ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತದ ಮಹತ್ವ

Last Updated 24 ಮೇ 2013, 20:00 IST
ಅಕ್ಷರ ಗಾತ್ರ

ಒಟ್ಟು ಕರ್ನಾಟಕದ ಶಿಕ್ಷಣ ಚಿತ್ರಣವನ್ನು ನೋಡುವಾಗ, ಈಶಾನ್ಯ ಕರ್ನಾಟಕ ನಮ್ಮ ಗಮನ ಸೆಳೆಯುತ್ತದೆ. ನಾನು ನೋಡಿದ ಹಾಗೆ ಈ  ಪ್ರದೇಶದ ಶೈಕ್ಷಣಿಕ ಬೆಳವಣಿಗೆ ಬಗ್ಗೆ ನಾವು ತುಂಬಾ ಗಂಭೀರವಾಗಿ ತಕ್ಷಣ ಕೆಲಸ ಮಾಡಬೇಕಾದ ಕ್ಷೇತ್ರಗಳು ಈ ಕೆಳಗಿನಂತಿವೆ.
ಮಕ್ಕಳ ಬೆಳವಣಿಗೆ: ಇದು ನಮ್ಮ ಸರ್ಕಾರ  ತುಂಬಾ ವ್ಯವಸ್ಥಿತವಾಗಿ ಕೆಲಸ ಕೈಗೊಳ್ಳಬೇಕಾದ ಒಂದು ಮಹತ್ವಪೂರ್ಣವಾದ ಕ್ಷೇತ್ರ. ಇಲ್ಲಿ ತುಂಬಾ ಸರಳವಾದ ಎರಡು ವಿಚಾರಗಳನ್ನು ಹೇಳಲು ಬಯಸುತ್ತೇನೆ.

1. ನಲಿ ಕಲಿ ಅನುಷ್ಠಾನ
2. ಬಿಸಿ ಊಟದ ವ್ಯವಸ್ಥೆ

ನಲಿ ಕಲಿ ವಿಧಾನ
ನಾವು ನೋಡಿದ ಹಾಗೆ ಸದ್ಯದ ಮಟ್ಟಿಗೆ `ನಲಿಕಲಿ' ವಿಧಾನದಲ್ಲಿ ಕಲಿತ ಪ್ರಾಥಮಿಕ ಮಕ್ಕಳಲ್ಲಿ ಸಹಜವಾಗಿ ಒಳ್ಳೆಯ ಬೆಳವಣಿಗೆ ನೋಡಿದ್ದೇವೆ. ಯಾದಗಿರಿ ಜಿಲ್ಲೆಯ ಸುರಪುರ ಬ್ಲಾಕ್‌ನಲ್ಲಿ ಸರ್ಕಾರಿ ಶಾಲೆಗಳಲ್ಲಿ `ನಲಿಕಲಿ' ತುಂಬಾ ಚೆನ್ನಾಗಿ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದು ನಮಗೆ ಕಾಣುತ್ತಿದೆ. ನಿರಂತರ ಎರಡು ವರುಷ ಶಾಲೆಗೆ ಬಂದ ಮಕ್ಕಳು ಸ್ವತಂತ್ರವಾಗಿ ಓದುವಾಗ ನಮಗೆ ತುಂಬಾ ಖುಷಿಯಾಗುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಕ್ಕಳು ನಮ್ಮ ಹತ್ತಿರ ಬಂದು ಧೈರ್ಯವಾಗಿ ಆತ್ಮವಿಶ್ವಾಸದಿಂದ ಮಾತಾಡುವಾಗ ನಮಗೆ ಹೆಮ್ಮೆಯಾಗುತ್ತದೆ. ಇದು ಹೇಗೆ ಆಯಿತು ಎಂದು ಅಲ್ಲಿ ಶಿಕ್ಷಕರಲ್ಲಿ ಕೇಳಿದಾಗ ಅವರು ನೀಡುವ ಉತ್ತರ : `ನಮಗೆ ಈ ಯಶಸ್ಸಿಗೆ ಎರಡು ವಿಷಯ ತುಂಬಾ ಮುಖ್ಯ ಅನಿಸುತ್ತದೆ. ಒಂದು, ನಮಗೆ ಶಿಕ್ಷಣ ಅಧಿಕಾರಿಗಳು ಹಾಗೂ ಇತರರು ನೀಡುವ ಶಾಲಾ ಮಟ್ಟದ ಸಹಾಯ. ಎರಡು, ಪ್ರತಿ ತಿಂಗಳು ನಿಯಮಿತವಾಗಿ ನಡೆಯುವ ಶಿಕ್ಷಕರ ಸಮಾಲೋಚನ ಸಭೆ'. ಹೆಚ್ಚಿನ ಶಿಕ್ಷಕರು, `ನಲಿಕಲಿ' ಒಂದು ಮತ್ತು ಎರಡನೇ ತರಗತಿಗಳಿಗೆ ತುಂಬಾ ಚೆನ್ನಾಗಿ ನಡೆಯಿತು, ಮೂರಕ್ಕೆ ಅದನ್ನು ವಿಸ್ತರಿಸಿದಾಗ ಸಮಸ್ಯೆ ಆಯಿತು, ಇದನ್ನು ಸರ್ಕಾರ ಸರಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಬಿಸಿ ಊಟ
ಎಲ್ಲಾ ಶಾಲೆಯಲ್ಲೂ ಬಿಸಿ ಊಟ ಸಾಧಾರಣವಾಗಿ ಇರುತ್ತದೆ. ಬಿಸಿ ಊಟದ ಗುಣಮಟ್ಟವನ್ನು ಇನ್ನೂ ಚೆನ್ನಾಗಿ ಮಾಡಬೇಕಾದ ಅಗತ್ಯ ಇದೆ. ಇದರಲ್ಲಿ ಹೆಚ್ಚಿನ ಧಾನ್ಯಗಳು ತರಕಾರಿಗಳನ್ನು ಮಕ್ಕಳಿಗೆ ನೀಡಬೇಕಾಗಿದೆ. ನೆರೆ ರಾಜ್ಯಗಳಲ್ಲಿ ನೀಡುವ ಹಾಗೆ ಮೊಟ್ಟೆ, ಹಾಲು ಮತ್ತು ಬಾಳೆಹಣ್ಣು ಮಕ್ಕಳಿಗೆ ನೀಡಬೇಕಾಗಿದೆ. ಬಿಸಿ ಊಟದ ನಿರ್ವಹಣೆಯಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಬೇಕಾಗಿದೆ. ಪಾಲಕರನ್ನು ಬಿಸಿ ಊಟದ ಸಹಾಯಕ್ಕೆ ಸೇರಿಸಿಕೊಂಡರೆ ಅನೇಕ ಸಮಸ್ಯೆಗಳನ್ನು ಸಲೀಸಾಗಿ ಬಗೆಹರಿಸಬಹುದು.

ಶಿಕ್ಷಕರ ತರಬೇತಿಗೆ ಸರ್ವ ಶಿಕ್ಷಣ ಅಭಿಯಾನದ ಸಹಾಯಧನದಲ್ಲಿ ಭಾರಿ ಕಡಿತವಾಗಿದೆಯಂತೆ. ಆದುದರಿಂದ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟು ತರಬೇತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕಾಗಿದೆ. ಡಿ.ಎಸ್.ಇ.ಆರ್.ಟಿ ಹಾಗೂ ಡಯಟ್‌ಅನ್ನು ಸಬಲಗೊಳಿಸಬೇಕಾಗಿದೆ. ಆಯಾ ಪ್ರದೇಶದ ಡಯಟ್, ಶಿಕ್ಷಕರ ಸ್ಥಳೀಯ ಬೇಡಿಕೆಗೆ ಪೂರಕವಾದ ಅರ್ಥಪೂರ್ಣ ತರಬೇತಿಗಳನ್ನು ನಿಯೋಜಿಸಬೇಕಾಗಿದೆ. ಶಿಕ್ಷಣದಲ್ಲಿ ಗುಣಮಟ್ಟವನ್ನು ತರಲು ಇದು ಬಹಳ ಮುಖ್ಯವಾಗಿದೆ.

ಆಡಳಿತ ಮತ್ತು ನಿರ್ವಹಣೆ: ಶಿಕ್ಷಣ ಕ್ಷೇತ್ರದಲ್ಲಿ ಆಡಳಿತ ಮತ್ತು ನಿರ್ವಹಣೆಗೆ ಸರ್ಕಾರ ಹೆಚ್ಚು ಒತ್ತುಕೊಡಬೇಕಾಗಿದೆ. ಈ ಕುರಿತು ಶಿಕ್ಷಣ ಕ್ಷೇತ್ರದಲ್ಲಿ ಸೂಕ್ತವಾದ ತರಬೇತಿಗಳೇ ಇಲ್ಲ. ಹೊಸದಾಗಿ ನೇಮಕಗೊಂಡ ಮುಖ್ಯ ಗುರುಗಳಿಗೆ, ಶಾಲೆಯಂತಹ ಒಂದು ಸಂಕೀರ್ಣ ಸಂಸ್ಥೆಯನ್ನು ನಡೆಸಲು ಬೇಕಾದ ತರಬೇತಿ ಇಲ್ಲ. ಕನಿಷ್ಠ ಮಟ್ಟದ ತರಬೇತಿಯನ್ನು ಕೊಟ್ಟು ಉತ್ತಮ ನಿರ್ವಹಣೆ ಮಾಡಬೇಕೆಂದರೆ ಹೇಗೆ? ಮುಖ್ಯ ಗುರುಗಳು - ಕಾಮಗಾರಿ ನಿಭಾಯಿಸಬೇಕು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳ ಬೇಕು, ಶಿಕ್ಷಕರ ಶೈಕ್ಷಣಿಕ ಅಭಿವೃದ್ಧಿಗೆ ತರಬೇತಿ ನೀಡಬೇಕು, ಶಿಕ್ಷಕರ ತಂಡ ಕಟ್ಟಬೇಕು, ಬೆಳೆಸಬೇಕು, ಇಲಾಖೆಯೊಂದಿಗೆ ಸಂಪರ್ಕ, ವ್ಯವಹಾರ, ಪೋಷಕರೊಂದಿಗೆ, ಸಮುದಾಯದೊಂದಿಗೆ ಸಂಬಂಧ, ಸ್ಥಳೀಯ ಸರ್ಕಾರದೊಂದಿಗೆ ವ್ಯವಹಾರ. ಇಷ್ಟು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಲು ಅಗತ್ಯವಾಗಿ ಆಡಳಿತ ಮತ್ತು ನಿರ್ವಹಣೆಯಲ್ಲಿ ಗುಣಮಟ್ಟದ ತರಬೇತಿ ನೀಡಬೇಕಾಗಿದೆ.

ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಚಾಕರಿ ಕೆಲಸಗಳಿಂದ ಮುಕ್ತಗೊಳಿಸಿ ಶೈಕ್ಷಣಿಕ ಅಭಿವೃದ್ಧಿ ಕೆಲಸಕ್ಕೆ ಸಜ್ಜುಗೊಳಿಸುವುದನ್ನು ಸರ್ಕಾರ ಸವಾಲಾಗಿ ತೆಗೆದುಕೊಳ್ಳಬೇಕಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಕಡೆಗಣಿಸಲ್ಪಡುವವರು ಪೋಷಕರು. ಶಾಲಾ ಆಡಳಿತ ಹಾಗೂ ಅಭಿವೃದ್ಧಿಯಲ್ಲಿ ಪಾಲಕರ ಹಾಗೂ ಸಮುದಾಯದ ಪಾತ್ರವನ್ನು ಹೆಚ್ಚು ಮಾಡಬೇಕಾಗಿದೆ. ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯನ್ನು ಗಟ್ಟಿಗೊಳಿಸಿ ಹೆಚ್ಚಿನ ಜವಾಬ್ದಾರಿ ಮತ್ತು ಅಧಿಕಾರಗಳನ್ನು ನೀಡಬೇಕಾಗಿದೆ. ಅಂತಿಮವಾಗಿ ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯ್ತಿಗೆ ನೀಡಬೇಕಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಖಾಲಿ ಇರುವ ಜಾಗಕ್ಕೆ ಶಿಕ್ಷಕರನ್ನು ತಕ್ಷಣ ನೇಮಕ ಮಾಡಬೇಕಾಗಿದೆ, ಈಶಾನ್ಯ ವಲಯದಿಂದ ಬೇರೆ ಕಡೆಗೆ ವರ್ಗಾವಣೆಯನ್ನು ಹತ್ತು ವರುಷ ಸ್ಥಗಿತಗೊಳಿಸಬೇಕಾಗಿದೆ. ಈಶಾನ್ಯ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ಅಭಿವೃದ್ಧಿಯಾಗದೆ ಕರ್ನಾಟಕದಲ್ಲಿ  ಬದಲಾವಣೆ ಆಗಲು ಸಾಧ್ಯವಿಲ್ಲ. ಜನರ ಅಭಿವೃದ್ಧಿ ನಮ್ಮ ಜವಾಬ್ದಾರಿ, ಗುಣಮಟ್ಟದ ಶಿಕ್ಷಣ ಪಡೆಯುವುದು ಈಶಾನ್ಯ ಕರ್ನಾ ಟಕದ ಮಕ್ಕಳ ಹಕ್ಕು ಎಂಬುದನ್ನು ಪರಿಗಣಿಸಿ ಸರ್ಕಾರ ಅಗತ್ಯವಾದ ಕೆಲಸಗಳನ್ನು ಕೈಗೊಳ್ಳುತ್ತದೆ ಎಂದು ನಂಬೋಣ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT