ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಲಿ ಬಣ್ಣ ಜಾಹೀರಾಯ್ತು

ಜಾಹೀರಾತು ಫಲಕ ನಿಷೇಧದ ಸುತ್ತಮುತ್ತ
Last Updated 6 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ರಾಜ್ಯದ ರಾಜಧಾನಿಯಲ್ಲಿ ಎಲ್ಲ ಬಗೆಯ ಜಾಹೀರಾತು ಫಲಕಗಳನ್ನೂ ನಿಷೇಧಿ­ಸಲು ಬೃಹತ್‌ ಬೆಂಗಳೂರು ಮಹಾನಗರ­ಪಾಲಿಕೆ

(ಬಿಬಿಎಂಪಿ) ಮುಂದಾಗಿದೆ.  ಪಾಲಿಕೆಯು ಪ್ರಸಕ್ತ ಅಧಿಕಾರಾವಧಿ ಮುಗಿ­ಯಲು ಕೆಲವೇ ದಿನ ಬಾಕಿ ಉಳಿದಿರುವಾಗ ಇಂತಹ ಕಟ್ಟು­ನಿಟ್ಟಿನ ಕ್ರಮಕ್ಕೆ ನಿರ್ಧರಿಸಿದೆ. ಆದರೆ ಇಷ್ಟು ವರ್ಷಗಳ ಕಾಲ ಕಾನೂನು ಉಲ್ಲಂಘಿ­ಸುತ್ತಾ ನಗರದ ಅಂದ­ಗೆಡಿಸು­ತ್ತಿದ್ದ ಬಹುತೇಕ ಅನಧಿಕೃತ ಫಲಕಗಳು ಸ್ವತಃ ಬಿಬಿಎಂಪಿ ಸದಸ್ಯರಿಗೇ (ಅಥವಾ ಅವರ ಬೆಂಬಲಿಗರಿಗೆ) ಸೇರಿದ್ದವು. ಈಗ ಈ ಬಗೆಯ ನಿರ್ಣಯ ಹೊರಬಿದ್ದಿರುವುದು ‘ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಎಂಬಂತೆ ವ್ಯಂಗ್ಯವಾಗಿ ಕಾಣುತ್ತದೆ. ಆದರೂ ಕಾನೂನು ಮತ್ತು ನಗರದ ಸೌಂದರ್ಯಕ್ಕೆ ಸಂಬಂಧಿಸಿದ ಕಾಳಜಿ ಈಗಲಾದರೂ ಮೂಡಿದಂತಿದೆ.

‘ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪ ತಡೆ) ಕಾಯ್ದೆ- 1981’ ಅನಧಿಕೃತ ಜಾಹೀರಾತುಗಳಿಂದ ಆಗುವ ವಿರೂಪಕ್ಕೆ ತಡೆ ಒಡ್ಡುತ್ತದೆಯೇ ಹೊರತು ಫಲಕಗಳ ಮೇಲೇ ನಿಷೇಧ ಹೇರುವುದಿಲ್ಲ. ವಾಸ್ತವದಲ್ಲಿ, ಜಾಹೀರಾತುಗಳಿಂದ ನೂರಾರು ಕೋಟಿ ರೂಪಾಯಿ ಆದಾಯ ಸಂಗ್ರಹಿಸಬಹುದಾದ  ಪಾಲಿಕೆಯು ಕಾನೂನು ಜಾರಿ ಮಾಡಲಾಗದ ತನ್ನ ಅಸಾಮರ್ಥ್ಯ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗದ ಅಸಹಾಯಕತೆಯಿಂದಾಗಿ ಕೇವಲ ರೂ. 20 ಕೋಟಿ  ಸಂಗ್ರಹಿಸುತ್ತಿದೆ. ಅದರಲ್ಲಿ, ಅನಧಿಕೃತ ಫಲಕಗಳನ್ನು ತೆರವುಗೊಳಿಸುವುದಕ್ಕೇ ಕೋಟ್ಯಂತರ ರೂಪಾಯಿಯನ್ನು ಮರು ವಿನಿಯೋಗಿಸುತ್ತಿದೆ. ಹೀಗಾಗಿ ನಿಷೇಧವನ್ನು ಜಾರಿಗೆ ತರುವ ಮುನ್ನ ಅದು ಈಗಾಗಲೇ ಅನಧಿಕೃತ ಜಾಹೀರಾತು ಫಲಕಗಳನ್ನು ಹಾಕಿ ನಿಯಮ ಉಲ್ಲಂಘನೆ ಮಾಡಿರುವವರನ್ನು ಮುಕ್ತವಾಗಿ ಬಿಡದೆ, ಸೂಕ್ತ ದಂಡ ವಸೂಲಿ ಮಾಡಬೇಕು.

ಕೆಟ್ಟದಾದ, ನಗರದ ಅಂದಗೆಡಿಸುವ, ಯಾವುದೇ ಸಮಾಜ ಸೇವೆಯ ಉದ್ದೇಶ ಇಲ್ಲದ ಅಥವಾ ನಾಗರಿಕರಿಗೆ ಲಾಭ ತಂದುಕೊಡದ

ಫಲಕಗಳು, ಫ್ಲೆಕ್‌್ಸಗಳು, ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳ ನಿಷೇಧ ಎಲ್ಲ ದೃಷ್ಟಿಯಿಂದಲೂ ಸ್ವಾಗತಾರ್ಹ. ತಮ್ಮ ಊರಿನ ಸೌಂದರ್ಯಕ್ಕೆ ಬೆಲೆ ಕೊಡುವ ಕೆಲವು ನಗರಗಳಲ್ಲಿ ಈಗಾಗಲೇ ಇಂತಹ ನಿಷೇಧ ಜಾರಿಯಲ್ಲಿದೆ. ಇಂತಹ ಕ್ರಮದಿಂದ ಪಾಲಿಕೆಗೆ ನಷ್ಟವಾಗುತ್ತದೆ ಎನ್ನುವು­ದಾದರೆ, ಜಾಹೀರಾತು ಮೂಲದಿಂದ ಬರುವ ಆದಾಯವನ್ನು ಅದು ಶ್ರಮವಹಿಸಿ ಸಂಗ್ರಹಿಸುತ್ತದೆ ಮತ್ತು ಅದನ್ನು ವಿವೇಚನಾ­ಯುತವಾಗಿ ಹಾಗೂ ಪ್ರಾಮಾಣಿಕವಾಗಿ ಬಳಸಿ­ಕೊಳ್ಳುತ್ತದೆ ಎನ್ನುವುದಕ್ಕೆ ಪುರಾವೆ ಎಲ್ಲಿದೆ? ಈ ಆದಾಯ ಸಾರ್ವಜನಿಕರ ಒಳಿತಿಗೆ ಬಳಕೆಯಾಗದೆ ಸೋರಿಕೆ­ಯಾಗುವ ಸಂಭವವೇ ಹೆಚ್ಚು.

ಈ ಸಮಸ್ಯೆಯ ಇನ್ನೊಂದು ಮುಖ­ವನ್ನು ನೋಡುವು­ದಾ­ದರೆ, ಜಾಹೀರಾತು­ಫಲಕಗಳ ಮೇಲೆ ಸಂಪೂರ್ಣ ನಿಷೇಧ ಹೇರಿರು­ವುದರಿಂದ ಹಲವು ಜಾಹೀರಾತು ಕಂಪೆನಿಗಳು ಮತ್ತು ಅವುಗಳ ಉದ್ಯೋಗಿ­ಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದರೆ ಪರ್ಯಾಯ ಮಾರ್ಗೋಪಾಯಗಳ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಸಾರ್ವಜನಿಕರ ಒಳಿತಿಗೆ ಪೂರಕವಾಗುವ ನಾಗರಿಕ ಸವಲತ್ತುಗಳಿಗೆ ಸಂಬಂಧಿಸಿದ ಜಾಹೀ­ರಾತುಗಳನ್ನು ಪ್ರಾಯೋಜಿ­ಸುವ ಕಂಪೆನಿಗಳಿಗೆ ಅವಕಾಶ ನೀಡಿ, ಆ ಮೂಲಕ ಸಮಸ್ಯೆಯನ್ನು ಬಗೆಹರಿಸ­ಬಹುದು. ಇದರಿಂದ ನಾಗರಿ­ಕರು ಮತ್ತು ಕಂಪೆನಿ­ಗಳು ಇಬ್ಬರಿಗೂ ಲಾಭವಾಗುತ್ತದೆ. ಅಳತೆಗೆ ಸಂಬಂ­ಧಿಸಿ­ದಂತೆ ಕಟ್ಟುನಿಟ್ಟಿನ ನಿಯಮ ಮತ್ತು ಮಿತಿಯನ್ನು ಒಳಗೊಂಡ ಜಾಹೀರಾತು­ಗಳನ್ನು ಬಸ್‌ ನಿಲ್ದಾಣ­ಗಳು, ಶೌಚಾಲಯಗಳು, ಟ್ರೀ ಗಾರ್ಡ್‌ಗಳು, ಉದ್ಯಾನಗಳು, ಆಟದ ಮೈದಾನ ಇತ್ಯಾದಿಗಳಲ್ಲಿ ಅಳವಡಿ­ಸಲು ಅವಕಾಶ ನೀಡಿ, ಅದನ್ನು ಜನೋಪಯೋಗಿ ಮಾಹಿತಿಗಾಗಿ  ಬಳಸಿಕೊಳ್ಳ­ಬಹುದು. ಸಾರ್ವಜನಿಕ ಬಳಕೆಯ ಈ ಸೌಲಭ್ಯ­ಗಳನ್ನು ಕಂಪೆನಿ­ಗಳೇ ನಿರ್ಮಿಸಿ, ಅಲ್ಲಿ ಅಳವಡಿಸುವ ಜಾಹೀರಾತುಗಳನ್ನು ಪ್ರಾಯೋಜಿಸಿ ನಿರ್ವಹಿಸು­ವಂತೆ ಆಗಬೇಕು.

ಈಗಿರುವ ಬಸ್‌ ನಿಲ್ದಾಣಗಳು ಬರೀ ಜಾಹೀರಾತುಗಳಿಂದ ತುಂಬಿ­ಹೋಗಿ­­ರುತ್ತವೆ. ಅಲ್ಲಿ ನಾಗರಿಕರಿಗೆ ಅನುಕೂಲ­ವಾಗುವಂತಹ ಬಸ್‌ ಮಾರ್ಗ ಅಥವಾ ಸಂಚಾರ ಸಮಯದ ಬಗ್ಗೆ ಸೂಕ್ತ ಮಾಹಿತಿ ಲಭ್ಯ­ವಾಗು­ವುದಿಲ್ಲ. ಇದರಿಂದ ಪಾಲಿಕೆಯು ಹಣಕಾಸು ಸಮಸ್ಯೆ­ಯಿಂದ ನಾಗರಿಕ­ರಿಗೆ ಒದಗಿಸಲು ಸಾಧ್ಯ­ವಾಗದೇ ಇರಬಹು­ದಾದ, ಆದರೆ ಅತ್ಯಗತ್ಯ­ವಾದ ಸೇವೆಯನ್ನು ಒದಗಿಸಿದಂತೆಯೂ ಆಗುತ್ತದೆ.

ಆದರೆ ಇಲ್ಲಿ ಇದಕ್ಕೆ ಬದಲಾಗಿ ಕಂಪೆನಿ ನೀಡುವ ಪ್ರತಿಫಲವು ‘ಹಣ’ದ ಬದಲಿಗೆ ‘ಮಾಹಿತಿ ಸೇವೆ’ಯ ರೂಪದಲ್ಲಿ ಇರುತ್ತದೆ. ಹೀಗಾಗಿ ಜಾಹೀರಾತು ಆದಾಯವು  ನಾಗರಿಕರ ಉಪಯೋಗಕ್ಕೆ ಲಭ್ಯವಾಗದೆ ಬಿಬಿಎಂಪಿಗೆ ಸೇರಿದ ಯಾರದೋ ಜೇಬು ಸೇರುವುದು ತಪ್ಪುತ್ತದೆ.
ಜಾಹೀರಾತು ಕಂಪೆನಿ­ಗಳು ಎಲ್ಲ ವಾರ್ಡುಗಳ ನಿಗದಿತ ಮತ್ತು ನಿಯಂತ್ರಿತ ಸ್ಥಳಗಳಲ್ಲಿ ಮಾಹಿತಿ ಫಲಕ­ಗಳನ್ನು ಪ್ರದರ್ಶಿಸಿ ನಾಗರಿಕ­ರಿಗೆ ಉಪಯುಕ್ತ­ವಾಗುವ ಸಂದೇಶ­ಗಳನ್ನು ಪ್ರಚುರ­ಪಡಿಸಬಹುದು.

ಉದಾಹರಣೆಗೆ ತ್ಯಾಜ್ಯ ವಿಂಗಡಣೆ, ಮಳೆ ನೀರು ಸಂಗ್ರಹ ವ್ಯವಸ್ಥೆ, ಸೌರ ವಿದ್ಯುತ್‌ ಹೀಟರ್‌ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ನೀಡಬಹುದು. ಆಯಾ ವಾರ್ಡ್‌ನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಆದಾಯ ತೆರಿಗೆ ಬಾಕಿ, ಮತದಾರರ ಪಟ್ಟಿ ಪರಿಷ್ಕರಣೆ,   ಪಡಿತರ ಚೀಟಿ ವಿತರಣೆ, ಕುಂದುಕೊರತೆ ಸಭೆ ಅಥವಾ ವಾರ್ಡ್‌ ಸಮಿತಿ ಸಭೆ ನಿಗದಿಯಾಗಿರುವ ದಿನಾಂಕದಂತಹ ಮಾಹಿತಿಗಳನ್ನೂ ಈ ಫಲಕಗಳು ಒಳಗೊಳ್ಳ­ಬಹುದು. ಈ ಬಗೆಯ ಫಲಕಗಳಲ್ಲಿ ಕಂಪೆನಿಗಳು ಸ್ವಲ್ಪ ಸ್ಥಳವನ್ನು ತಮ್ಮ ಉತ್ಪನ್ನಗಳ ಜಾಹೀರಾತಿ­ಗಾಗಿ ಬಳಸಿಕೊಳ್ಳಬಹುದು.

ಇಂತಹ ವ್ಯವಸ್ಥೆ ಜಾರಿಗೆ ಬಂದರೆ, ಹಬ್ಬ­ಹರಿದಿನಗಳು ಮುಗಿದು ತಿಂಗಳಾನುಗಟ್ಟಲೆ ಕಳೆದರೂ ತೆಗೆದು­ಹಾಕದ ‘ಹೊಸ ವರ್ಷದ ಶುಭಾಶಯ’,  ‘ಕ್ರಿಸ್‌ಮಸ್‌ ಶುಭಾಶಯ’ ‘ಈದ್‌ ಮುಬಾರಕ್‌’ ಕೋರುವಂತಹ ಫಲಕಗಳನ್ನು ಜನ ದಿನನಿತ್ಯ ನೋಡುವುದು ತಪ್ಪುತ್ತದೆ. ವಿವಿಧ ಮುಖಂಡರು ಹಾಗೂ ಭಾವಿ ನಾಯಕರು ಇಂತಹ ಫಲಕಗಳ ಮೂಲಕ ತೆರಿಗೆದಾರರ ಹಣದಲ್ಲಿ ಉಚಿತ­ವಾಗಿ ಪ್ರಚಾರ ಪಡೆಯು­ವು­ದನ್ನು ತಪ್ಪಿಸಲು ಸಾಧ್ಯ­ವಾಗುವು­ದಾದರೆ, ಅದು ನಿಜಕ್ಕೂ ಒಳ್ಳೆಯ ಸಂಗತಿ.

ಈ ಫಲಕ­ಗಳಂತೂ ಪೊಲೀಸ್‌ ಠಾಣೆ­ಗಳಲ್ಲಿ ಕಾಣುವ ‘ಬೇಕಾಗಿದ್ದಾರೆ’ ಪೋಸ್ಟರ್‌­ಗಳಂ­ತೆಯೇ ಕಣ್ಣಿಗೆ ರಾಚುತ್ತಿರುತ್ತವೆ!
ಜೊತೆಗೆ ತಮ್ಮ ರಾಜಕೀಯ ನಾಯಕರ ಓಲೈಕೆಗಾಗಿ ‘ಆದರದ ಸ್ವಾಗತ’, ‘ಹುಟ್ಟಿದ ಹಬ್ಬದ ಶುಭಾಶಯ’ ಕೋರುವಂತಹ ಫಲಕ­ಗಳನ್ನೂ ಎಲ್ಲರೂ ನೋಡಲೇಬೇಕಾದ ಅನಿವಾರ್ಯ­ದಿಂ­ದಲೂ ಪಾರಾಗ­ಬಹುದು.

(ಲೇಖಕರು ‘ಸಿವಿಕ್‌ ಬೆಂಗಳೂರು’ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT