದಿಕೆ ಮಾಯವಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ನಗರದಲ್ಲಿ 95 ಲಕ್ಷ ಜನರಿಗೆ 15 ಲಕ್ಷ ಮರಗಳಿವೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಅಂದರೆ, ಇಲ್ಲಿ ಏಳು ಜನರಿಗೆ ಒಂದು ಮರ ಇದೆ. ಮನುಷ್ಯ ಉಸಿರಾಡಿ ಬಿಟ್ಟ ಇಂಗಾಲದ ಡೈ ಆಕ್ಸೈಡ್ ಮಾತ್ರವನ್ನೇ ಹೀರಿಕೊಳ್ಳಲು ಕೂಡ ಇವು ಸಾಲವು. ಈ ಕೆಲಸಕ್ಕೆ ಒಬ್ಬ ಮನುಷ್ಯ ಇರುವಲ್ಲಿ ಎಂಟು ಮರಗಳು ಇರಬೇಕು. ಉದ್ಯಾನ, ಕೆರೆ ಜಾಗಗಳನ್ನು ವಸತಿ ಮತ್ತು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸಿದ ಕಾರಣ ನಗರದ ಬೇರೆ ಬೇರೆ ಭೂಪ್ರದೇಶಗಳ ನಡುವೆ ಸಾವಯವ ಸಂಪರ್ಕವೇ ಇಲ್ಲದಂತಾಗಿದೆ. ಕಾಲುವೆಗಳ ಒತ್ತುವರಿ, ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೆಚ್ಚಿರುವುದು, ಹಸಿರು ಹೊದಿಕೆ ಮಾಯವಾಗಿರುವುದು… ಈ ಎಲ್ಲ ಕಾರಣಗಳಿಂದಾಗಿ 2000ನೇ ಇಸವಿಯ ನಂತರದ ದಿನಗಳಲ್ಲಿ ನಗರದಲ್ಲಿ ಸಾಧಾರಣ ಮಳೆಯಾದರೂ ರಸ್ತೆಗಳಲ್ಲಿ ಪ್ರವಾಹ ಬಂದಂತೆ ಇರುತ್ತದೆ.

ಜಲಮೂಲಗಳ ಒತ್ತುವರಿ ಕಾರಣ ಅಂತರ್ಜಲದ ಮಟ್ಟ ಕುಸಿದಿದೆ. 20 ವರ್ಷಗಳ ಹಿಂದೆ 28 ಅಡಿಯಲ್ಲಿ ಇದ್ದ ಅಂತರ್ಜಲ ಇಂದು ಹತ್ತಾರು ಮೀಟರ್‌ಗಳಿಗೆ ಕುಸಿದಿದೆ. ಕೆರೆಗಳ ಒತ್ತುವರಿ, ಅದರ ಸುತ್ತಲಿನ ಜಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವುದು ಇದಕ್ಕೆ ಕಾರಣ. ಅತ್ಯಂತ ಹೆಚ್ಚು ನಗರೀಕರಣಕ್ಕೆ ಒಳಗಾದ ವೈಟ್‌ಫೀಲ್ಡ್‌ನಂತಹ  ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ 400ರಿಂದ 500 ಮೀಟರ್‌ಗಳವರೆಗೂ ಕುಸಿದಿದೆ. ಮನುಷ್ಯ ನಡೆಸುವ ಚಟುವಟಿಕೆಗಳಿಂದಾಗಿ ಭೂಮಿಯ ಮೇಲ್ಮೈ ಮತ್ತು ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗುತ್ತದೆ. ಇಂಧನ ಬಳಕೆ, ವಿದ್ಯುತ್ ವಾಹಕ ಗುಣ ಇರುವ ವಸ್ತುಗಳಿಂದ ಭೂಮಿಯ ಮೇಲ್ಮೈ ಮುಚ್ಚಿಹೋಗುತ್ತಿರುವುದು, ಹಸಿರಿನ ಹೊದಿಕೆ ಮಾಯವಾಗುತ್ತಿರುವುದು ಮತ್ತು ನೀರಿನ ಮೂಲಗಳು ಕಾಣೆಯಾಗುತ್ತಿರುವುದು ಉಷ್ಣಾಂಶ ಹೆಚ್ಚಳಕ್ಕೆ ಕಾರಣ.

ಕೆಲವು ವಾರ್ಡುಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಶೈಲಿ ಸರಿಯಾಗಿಲ್ಲದ ಕಾರಣ, ಅವುಗಳಲ್ಲಿ ಬಳಕೆಯಾಗುವ ವಿದ್ಯುತ್ತಿನ ಪ್ರಮಾಣ ಕೂಡ ಹೆಚ್ಚಿದೆ. ಬೆಂಗಳೂರಿನ ಹವಾಮಾನಕ್ಕೆ ಸೂಕ್ತವೇ ಅಲ್ಲದ ರೀತಿಯಲ್ಲಿ ಕೆಲವು ಕಟ್ಟಡಗಳ ವಿನ್ಯಾಸ ಆಗಿರುವ ಕಾರಣ, ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕೂಡ ಏರುತ್ತಿದೆ. ಗಾಜಿನ ಹೊದಿಕೆ ಇರುವ ಕಟ್ಟಡಗಳು ಹೆಚ್ಚಿರುವೆಡೆ ಪ್ರತಿ ವ್ಯಕ್ತಿ ಒಂದು ವರ್ಷದಲ್ಲಿ 14 ಸಾವಿರದಿಂದ 17 ಸಾವಿರ ಯುನಿಟ್‍ ವಿದ್ಯುತ್ ಬಳಸುತ್ತಿದ್ದಾನೆ. ಪರಿಸರಸ್ನೇಹಿ ಕಟ್ಟಡಗಳಿರುವ ಪ್ರದೇಶಗಳಲ್ಲಿ ಒಬ್ಬರಿಗೆ ವರ್ಷದಲ್ಲಿ 1,300ರಿಂದ 1,500 ಯುನಿಟ್ ವಿದ್ಯುತ್ ಸಿಕ್ಕರೆ ಸಾಕು. ಖಾಸಗಿ ವಾಹನ, ಇಂಧನ ಬಳಕೆ ಹೆಚ್ಚಿರುವುದು, ಸಂಚಾರ ದಟ್ಟಣೆ ಕಾರಣ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಕೂಡ ಹೆಚ್ಚಿದೆ. ಸರಿಯಾಗಿ ತ್ಯಾಜ್ಯ ವನ್ನು ನಿರ್ವಹಣೆ ಮಾಡದೆಇರುವುದೂ ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ.

2. ಜೆ-ನರ್ಮ್‌ನಂತಹ ಯೋಜನೆಗಳಡಿ ಬಿಡುಗಡೆಯಾದ ಹಣದ ದುರ್ಬಳಕೆ: ಸಮಾಜದ ಅವಶ್ಯಕತೆಪೂರೈಸುವುದಕ್ಕಿಂತ ಅನುದಾನ ಖರ್ಚು ಮಾಡುವ ಉದ್ದೇಶದಿಂದ ಕೆಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು. ಉದಾಹರಣೆಗೆ, ಭಾರತೀಯ ವಿಜ್ಞಾನ ಸಂಸ್ಥೆ ಎದುರಿನ ಅಂಡರ್‌ಪಾಸ್‍. ಇದನ್ನು  ನಿರ್ಮಿಸಿದ ನಂತರ, ರಸ್ತೆ ದಾಟುವುದೇ  ಸವಾಲಿನಂತೆ ಆಗಿದೆ. ಮೂಲಸೌಕರ್ಯ ಕಲ್ಪಿಸುವ ಮುನ್ನ ಸರಿಯಾಗಿ ಯೋಚಿಸುತ್ತಿಲ್ಲ ಎಂಬುದನ್ನು ಇದು ತೋರಿಸುತ್ತಿದೆ.

3. ಅಂಬುಲೆನ್ಸ್ ಸಾಗಲು ಸೂಕ್ತ ಅವಕಾಶ ಕಲ್ಪಿಸಲು ವಿಫಲವಾಗಿರುವುದು: ಇದರಿಂದ ನಮ್ಮ ಆಡಳಿತ ವ್ಯವಸ್ಥೆ ಸಂಚಾರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ‘ಸ್ಮಾರ್ಟ್‌’ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ಕಳೆದ ಎರಡೂವರೆ ದಶಕಗಳಿಂದ ಆಗಿರುವ ದುರ್ಬಲ ನಗರೀಕರಣದ ಪರಿಣಾಮಗಳ  ಅವಲೋಕನಕ್ಕೆ ಇದು ಸಕಾಲ. ಕೇಂದ್ರೀಕೃತ ಅಭಿವೃದ್ಧಿಯ ಬದಲು ಅಭಿವೃದ್ಧಿಯ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಬೇಕು. ಆಡಳಿತದ ಎಲ್ಲ ವಿಭಾಗಗಳ ಸಹಕಾರ, ಸಂಪನ್ಮೂಲಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಈಗಿರುವ ಬಿಬಿಎಂಪಿಯಿಂದ ಬೆಂಗಳೂರನ್ನು ‘ಸ್ಮಾರ್ಟ್ ಸಿಟಿ’ ಆಗಿ ಪರಿವರ್ತಿಸಲು ಸಾಧ್ಯವಿಲ್ಲ. ಬೆಂಗಳೂರಿನ ಆಡಳಿತವನ್ನು ಮೂರಾಗಿ ವಿಭಜಿಸಬೇಕು.

ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲೇಬೇಕಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಾಗಿಲು ಮುಚ್ಚಿಸಬೇಕಿದೆ. ಬೆಂಗಳೂರಿನ ಆಡಳಿತ ಸರಿಯಾಗಿ ಆಗದಿರಲು ಬಿಡಿಎ ಒತ್ತಾಸೆಯಾಗಿ ನಿಂತಿದೆ. ಉದ್ಯಾನ ನಗರಿ ಆಗಿದ್ದ ಬೆಂಗಳೂರು ಬಿಡಿಎ ಅವಧಿಯಲ್ಲೇ ಸತ್ತ ನಗರವಾಗಿ ಪರಿವರ್ತನೆ ಆಗಿದೆ. ಯೋಜನೆಗಳನ್ನು ಸರಿಯಾಗಿ ರೂಪಿಸದ ಬಿಡಿಎ ಬೆಂಗಳೂರಿಗರ ಇಂದಿನ ಸಮಸ್ಯೆಗಳಿಗೆ ಕಾರಣ. ಗಣಕೀಕೃತ ಭೂ ದಾಖಲೆ ಜನರಿಗೆ ಲಭ್ಯ ಆಗುವಂತೆ ಮಾಡಬೇಕು. ಗಗನಚುಂಬಿ ಕಟ್ಟಡಗಳಿಗೆ ಮಿತಿ ಹೇರಬೇಕು. ಕಣಿವೆ ಪ್ರದೇಶಗಳನ್ನು ‘ಅಭಿವೃದ್ಧಿ ಚಟುವಟಿಕೆ ಮುಕ್ತ ವಲಯ’ ಎಂದು ಘೋಷಿಸಬೇಕು. ರಾಜಾ ಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿಕೊಂಡ ಎಲ್ಲರನ್ನೂ ಒಕ್ಕಲೆಬ್ಬಿಸಬೇಕು. ಕೆರೆಗಳ ನಡುವಿನ ಸಂಪರ್ಕಗಳನ್ನು ಪುನರ್ ಸ್ಥಾಪಿಸಬೇಕು. ಆಗ ‘ಸ್ಮಾರ್ಟ್‌ ಸಿಟಿ’ ಆಗುವ ಎಲ್ಲ ಅರ್ಹತೆಯೂ ಬೆಂಗಳೂರಿಗೆ ಬರುತ್ತದೆ.
*
ಮೌಲ್ಯಮಾಪನ
ಆಯ್ಕೆ ಮಾನದಂಡದಲ್ಲಿ ನಮ್ಮ ನಗರಗಳು ಪಡೆದ ಅಂಕ
ಮಂಗಳೂರು, ಬೆಳಗಾವಿ, ಶಿವಮೊಗ್ಗ: ತಲಾ 96.88%
ತುಮಕೂರು, ಹುಬ್ಬಳ್ಳಿ– ಧಾರವಾಡ: ತಲಾ 87.5%
ದಾವಣಗೆರೆ: 85%
ಕಲಬುರ್ಗಿ: 84.38%
ಮೈಸೂರು: 77.5%
ಬೆಂಗಳೂರು: 72.5%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT